ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಡಲೇಬೀಜ ಸಿಲುಕಿ ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾದ 10 ತಿಂಗಳ ಮಗು- ಕೆಎಂಸಿ ವೈದ್ಯರಿಂದ ರಕ್ಷಣೆ

ಮನೆಯಲ್ಲಿ ಉಳಿದ ಮಕ್ಕಳ ಜೊತೆ ಆಟವಾಡುವಾಗ ಮಗು ಕಡಲೇಬೀಜ ಸೇವಿಸಿದೆ, ಹಾಗೇ ಇದ್ದಕ್ಕಿದ್ದಂತೆ ಕೆಮ್ಮಲು ಆರಂಭಿಸಿದೆ. ಆದರೆ ಕೆಲ ಸಮಯದಲ್ಲಿ ಮಗು ಸಮಾಧಾನ ಗೊಂಡಿದ್ದು ನೋಡಿ ಪೋಷಕರು ಸುಮ್ಮನಾಗಿದ್ದಾರೆ . ಆದರೆ ದಿನ ಕಳೆಯುತ್ತಿದ್ದಂತೆ ಮಗು ಮತ್ತಷ್ಟು ನಿತ್ರಾಣಗೊಂಡಂತಾಗಿದ್ದು, ಉಸಿರಾಟದ ಸಮಸ್ಯೆ ಆರಂಭವಾಗಿದೆ.

ಮಂಗಳೂರು: ಶ್ವಾಸನಾಳದಲ್ಲಿ ಕಡಲೇ ಬೀಜ ಸಿಲುಕಿ ತೀವ್ರ ಮಟ್ಟದ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದ 10 ತಿಂಗಳ ಮಗುವನ್ನು ರಕ್ಷಿಸುವಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.

ಮಗುವನ್ನು ಆಸ್ಪತ್ರೆಗೆ ಕರೆತರುವಾಗಲೇ ಸುಮಾರು 16 ಗಂಟೆಗಳ ಕಾಲ ಮಗು ಉಸಿರಾಟದ ಸಮಸ್ಯೆಯನ್ನು ಎದುರಿಸುತ್ತಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಡಾ ಸ್ವಾತಿ ರಾವ್‌ ಕನ್ಸಲ್ಟೆಂಟ್‌-ಪೀಡಿಯಾಟ್ರಿಕ್‌ ಇಂಟೆನ್ಸಿವಿಸ್ಟ್‌ , ಡಾ ಗೌತಮ್‌ ಕುಲಮರ್ವಾ ಕನ್ಸಲ್ಟೆಂಟ್‌ ಇಎನ್‌ಟಿ ಸರ್ಜನ್‌ ಹಾಗೂ ಅರೆವಳಿಕೆ ತಜ್ಞರಾದ ಡಾ ಸುನೀಲ್‌ ಮತ್ತು ಡಾ ಫ್ರೀಡಾ ಅವರ ತಂಡ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಘಟನೆ?

ಮನೆಯಲ್ಲಿ ಉಳಿದ ಮಕ್ಕಳ ಜೊತೆ ಆಟವಾಡುವಾಗ ಮಗು ಕಡಲೇಬೀಜ ಸೇವಿಸಿದೆ, ಹಾಗೇ ಇದ್ದಕ್ಕಿದ್ದಂತೆ ಕೆಮ್ಮಲು ಆರಂಭಿಸಿದೆ. ಆದರೆ ಕೆಲ ಸಮಯದಲ್ಲಿ ಮಗು ಸಮಾಧಾನ ಗೊಂಡಿದ್ದು ನೋಡಿ ಪೋಷಕರು ಸುಮ್ಮನಾಗಿದ್ದಾರೆ . ಆದರೆ ದಿನ ಕಳೆಯುತ್ತಿದ್ದಂತೆ ಮಗು ಮತ್ತಷ್ಟು ನಿತ್ರಾಣಗೊಂಡಂತಾಗಿದ್ದು, ಉಸಿರಾಟದ ಸಮಸ್ಯೆ ಆರಂಭವಾಗಿದೆ.

ಇದನ್ನೂ ಓದಿ: KMC Hospital Mangaluru: ಹಲವು ತೊಡಕುಗಳ ನಡುವೆಯೂ ಗಾಯಿಟರ್ ಗಡ್ಡೆ ಯಶಸ್ವಿಯಾಗಿ ಹೊರತೆಗೆದ ಕೆಎಂಸಿ ವೈದ್ಯರ ತಂಡ

ಪೋಷಕರು ಸಾಮಾನ್ಯ ಶೀತ ಸಮಸ್ಯೆ ಎಂದು ತಿಳಿದು ಪುತ್ತೂರಿನ ಡಾ .ಶ್ರೀಕಾಂತ್‌ ರಾವ್‌ ಬಳಿ ತಪಾಸಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಎಕ್ಸ್‌ ರೇ ತಪಾಸಣೆಯಲ್ಲಿ ಮಗುವಿನ ಶ್ವಾಸನಾಳದಲ್ಲಿ ಯಾವುದೋ ವಸ್ತು ಸಿಲುಕಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ತಕ್ಷಣ ಮಗು ವನ್ನು ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿದ್ದು ಡಾ. ಸ್ವಾತಿ ರಾವ್‌ ತಪಾಸಣೆಯಲ್ಲಿ ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಪತ್ತೆಹಚ್ಚಿದ್ದಾರೆ. ಅದಾಗಲೇ ಮಗುವಿನ ಆಕ್ಸಿಜನ್‌ ಸ್ಯಾಚುರೇಶನ್‌ 88 ಕ್ಕೆ ಕುಸಿದಿತ್ತು. ಸಿಟಿ ಸ್ಕ್ಯಾನ್‌ನಲ್ಲಿ ಮಗುವಿನ ಬಲ ಶ್ವಾಸನಾಳ ದಲ್ಲಿ ಚಿಕ್ಕದೊಂದು ವಸ್ತು ಸಿಲುಕಿರುವುದು ಪತ್ತೆಯಾಗಿದೆ.

ಹೇಗಿತ್ತು ಚಿಕಿತ್ಸೆ

ಶ್ವಾಸನಾಳದಲ್ಲಿ ಕಡಲೇಬೀಜದ ತುಣುಕು ಸಿಲುಕಿರುವ ಕಾರಣ ಬಲ ಶ್ವಾಸಕೋಶದಲ್ಲಿ ಉಬ್ಬರ ಮತ್ತು ಎಡ ಶ್ವಾಸಕೋಶ ಮತ್ತು ಹೃದಯದ ಸಂಕೋಚನ ಕಂಡುಬಂದಿದೆ. ಮಗುವನ್ನು ತಕ್ಷಣ ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದೊಯ್ಯಲಾಗಿದ್ದು ಡಾ. ಗೌತಮ್‌ ಕುಲಮರ್ವಾ ತುರ್ತು ಬ್ರೊಂಕೊಸ್ಕೊಪಿಕ್‌ ವಿಧಾನ ಕೈಗೊಳ್ಳುವ ಮೂಲಕ ಕಡಲೆಬೀಜದ ತುಣುಕನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಮಗುವು ಉಸಿರಾಟದ ಸಮಸ್ಯೆಗೆ ಒಳಗಾಗಿ 18 ಗಂಟೆ ಕಳೆದಿದ್ದ ಕಾರಣ ಶ್ವಾಸನಾಳದಲ್ಲಿ ನೀರು ತುಂಬುವ ಲಕ್ಷಣವೂ ಆರಂಭ ವಾಗಿತ್ತು.

ಹೀಗಾಗಿ ಕೆಲ ಗಂಟೆಗಳ ಕಾಲ ಮಗುವನ್ನು ವೆಂಟಿಲೇಟರ್‍‌ ಬೆಂಬಲದಲ್ಲಿ ಇರಿಸಲಾಗಿದ್ದು ಮಗು ಚೇತರಿಸಿಕೊಂಡಿದೆ. ಈ ಕುರಿತು ಮಾತನಾಡಿದ ಡಾ.ಸ್ವಾತಿ ರಾವ್‌ “ "ಎಲ್ಲಾ ಉಸಿರು ಗಟ್ಟಿಸುವ ಪ್ರಸಂಗಗಳು ನಾಟಕೀಯವಾಗಿರುವುದಿಲ್ಲ. ಕೆಲವೊಮ್ಮೆ, ಒಂದು ಸಣ್ಣ ವಸ್ತು ಅಥವಾ ಆಹಾರವು ಮಗುವಿನ ವಾಯು ಮಾರ್ಗವನ್ನು ಪ್ರವೇಶಿಸಿದಾಗ, ಯಾವುದೇ ಕೆಮ್ಮು, ಶಬ್ದ ಮತ್ತು ತಕ್ಷಣದ ತೊಂದರೆ ಇಲ್ಲದಿರಬಹುದು. ಹಠಾತ್ ಅಥವಾ ನಿರಂತರ ಕೆಮ್ಮು, ಉಸಿರಾಟದ ವೇಳೆ ಶಬ್ದ, ವೀಜಿಂಗ್‌, ಪುನರಾವರ್ತಿತ ಎದೆಯ ಸೋಂಕು, ನ್ಯುಮೋನಿಯಾ, ಉಸಿರಾಟದ ತೊಂದರೆ, ಧ್ವನಿಯಲ್ಲಿ ಗಡಸು ಅಥವಾ ಬದಲಾವಣೆ ಕೂಡ ಕಂಡು ಬರಬಹುದು” ಎಂದರು.

ಈ ಬಗ್ಗೆ ಮಾತನಾಡಿದ ಡಾ ಗೌತಮ್‌ ಕುಲಮರ್ವಾ“ ಚಿಕ್ಕಮಕ್ಕಳಲ್ಲಿ ಬ್ರೊಂಕೊಸ್ಕೊಪಿ ಮೂಲಕ ಸಿಲುಕಿರುವ ವಸ್ತುವನ್ನು ತೆಗೆಯುವುದು ತುಂಬಾ ಕ್ಲಿಷ್ಟಕರ ಕೆಲಸ ಹಾಗೂ ತಜ್ಞರ ನೆರವು ಅಗತ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ತಡ ಮಾಡಿದರೆ ಉಸಿರಾಟದ ಸಮಸ್ಯೆ ಹೆಚ್ಚುವ ಹಾಗೂ ಜೀವಕ್ಕೆ ಅಪಾಯಕಾರಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ “ ಎಂದರು.

ಯಾವುದೇ ಅನುಮಾನಾಸ್ಪದವಾಗಿ ಮಕ್ಕಳು ವಸ್ತುವನ್ನು ನುಂಗಿದಾಗ ಅದು ವೈದ್ಯಕೀಯ ತುರ್ತು ಸ್ಥಿತಿಯಾಗಿರುತ್ತದೆ ಹಾಗೂ ತುರ್ತು ಆಸ್ಪತ್ರೆ ಚಿಕಿತ್ಸೆಯ ಅಗತ್ಯವಿರುತ್ತದೆ. ಎಷ್ಟೊ ಆರೋಗ್ಯವಂತ ಮಕ್ಕಳಲ್ಲಿ ಈ ರೀತಿಯ ವಸ್ತುಗಳು ಸಿಲುಕಿ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ.

ಸಾಮಾನ್ಯವಾಗಿ ಕಡಲೇಬೀಜ ಶ್ವಾಸನಾಳದಲ್ಲಿ ಸಿಲುಕುವ ಪ್ರಕರಣಗಳು ಹೆಚ್ಚು. ಪಾಲಕರು 3-4 ವರ್ಷದವರೆಗೆ ಮಕ್ಕಳಿಗೆ ಸರಿಯಾಗಿ ಅಗಿದು ತಿನ್ನಲು ಬರುವವರೆಗೆ ಕಡಲೇಬೀಜ ದಂತಹ ಚಿಕ್ಕ ಆಹಾರ ವಸ್ತುಗಳನ್ನು ಸೇವಿಸಲು ಕೊಡಬಾರದು ಜೊತೆಗೆ ಬಟನ್‌ ಬ್ಯಾಟರಿ ಗಳಂತಹ ಚಿಕ್ಕ ವಸ್ತುಗಳನ್ನು, ಚಿಕ್ಕ ಆಟಿಕೆಗಳನ್ನು ಮಕ್ಕಳಿಂದ ದೂರವಿಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.