Dharmasthala: ಧರ್ಮಸ್ಥಳದಲ್ಲಿ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್, ಹೇಗಿದೆ ಇಲ್ಲಿಯ ವ್ಯವಸ್ಥೆ?
Dharmasthala: ಧರ್ಮಸ್ಥಳದಲ್ಲಿ ತಿರುಪತಿ ಮಾದರಿ ಕ್ಯೂ ಕಾಂಪ್ಲೆಕ್ಸ್, ಹೇಗಿದೆ ಇಲ್ಲಿಯ ವ್ಯವಸ್ಥೆ?
ಹರೀಶ್ ಕೇರ
January 7, 2025
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala) ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಕ್ಯೂ ನಿಲ್ಲಲು ವಿಶೇಷ ಕ್ಯೂ ಕಾಂಪ್ಲೆಕ್ಸ್ (Queue Complex) ನಿರ್ಮಿಸಲಾಗಿದ್ದು, ಇಂದು ಅದನ್ನು ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ (Jagdeep Dhankhar) ಲೋಕಾರ್ಪಣೆ ಮಾಡುತ್ತಿದ್ದಾರೆ. ಈ ಕಾಂಪ್ಲೆಕ್ಸ್ ಹೇಗಿರುತ್ತದೆ ಎಂಬ ಕುರಿತ ವಿವರಗಳನ್ನು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ (Dr D Veerendra Heggade) ನೀಡಿದ್ದಾರೆ.
"ಧರ್ಮಸ್ಥಳ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕೆ ಸಾವಿರಾರು ಮಂದಿ ಭಕ್ತರು ಬರ್ತಾರೆ. ಬಂದಾಗ ಅವರಿಗೆ ಸರತಿ ಸಾಲಿನಲ್ಲಿ ನಿಲ್ಲುವಂತದೇ ದೊಡ್ಡ ಸಮಸ್ಯೆಯಾಗುತಿತ್ತು. ಅದಕ್ಕಾಗಿ ಹೊಸದಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಿದ್ದೇವೆ. ಅವರು ಕ್ಯೂ ಕಾಂಪ್ಲೆಕ್ಸ್‌ನ ಒಳಗೆ ಬಂದು ಕುಳಿತುಕೊಳ್ಳಬಹುದು. ಒಂದೊಂದು ಬ್ಲಾಕ್‌ನಲ್ಲಿ 600 ಜನ ಕುಳಿತುಕೊಳ್ಳಬಹುದು" ಎಂದು ತಿಳಿಸಿದ್ದಾರೆ.
ಅವರು ನೀಡಿದ ವಿವರಗಳು ಹೀಗಿವೆ: ಈಗಿನ ಸರತಿ ಸಾಲಿನಲ್ಲಿ ನಾಲ್ಕು ತಾಸು ನಿಲ್ಲಬೇಕಾಗುತ್ತದೆ. 5ರಿಂದ 6 ಕಿ.ಮೀ ನಡೆಯಬೇಕಾಗುತ್ತದೆ. ಅದನ್ನು ಕಡಿಮೆ ಮಾಡಲು ನಾವು ಬಹಳ ಪ್ರಯತ್ನ ಪಟ್ಟಿದ್ದೇವೆ. ಇದು 12ನೇ ಪ್ಲ್ಯಾನ್ ಮಾಡಿರೋದು. ಪ್ರತ್ಯೇಕ ಟಾಯ್ಲೆಟ್, ಆಹಾರಕ್ಕೆ ವ್ಯವಸ್ಥೆ, ಟಿ.ವಿ ಸ್ಕ್ರೀನ್ ಇದೆ. ದೇವಸ್ಥಾನದಲ್ಲಿ ಏನಾಗುತ್ತಿದೆಯೆಂದು ಅಲ್ಲಿ ನೋಡಬಹುದು. ಶಾಂತವಾಗಿ ಕುಳಿತುಕೊಂಡು ಅವರ ಸರದಿ ಬಂದಾಗ ನೇರವಾಗಿ ದರ್ಶನಕ್ಕೆ ಹೋಗಬಹುದು. ಜನರಿಗೆ ಕ್ಯೂನಲ್ಲಿ ನಿಂತು ಹೋಗಬೇಕೆಂದಿಲ್ಲ. ಉಪರಾಷ್ಟ್ರಪತಿಗಳು ಇದನ್ನು ಉದ್ಘಾಟನೆ ಮಾಡುತ್ತಾರೆ. ಎಲ್ಲಾ ಭಕ್ತಾದಿಗಳು ಇಲ್ಲಿ ಬಂದಾಗ ಇದನ್ನು ಗಮನಿಸಿ ಬರಲಿ. ಎಲ್ಲರೂ ಇದರ ಅನುಕೂಲತೆ ಪಡೆಯಬೇಕು ಎಂದಿದ್ದಾರೆ.
ದೇಶದ ಯಾವುದೇ ದೇಗುಲದಲ್ಲಿಯೂ ಇಲ್ಲದಂತಹ ಸುಸಜ್ಜಿತ ಸೌಕರ್ಯಗಳನ್ನೊಳಗೊಂಡ ಹೈಟೆಕ್ ಕ್ಯೂ ಕಾಂಪ್ಲೆಕ್ಸ್ ಇಂದು ಮಧ್ಯಾಹ್ನ 2 ಗಂಟೆಗೆ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್‌ರಿಂದ ಉದ್ಘಾಟನೆಯಾಗಲಿದೆ.
2,75,177 ಚದರ ಅಡಿಯಲ್ಲಿ ಹೈಟೆಕ್ ಕ್ಯೂ ಕಾಂಪ್ಲೆಕ್ಸ್ ನಿರ್ಮಾಣಗೊಂಡಿದೆ. ಎರಡು ಅಂತಸ್ತಿನ ಸಂಕೀರ್ಣದಲ್ಲಿ ಒಟ್ಟು 16 ವಿಶಾಲ ಭವನ ಇದೆ. ಪ್ರತಿ ಹಾಲ್‌ನಲ್ಲಿ ಏಕಕಾಲದಲ್ಲಿ 600 ಭಕ್ತರ ವಿಶ್ರಾಂತಿಗೆ ಸಕಲ ಸೌಕರ್ಯ ಇದೆ. ಎಲ್ಲಾ ಭಕ್ತರಿಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಮಾಲ್ ಮಾದರಿಯಲ್ಲೇ ಹವಾನಿಯಂತ್ರಿತ ಸೌಕರ್ಯ, ಹೊಸ ಮಾದರಿಯ ಸ್ಟೈನ್‌ಲೆಸ್ ಸ್ಟೀಲ್ ಕುರ್ಚಿಗಳ ಅಳವಡಿಕೆ, ಭಕ್ತರ ಸಂಖ್ಯೆಯನ್ನು ನಿರ್ಧರಿಸಿ ಹಾಲ್‌ಗೆ ಕಳುಹಿಸಿ ಕೊಡಲು ಎಐ ತಂತ್ರಜ್ಞಾನದ ಕ್ಯಾಮರಾ ಬಳಕೆ, ಭಕ್ತಾದಿಗಳಿಗೆ ಮಾರ್ಗದರ್ಶನ ನೀಡಲು ಎಲ್ಲೆಡೆ ಡಿಜಿಟಲ್ ಪರದೆ ಅಳವಡಿಕೆ, ಡಿಸ್‌ಪ್ಲೇಯಲ್ಲಿ ಹೋಗಬೇಕಾದ ಹಾಲ್ ಸಂಖ್ಯೆ, ದರ್ಶನದ ಅವಧಿ, ದೇವಳದ ಬಗ್ಗೆ ಮಾಹಿತಿ ಇದೆ.
ಕ್ಯೂ ಕಾಂಪ್ಲೆಕ್ಸ್ ಎಂಟ್ರಿ- ಎಕ್ಸಿಟ್‌ನಲ್ಲಿ ಸೇವಾ ರಶೀದಿಯ ಕೌಂಟರ್, ಪ್ರತಿ ಹಾಲ್‌ನಲ್ಲಿಯೂ ಕ್ಯಾಂಟೀನ್, ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ತಾಯಂದಿರಿಗೆ ಮಗುವಿನ ಆರೈಕೆಗೆಂದೆ ಹಾಲ್‌ನಲ್ಲಿ ಬೇಬಿ ಕೇರ್ ಕೊಠಡಿ ಇದೆ. ಇದರಿಂದ ಆರೇಳು ಗಂಟೆ ನಿಂತುಕೊಂಡೇ ದೇವರ ದರ್ಶನಕ್ಕೆ ಹೋಗುವ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ. ಹೊಸ ಕ್ಯೂ ಕಾಂಪ್ಲೆಕ್ಸ್‌ನಿಂದಾಗಿ ಒಂದೂವರೆ ಗಂಟೆಯೊಳಗೆ ದರ್ಶನ ಪಡೆಯುವ ಅವಕಾಶ ದೊರೆಯಲಿದೆ.