ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Dharmasthala Shivaratri: ಮಹಾಶಿವರಾತ್ರಿ ಸಡಗರ: ಧರ್ಮಸ್ಥಳದತ್ತ ಹರಿದುಬರುತ್ತಿರುವ ಪಾದಯಾತ್ರಿಗಳ ದಂಡು

ಶಿವರಾತ್ರಿ ಹಿನ್ನೆಲೆ ಪಾದಯಾತ್ರೆ ಆರಂಭಿಸಿರುವ ಸಾವಿರಾರು ಭಕ್ತರ ಹಲವು ತಂಡಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪಿಸುತ್ತಿವೆ. ಬೆಂಗಳೂರು ಸಹಿತ ರಾಜ್ಯದ ನಾನಾ ಜಿಲ್ಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರು ಧರ್ಮಸ್ಥಳಕ್ಕೆ ಚಾರ್ಮಾಡಿ, ಕೊಕ್ಕಡ ಮೂಲಕ ಕಾಲ್ನಡಿಗೆಯಲ್ಲಿ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪಾವನರಾಗುತ್ತಾರೆ.

ಧರ್ಮಸ್ಥಳದತ್ತ ಬರುತ್ತಿರುವ ಪಾದಯಾತ್ರಿಗಳು.

ಧರ್ಮಸ್ಥಳ: ನಾಡಿನ ಪವಿತ್ರ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ(Dharmasthala) ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಅತ್ಯಂತ ಸಂಭ್ರಮ ಮತ್ತು ಭಕ್ತಿಯಿಂದ ಆಚರಿಸಲು ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಈ ಪವಿತ್ರ ದಿನದಂದು ಮಂಜುನಾಥ ಸ್ವಾಮಿಯ ದರ್ಶನ ಪಡೆಯಲು ನಾಡಿನ ವಿವಿಧ ಮೂಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಪಾದಯಾತ್ರಿಗಳು ಈಗಾಗಲೇ ಕ್ಷೇತ್ರಕ್ಕೆ ಭೇಟಿ ನೀಡುವುದನ್ನು ಖಚಿತಪಡಿಸಿದ್ದಾರೆ.

ಪಾದಯಾತ್ರಿಗಳಿಗೆ ವಿಶೇಷ ವ್ಯವಸ್ಥೆ

ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಬರುವ ಭಕ್ತರಿಗಾಗಿ ಧರ್ಮಸ್ಥಳ ಮತ್ತು ಉಜಿರೆಯಲ್ಲಿ ವಿಶೇಷ ವಸತಿ ಮತ್ತು ವಿಶ್ರಾಂತಿ ವ್ಯವಸ್ಥೆ ಮಾಡಲಾಗಿದೆ. ಸಾಕೇತ ಗಂಗೋತ್ರಿ, ಎಸ್.ಡಿ.ಎಂ. ಹೈಸ್ಕೂಲ್, ಅಮೃತವರ್ಷಿಣಿ ಸಭಾಭವನ ಹಾಗೂ ಉಜಿರೆಯ ಶಿಕ್ಷಣ ಸಂಸ್ಥೆಗಳಲ್ಲಿ ಭಕ್ತರು ತಂಗಲು ಅವಕಾಶ ಕಲ್ಪಿಸಲಾಗಿದೆ. ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತ ಕಾರ್ಯಾಲಯ ಮತ್ತು ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಪಾದಯಾತ್ರಿಗಳನ್ನು ಹಾರ ಹಾಕಿ ಗೌರವಪೂರ್ವಕವಾಗಿ ಸ್ವಾಗತಿಸಲಾಗುತ್ತದೆ.

ಆರೋಗ್ಯ ಮತ್ತು ಮೂಲಭೂತ ಸೌಕರ್ಯ

ಭಕ್ತರ ಆರೋಗ್ಯದ ದೃಷ್ಟಿಯಿಂದ ಉಜಿರೆಯ ಎಸ್.ಡಿ.ಎಂ. ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ ಮತ್ತು ಬೂಡುಜಾಲು ಪ್ರದೇಶಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ಡಾ. ಪಂಚಾಕ್ಷರಿ ಅವರ ನೇತೃತ್ವದ ವೈದ್ಯರ ತಂಡವು ಕ್ಷೇತ್ರದಲ್ಲಿ ಉಚಿತ ಸೇವೆ ನೀಡಲಿದೆ. ಇದಲ್ಲದೆ ಅಂಬುಲೆನ್ಸ್ ಸೇವೆ, ನಿರಂತರ ಕುಡಿಯುವ ನೀರು, ಸ್ವಚ್ಛತೆ ಮತ್ತು ವಿದ್ಯುತ್ ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭದ್ರತೆಗಾಗಿ ಪೊಲೀಸ್ ಚೌಕಿಯನ್ನು ಸಹ ಸ್ಥಾಪಿಸಲಾಗಿದೆ.

Dharmasthala: ಧರ್ಮಸ್ಥಳದಿಂದ 418 ಶಾಲೆಗಳಿಗೆ 3,472 ಡೆಸ್ಕ್-ಬೆಂಚ್‌ ವಿತರಣೆ

ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅಹೋರಾತ್ರಿ ಜಾಗರಣೆ

ಭಾನುವಾರ ಸಂಜೆ 6 ಗಂಟೆಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡಲಿದ್ದಾರೆ. ಭಕ್ತರು ಉಪವಾಸ ಮತ್ತು ಜಾಗರಣೆಯೊಂದಿಗೆ ರಾತ್ರಿಯಿಡೀ ಶಿವ ನಾಮ ಸ್ಮರಣೆ ಮಾಡಲಿದ್ದಾರೆ. ಪಾದಯಾತ್ರಿಗಳು ತಂಗುವ ಸ್ಥಳಗಳಲ್ಲಿ ಭಜನೆ, ಸತ್ಸಂಗ ಮತ್ತು ಧಾರ್ಮಿಕ ಉಪನ್ಯಾಸಗಳ ಮೂಲಕ ಧರ್ಮ ಪ್ರಭಾವನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಂಜುನಾಥ ಸ್ವಾಮಿಗೆ ಎಳನೀರು ಅಭಿಷೇಕ ಮತ್ತು ಶತರುದ್ರಾಭಿಷೇಕ ಸೇವೆಗಳು ಅಂದು ವಿಶೇಷವಾಗಿ ನಡೆಯಲಿವೆ.

ಕಲಾಸೇವೆ ಮತ್ತು ದಾಸೋಹ

ಈ ಬಾರಿಯ ಶಿವರಾತ್ರಿ ವೈಭವಕ್ಕೆ ಮೆರುಗು ನೀಡಲು ಸುಮಾರು ಎರಡು ಸಾವಿರ ಕಲಾವಿದರು ಭಾಗವಹಿಸುತ್ತಿದ್ದಾರೆ. ವಾಲಗ, ಶಂಖ, ಜಾಗಟೆ, ಕೊಳಲು ಮತ್ತು ಚೆಂಡೆ ವಾದನಗಳ ಮೂಲಕ ಕಲಾವಿದರು ತಮ್ಮ ಭಕ್ತಿಯನ್ನು ಅರ್ಪಿಸಲಿದ್ದಾರೆ. ಅನ್ನಪೂರ್ಣ ಭೋಜನಾಲಯದ ಹಿಂಬದಿ ಮತ್ತು ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಬೆಂಗಳೂರಿನ ಭಕ್ತರು ಉಚಿತ ಅನ್ನದಾಸೋಹ ಸೇವೆಯನ್ನು ಆಯೋಜಿಸಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಕೆ.ಎಸ್.ಆರ್.ಟಿ.ಸಿ. ರಾಜ್ಯದ ವಿವಿಧ ಕಡೆಗಳಿಂದ ಧರ್ಮಸ್ಥಳಕ್ಕೆ ವಿಶೇಷ ಬಸ್ ಸೌಲಭ್ಯವನ್ನು ಕಲ್ಪಿಸಿದೆ.

ಇನ್ನು, ಧರ್ಮಸ್ಥಳವು ಶಿವ ನಾಮದೊಂದಿಗೆ ಶ್ರದ್ಧಾ-ಭಕ್ತಿಯ ಸಾಗರದಲ್ಲಿ ಮಿಂದೇಳಲು ಸಿದ್ಧವಾಗಿದ್ದು, ಕ್ಷೇತ್ರದ ಆಡಳಿತ ಮಂಡಳಿಯು ಭಕ್ತರ ಸುಗಮ ದರ್ಶನಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದೆ.