ಮಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಜಗತ್ತಿನಾದ್ಯಂತ ಇಂಧನದ ಕೊರತೆ ಉಂಟಾಗಿದೆ. ಇದೀಗ ಕರ್ನಾಟಕಕ್ಕೆ, (LPG Crisis) ಅಮೆರಿಕದಿಂದ ಬೃಹತ್ ಪ್ರಮಾಣದ ಎಲ್‌ಪಿಜಿ (LPG) ಹೊತ್ತ ಕಾರ್ಗೋ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಬಂದು ತಲುಪಿದೆ. ಅಮೆರಿಕದ ಟೆಕ್ಸಾಸ್ ರಾಜ್ಯದಿಂದ ಹೊರಟಿದ್ದ ‘ಪಿಕ್ಸಿಸ್ ಪಯನೀರ್’ (Pyxis Pioneer) ಹೆಸರಿನ ಬೃಹತ್ ಕಾರ್ಗೋ ಹಡಗು ಸುಮಾರು 16,714 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಹೊತ್ತು ತಂದಿದೆ.
ಪಿಕ್ಸಿಸ್ ಪಾಯಿನೀರ್ ಹೆಸರಿನ ಕಾರ್ಗೋ ಶಿಪ್ ಮಂಗಳೂರು ಬಂದರಿಗೆ ಬಂದಿಳಿದಿದೆ. ಅಮೆರಿಕದ ಟೆಕ್ಸಸ್ ನಿಂದ ಅನಿಲ ತುಂಬಿದ ಹಡಗು ಬಂದಿದ್ದು, ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್ ಪಿ ಜಿ ಹಡಗು ಇದಾಗಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ ನಂತರ, ಪಶ್ಚಿಮ ಏಷ್ಯಾದ ಸಮುದ್ರ ಮಾರ್ಗಗಳಲ್ಲಿ ಸರಕು ಸಾಗಣೆ ಅಸ್ತವ್ಯಸ್ತಗೊಂಡಿತ್ತು. ಹರ್ಮುಜ್ ಜಲಸಂದಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಹಡಗುಗಳ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದರಿಂದ ಭಾರತಕ್ಕೂ ಇಂಧನ ಪೂರೈಕೆಯ ಆತಂಕವಿತ್ತು.
ಕೇಂದ್ರ ಸರ್ಕಾರವು ಹೋಟೆಲ್‌ಗಳೇ ಹೆಚ್ಚಾಗಿ ಬಳಸುವ ವಾಣಿಜ್ಯ ಎಲ್‌ಪಿಜಿ ಹಂಚಿಕೆಯನ್ನು ಈಗಿನ ಶೇ.30ರಿಂದ ಶೇ.50ಕ್ಕೆ ಹೆಚ್ಚಿಸಿದೆ. ಈ ಮೂಲಕ ಗ್ಯಾಸ್ ಬಿಕ್ಕಟ್ಟನ್ನು ಕೊಂಚ ತಣಿಸಲು ಮುಂದಾಗಿದೆ. ಆದರೆ ಇದಕ್ಕೆ ಕೆಲವು ಷರತ್ತು ವಿಧಿಸಿದೆ. ಪೈಪ್ಡ್ ನ್ಯಾಚುರಲ್ ಗ್ಯಾಸ್ (ಪಿಎನ್‌ಜಿ) ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ, ‘ತೈಲ ಕಂಪನಿಗಳಲ್ಲಿ ನೋಂದಣಿ ಮಾಡಿಕೊಂಡು ಪಿಎನ್‌ಜಿ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವವರಿಗೆ ಮಾತ್ರ ಇದು ಲಭ್ಯವಾಗಲಿದೆ’ ಎಂದು ಅದು ಸ್ಪಷ್ಟಪಡಿಸಿದೆ.
ಈ ನಡುವೆ ದೇಶಾದ್ಯಂತ ಗೃಹ ಬಳಕೆಯ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಎಲ್ಲೂ ಎಲ್‌ಪಿಜಿ ಕೊರತೆ ಕಂಡುಬಂದಿಲ್ಲ, ಎಲ್ಲೆಡೆ ಸಿಲಿಂಡರ್‌ಗಳ ಸಾಮಾನ್ಯ ಪೂರೈಕೆ ಮುಂದುವರೆದಿದೆ ಎಂದು ಸರ್ಕಾರ ಹೇಳಿದೆ. ಸರ್ಕಾರ ಜನರಿಗೆ ಆತಂಕಪಡಬೇಡಿ ಎಂದು ಮನವಿ ಮಾಡಿದೆ. ಅಗತ್ಯವಿರುವಷ್ಟೇ ಸಿಲಿಂಡರ್ ಬುಕ್ ಮಾಡಬೇಕು ಎಂದು ತಿಳಿಸಿದೆ. ಅನಗತ್ಯವಾಗಿ ಸಂಗ್ರಹ ಮಾಡುವುದು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಬಹುದು ಎಂದು ಎಚ್ಚರಿಸಲಾಗಿದೆ.