Pralhad Joshi: ಹಡಗು ನಿರ್ಮಾಣದ ಟಾಪ್ 10 ರಾಷ್ಟ್ರಗಳಲ್ಲಿ ಭಾರತ ಒಂದಾಗಲಿದೆ: ಪ್ರಲ್ಹಾದ್ ಜೋಶಿ ವಿಶ್ವಾಸ
Central Government: ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ಬೆಂಬಲದಿಂದ ದೇಶದ ಹಡಗು ನಿರ್ಮಾಣ ಸಾಮರ್ಥ್ಯ ಸುಧಾರಿಸಿದೆ. ಸೇವಾ ಚಟುವಟಿಕೆಗಳ ಜತೆಗೆ ಅಭೂತಪೂರ್ವ ಎನ್ನುವಂತೆ ಉತ್ಪಾದನಾ ಸಾಮರ್ಥ್ಯವನ್ನೂ ವೃದ್ಧಿಸಿಕೊಂಡಿದೆ ಎಂದು ತಿಳಿಸಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ನವಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪಾಲ್ಗೊಂಡಿದ್ದರು. -
ಮಂಗಳೂರು, ನ.13: ಭಾರತದಲ್ಲಿ ಕಡಲು ವಲಯ ತ್ವರಿತ ಬೆಳವಣಿಗೆ ಕಾಣುತ್ತಿದ್ದು, 2030ರ ವೇಳೆಗೆ ನಮ್ಮ ದೇಶ ʼಟಾಪ್ 10ʼ ಹಡಗು ನಿರ್ಮಾಣ ರಾಷ್ಟ್ರಗಳಲ್ಲಿ ಒಂದಾಗಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು. ಮಂಗಳೂರಿನಲ್ಲಿ ಗುರುವಾರ ಜರುಗಿದ ನವಮಂಗಳೂರು ಬಂದರು ಪ್ರಾಧಿಕಾರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ 2047ರ ವೇಳೆಗೆ ಟಾಪ್-5 ರಾಷ್ಟ್ರಗಳ ಪಟ್ಟಿಯಲ್ಲಿ ಇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಅವರ ನಾಯಕತ್ವ ಮತ್ತು ಬೆಂಬಲದಿಂದ ದೇಶದ ಹಡಗು ನಿರ್ಮಾಣ ಸಾಮರ್ಥ್ಯ ಸುಧಾರಿಸಿದೆ. ಸೇವಾ ಚಟುವಟಿಕೆಗಳ ಜತೆಗೆ ಅಭೂತಪೂರ್ವ ಎನ್ನುವಂತೆ ಉತ್ಪಾದನಾ ಸಾಮರ್ಥ್ಯವನ್ನೂ ವೃದ್ಧಿಸಿಕೊಂಡಿದೆ ಎಂದರು.
ಭಾರತದ ರಫ್ತು ಹೆಚ್ಚಿಸುವಲ್ಲಿ ಬಂದರು ವಲಯದ ಪಾತ್ರ ಪ್ರಮುಖವಾಗಿದೆ. ದೇಶದಿಂದ ರಫ್ತು ಚಟುವಟಿಕೆಗಳನ್ನು ಸಕ್ರಿಯವಾಗಿ ಸುಧಾರಿಸಲು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದೆ ಎಂದು ಪ್ರತಿಪಾದಿಸಿದರು.
ಪಶ್ಚಿಮ ಕರಾವಳಿಯ ನವ ಮಂಗಳೂರು ಬಂದರು ಕರ್ನಾಟಕದ ಪ್ರಮುಖ ಬಂದರು ಮತ್ತು ಭಾರತದ 7ನೇ ಅತಿ ದೊಡ್ಡ ಬಂದರಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ, ಸಮುದ್ರ ವಾಣಿಜ್ಯಕ್ಕೆ ಮತ್ತು ದಕ್ಷಿಣ ಭಾರತದ ಕೈಗಾರಿಕಾ ಪ್ರಗತಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಭಾರತ ಸಮುದ್ರ ವ್ಯಾಪಾರದಲ್ಲಿ ಅಪೂರ್ವ ಪ್ರಗತಿ ಸಾಧಿಸುತ್ತಿದ್ದು, ಬಂದರುಗಳ ಆಧುನೀಕರಣ, ಕರಾವಳಿ ಸಂಪರ್ಕ ಮಾರ್ಗಗಳ ಸುಧಾರಣೆ ಹಾಗೂ ಜಾಗತಿಕ ಹೂಡಿಕೆಗಳ ಆಕರ್ಷಣೆಯಿಂದ ಭಾರತ ಇಂದು ವಿಶ್ವ ಸಮುದ್ರ ವಾಣಿಜ್ಯದ ಶಕ್ತಿಶಾಲಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದು, ಶೀಘ್ರದಲ್ಲೇ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಅಮೆರಿಕ ಮತ್ತು ಚೀನಾದಂತಹ ಪ್ರಮುಖ ರಾಷ್ಟ್ರಗಳೊಂದಿಗೆ ಸ್ಪರ್ಧೆವೊಡ್ಡುವ ನಿಟ್ಟಿನಲ್ಲಿ ಭಾರತ ಉತ್ಪಾದನೆ ಮತ್ತು ರಫ್ತುಗಳನ್ನು ಹೆಚ್ಚಿಸಿಕೊಳ್ಳುವತ್ತ ಮಹತ್ತರ ಸಾಧನೆ ತೋರುತ್ತಿದೆ ಎಂದು ತಿಳಿಸಿದರು.
ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಮಾತನಾಡಿ, ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಮುಂದಿನ 22 ವರ್ಷಗಳಲ್ಲಿ 100 ಮಿಲಿಯನ್ ಟನ್ ಸರಕುಗಳನ್ನು ನಿರ್ವಹಿಸಲಿದೆ ಎಂದು ಹೇಳಿದರು.
2047ರ ವೇಳೆಗೆ ಭಾರತೀಯ ಬಂದರುಗಳು 10,000 ಮೆಟ್ರಿಕ್ ಟನ್ ಸರಕುಗಳನ್ನು ನಿರ್ವಹಿಸಬೇಕೆಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಅವರ ನಾಯಕತ್ವದಲ್ಲಿ ಆ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ಹೇಳಿದರು. NMPA ಶೇ.100ರಷ್ಟು ಸೌರ ಮತ್ತು ಹಸಿರು ಬಂದರು. ರೋಬೋಟಿಕ್ ಅಗ್ನಿಶಾಮಕ ಸೌಲಭ್ಯ ಮತ್ತು ಬಂದರಿನ ಡ್ರೋನ್ ಕಣ್ಗಾವಲು ಸೇರಿದಂತೆ ವಿವಿಧ ತಾಂತ್ರಿಕ ಉಪಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | CT Ravi: ಕಾಂಗ್ರೆಸ್ಸಿನವರಿಗೆ ಬಾಂಬ್ ಸ್ಫೋಟದ ಕುರಿತು ಆತಂಕ ಇಲ್ಲ: ಸಿ.ಟಿ. ರವಿ ಕಿಡಿ
ಸಮಾರಂಭದಲ್ಲಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ, ಡಿ.ವೇದವ್ಯಾಸ ಕಾಮತ್, ಕೇಂದ್ರ ಸರ್ಕಾರದ ಹಡಗು ಮಹಾನಿರ್ದೇಶಕ ಶ್ಯಾಮ್ ಜಗನ್ನಾಥನ್, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವಾಲಯದ ಕಾರ್ಯದರ್ಶಿ ವಿಜಯ್ ಕುಮಾರ್, ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ವೆಂಕಟ ರಮಣ ಅಕ್ಕರಾಜು ಉಪಸ್ಥಿತರಿದ್ದರು.