CM Siddaramaiah: ರೈತರ ಆತ್ಮಹತ್ಯೆ ಪರಿಹಾರ ಶೀಘ್ರ ಒದಗಿಸಲು ಸಿಎಂ ಸೂಚನೆ
CM Siddaramaiah: ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಆರೋಗ್ಯ, ಸಾರಿಗೆ ಸಂಚಾರದಂತಹ ಮೂಲಭೂತ ಸೌಕರ್ಯಗಳು ಲಭಿಸದಿದ್ದರೆ ಅದನ್ನು ಆಡಳಿತದ ವೈಫಲ್ಯವೆಂದೇ ಪರಿಗಣಿಸಬೇಕಾಗಿದೆ. ಹಾಡಿಗಳಲ್ಲಿ ಶಾಲೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಲಭ್ಯ ಒದಗಿಸಲು ಇಂದಿಗೂ ಸರಿಯಾಗಿ ಯಾಕೆ ಸಾಧ್ಯವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.


ಬೆಂಗಳೂರು: ವಿವಿಧ ಇಲಾಖೆಗಳಡಿ ಅನುಷ್ಠಾನಗೊಂಡಿರುವ ಯೋಜನೆಗಳು ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲನೆಯ ಸಂಬಂಧ ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ (CM Siddaramaiah) ಶುಕ್ರವಾರ ಸಭೆ ನಡೆಸಿದರು. ಈ ವೇಳೆ ಜಿಲ್ಲಾವಾರು ರೈತರ ಆತ್ಮಹತ್ಯೆ ಅಂಕಿ ಅಂಶಗಳನ್ನು ಗಮನಿಸಿದ ಮುಖ್ಯಮಂತ್ರಿಗಳು, ಇನ್ನೂ 13 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ನೋಡಿ ಗರಂ ಆದರು. ಹಾವೇರಿ ಸೇರಿ ಇನ್ನೆರಡು ಜಿಲ್ಲೆಗಳಲ್ಲಿ ಒಟ್ಟು 13 ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ಬಾಕಿ ಇರುವುದನ್ನು ಆದಷ್ಟು ಬೇಗ ಬಗೆಹರಿಸಿ ಪರಿಹಾರ ಒದಗಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಅನರ್ಹ ಪಡಿತರ ಚೀಟಿಗಳು ಇನ್ನೂ ಹೇಗೆ ಉಳಿದುಕೊಂಡಿವೆ
ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೆ ಇದರಲ್ಲಿ ನಿರೀಕ್ಷಿತ ಪ್ರಗತಿ ಯಾಕೆ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಸುಮಾರು ಶೇ. 74ರಷ್ಟು ಬಿಪಿಎಲ್ ಕಾರ್ಡುಗಳಿದ್ದು, ಅನರ್ಹರನ್ನು ಗುರುತಿಸಿ ತೆಗೆದು ಹಾಕುವ ಮೂಲಕ ಅರ್ಹರಿಗೆ ಸವಲತ್ತು ಒದಗಿಸುವ ಕಾರ್ಯ ನಡೆಯಬೇಕಿದೆ ಎಂದು ಸೂಚನೆ ನೀಡಿಯಾಗಿತ್ತು. ಆದರೂ ಇದರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಆಗಿಲ್ಲ ಏಕೆ ಎಂದು ಸಿಎಂ ಪ್ರಶ್ನಿಸಿದರು.
ಬಡವರ ಇಂದಿರಾ ಕ್ಯಾಂಟೀನ್ ಕಾರ್ಯ ಪೂರ್ಣಗೊಳಿಸಿ
ನಮ್ಮ ಸರ್ಕಾರ ಹೊಸದಾಗಿ ಘೋಷಣೆ ಮಾಡಿರುವ ಎಲ್ಲಾ ಇಂದಿರಾ ಕ್ಯಾಂಟೀನ್ಗಳು ಕಾರ್ಯಾರಂಭ ಮಾಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಂದಿರಾ ಕ್ಯಾಂಟೀನ್ಗಳಿಗೆ ಇನ್ನೂ 5 ಕಡೆ ಸ್ಥಳ ಗುರುತಿಸಬೇಕಾಗಿದೆ. ತಕ್ಷಣ ನಿವೇಶನ ಗುರುತಿಸಬೇಕು. ಹೊಸದಾಗಿ ಘೋಷಣೆ ಮಾಡಲಾಗಿರುವ 186 ಇಂದಿರಾ ಕ್ಯಾಂಟೀನ್ಗಳ ಪೈಕಿ ಕೇವಲ 103 ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ. ಆಹಾರ ವಿತರಣೆ 43 ಇಂದಿರಾ ಕ್ಯಾಂಟೀನ್ಳಲ್ಲಿ ಮಾತ್ರ ಪ್ರಾರಂಭವಾಗಿದೆ. ಎಲ್ಲಾ ಕಡೆ ಆಹಾರ ವಿತರಣೆ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದರು.
ಜಿಲ್ಲಾಧಿಕಾರಿಗಳು, ಸಿಇಒಗಳು ತಮ್ಮ ಪ್ರವಾಸ ಕಾರ್ಯಕ್ರಮ ಮೊದಲೇ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು. ತಪಾಸಣಾ ವರದಿಗಳನ್ನು ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಜಿಲ್ಲೆಯಲ್ಲಿ ಶಾಲೆಗಳು, ಹಾಸ್ಟೆಲ್ಗಳು , ವಸತಿ ಶಾಲೆಗಳು, ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲು ನಿರಂತರವಾಗಿ ಭೇಟಿ ನೀಡಬೇಕು. ಮುನ್ಸೂಚನೆ ಇಲ್ಲದೇ ಇಂತಹ ಭೇಟಿಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ನಡೆಸಬೇಕು ಎಂದು ಪದೇ ಪದೇ ಸೂಚನೆ ನೀಡಿದ್ದೇನೆ. ಆದರೂ ಕೆಲವರು ಇದನ್ನು ಪಾಲಿಸಿಲ್ಲ ಎನ್ನುವ ವರದಿ ನನಗೆ ಬಂದಿದೆ.
ನಿಮ್ಮ ಅಧೀನದಲ್ಲಿರುವ ಇಲಾಖೆಗಳು, ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸುವುದು ನಿಮ್ಮ ಜವಾಬ್ದಾರಿ. ನೀವು ದಕ್ಷತೆಯಿಂದ ಕಾರ್ಯನಿರ್ವಹಿಸದಿದ್ದರೆ ಅಧೀನ ಅಧಿಕಾರಿಗಳು ಕಾರ್ಯನಿರ್ವಹಿಸುವುದನ್ನು ಹೇಗೆ ನಿರೀಕ್ಷಿಸಬಹುದು ಎಂದು ಪ್ರಶ್ನಿಸಿದರು.
ಜಿಲ್ಲೆಯಲ್ಲಿ ಜನಸಾಮಾನ್ಯರಿಗೆ ಆರೋಗ್ಯ, ಸಾರಿಗೆ ಸಂಚಾರದಂತಹ ಮೂಲಭೂತ ಸೌಕರ್ಯಗಳು ಲಭಿಸದಿದ್ದರೆ ಅದನ್ನು ಆಡಳಿತದ ವೈಫಲ್ಯವೆಂದೇ ಪರಿಗಣಿಸಬೇಕಾಗಿದೆ. ಹಾಡಿಗಳಲ್ಲಿ ಶಾಲೆ, ರಸ್ತೆ, ಆಸ್ಪತ್ರೆಯಂತಹ ಮೂಲಸೌಲಭ್ಯ ಒದಗಿಸಲು ಇಂದಿಗೂ ಸರಿಯಾಗಿ ಯಾಕೆ ಸಾಧ್ಯವಾಗಿಲ್ಲ; ಅವರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಸರಿಯಾಗಿ ಹಕ್ಕು ಒದಗಿಸಲು ಯಾಕೆ ಸಾಧ್ಯವಾಗಿಲ್ಲ. ಜಿಲ್ಲಾಧಿಕಾರಿಗಳು, ಸಿಇಒಗಳು ಇಂತಹ ಹಾಡಿಗಳಿಗೆ ನಿರಂತರ ಭೇಟಿ ನೀಡಬೇಕು.
ಕೆಲವು ಜಿಲ್ಲಾಧಿಕಾರಿಗಳು, ಸಿಇಒಗಳು ಸರಿಯಾಗಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗದಿರುವ ಬಗ್ಗೆ ದೂರುಗಳು ಬಂದಿವೆ. ಸಾರ್ವಜನಿಕ ಭೇಟಿಯ ಅವಧಿಯನ್ನು ಮೊದಲೇ ಪ್ರಕಟಿಸಬೇಕು. ಶೋಷಿತರು, ಬಡವರು, ಜನಸಾಮಾನ್ಯರು ಸಾಮಾನ್ಯವಾಗಿ ಜಿಲ್ಲಾಧಿಕಾರಿ ಅವರ ಕಚೇರಿಗೆ ಬರುತ್ತಾರ. ಅಂತವರ ಸಂಕಷ್ಟಗಳನ್ನು ನೀವೇ ಆಲಿಸದಿದ್ದರೆ ಅದನ್ನು ಬಗೆಹರಿಸುವವರು ಯಾರು? ಯಾರ ಬಳಿ ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು ಕಿಡಿಕಾರಿದರು.
ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ವಾಸವಿರಬೇಕು. ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಲಭ್ಯವಿದ್ದು, ಜನರಿಗೆ ಲಭ್ಯವಿರಬೇಕು. ಇದನ್ನು ಜಿಲ್ಲಾಧಿಕಾರಿಗಳು ಖಾತ್ರಿಪಡಿಸಬೇಕು. ಕೇಂದ್ರ ಸ್ಥಾನದಲ್ಲಿರದ ಅಧಿಕಾರಿಗಳ ವಿರುದ್ಧ ಕೈಗೊಂಡಿರುವ ಕ್ರಮದ ಬಗ್ಗೆ ನನಗೆ ವರದಿ ನೀಡಬೇಕು.
ಈ ಸುದ್ದಿಯನ್ನೂ ಓದಿ | Karnataka Rains: ಗುಡ್ಡ ಕುಸಿತ; ತಕ್ಷಣ ದಕ್ಷಿಣ ಕನ್ನಡಕ್ಕೆ ತೆರಳಲು ಸಚಿವ ದಿನೇಶ್ ಗುಂಡೂರಾವ್ಗೆ ಸಿಎಂ ಸೂಚನೆ
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಕನಿಷ್ಟ ಎರಡು ಬಾರಿ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪರಿಶೀಲನೆ ನಡೆಸಬೇಕು. ಅದರೊಂದಿಗೆ ಶಾಲೆ, ಹಾಸ್ಟೆಲ್, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ವರದಿಯನ್ನು ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.