Puttur News: ಪುತ್ತೂರು ಪ್ರೇಮ ವಂಚನೆ ಪ್ರಕರಣ; ಮಗು ಕೃಷ್ಣ ರಾವ್‌ನದ್ದೇ ಎಂದು ಡಿಎನ್‌ಎ ವರದಿಯಲ್ಲಿ ದೃಢ
Puttur fraud case: ಪುತ್ತೂರು ವಂಚನೆ ಪ್ರಕರಣದಲ್ಲಿ ಸಂತ್ರಸ್ತೆ ಕುಟುಂಬಕ್ಕೆ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರು ಬೆಂಬಲ ಸೂಚಿಸಿದ್ದು, ಯುವತಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಆರೋಪಿಯನ್ನು ಕೂಡಲೇ ಸಂತ್ರಸ್ತೆಯೊಂದಿಗೆ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟ ಬೇಡ, ಇಬ್ಬರು ಒಂದಾಗಿ ಬಾಳಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

-

ಪುತ್ತೂರು: ಬಿಜೆಪಿ ಮುಖಂಡನ ಪುತ್ರನ ಪ್ರೇಮ ವಂಚನೆ ಪ್ರಕರಣಕ್ಕೆ (Puttur News) ಟ್ವಿಸ್ಟ್ ಸಿಕ್ಕಿದೆ. ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ, ಡಿಎನ್‌ಎ ಪರೀಕ್ಷೆಯ ವರದಿ ಬಂದಿದ್ದು, ಮಗು ಆತನದ್ದೇ ಎಂಬುದು ದೃಢವಾಗಿದೆ. ಪುತ್ತೂರು ನ್ಯಾಯಾಧೀಶರ ಸಮ್ಮುಖದಲ್ಲಿ ಆರೋಪಿ ಕೃಷ್ಣ ಜೆ.ರಾವ್, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಬಂದಿರುವ ವರದಿಯಲ್ಲಿ ಕೃಷ್ಣ ಜೆ.ರಾವ್‌ನಿಂದಲೇ ಸಂತ್ರಸ್ತೆ ಗರ್ಭಿಣಿಯಾಗಿರುವುದು ಎಂಬ ವಿಚಾರ ತಿಳಿದುಬಂದಿದೆ.
ಈ ಬಗ್ಗೆ ಸಂತ್ರಸ್ತೆ ಯುವತಿ ಕುಟುಂಬ ಮಾಹಿತಿ ನೀಡಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಕುಟುಂಬಕ್ಕೆ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಅವರು ಬೆಂಬಲ ಸೂಚಿಸಿದ್ದು, ಯುವತಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಆರೋಪಿಯನ್ನು ಕೂಡಲೇ ಸಂತ್ರಸ್ತೆಯೊಂದಿಗೆ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟ ಬೇಡ, ಇಬ್ಬರು ಒಂದಾಗಿ ಬಾಳಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ. ಹಿಂದೂ ಮುಖಂಡರು ಮುಂದೆ ಬಂದು ಮದುವೆ ನೆರವೇರಿಸಬೇಕೆಂದು ಆಗ್ರಹಿಸಿದ್ದಾರೆ.
ಸಂತ್ರಸ್ತ ಯುವತಿ ತಾಯಿ ಮಾತನಾಡಿ, ಆರೋಪಿ ಕೃಷ್ಣ ಜೆ ರಾವ್ ಕುಟುಂಬ ಡಿಎನ್‌ಎ ಟೆಸ್ಟ್ ಮಾಡಿಸುವಂತೆ ಒತ್ತಾಯಿಸಿತ್ತು. ಇದೀಗ ಆರೋಪಿ ಕೃಷ್ಣ ಜೆ ರಾವ್‌ನಿಂದಲೇ ಸಂತ್ರಸ್ತೆ ಗರ್ಭವತಿಯಾಗಿರುವುದು ಸಾಬೀತಾಗಿದೆ. ಹಿಂದೂ ಸಂಘಟನೆಯೇ ಮುಂದೆ ನಿಂತು ಇಬ್ಬರ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟಕ್ಕೆ ಇಷ್ಟವಿಲ್ಲ. ಇಬ್ಬರು ಒಂದಾಗಿ ಬಾಳಬೇಕು ಎಂಬುದು ನಮ್ಮ ಇಚ್ಛೆ. ಹಿಂದುತ್ವದ ಭದ್ರಕೋಟೆ ಪುತ್ತೂರಿನಲ್ಲಿರುವ ಹಿಂದೂ ಮುಖಂಡರು ಮುಂದೆ ಬರಬೇಕು. ಎರಡೂ ಕುಟುಂಬಗಳನ್ನ ಒಂದು ಮಾಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Udupi Murder Case: ಉಡುಪಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ!
ಏನಿದು ಪ್ರಕರಣ?
ಆರೋಪಿ ಕೃಷ್ಣ ಜೆ ರಾವ್ ಹಾಗೂ ಸಂತ್ರಸ್ತೆ ಶಾಲಾ ದಿನಗಳಿಂದಲೂ ಪರಿಚಿತರು ಎನ್ನಲಾಗಿದೆ. ಮದುವೆಯಾಗುವ ಭರವಸೆ ನೀಡಿ ಆರೋಪಿಯು ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. ಇದರಿಂದ ಆಕೆ ಗರ್ಭವತಿಯಾಗಿದ್ದಳು. ನಂತರ ಕುಟುಂಬದವರು ಮಾತುಕತೆ ನಡೆಸಿ ಮದುವೆ ಮಾಡುವ ಭರವಸೆ ನೀಡಿದ್ದರು. ಅದಾದ ಬಳಿಕ ಯುವತಿಗೆ ಹೆರಿಗೆ ಸಮಯ ಬಂದಾಗ ಆರೋಪಿ ಕುಟುಂಬದವರು ಮದುವೆಗೆ ನಿರಾಕರಿಸಿದ್ದರು. ಹೀಗಾಗಿ ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಳು. ಬಳಿಕ ಎಫ್ಐಆರ್ ದಾಖಲಾಗಿತ್ತು. ಇಷ್ಟರಲ್ಲಿ ಆರೋಪಿ ನಾಪತ್ತೆಯಾಗಿದ್ದ. ನಂತರ ಆತನನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿ ಜಾಮೀನು ಪಡೆದು ಬಿಡುಗಡೆಯಾಗಿದ್ದ.