Road Accident: ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ; ನಾಲ್ವರ ಸಾವು
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಐರಾವತ ಬಸ್ ಮತ್ತು ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿ ಎಕ್ಸಿಟ್ನಲ್ಲಿ ಈ ಅಪಘಾತ ನಡೆದಿದೆ.


ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಯಲ್ಲಿ ಐರಾವತ ಬಸ್ ಮತ್ತು ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ (Road Accident) ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಮಹಿಳೆಯರು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿ ಎಕ್ಸಿಟ್ನಲ್ಲಿ ಗುರುವಾರ (ಏ. 3) ಈ ಅವಘಡ ಸಂಭವಿಸಿದೆ. ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರ ಸಾವನ್ನಪ್ಪಿದ್ದು, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಮೃತರ ಇನ್ನೂ ಗುರುತು ಪತ್ತೆ ಆಗಿಲ್ಲ.
ಎಕ್ಸ್ಪ್ರೆಸ್ ಹೈವೇಯಿಂದ ಎಕ್ಸಿಟ್ ಆಗುವಾಗ ಟಾಟಾ ಪಂಚ್ ಕಾರು ಚಾಲಕನಿಗೆ ಗೊಂದಲವಾಗಿದೆ. ಹೀಗಾಗಿ ಮತ್ತೆ ಎಕ್ಸ್ಪ್ರೆಸ್ ಹೈವೇಗೆ ಕಾರು ತಿರುಗಿಸಿದ್ದಾರೆ. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಐರಾವತ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Girl death: ಜ್ಯೂಸ್ ಎಂದು ಭಾವಿಸಿ ಕಳೆನಾಶಕ ಸೇವಿಸಿ ಬಾಲಕಿ ಸಾವು, ಪೋಷಕರ ನಿರ್ಲಕ್ಷ್ಯದಿಂದ ಅನಾಹುತ
ಚಿತ್ರದುರ್ಗದಲ್ಲಿ 15 ಪಲ್ಟಿ ಹೊಡೆದ ಕಾರು; ಮೂವರ ಸಾವು
ಚಿತ್ರದುರ್ಗ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಇಬ್ಬರು ಬಾಲಕರು ಸೇರಿ ಒಂದೇ ಕುಟುಂಬದ ಮೂವರು ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಮಂಗಳವಾರ (ಏ. 1) ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಕ್ಕನಹಳ್ಳಿ ಗ್ರಾಮದ ಮಸೀದಿ ಬಳಿಯ ರಾಷ್ಟ್ರೀಯ ಹೆದ್ದಾರಿ 150ಎ ನಲ್ಲಿನಡೆದಿತ್ತು. ಬೆಂಗಳೂರಿನ ಕುಂಬಾರ ಹಳ್ಳಿಯ ಮೌಲಾ ಅಬ್ದುಲ್ ರಹೀಂ ಸಾಬ್ (42), ಅವರ ಮಕ್ಕಳಾದ ರೆಹಮಾನ್ (15) ಹಾಗೂ ಸಮೀರ್ (10) ಮೃತರು.
ಕುಂಬಾರ ಹಳ್ಳಿಯಿಂದ ಯಾದಗಿರಿಗೆ ಕಾರಿನಲ್ಲಿ ಮೌಲಾ, ರೆಹಮಾನ್, ಸಮೀರ್, ಫಾತಿಮಾ ಬೇಗಂ ಹಾಗೂ ಸಲೀಮಾ ಬೇಗಂ ಹೊರಟಿದ್ದರು. ಮಾರ್ಗ ಮಧ್ಯೆ ಬೊಮ್ಮಕ್ಕನಹಳ್ಳಿ ಗ್ರಾಮದ ಬಳಿ ಕಾರು ರಸ್ತೆ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಹೆದ್ದಾರಿಯಲ್ಲಿ 15 ಬಾರಿ ಪಲ್ಟಿಯಾಗಿದ್ದು, ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರಿನಲ್ಲಿದ್ದ ಮೌಲಾ ಹಾಗೂ ರೆಹಮಾನ್ ಸ್ಥಳದಲ್ಲೇ ಮೃತಪಟ್ಟರೆ, ಸಮೀರ್ ಬಳ್ಳಾರಿ ವಿಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಫಾತಿಮಾ ಬೇಗಂ (75) ಹಾಗೂ ಸಲೀಮಾ ಬೇಗಂ (36) ಅವರಿಗೆ ವಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಂಪುರ ಉಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.