ಮಂಗಳೂರು: ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ(Road Accident) ಸಂಭವಿಸಿದೆ. ದಕ್ಷಿಣಕನ್ನಡದ ಬೆಳ್ತಂಗಡಿಯಲ್ಲಿ ಮರಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಪುರುಷಗಡ್ಡೆಯಲ್ಲಿ ಮರಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಪ್ರಶಾಂತ್ ಹಾಗೂ ಬೆಳ್ಮನೆ ನಿವಾಸಿ ದಿನೇಶ್ ಎಂದು ಗುರುತಿಸಲಾಗಿದ್ದು, ಅತಿ ವೇಗದ ಚಾಲನೆಯೇ ದುರಂತಕ್ಕೆ ಕಾರಣ ಎನ್ನಲಾಗಿದೆ. ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Road Accident: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ; ನಾಲ್ವರ ಸಾವು
ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಐರಾವತ ಬಸ್ ಮತ್ತು ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ (Road Accident) ಸಂಭವಿಸಿತ್ತು. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರು. ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿ ಎಕ್ಸಿಟ್ನಲ್ಲಿ ಗುರುವಾರ (ಏ. 3) ಈ ಅವಘಡ ಸಂಭವಿಸಿತ್ತು. ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರ ಸಾವನ್ನಪ್ಪಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಮೃತರ ಇನ್ನೂ ಗುರುತು ಪತ್ತೆ ಆಗಿಲ್ಲ.
ಎಕ್ಸ್ಪ್ರೆಸ್ ಹೈವೇಯಿಂದ ಎಕ್ಸಿಟ್ ಆಗುವಾಗ ಟಾಟಾ ಪಂಚ್ ಕಾರು ಚಾಲಕನಿಗೆ ಗೊಂದಲವಾಗಿದೆ. ಹೀಗಾಗಿ ಮತ್ತೆ ಎಕ್ಸ್ಪ್ರೆಸ್ ಹೈವೇಗೆ ಕಾರು ತಿರುಗಿಸಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.