ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: 'ಸಿಂದೂರʼದ ಸಂದೇಶ ದೇಶದ ಮುಂದಿಟ್ಟ ಸೇನಾಧಿಕಾರಿ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆ!

ಐತಿಹಾಸಿಕ ಆಪರೇಶನ್ ಸಿಂದೂರ್‌ ‌ (Operation Sindoor) ಕುರಿತು ವಿವರಣೆ ನೀಡಿದ್ದ ಮಹಿಳಾ ಅಧಿಕಾರಿಗಳಲ್ಲಿ ಒಬ್ಬರಾದ ಸೋಫಿಯಾ ಖುರೇಷಿ (Colonel Sofia Khureshi) ಅವರಿಗೆ ಕರ್ನಾಟಕ ನಂಟು ಇದೆ. ಇವರ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ಪತಿ ತಾಜುದ್ದೀನ್ ಬಾಗೇವಾಡಿ ಅವರೂ ಕೂಡಾ ಸೈನ್ಯದಲ್ಲಿದ್ದು ಪತ್ನಿಯಂತೆ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.

'ಸಿಂದೂರʼದ ಸಂದೇಶ ತಂದ ಸೇನಾಧಿಕಾರಿ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆ!

ಕರ್ನಲ್ ಸೋಫಿಯಾ ಖುರೇಶಿ‌ ಪತಿ ಕರ್ನಲ್‌ ತಾಜುದ್ದೀನ್‌ ಜೊತೆಗೆ

ಹರೀಶ್‌ ಕೇರ ಹರೀಶ್‌ ಕೇರ May 8, 2025 12:23 PM

ಬೆಳಗಾವಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ‌ (pahalgam terror attack) ಪ್ರತ್ಯುತ್ತರವಾಗಿ ಭಾರತೀಯ (Indian army) ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಯಾನಕ ಪ್ರತಿದಾಳಿ ನಡೆಸಿತು. ʼಆಪರೇಶನ್‌ ಸಿಂದೂರ್‌ʼ (Operation Sindoor) ಹೆಸರಿನಲ್ಲಿ ನಡೆಸಿದ ಈ ನಡುರಾತ್ರಿಯ ದಾಳಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ದೇಶದ ಮುಂದಿಟ್ಟವರು ಮೂವರು ಸೈನ್ಯಾಧಿಕಾರಿಗಳು. ಇದರಲ್ಲಿ ಒಬ್ಬರು ಕಾಶ್ಮೀರಿ ಪಂಡಿತ್‌ ಮನೆತನದವರು ಆಗಿದ್ರೆ, ಇನ್ನಿಬ್ಬರು ಮಹಿಳಾ ಅಧಿಕಾರಿಗಳು. ಈ ಇಬ್ಬರಲ್ಲಿ ಒಬ್ಬರಾದ ಕರ್ನಲ್ ಸೋಫಿಯಾ ಖುರೇಷಿ (Colonel Sofia Khureshi), ನಮ್ಮ ಕರ್ನಾಟಕದ (Karnataka), ಅದರಲ್ಲೂ ಬೆಳಗಾವಿಯ (Belagavi) ಸೊಸೆ ಎಂಬುದು ನಿಮಗೆ ಗೊತ್ತಾ?

ಹೌದು, ನಮಗೆ ಹೆಮ್ಮೆ ತರಿಸುವ ಈ ಸಂಗತಿಯ ಬಗ್ಗೆ ನಿಮಗೆ ಗೊತ್ತಾಗಲೇ ಬೇಕು. ಕಾಶ್ಮೀರದಲ್ಲಿ ಉಗ್ರರ ಪೈಶಾಚಿಕ ಕೃತ್ಯದ ವಿರುದ್ಧ ಪ್ರತೀಕಾರ ತೆಗೆದುಕೊಂಡ ಭಾರತೀಯ ಸೇನೆ ಆಪರೇಷನ್ ಸಿಂದೂರ ಹೆಸರಿನ ವಾಯುದಾಳಿ ಮೂಲಕ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಇದು ಭಾರತೀಯ ಇತಿಹಾಸದಲ್ಲೇ ಒಂದು ಅಭೂತಪೂರ್ವ ಘಟನೆ. ಯಾಕೆಂದರೆ ಇದೇ ಮೊದಲ ಬಾರಿಗೆ ದೇಶದ ಪ್ರಮುಖ ಮಿಲಿಟರಿ ಕಾರ್ಯಾಚರಣೆಯ ಕುರಿತು ಇಬ್ಬರು ಮಹಿಳಾ ಅಧಿಕಾರಿಗಳು ಅಧಿಕೃತವಾಗಿ ಪತ್ರಿಕಾಗೋಷ್ಠಿ ನಡೆಸಿದ್ದರು. ಕಾರ್ಯಾಚರಣೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಈ ಮೂಲಕ ಭಾರತೀಯ ಮಹಿಳೆಯ ಸಿಂದೂರ ಅಳಿಸುವ ಕಾರ್ಯ ಮಾಡಿದವರಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆ ನೀಡಿದ್ದರು ಮಾತ್ರವಲ್ಲದೆ ಶತ್ರು ರಾಷ್ಟ್ರಕ್ಕೆ ಬಲವಾದ ಸಂದೇಶವನ್ನೂ ರವಾನಿಸಿದ್ದರು.

sofia khureshi 3

ಸದ್ಯ ಘಟನೆ ಕುರಿತು ವಿವರಣೆ ನೀಡಿದ್ದ ಮಹಿಳಾ ಅಧಿಕಾರಿಗಳಲ್ಲಿ ಒಬ್ಬರಾದ ಸೋಫಿಯಾ ಖುರೇಷಿ ಅವರಿಗೆ ಕರ್ನಾಟಕ ನಂಟು ಇದೆ. ಇವರ ಪತಿ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದವರು. ಪತಿ ತಾಜುದ್ದೀನ್ ಬಾಗೇವಾಡಿ ಅವರೂ ಕೂಡಾ ಸೈನ್ಯದಲ್ಲಿದ್ದು ಪತ್ನಿಯಂತೆ ಕರ್ನಲ್ ಆಗಿ ದೇಶ ಸೇವೆ ಮಾಡುತ್ತಿದ್ದಾರೆ.

ಸೋಫಿಯಾ ಖುರೇಷಿ ಮೂಲತಃ ಗುಜರಾತ್ ರಾಜ್ಯದ ವಡೋದರದಲ್ಲಿ 1981ರಲ್ಲಿ ಜನಿಸಿದವರು. ಸೈನಿಕ‌ ಕುಟುಂಬಕ್ಕೆ ಸೇರಿರುವ ಇವರ ತಂದೆ ಹಾಗೂ ಅಜ್ಜ ಇಬ್ಬರೂ ಭಾರತೀಯ ಸೇನೆಯಲ್ಲಿದ್ದರು. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸೋಫಿಯಾ, ಸದ್ಯ ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.‌ ಇವರ ಪತಿ ತಾಜುದ್ದೀನ್ ಬಾಗೇವಾಡಿ ಅವರೂ ಜಾನ್ಸಿಯಲ್ಲಿ ಕರ್ನಲ್ ಆಗಿ ದೇಶಸೇವೆ ಮಾಡುತ್ತಿದ್ದಾರೆ.

sofia khureshi 1

1999ರಲ್ಲಿ ಭಾರತೀಯ ಸೇನೆಗೆ ಸೇರಿದ ಕರ್ನಲ್ ಸೋಫಿಯಾ ಖುರೇಷಿ ನಂತರ ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಸೋಫಿಯಾ ಖುರೇಷಿ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡ ಬಳಿಕ ಆಫ್ರಿಕಾದ ಕಾಂಗೋದಲ್ಲಿ 2006ರಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿ ಮಿಲಿಟರಿ ವೀಕ್ಷಕರಾಗಿದ್ದರು. 2010 ರಿಂದ ಮತ್ತೆ ಶಾಂತಿಪಾಲನಾ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪಂಜಾಬ್ ಗಡಿಯಲ್ಲಿ ಆಪರೇಷನ್ ಪರಾಕ್ರಮ್ ಸಮಯದಲ್ಲಿ ಸಲ್ಲಿಸಿದ ಸೇವೆಗಾಗಿ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಅವರಿಂದ ಹಾಗೂ ಈಶಾನ್ಯ ಭಾರತದಲ್ಲಿ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿ ಮಾಡಿರುವ ಅತ್ಯುತ್ತಮ ಸೇವೆಗೆ ಸಿಗ್ನಲ್ ಆಫೀಸರ್ ಇನ್ ಚೀಫ್ ಅವರಿಂದ ಸೋಫಿಯಾ ಖುರೇಷಿ ಪ್ರಶಂಸಾ ಪತ್ರವನ್ನು ಪಡೆದಿದ್ದಾರೆ. 2016ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ಕವಾಯತು ‘ಎಕ್ಸರ್ಸೈಸ್ ಫೋರ್ಸ್ 18’ ರಲ್ಲಿ ಭಾರತೀಯ ತುಕಡಿಯನ್ನು ಮುನ್ನಡೆಸಿರುವ ಕೀರ್ತಿ ಕೂಡ ಇವರದ್ದಾಗಿದೆ. ಆ ಕವಾಯತಿನಲ್ಲಿ ಭಾಗವಹಿಸಿದ್ದ 18 ತಂಡಗಳಲ್ಲಿ ಲೆಫ್ಟಿನೆಂಟ್ ಕರ್ನಲ್ ಸೋಫಿಯಾ ಖುರೇಷಿ ಏಕೈಕ ಮತ್ತು ಭಾರತದ ಮೊದಲ ಮಹಿಳಾ ಅಧಿಕಾರಿಯಾಗಿದ್ದರು. ಅನಂತರ ಅವರು ಭಾರತೀಯ ಸೇನೆಯ ಮೊದಲ ಮಹಿಳಾ ಅಧಿಕಾರಿಯಾದರು. ಭಾಗವಹಿಸುವ ಎಲ್ಲಾ ರಾಷ್ಟ್ರಗಳಲ್ಲಿ ಏಕೈಕ ಮಹಿಳಾ ತುಕಡಿ ಕಮಾಂಡರ್ ಆಗಿಯು ಇವರು ಗುರುತಿಸಿಕೊಂಡಿದ್ದಾರೆ.

ಕರ್ನಲ್‌ ತಾಜುದ್ದೀನ್ ಬಾಗೇವಾಡಿ ಅವರ ಜೊತೆ ಪರಿಚಯ ಉಂಟಾಗಿ ಅದು ಪ್ರೇಮಕ್ಕೆ ತಿರುಗಿದ ಬಳಿಕ ಇಬ್ಬರ ಕುಟುಂದವರೂ ಪರಸ್ಪರ ಒಪ್ಪಿ 2015 ರಲ್ಲಿ ಮದುವೆಯಾಗಿದ್ದಾರೆ. ಇದೀಗ ಪಾಕಿಸ್ತಾನದ ಮೇಲೆ ನಡೆದ ಸೇನಾ ಕಾರ್ಯಾಚರಣೆಯ ಮಾಹಿತಿಯನ್ನೂ ದೇಶಕ್ಕೆ ತಿಳಿಸಿ ಭಾರತ ಸೈನ್ಯವೆಂದರೆ ʼಶಕ್ತಿʼ ಎಂಬ ಸಂದೇಶವನ್ನು ಪಾಸ್‌ ಮಾಡಿದ್ದಾರೆ.

ಸೋಫಿಯಾ ಖುರೇಷಿ ಅವರ ಮಾವ ಗೌಸ್ ಅವರು ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ ತಮ್ಮ ಸೊಸೆಯ ಬಗ್ಗೆ ತಮಗಿರುವ ಹೆಮ್ಮೆಯನ್ನು ಹಂಚಿಕೊಂಡರು. "ಸೋಫಿಯಾ ಬಗ್ಗೆ ನಮಗೆ ಹೆಮ್ಮೆ ಇದೆ. ಮಗ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇಬ್ಬರೂ 2015ರಲ್ಲಿ ಪ್ರೀತಿಸಿ ಮದುವೆಯಾಗಿದ್ದಾರೆ. ಸೊಸೆ ಮೂಲತಃ ಗುಜರಾತಿನ ವಡೋದರದವರು. ನಮಗೆ ಯಾವುದೇ ಜಾತಿಭೇದ ಇಲ್ಲ. ಭಾರತೀಯ ಸೇನೆಯಲ್ಲಿ ಇಬ್ಬರು ಸೇವೆ ಸಲ್ಲಿಸುತ್ತಿರುವುದಕ್ಕೆ ನಮಗೆ ತುಂಬಾ ಖುಷಿ ಇದೆ. ನಿನ್ನೆ ಸೊಸೆಯನ್ನು ಟಿವಿಯಲ್ಲಿ ನೋಡಿ ತುಂಬಾ ಖುಷಿಯಾಯಿತು. ಭಾರತೀಯ ಸೇನೆಗೆ ಇನ್ನಷ್ಟು ಧೈರ್ಯ ಬರಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ" ಎಂದು ಗೌಸ್‌ ಹೇಳಿದ್ದಾರೆ.

ಇದನ್ನೂ ಓದಿ: Operation Sindoor: 2 ಮಹಿಳಾ ಅಧಿಕಾರಿಗಳು, ಒಬ್ಬ ಕಾಶ್ಮೀರಿ ಪಂಡಿತ... ಆಪರೇಷನ್‌ಗೆ ಹೆಸರು ಸಿಂಧೂರ; ಇದು ಐತಿಹಾಸಿಕ ಮಾಧ್ಯಮಗೋಷ್ಠಿ!