ಧರ್ಮಸ್ಥಳ, ಡಿ. 29: 8 ಶತಮಾನಗಳ ಇತಿಹಾಸವಿರುವ ಶ್ರೀಕ್ಷೇತ್ರ ಧರ್ಮಸ್ಥಳ (Dharmasthala) ಸತ್ಯ - ನಿಷ್ಠೆಯ ಪ್ರತೀಕವಾಗಿದ್ದು, ಧರ್ಮದ ನೆಲೆಯ ಧಾರ್ಮಿಕ ತಾಣವಾಗಿದೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ದಕ್ಷಿಣ ಭಾರತೀಯರ ಅತ್ಯಂತ ಪ್ರಮುಖ ಕ್ಷೇತ್ರವಾಗಿದ್ದು, ‘ಮಾತು ಬಿಡ ಮಂಜುನಾಥ’ ಎಂಬಂತೆ ಇಲ್ಲಿ ಮಾತಿಗೆ ಹೆಚ್ಚು ಮಹತ್ವ ಮನ್ನಣೆ ಇದೆ. ಮಂಜುನಾಥ ದೇವರು ತಮ್ಮ ಭಕ್ತರ ಬೇಡಿದ ಬಯಕೆಯನ್ನು, ಇಷ್ಟಾರ್ಥವನ್ನು ಈಡೇರಿಸಲಿದ್ದು, ಇದೇ ಕಾರಣಕ್ಕೆ ಕೋಟಿ ಕೋಟಿ ಭಕ್ತರು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುತ್ತಾರೆ. ಹಬ್ಬ, ಹರಿದಿನಗಳಿಂದ ಹಿಡಿದು ಜನುಮದಿನ, ಮದುವೆಯ ಕಾರ್ಯ ಎಲ್ಲದಕ್ಕೂ ಶ್ರೀ ಕ್ಷೇತ್ರವನ್ನೇ ಆರಿಸಿಕೊಳ್ಳುವುದು ಸಾಮಾನ್ಯ. ಹಾಗೇ ಕ್ಷೇತ್ರವೂ ಹತ್ತಾರು ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನ ಮಾಡಿ, ಸಮಾಜದ ಅಭಿವೃದ್ಧಿ ಕೊಡುಗೆ ನೀಡುತ್ತಿದ್ದು, ಕ್ಷೇತ್ರದ ನಮ್ಮೂರು ನಮ್ಮ ಕೆರೆ, ಶುದ್ಧ ಗಂಗಾ, ವಾತ್ಸಲ್ಯ, ಜ್ಞಾನದೀಪ ಇತ್ಯಾದಿ ಸಾಮಾಜಿಕ ಕಾರ್ಯಕ್ರಮಗಳು ಹೆಸರುವಾಸಿ ಆಗಿದೆ.
ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ಬಡವರ, ಜನಸಮಾನ್ಯರ ಅಭಿವೃದ್ಧಿಗೆ ಪೂರಕ ಕೆಲಸ ಮಾಡುತ್ತಿದ್ದು, ಕ್ಷೇತ್ರದಲ್ಲಿ ಚತುರ್ದಾನ ಪರಂಪರೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಇದರೊಂದಿಗೆ ಸಾಮಾನ್ಯ ಜನರ ಕಷ್ಟ, ನೋವು, ಸಾಲದ ಹೊರೆಯನ್ನು ಮನಗಂಡ ಖಾವಂದರು ವರದಕ್ಷಿಣೆಯನ್ನು ನಿರ್ಮೂಲನೆ ಮಾಡಬೇಕೆಂಬ ಸದ್ದುದೇಶದಿಂದ 1972ರಲ್ಲಿ ಕ್ಷೇತ್ರದಲ್ಲಿ ಉಚಿತ ಸಾಮೂಹಿಕ ವಿವಾಹ (Mass Marriage) ಕಾರ್ಯಕ್ರಮವನ್ನು ಪ್ರಾರಂಭಿಸಿದರು.
1972ರಿಂದ ಆರಂಭವಾದ ಉಚಿತ ಸಾಮೂಹಿಕ ವಿವಾಹ ಈಗಾಗಲೇ 53 ವರ್ಷ ಪೂರೈಸಿದ್ದು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್(ರಿ) ಧರ್ಮಸ್ಥಳ ಇದರ ಆಶ್ರಯದಲ್ಲಿ 2026ರ ಏಪ್ರಿಲ್ 29ರ ಸಂಜೆ ಗಂಟೆ 6.48ರ ಗೋಧೂಳಿ ಲಗ್ನ ಸುಮುಹೂರ್ತದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. 1972ರಿಂದ ಆರಂಭವಾದ ಮಹಾನ್ ಕಾರ್ಯ ನಿರಂತರವಾಗಿ ನಡೆಯುತ್ತಾ ಬಂದಿದ್ದು, 13 ಸಾವಿರ ಜೋಡಿ ಈಗಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.
ಯೋಜನೆಯ ಭಾಗವಾಗಿ ವಧು-ವರರಿಗೆ ಕ್ಷೇತ್ರದಿಂದ ಕರಿಮಣಿ, ತಾಳಿ ಮತ್ತು ವಧು-ವರರ ಉಡುಪು ಮತ್ತು ಹೂವಿನ ಮಾಲೆಯನ್ನು ವಿತರಿಸಲಾಗುತ್ತದೆ. 54ನೇ ವರ್ಷದ ಉಚಿತ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವವರಿಗೆ ಕ್ಷೇತ್ರದಿಂದ ತಲಾ 5,000 ರುಪಾಯಿ ಮೊತ್ತದ ವಿಶೇಷ ಉಡುಗೊರೆಯೂ ಲಭ್ಯವಾಗಲಿದೆ. ಈ ಉಡುಗೊರೆಯಲ್ಲಿ ಡೈನಿಂಗ್ ಸೆಟ್, ಡಿನ್ನರ್ ಸೆಟ್ ಸೇರಿದಂತೆ ಅಡುಗೆಯ ಪರಿಕರಗಳನ್ನು ಒದಗಿಸಲಾಗುತ್ತದೆ.
ತಿಮರೋಡಿ, ಮಟ್ಟಣ್ಣನವರ್‌ರಿಂದ ಜೀವ ಬೆದರಿಕೆ, ರಕ್ಷಣೆ ಕೊಡಿ: ಚಿನ್ನಯ್ಯ ದೂರು
ಉಚಿತ ಸಾಮೂಹಿಕ ವಿವಾಹ
ಮದುವೆ ಆಗಲು ಇಚ್ಛಿಸುವವರು ಏಪ್ರಿಲ್ 25ರೊಳಗೆ ಸವಿವರ ಮಾಹಿತಿ ಹಾಗೂ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಮಾತ್ರ ಅವಕಾಶ ಇರುತ್ತದೆ.
ಸಾಮೂಹಿಕ ವಿವಾಹದ ವಿಶೇಷತೆ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಸಾಮೂಹಿಕ ವಿವಾಹದ ಖರ್ಚು ಭರಿಸಲಾಗುತ್ತದೆ. ಮದುವೆಗಾಗುವ ದುಂದುವೆಚ್ಚ ಮತ್ತು ವರದಕ್ಷಿಣೆ ತಡೆಗಟ್ಟಲು 1972ರಲ್ಲಿ 88 ಜೋಡಿಯ ಮದುವೆಯೊಂದಿಗೆ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಉಚಿತ ಸಾಮೂಹಿಕ ವಿವಾಹ ಪ್ರಾರಂಭಿಸಿದರು. ಮದುವೆಯ ಎಲ್ಲ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದಲೇ ಭರಿಸಲಿದ್ದು, ಪ್ರತಿವರ್ಷ ಏಪ್ರಿಲ್/ಮೇಯಲ್ಲಿ ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸಲು ಇಚ್ಛಿಸುವವರು ಮಂಡಲ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿಯಿಂದ ವಧು-ವರರ ಹೆಸರು, ಪ್ರಾಯ, ಹಿರಿಯರ ಒಪ್ಪಿಗೆ ಹಾಗೂ ಅವಿವಾಹಿತನೆಂಬುದಕ್ಕೆ ಅವಶ್ಯ ದೃಢಪತ್ರಿಕೆ ಮತ್ತು ವಧೂ-ವರರ ಇತ್ತೀಚಿನ ಭಾವಚಿತ್ರ 1+1 (ಪಾಸ್‌ಪೋರ್ಟ್ ಅಳತೆ) ತರಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 08256-266644, 8147263422 ಸಂಖ್ಯೆಗೆ ಕರೆ ಮಾಡಬಹುದು.