ಮಂಗಳೂರು: BJP ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru Murder) ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್.ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇರಳದ ಕೊಚ್ಚಿಯಲ್ಲಿ ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಎನ್‌ಐಎ ಬಂಧಿಸಿರುವ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ (NBW) ಜಾರಿಯಾಗಿತ್ತಲ್ಲದೇ ಮಾಹಿತಿ ನೀಡಿದರೆ 4 ಲಕ್ಷ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.
ಹತ್ಯೆಯ ಬಳಿಕ ಪ್ರಮುಖ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಉಮ್ಮರ್ ಫಾರೂಕ್ ಸಹಾಯ ಮಾಡಿದ್ದ ಎನ್ನಲಾಗಿದ್ದು, ನಂತರ ಕೇರಳದ ಕೊಚ್ಚಿಯಲ್ಲೇ ಅಡಗಿಕೊಂಡಿದ್ದ. ನಿಷೇಧಿತ ಪಿಎಫ್‌ಐ ಸಂಘಟನೆಯ ಪ್ರಮುಖರು ಆತನಿಗೆ ಕೊಚ್ಚಿಯಲ್ಲಿ ಆಶ್ರಯ ನೀಡಿದ್ದರು ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಹೊರಗಿನ ಪ್ರಪಂಚಕ್ಕೆ ಕಾಣಿಸಿಕೊಳ್ಳದಂತೆ ಆತನನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಉಮ್ಮರ್ ಕೊಚ್ಚಿಯಲ್ಲೇ ವಾಸ್ತವ್ಯ ಹೂಡಿದ್ದ ಎನ್ನಲಾಗಿದೆ.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು (32) ಅವರನ್ನು 2022ರ ಜುಲೈ 26ರಂದು ರಾತ್ರಿ ತಮ್ಮ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದರು. ಘಟನೆಯ ಬಳಿಕ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ 2022ರ ಆಗಸ್ಟ್‌ನಲ್ಲಿ ಕೇಂದ್ರ ಗೃಹ ಸಚಿವಾಲಯವು ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಿತ್ತು.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ದಾಳಿ: ವಲಸೆ ಕಾರ್ಮಿಕನ ಹತ್ಯೆ, ಮರ್ತೋರ್ವ ಗಾಯ!
ಎನ್‌ಐಎ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯ ಪ್ರಕಾರ, ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ನಾಯಕರು ಹಾಗೂ ಅದರ ‘ಸರ್ವಿಸ್ ಟೀಮ್’ ಸದಸ್ಯರು ಸಮಾಜದಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಎನ್‌ಐಎ ಹಲವು ಹಂತಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದ್ದು, ಹತ್ಯೆಯಲ್ಲಿ ನೇರವಾಗಿ ಶಾಮೀಲಾದವರು ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದವರು ಸೇರಿದಂತೆ ಇದೀಗ 25 ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ.