ಮನೆ ಸಮೀಪದ ಕೆರೆಯಲ್ಲಿ ಬಿದ್ದು ಐದು ವರ್ಷದ ಇಬ್ಬರು ಅವಳಿ ಸಹೋದರರು ಮೃತಪಟ್ಟ ಹೃದಯವಿದ್ರಾವಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಳ್ಯ ಗ್ರಾಮದ ಕಡೀರದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಮೃತ ಬಾಲಕರು ಮುರುಳ್ಯ ಗ್ರಾಮದ ಕಡೀರ ನಿವಾಸಿ ವಸಂತ್ ಅವರ ಇಬ್ಬರು ಪುತ್ರರು ಎಂದು ತಿಳಿದುಬಂದಿದೆ. ವಸಂತ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದು, ಶನಿವಾರ ಮಧ್ಯಾಹ್ನ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆತಂದಿದ್ದರು.
ಸಂಜೆ ವೇಳೆಗೆ ವಸಂತ್ ಹಾಗೂ ಅವರ ಪತ್ನಿ ಮನೆಯ ಸಮೀಪದ ತೋಟದಲ್ಲಿ ಕೆಲಸ ಮಾಡಲು ತೆರಳಿದ್ದು, ಮಕ್ಕಳು ಮನೆಯಲ್ಲಿಯೇ ಇದ್ದರು. ಬಳಿಕ ಕೆಲಸ ಮುಗಿಸಿ ವಸಂತ್ ಅವರ ಪತ್ನಿ ಮನೆಗೆ ಮರಳಿದಾಗ ಮಕ್ಕಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಆತಂಕಗೊಂಡ ಪೋಷಕರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಮಕ್ಕಳು ಪತ್ತೆಯಾಗಲಿಲ್ಲ. ನಂತರ ಮನೆ ಸಮೀಪದ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಇಬ್ಬರು ಮಕ್ಕಳ ಮೃತದೇಹಗಳು ಪತ್ತೆಯಾಗಿವೆ. ಈ ದೃಶ್ಯ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಆಟವಾಡುತ್ತಿದ್ದ ವೇಳೆ ಮಕ್ಕಳು ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಪ್ರತ್ಯೇಕ ಘಟನೆಯಲ್ಲಿ, ಹೊಸಕೋಟೆ-ದೇವನಹಳ್ಳಿ ಮಾರ್ಗವಾಗಿ ಸಂಚರಿಸುವ ಬಿಎಂಟಿಸಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ದಂಪತಿ ಹಾಗೂ 2 ವರ್ಷದ ಮಗು ಸಾವನ್ನಪ್ಪಿದ್ದಾರೆ. ಬೆಂ.ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಬಳಿ ಈ ಘಟನೆ ಜೂನ್ 19ಕ್ಕೆ ಸಂಭವಿಸಿತ್ತು. ಘಟನೆಯಲ್ಲಿ ದಂಪತಿಯ ಮೊದಲ ಪುತ್ರಿ 5 ವರ್ಷದ ಬಾಲಕಿ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ಮುಂದುವರೆದಿದೆ.