ಮೂಡಬಿದಿರೆಯಲ್ಲಿ ಆಳ್ವಾಸ್ ಮೆಡಿಕಲ್ ಕಾಲೇಜು-ಸಂಶೋಧನಾ ಕೇಂದ್ರ ಉದ್ಘಾಟನೆ
ಜಗತ್ತಿನಲ್ಲಿ 6G ಭಾರತದ ಟೆಕ್ನಾಲಜಿ ಆಗಲಿದೆ
ಮೂಡಬಿದಿರೆ: ಮೊಬೈಲ್ ಮತ್ತು ಸ್ಟಾರ್ಟಪ್ ಗಳ ಹಬ್ ಆಗಿರುವ ನಮ್ಮ ಭಾರತವನ್ನು ಮುಂದಿನ ದಿನಗಳಲ್ಲಿ "ವೈದ್ಯಕೀಯ ಹಬ್" ಆಗಿ ನಿರ್ಮಿಸುವ ಕೆಲಸ ನಡೆದಿದೆ. ಶಿಕ್ಷಣ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿದ್ಯಾರ್ಥಿ-ಯುವ ಜನರನ್ನು ರೂಪಿಸಬೇಕಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ(Pralhad Joshi) ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಸೋಮವಾರ, ಆಳ್ವಾಸ್(Alvas) ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ಭಾರತದಲ್ಲಿ ವೈದ್ಯಕೀಯ ಕ್ಷೇತ್ರವೂ ಮುನ್ನಡೆಯಲ್ಲಿದೆ ಎಂದು ಪ್ರತಿಪಾದಿಸಿದರು.
ಹತ್ತು ವರ್ಷಗಳ ಹಿಂದೆ 350 ಇದ್ದ ಮೆಡಿಕಲ್ ಕಾಲೇಜುಗಳ ಸಂಖ್ಯೆ ಇಂದು 700ಕ್ಕಿಂತ ಹೆಚ್ಚಾಗಿದೆ. ಮೆಡಿಕಲ್ ಸೀಟುಗಳು 51 ಸಾವಿರದಿಂದ 1.40 ಲಕ್ಷ ಮೀರಿದೆ. ಮೆಡಿಕಲ್, ನರ್ಸಿಂಗ್ ವಲಯದಲ್ಲಿ ಸಹ ಭಾರತ ಅದ್ಬುತ ಸಾಧನೆ ತೋರುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: Pralhad Joshi Column: ಹೊಸ ಶಿಕ್ಷಣ ನೀತಿಯು ವಿಕಸಿತ ಭಾರತದೆಡೆಗಿನ ಪಯಣ
ಮುಂದಿನ ವರ್ಷ ವಿದೇಶಗಳಲ್ಲಿ ಭಾರತೀಯ ಸ್ಟಾರ್ಟಅಪ್ ಶುರು: ಭಾರತದ ಸ್ಟಾರ್ಟಅಪ್ ಗಳಿಗೆ ವಿದೇಶಗಳೂ ಈಗ ಬೇಡಿಕೆ ಸಲ್ಲಿಸುತ್ತಿವೆ. ಮೊನ್ನೆ ಮೊನ್ನೆ ನಡೆದ ಬ್ರಿಕ್ಸ್ ಅಧಿವೇಶನದಲ್ಲಿ ರಷ್ಯವೂ ಸೇರಿದಂತೆ 10 ರಾಷ್ಟ್ರಗಳು ಭಾರತೀಯ ಸ್ಟಾರ್ಟ್ ಅಪ್ ಗಳಿಗೆ ಮುಗಿ ಬಿದ್ದಿವೆ. ಮುಂದಿನ ವರ್ಷ ವಿದೇಶಗಳಲ್ಲಿ ಭಾರತೀಯ ಸ್ಟಾರ್ಟ್ ಅಪ್ ಗಳು ಆರಂಭವಾಗಲಿವೆ ಎಂದು ಸಚಿವ ಪ್ರಲ್ಹಾದ ಜೋಶಿ ಘೋಷಿಸಿದರು.
ಭಾರತದಲ್ಲೀಗ 2.30 ಲಕ್ಷ ಸ್ಟಾರ್ಟ್ ಅಪ್ ಗಳಿದ್ದು, ವಿದೇಶದಲ್ಲಿ ಕಾರ್ಯಾರಂಭಕ್ಕೆ 120 ಸ್ಟಾರ್ಟ್ ಅಪ್ ಗಳನ್ನು ಆಯ್ಕೆ ಮಾಡಲಾಗಿದೆ. ರಷ್ಯಾದ ಅಧ್ಯಕ್ಷರು ಸೇರಿದಂತೆ ಅನೇಕ ರಾಷ್ಟ್ರಗಳ ನಾಯಕರು ನಮ್ಮ ಸ್ಟಾರ್ಟ್ ಅಪ್ ಗಳಿಗೆ ಮನ ಸೋತಿದ್ದಾರೆ ಎಂದು ಹೇಳಿದರು.
6G ಭಾರತದ ಟೆಕ್ನಾಲಜಿ ಆಗಲಿದೆ: ವೈದ್ಯಕೀಯ, ಉತ್ಪಾದನೆ, ತಂತ್ರಜ್ಞಾನ, ಶಿಕ್ಷಣ ಹೀಗೆ ಎಲ್ಲದ ರಲ್ಲೂ ಅತ್ಯದ್ಭುತ ಬೆಳವಣಿಗೆ ಸಾಧಿಸುತ್ತಿದ್ದು, ಜಗತ್ತಿನಲ್ಲಿ "6G ಟೆಕ್ನಾಲಜಿ" ನಮ್ಮ ಭಾರತದ್ದಾಗ ಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಮೊಬೈಲ್ ಉತ್ಪಾದನಾ ಹಬ್: ಮೊಬೈಲ್'ಗಳಿಗೆ ವಿದೇಶವನ್ನು ಆಶ್ರಯಿಸಿದ್ದ ಭಾರತ ಇಂದು ತಾನೇ ಮೊಬೈಲ್ ಉತ್ಪಾದನೆಯಲ್ಲಿ ತೊಡಗಿದೆ. ಶೇ.98.9ರಷ್ಟು ಮೊಬೈಲ್ ಗಳು ಭಾರತದಲ್ಲೇ ತಯಾರಾಗುತ್ತಿವೆ. ಸದ್ಯದಲ್ಲೇ ವಿದೇಶಗಳಿಗೆ ಭಾರತೀಯ ಮೊಬೈಲ್'ಗಳ ರಫ್ತು ವೃದ್ಧಿಸಲಿದೆ ಎಂದು ಹೇಳಿದರು.
ಫ್ರೀ ಟ್ರೇಡಿಂಗ್ ಅಗ್ರಿಮೆಂಟ್: ನಮ್ಮ ಜಿಡಿಪಿ 7.8 ದರದ ಬೆಳವಣಿಗೆ ಕಂಡು ಇಂದು ವಿಶ್ವವೇ ನಿಬ್ಬೆರಗಾಗಿದೆ. ಹೀಗಾಗಿ ಜಗತ್ತಿನ ಅನೇಕ ದೇಶಗಳು ಭಾರತದೊಂದಿಗೆ ಫ್ರೀ ಟ್ರೇಡಿಂಗ್ ಅಗ್ರಿಮೆಂಟ್ ಮಾಡಿಕೊಂಡಿವೆ. 823 ಮಿಲಿಯನ್ ಡಾಲರ್ ರಫ್ತು ದಾಖಲಿಸಿದೆ. 25 ವರ್ಷಗಳಲ್ಲಿ BRICS ನಲ್ಲಿ ಇಂದು 'ಐ' ಹೊಳೆಯುತ್ತಿದೆ ಎಂದು ದೇಶದ ಬೆಳವಣಿಗೆಯನ್ನು ವಿಶ್ಲೇಷಿಸಿದರು.
ಜಗತ್ತು ವೃದ್ಧವಾಗಿದ್ದರೆ ನಮ್ಮ ದೇಶ ಯುವ ಭಾರತ: ಇಂದು ಜಗತ್ತೇ ವೃದ್ಧವಾಗಿದ್ದರೆ, ನಮ್ಮ ದೇಶ 'ಯುವ ಭಾರತ'ವಾಗಿದೆ. ಶಿಕ್ಷಣ ಸಂಸ್ಥೆಗಳು ಇಂದಿನ ವಿದ್ಯಾರ್ಥಿ-ಯುವಕರಲ್ಲಿ ಕೌಶಲ್ಯವನ್ನು ಬೆಳೆಸಬೇಕಿದೆ ಎಂದ ಸಚಿವರು, ಜಗತ್ತು ಇಂದು ಉತ್ತಮ ವೈದ್ಯಕೀಯ, ನರ್ಸಿಂಗ್ ಮತ್ತು ತಂತ್ರಜ್ಞರ ಕೊರತೆ ಎದುರಿಸುತ್ತಿದ್ದು, ಭಾರತೀಯರ ಮೇಲೆ ವಿಶ್ವಾಸವಿರಿಸಿ ಹೆಚ್ಚು ಹೆಚ್ಚು ಅಪೇಕ್ಷಿಸುತ್ತಿದ್ದಾರೆ. ನಮ್ಮ ಯುವ ಸಂಪತ್ತು ವಿಶ್ವವನ್ನೇ ಬೇಕಾಗುವ ದೀಪವಾಗಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.
ಆಳ್ವಾಸ್ ಸಂಸ್ಥೆ ಸೇವೆಗೆ ಪ್ರಶಂಸೆ: ದಕ್ಷಿಣ ಕನ್ನಡ ಜಗತ್ತಿನಲ್ಲೇ ಮೆಡಿಕಲ್ ಆಗುವ ಶಕ್ತಿ ಹೊಂದಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಕ್ರೀಡೆ, ಸಾಂಸ್ಕೃತಿಕ ಮಾತ್ರವಲ್ಲದೆ ಶಿಕ್ಷಣಕ್ಕೂ ಹೆಚ್ಚಿನ ಒತ್ತು ನೀಡಿದೆ. ಅಂತೆಯೇ ಈಗ ಮೆಡಿಕಲ್ ಕ್ಷೇತ್ರದಲ್ಲೂ ಬಡವರಿಗೆ, ಎಸ್ಸಿಎಸ್ಟಿ ಪ್ರತಿಭಾವಂತರಿಗೆ ಉಚಿತ ಶಿಕ್ಷಣ ಮತ್ತು ಉಚಿತ ಚಿಕಿತ್ಸೆ ನೀಡಲು ಮುಂದಾಗುತ್ತಿದೆ ಎಂದು ಸಚಿವ ಜೋಶಿ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ನಾಯಕತ್ವದಲ್ಲಿ ದೇಶದಾದ್ಯಂತ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆ ಮೂಲಸೌಕರ್ಯಗಳು ಅಭೂತಪೂರ್ವ ವಿಸ್ತರಣೆ ಕಾಣುತ್ತಿವೆ. ಶಿಕ್ಷಣ ಸಂಸ್ಥೆಗಳು ಮಕ್ಕಳು ಮತ್ತು ಯುವಕರಿಗೆ ಶಿಕ್ಷಣದ ಜೊತೆ ಧೈರ್ಯ ಹಾಗೂ ಕೌಶಲ್ಯವನ್ನು ಕಲಿಸಬೇಕು. 65 ಕೋಟಿ ಯುವಕರಿಗೆ ದೈಹಿಕ, ಮಾನಸಿಕವಾಗಿ ಸ್ವಸ್ಥವಾಗಿಡಬೇಕಿದೆ ಎಂದ ಸಚಿವರು, ಪೋಷಕರು ಮಕ್ಕಳ ಮೇಲೆ ಒತ್ತಡ ಹೇರಬಾರದು ಎಂದು ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ವಿವೇಕಾನಂದ ಆಳ್ವ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟಾ, ಶಾಸಕ ಉಮಾನಾಥ ಕೋಟ್ಯಾನ್, ಆರ್.ಜಿ.ಯು ಹೆಚ್.ಎಸ್ ಕುಲಪತಿ ಭಗವಾನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.