ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dharmasthala: ಸರಕಾರಗಳಿಗೇ ಮಾದರಿಯಾದ ಧರ್ಮಸ್ಥಳದ ವಿಕಾಸ ಪಥ

ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ದೂರದೃಷ್ಟಿಯ ಫಲವಾಗಿ ಮೂಡಿ ಬಂದ ಗ್ರಾಮೀಣಾಭಿ ವೃದ್ಧಿ ಯೋಜನೆ, ರುಡ್ಸೆಟ್ ಮತ್ತು ಸಿರಿ’ ಗ್ರಾಮೋದ್ಯೋಗ ಸಂಸ್ಥೆಗಳು ಇಂದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದಿಕ್ಸೂಚಿಯಾಗಿವೆ.

ಜಿತೇಂದ್ರ ಕುಂದೇಶ್ವರ

ಗ್ರಾಮೀಣ ಮಹಿಳಾ ಸ್ವಾವಲಂಬನೆ, ಸಬಲೀಕರಣದ ‘ಸಿರಿ’ ದರ್ಶನ

ಇಡೀ ದೇಶದ ಕ್ಷೇತ್ರಕ್ಕೆ ದಿಕ್ಸೂಚಿ

ಧರ್ಮಸ್ಥಳ: ಸರಕಾರಗಳು ಕೋಟ್ಯಂತರ ರುಪಾಯಿ ಅನುದಾನ ನೀಡಿ ಜಾರಿಗೆ ತರಲು ತಡಕಾಡುವ ಹಲವು ಅಭಿವೃದ್ಧಿ ಯೋಜನೆಗಳನ್ನು, ಶ್ರೀ ಕ್ಷೇತ್ರ ಧರ್ಮಸ್ಥಳ ಅತ್ಯಂತ ವ್ಯವಸ್ಥಿತವಾಗಿ, ಪಾರದರ್ಶಕವಾಗಿ ಮತ್ತು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ದಶಕಗಳೇ ಕಳೆದಿವೆ.

ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ದೂರದೃಷ್ಟಿಯ ಫಲವಾಗಿ ಮೂಡಿ ಬಂದ ಗ್ರಾಮೀಣಾಭಿ ವೃದ್ಧಿ ಯೋಜನೆ, ರುಡ್ಸೆಟ್ ಮತ್ತು ಸಿರಿ’ ಗ್ರಾಮೋದ್ಯೋಗ ಸಂಸ್ಥೆಗಳು ಇಂದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದಿಕ್ಸೂಚಿ ಯಾಗಿವೆ.

ಇದೇ ಕಾರಣಕ್ಕೆ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು, ಹಳ್ಳಿಯ ಸಾಮಾನ್ಯ ರೈತನವರೆಗೆ ಪ್ರತಿಯೊಬ್ಬರೂ ಧರ್ಮಸ್ಥಳದ ಈ ವಿಶ್ವರೂಪದ ಸೇವೆಯನ್ನು ಮುಕ್ತಕಂಠದಿಂದ ಕೊಂಡಾಡುತ್ತಿದ್ದಾರೆ.

ಮೇ 31 ಭಾನುವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಿರಿ’ ಸಂಸ್ಥೆಯ ಬೆಳ್ತಂಗಡಿಯ ಸುಸಜ್ಜಿತ ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್, ಉದ್ಘಾಟನಾ ಸಮಾರಂಭಕ್ಕೆ ಭಾರತದ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹಾಗೂ ಕರ್ನಾಟಕದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋತ್ ಆಗಮನ ಮತ್ತು ಅವರು ಆಡಿದ ಮೆಚ್ಚುಗೆಯ ಮಾತುಗಳು ಧರ್ಮಸ್ಥಳದ ಈ ಅಪ್ರತಿಮ ಸೇವೆಗೆ ಹಿಡಿದ ಮತ್ತೊಂದು ಕನ್ನಡಿಯಾಗಿದೆ.

ಇದನ್ನೂ ಓದಿ: Jithendra Kundeshwara Column: ತಾಳಮದ್ದಳೆ ಅರ್ಥಧಾರಿಗಳ ತಪ್ಪಿದ ತಾಳದ ಸುತ್ತಮುತ್ತ !

ಆಡಳಿತ ವೈಖರಿ ಅಚ್ಚರಿ: ಯಾವುದೇ ಒಂದು ಕಲ್ಯಾಣ ರಾಜ್ಯದ ಕಲ್ಪನೆಯಲ್ಲಿ ಅನ್ನದಾನ, ವಿದ್ಯಾದಾನ, ಔಷಧದಾನ ಪ್ರಮುಖವಾದವುಗಳು. ಧರ್ಮಸ್ಥಳವು ಈ ಸಾಂಪ್ರದಾಯಿಕ ದಾನಗಳ ಜತೆಗೆ ‘ಅಭಯ ದಾನ’ ಮತ್ತು ‘ಸ್ವಾವಲಂಬನೆ’ ದಾನ ನೀಡುವ ಮೂಲಕ ಗ್ರಾಮೀಣ ಭಾಗದ ಆರ್ಥಿಕತೆ ಕ್ರಾಂತಿಗೆ ಕಾರಣವಾಗಿದೆ. ಧರ್ಮ ಮತ್ತು ಪರಂಪರೆಯ ರಕ್ಷಣೆಯೊಂದಿಗೆ ಅನ್ನದಾನ, ವಿದ್ಯಾದಾನ, ಔಷಧಿ ದಾನ, ಅಭಯ ದಾನದ ಮಾನವೀಯ ಸೇವೆಗಳನ್ನು ಮಾಡುವ ಜತೆ ಪಾರದರ್ಶಕ ಆಡಳಿತ ವೈಖರಿ ರಾಷ್ಟ್ರಕ್ಕೇ ಮಾದರಿ ಎಂದಿದ್ದಾರೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷನ್.

ಆತ್ಮ ನಿರ್ಭರಕ್ಕೆ ಬುನಾದಿ: ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತ ತತ್ವದ ನೆಲೆಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಟ್ ಮತ್ತು ಸಿರಿ ಗ್ರಾಮೋದ್ಯೋಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಮಹಿಳೆಯರನ್ನು ಸಂಘಟಿಸಿ, ಅವರಿಗೆ ಕಚ್ಚಾವಸ್ತು ಪೂರೈಸಿ, ಅವರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಸಿರಿ’ ಸಂಸ್ಥೆಯ ನಡೆ ಒಂದು ನಿಶ್ಯಬ್ಧ ಸಾಮಾಜಿಕ ಚಳುವಳಿ.

ಮಹಿಳೆ ಸೃಷ್ಟಿಕರ್ತೆ: ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹಂಚಿಕೊಂಡ ಆಲೋಚನೆಗಳು ಇಡೀ ಕೈಗಾರಿಕಾ ವಲಯಕ್ಕೇ ಹೊಸ ಪಾಠದಂತಿವೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆ ಎಂದರೆ ಕೇವಲ ಮನೆಯ ಸದಸ್ಯೆ ಅಲ್ಲ. ಸಮಾಜವನ್ನು ಉಳಿಸುವ ಶಕ್ತಿ. ಮಾತೃಶ್ರೀ ಅಂದರೆ ತಾಯಿತನ, ತ್ಯಾಗ, ಶಕ್ತಿ ಮತ್ತು ಕರುಣೆಗೆ ಸಲ್ಲಿಸುವ ಗೌರವ.

ಇಲ್ಲಿ ದುಡಿಯುವ ಪ್ರತಿ ಮಹಿಳೆಯೂ ಕಾರ್ಮಿಕಳಲ್ಲ; ಅವಳು ಸೃಷ್ಟಿಕರ್ತೆ, ಪೋಷಕಳು ಮತ್ತು ದೇಶದ ಅಮೂಲ್ಯ ಶಕ್ತಿ ಎಂದು ಬಣ್ಣಿಸಿದ್ದಾರೆ ಡಾ.ಡಿ. ವೀರೇಂದ್ರ ಹೆಗ್ಗಡೆಯವರು.

2

ಆರ್ಥಿಕ ವಿಕಾಸದ ಬೆಸುಗೆ: ಗೌರವ ಉಪಸ್ಥಿತರಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಅವರು ಹೇಳಿದಂತೆ, ಧರ್ಮಸ್ಥಳದ ಯೋಜನೆಗಳು ಜನರಲ್ಲಿ ಕೇವಲ ಆರ್ಥಿಕ ವಿಕಾಸವನ್ನು ಮಾತ್ರ ಮೂಡಿಸುತ್ತಿಲ್ಲ. ಬದಲಿಗೆ ಅವರಲ್ಲಿ ಕಳೆದುಹೋಗಿದ್ದ ಆತ್ಮವಿಶ್ವಾಸ ವನ್ನು ಮರುಕಳಿಸುವಂತೆ ಮಾಡುತ್ತಿವೆ. ಯುವಕ-ಯುವತಿಯರಿಗೆ ಉದ್ಯೋಗ ನೀಡಿ ಸಶಕ್ತ ಕೇಂದ್ರವಾಗಿ ಬೆಳೆದಿರುವ ‘ಸಿರಿ’ ಸಂಸ್ಥೆಯು ನವಭಾರತ ನಿರ್ಮಾಣದಲ್ಲಿ ಪ್ರಮುಖ ಸ್ಥಾನ ಪಡೆದಿದೆ ಎಂದು ಮುಕ್ತಕಂಠದಿಂದ ಹೊಗಳಿದ್ದಾರೆ.

ಗಣ್ಯರ ಉಪಸ್ಥಿತಿ: ಸಮಾರಂಭದ ವೇದಿಕೆಯಲ್ಲಿ ಶ್ರೀ ಕ್ಷೇತ್ರದ ಮಾತೃಶ್ರೀ ಡಾ.ಹೇಮಾವತಿ ವೀ. ಹೆಗ್ಗಡೆ, ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್ , ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷರಾದ ಡಿ.ಸುರೇಂದ್ರ ಕುಮಾರ , ಶ್ರೀ ಕ್ಷೇತ್ರದ ಧರ್ಮೋತ್ಥಾನ ಟ್ರಸ್ಟ್‌ನ ಟ್ರಸ್ಟಿಗಳಾದ ಡಿ.ಹರ್ಷೇಂದ್ರ ಕುಮಾರ್, ಪ್ರಮುಖರಾದ ಸುಪ್ರಿಯಾ ಹರ್ಷೇಂದ್ರ ಕುಮಾರ್, ಸಿರಿ’ ಸಂಸ್ಥೆಯ ರಾಯಭಾರಿ, ಖ್ಯಾತ ಚಲನಚಿತ್ರ ನಟರಾದ ರಮೇಶ್ ಅರವಿಂದ್, ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ಎಸ್. ಮತ್ತು ಸಿರಿ’ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್. ಜನಾರ್ದನ್ ಉಪಸ್ಥಿತರಿದ್ದರು.

ಸಾಮರಸ್ಯದ ಬೆಸುಗೆ

ಧರ್ಮಸ್ಥಳದ ಯೋಜನೆಗಳ ಅತ್ಯಂತ ಪ್ರಸ್ತುತವಾದ ಅಂಶವೆಂದರೆ ಸಾಮಾಜಿಕ ಸಾಮ ರಸ್ಯ, ಜಾತಿ, ಮತ, ಧರ್ಮದ ಭೇದವಿಲ್ಲದೆ ಸರ್ವರನ್ನೂ ಸಮಾನವಾಗಿ ಕಾಣುವ ಮತ್ತು ಎಲ್ಲರಿಗೂ ಆರ್ಥಿಕ ಶಕ್ತಿ ತುಂಬುವ ಕ್ಷೇತ್ರದ ಕಾರ್ಯವೈಖರಿ ಆದರ್ಶಕರ. ಇದು ಜನರಿಗೆ ಕೇವಲ ಆರ್ಥಿಕ ವಿಕಾಸ ಮಾತ್ರ ಮೂಡಿಸುತ್ತಿಲ್ಲ, ಬದಲಿಗೆ ಕಳೆದು ಹೋಗಿದ್ದ ಆತ್ಮವಿಶ್ವಾಸ ವನ್ನು ಮರುಕಳಿಸುವಂತೆ ಮಾಡುತ್ತಿದೆ.

ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಕೆ

ಸಾಂಪ್ರದಾಯಿಕ ಉಡುಪಿನಲ್ಲಿ ದೇವಾಲಯಕ್ಕೆ ಆಗಮಿಸಿದ ಉಪರಾಷ್ಟ್ರಪತಿಗಳು ಶ್ರೀ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಅವರು ಅನ್ನಪೂರ್ಣ ಛತ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದರು.

ಮುಂದಿನ ಪೀಳಿಗೆಯ ಮಹಿಳೆಯರಿಗೆ ದಾರಿದೀಪ

ಬೆಳ್ತಂಗಡಿಯಲ್ಲಿ ತಲೆ ಎತ್ತಿರುವ ಸುಸಜ್ಜಿತ ‘ಮಾತೃಶ್ರೀ ಇಂಡಸ್ಟ್ರಿಯಲ್ ಪಾರ್ಕ್’ ಮುಂದಿನ ಪೀಳಿಗೆಯ ಗ್ರಾಮೀಣ ಮಹಿಳೆಯರ ಬದುಕಿಗೆ ದಾರಿದೀಪವಾಗುವುದರಲ್ಲಿ ಸಂಶಯವಿಲ್ಲ. ಸರಕಾರಗಳು ಉದ್ಯೋಗ ಸೃಷ್ಟಿ ಮತ್ತು ಗ್ರಾಮೀಣಾಭಿವೃದ್ಧಿಯ ಮಾದರಿ ಗಳನ್ನು ಹುಡುಕುತ್ತಿರುವಾಗ, ಧರ್ಮಸ್ಥಳವು ಈಗಾಗಲೇ ಆ ಮಾದರಿಯನ್ನು ಯಶಸ್ವಿ ಯಾಗಿ ನಡೆಸಿ ತೋರಿಸಿ, ರಾಷ್ಟ್ರಕ್ಕೆ ಆದರ್ಶವಾಗಿದೆ.