ಮಂಗಳೂರು: ಬಂಟ್ವಾಳದಲ್ಲಿ ಹತ್ಯೆಯಾದ ಅಬ್ದುಲ್ ರಹೀಂ ಶವಯಾತ್ರೆ ವೇಳೆ ಬಲವಂತವಾಗಿ ಬೈಕ್ ಶೋರೂಮ್ ಬಂದ್ ಮಾಡಿದ ಘಟನೆ ಬಂಟ್ವಾಳದ ಕೈಕಂಬದಲ್ಲಿ ನಡೆದಿದೆ. ಎಂದಿನಂತೆ ರಸ್ತೆ ಬದಿ ಇರುವ ಶೋರೂಮ್ ತೆರೆಯಲಾಗಿತ್ತು. ಆದರೆ ಶವಯಾತ್ರೆ ಸಂದರ್ಭದಲ್ಲಿ ಶೋರೂಮ್ ತೆರೆದಿರುವುನ್ನು ನೋಡಿ ಕೆಲ ಮುಸ್ಲಿಂ ಯುವಕರುಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಇದಕ್ಕೆ ಸಿಬ್ಬಂದಿ ಒಪ್ಪಿಲ್ಲ. ಇದರಿಂದ ಕೆಲ ಕಿಡಿಗೇಡಿಗಳು ಶೋ ರೂಮ್‌ಗೆ ಕಲ್ಲು ಎಸೆದು ದಾಂಧಲೆ ನಡೆಸಿದ್ದಾರೆ.
ಸ್ಥಳದಲ್ಲಿ ಇಬ್ಬರು ಪೊಲೀಸರು ಇದ್ದರೂ ಕ್ಯಾರೇ ಎನ್ನದೇ ಯುವಕರು ಗಲಾಟೆ ಮಾಡಿದ್ದಾರೆ. ಬಳಿಕ ಒತ್ತಾಯ ಪೂರ್ವಕವಾಗಿ ಬಾಗಿಲು ಮುಚ್ಚಿಸಿದ್ದಾರೆ. ಕಿಡಿಗೇಡಿಗಳು ಶೋರೂಮ್ ಮುಂದೆ ಗಲಾಟೆ ಮಾಡಿದ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಮಂಗಳೂರಿನಲ್ಲಿ ಕೆಲವು ಸಿಟಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಸುರತ್ಕಲ್ ಮಂಗಳೂರು ಸುರತ್ಕಲ್, ಮುಕ್ಕ ಹಳೆಯಂಗಡಿ, ಕಿನ್ನಿಗೋಳಿ ಮಾರ್ಗವಾಗಿ ಕಟೀಲಿಗೆ ಸಂಚರಿಸುವ ನಂದಿನಿ ಬಸ್‌ಗೆ ಸುರತ್ಕಲ್‌ನಲ್ಲಿ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಆ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದರಿಂದ ಪ್ರಯಾಣಿಕರು ಬೇರೆ ಬಸ್‌ನಲ್ಲಿ ತೆರಳಿದ್ದಾರೆ.
ಈ ಸುದ್ದಿಯನ್ನೂ ಓದಿ | Viral News: ಮತ್ತೆ ಕೊರೋನಾ ಅಬ್ಬರ? ನಿಜವಾಗುತ್ತಾ ಬಾಬಾ ವಂಗಾ ಭವಿಷ್ಯವಾಣಿ?
ಮಾಧ್ಯಮಗಳ ವಿರುದ್ಧ ಅಕ್ರೋಶ
ಇನ್ನು ರಹೀಂ ಪಾರ್ಥೀವ ಶರೀರ ಆಗಮನ ವೇಳೆ ಬಿ.ಸಿ. ರೋಡ್ ಸಮೀಪದ ಕೈಕಂಬ ಪರಿಸರದಲ್ಲಿ ಉದ್ವಿಗ್ನ ಪರಿಸ್ಥಿತಿ ತಲೆದೋರಿತು. ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ ಜನರು ಅಂತಿಮ ದರ್ಶನ ಪಡೆದರು. ಈ ಸಂದರ್ಭ ದೃಶ್ಯಾವಳಿ ಸೆರೆ ಹಿಡಿಯಲು ಮುಂದಾದ ಕ್ಯಾಮೆರಾಮೆನ್ ಒಬ್ಬರನ್ನು ಕಾರಿನಿಂದ ಇಳಿಯಲು ಬಿಡದೆ ಮತ್ತೆ ಕಾರಿಗೆ ತಳ್ಳಿದ ಆಕ್ರೋಷಿತ ಗುಂಪು ಬೆದರಿಕೆ ಒಡ್ಡಿತು. ದೃಶ್ಯ ಸೆರೆ ಹಿಡಿಯುತ್ತಿದ್ದ ಪತ್ರಿಕಾ ಛಾಯಾಗ್ರಾಹಕರಿಗೆ ಧಮ್ಕಿ ಹಾಕಲಾಯಿತು. ಪತ್ರಕರ್ತರೊಬ್ಬರ ಮೊಬೈಲ್ ಕಸಿದುಕೊಂಡು ಫೋಟೊ ಡಿಲೀಟ್ ಮಾಡಲಾಯಿತು.
ಈ ಸಂದರ್ಭ ಮತ್ತೆ ಕೆಲವರು ತಕ್ಷಣ ಪತ್ರಕರ್ತರ ನೆರವಿಗೆ ಧಾವಿಸಿ ಆಕ್ರೋಷಿತರನ್ನು ಸಮಾಧಾನಪಡಿಸಿ ಪತ್ರಕರ್ತರಿಗೆ ರಕ್ಷಣೆ ನೀಡಿದರು. ಹೀಗಾಗಿ ಕೈಕಂಬ, ಬಿ.ಸಿ. ರೋಡ್ ನಲ್ಲಿ ಭಾರಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿದೆ.