ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಉತ್ತರಾಖಂಡ ಕಾಂಗ್ರೆಸ್‌ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ಡಿಎನ್‌ಎ ಟೆಸ್ಟ್‌ಗೆ ಮಹಿಳೆ ಆಗ್ರಹ: ಮತ್ತೆ ಸದ್ದು ಮಾಡಿದ ʼಜೆನ್ನಿ ಎಪಿಸೋಡ್‌ʼ

Jenny Episode: ದಶಕಗಲ ಹಿಂದೆ ಸದ್ದು ಮಾಡಿದ್ದ ಉತ್ತರಾಖಂಡ ಕಾಂಗ್ರೆಸ್‌ ಹಿರಿಯ ನಾಯಕ ಹರಕ್‌ ಸಿಂಗ್‌ ರಾವತ್‌ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಅಸ್ಸಾಂ ನಿವಾಸಿ ಮಹಿಳೆ ಇಂದಿರಾ ದೇವಿ ಆಲಿಯಾಸ್‌ ಜೆನ್ನಿ ತನ್ನ ಮೇಲೆ ರಾವತ್‌ ಅತ್ಯಾಚಾರ ಎಸಗಿದ್ದಾಗಿ ಪುನರುಚ್ಚರಿಸಿದ್ದು, ಮತ್ತೊಮ್ಮೆ ಡಿಎನ್‌ಎ ಟೆಸ್ಟ್‌ ಮಾಡುವಂತೆ ಆಗ್ರಹಿಸಿದ್ದಾರೆ.

ಉತ್ತರಾಖಂಡ ಕಾಂಗ್ರೆಸ್‌ ನಾಯಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಹರಕ್‌ ಸಿಂಗ್‌ ರಾವತ್‌ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Nov 7, 2026 10:15 PM

ಡೆಹ್ರಾಡೂನ್‌, ನ. 7: ಉತ್ತರಾಖಂಡ ಕಾಂಗ್ರೆಸ್‌ ಹಿರಿಯ ನಾಯಕ ಹರಕ್‌ ಸಿಂಗ್‌ ರಾವತ್‌ (Harak Singh Rawat) ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಅಸ್ಸಾಂ ನಿವಾಸಿ ಮಹಿಳೆ ಇಂದಿರಾ ದೇವಿ ಆಲಿಯಾಸ್‌ ಜೆನ್ನಿ ತನ್ನ ಮೇಲೆ ರಾವತ್‌ ಅತ್ಯಾಚಾರ ಎಸಗಿದ್ದಾಗಿ ಪುನರುಚ್ಚರಿಸಿದ್ದು, ಮತ್ತೊಮ್ಮೆ ಡಿಎನ್‌ಎ (DNA) ಟೆಸ್ಟ್‌ ಮಾಡುವಂತೆ ಆಗ್ರಹಿಸಿದ್ದಾರೆ (Jenny Episode). ಮಗುವಿನ ಪಿತೃತ್ವವನ್ನು ಸಾಬೀತುಪಡಿಸಲು ಹಾಗೂ ಮಗನ ತಂದೆ ಯಾರೆನ್ನುವುದು ಖಚಿತಪಡಿಸಿಕೊಂಡು ಕಾನೂನು ಹಕ್ಕನ್ನು ಪಡೆಯಲು ಹೊಸ ಡಿಎನ್‌ಎ ಪರೀಕ್ಷೆ ನಡೆಸಬೇಕೆಂದು ಹೇಳಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಜೆನ್ನಿ, 2002ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದಾಗಿ ತಿಳಿಸಿದ್ದಾರೆ. 2002ರಲ್ಲಿ 16 ವರ್ಷ ವಯಸ್ಸಿನ ಜೆನ್ನಿ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತನೊಬ್ಬ ಯಮುನಾ ಕಾಲನಿಯಲ್ಲಿರುವ ರಾವತ್‌ ಅವರ ನಿವಾಸಕ್ಕೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಅಲ್ಲಿ ಸುಮಾರು ಒಂದೂವರೆಯಿಂದ 2 ತಿಂಗಳು ತಂಗಿದ್ದಾಗಿ ಜೆನ್ನಿ ತಿಳಿಸಿದ್ದಾರೆ.

ಕಾಂಗ್ರೆಸ್‌ ನಾಯಕ ಹರಕ್‌ ಸಿಂಗ್‌ ರಾವತ್‌ ವಿರುದ್ದ ಮಹಿಳೆಯ ಆರೋಪ:



ಜೆನ್ನಿ ಹೇಳಿದ್ದೇನು?

ಹರಕ್‌ ಸಿಂಗ್‌ ರಾವತ್‌ ವಿರುದ್ಧ ನೇರ ಆರೋಪ ಮಾಡಿರುವ ಜೆನ್ನಿ ಅಂದಿನ ಘಟನೆಯನ್ನು ವಿವರಿಸಿದ್ದಾರೆ. ʼʼ2002ನೇ ಇಸವಿ. ಆಗ ನಾನು ಯಮುನಾ ಕಾಲನಿಯ ಎಸ್‌ಟಿಡಿ ಬೂತ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದೆ. ಬೂತ್‌ನಲ್ಲಿದ್ದ ನನ್ನನ್ನು ಪಕ್ಷದ ಕಾರ್ಯಕರ್ತನೊಬ್ಬ ಹರಕ್‌ ಸಿಂಗ್‌ ರಾವತ್‌ ನಿವಾಸಕ್ಕೆ ಕರೆದೊಯ್ದ. 16 ವರ್ಷದ ನನ್ನನ್ನು ಅಲ್ಲೇ ನೆಲೆಸುವಂತೆ ರಾವತ್‌ ಆದೇಶಿಸಿದ್ದರು. ಹೀಗೆ ಒಂದೂವರೆ ಮತ್ತು 2 ತಿಂಗಳು ಅಲ್ಲೇ ಇದ್ದೆʼʼ ಎಂದು ತಿಳಿಸಿದ್ದಾರೆ.

ನಾಲ್ವರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸರ್ಕಾರಿ ಶಾಲೆ ಶಿಕ್ಷಕ

ಈ ವೇಳೆ ಗರ್ಭಿಣಿಯಾಗಿದ್ದ ತನ್ನನ್ನು ನಾರಿ ಶಕ್ತಿ ಮಹಿಳಾ ಹಾಸ್ಟೆಲ್‌ಗೆ ವರ್ಗಾಯಿಸಿದ್ದಾಗಿ ಆರೋಪಿಸಿದ್ದಾರೆ. ʼʼಗರ್ಭಿಣಿಯಾಗಿದ್ದ ನನ್ನನ್ನು ಮಾನಸಿಕ ಅಸ್ವಸ್ಥ ಮಹಿಳೆಯರಿದ್ದ ಹಾಸ್ಟೆಲ್‌ಗೆ ವರ್ಗಾಯಿಸಲಾಯಿತು. ನನ್ನನ್ನು ನಿಜವಾಗಿಯೂ ಮಾನಸಿಕ ಅಸ್ವಸ್ಥರ ನಡುವೆ ಇರಿಸಲಾಗಿತ್ತೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ತನಿಖೆ ನಡೆಸಬಹುದುʼʼ ಎಂದು ಹೇಳಿದ್ದಾರೆ.

ಮಗನ ಹಕ್ಕಿಗಾಗಿ ಹೋರಾಟ

ತನ್ನ ಮೇಲೆ ನಡೆದ ಅತ್ಯಾಚಾರಕ್ಕೆ ಸೂಕ್ತ ಶಿಕ್ಷೆ ಸಿಗಬೇಕು ಎನ್ನುವುದು ಮುಖ್ಯ ಬೇಡಿಕೆ ಎಂದು ಜೆನ್ನಿ ಹೇಳಿದ್ದಾರೆ. ಅಲ್ಲದೆ ಮಗನಿಗೆ ಸಿಗಬೇಕಾದ ಪಿತೃತ್ವದ ಹಕ್ಕಿಗಾಗಿ ಹೋರಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ʼʼನನ್ನ ಮೇಲೆ ಅತ್ಯಾಚಾರ ಎಸಗಿದ್ದಕ್ಕೆ ಖಂಡಿತವಾಗಿಯೂ ಶಿಕ್ಷೆಯಾಗಬೇಕು. ಜತೆಗೆ ನನ್ನ ಮಗನಿಗೆ ತನ್ನ ತಂದೆಯ ಹೆಸರು ಗೊತ್ತಾಗಬೇಕು. ಇದುವರೆಗೆ ರಾವತ್‌ ತಮ್ಮ ತಪ್ಪು ಒಪ್ಪಿಕೊಂಡಿಲ್ಲ. ಹೀಗಾಗಿ ನನ್ನ ಮಗನ ಹಕ್ಕಿಗಾಗಿ ಹೋರಾಡುತ್ತಿದ್ದೇನೆʼʼ ಎಂದು ವಿವರಿಸಿದ್ದಾರೆ.

ಏನಿದು ವಿವಾದ?

ʼಜೆನ್ನಿ ಎಪಿಸೋಡ್‌ʼ ಉತ್ತರಾಖಂಡದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ ದಶಕಗಳ ಹಿಂದಿನ ವಿವಾದ. ಇದು 2003ರಲ್ಲಿ ಮೊದಲು ಬೆಳಕಿಗೆ ಬಂತು. ಆ ವರ್ಷ ಜೂನ್‌ನಲ್ಲಿ ಡೆಹ್ರಾಡೂನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಜೆನ್ನಿ ಮಗುವಿಗೆ ಜನ್ಮ ನೀಡಿದರು. ಬಳಿಕ ಅವರು ಈ ಮಗುವಿನ ತಂದೆ ರಾವತ್‌ ಎನ್ನುವ ಮೂಲಕ ರಾಜಕೀಯದಲ್ಲಿ ಕೋಲಾಹಲವೇ ಸೃಷ್ಟಿಯಾಯ್ತು.

ಬಿಹಾರದಲ್ಲಿ ಮತ್ತೊಂದು ಆಘಾತಕಾರಿ ಘಟನೆ: ದಾರಿಯಲ್ಲಿ ಸಾಗುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ

ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಎನ್‌.ಡಿ. ತಿವಾರಿ ಈ ಪ್ರಕರಣವನ್ನು ಸಿಬಿಐ ವಿಚಾರಣೆಗೆ ಒಪ್ಪಿಸಿದರು. ಸಿಬಿಐ ನಡೆಸಿದ ಡಿಎನ್‌ಎ ಟೆಸ್ಟ್‌ನಲ್ಲಿ ಹರಕ್‌ ಸಿಂಗ್‌ ರಾವತ್‌ ಮತ್ತು ಮಗುವಿನ ಡಿಎನ್‌ಎ ಬೇರೆ ಬೇರೆ ಎನ್ನುವುದು ಸಾಬೀತಾಗಿ ಕ್ಲೀನ್‌ ಚಿಟ್‌ ಸಿಕ್ಕಿತು. ಎನ್‌.ಡಿ. ತಿವಾರಿ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಹರಕ್‌ ಕಂದಾಯ ಸಚಿವರಾಗಿದ್ದರು. ಸದ್ಯ ರಾವತ್‌ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಇದೀಗ ಮತ್ತೆ ಈ ಸುದ್ದಿ ಸದ್ದು ಮಾಡುತ್ತಿದೆ.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.