ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷ ವಿನಯ ಹೆಗ್ಡೆ ನಿಧನಕ್ಕೆ ಡಾ. ವೀರೇಂದ್ರ ಹೆಗ್ಗಡೆ ಸಂತಾಪ

ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಹಾಗೂ ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಡಾ. ಎನ್. ವಿನಯ ಹೆಗ್ಡೆ ಅವರ ನಿಧನಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದ್ದಾರೆ.

ವಿನಯ್ ಹೆಗ್ಡೆ

ಬೆಳ್ತಂಗಡಿ, ಜ. 1: ನಿಟ್ಟೆ ವಿಶ್ವವಿದ್ಯಾಲಯ (Nitte University)ದ ಕುಲಪತಿ ಹಾಗೂ ಉದ್ಯಮಿ ಮತ್ತು ಸಮಾಜ ಸೇವಕರಾಗಿದ್ದ ಡಾ. ಎನ್.ವಿನಯ ಹೆಗ್ಡೆ (Vinay Hegde) ಅವರ ನಿಧನಕ್ಕೆ ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Veerendra Heggade) ಸಂತಾಪ ಸೂಚಿಸಿದ್ದಾರೆ. ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಡಾ. ಎನ್. ವಿನಯ ಹೆಗ್ಡೆ ಗುರುತಿಸಿಕೊಂಡಿದ್ದರು. ಪ್ರಸ್ತುತ ಮಂಗಳೂರಿನ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.

"ನಿಟ್ಟೆ ಶಿಕ್ಷಣ ಸಂಸ್ಥೆಗಳ ಸಮೂಹ ಅಧ್ಯಕ್ಷರಾದ ಡಾ. ಎನ್. ವಿನಯ ಹೆಗ್ಡೆ ಅವರ ನಿಧನ ಸುದ್ದಿ ತಿಳಿದು ವಿಷಾದವಾಯಿತು. ಶಿಕ್ಷಣ ತಜ್ಞರಾಗಿ, ಖ್ಯಾತ ಉದ್ಯಮಿಯಾಗಿ, ಕ್ರೀಡಾಪ್ರೇಮಿಯಾಗಿ, ಸಮಾಜಸೇವಕರಾಗಿ, ದಕ್ಷ ಆಡಳಿತದಾರರಾಗಿ ಅವರು ಉತ್ತಮ ಸೇವೆ ನೀಡಿದ್ದಾರೆ. ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದ ಅವರು ತಮ್ಮ ದಕ್ಷ ನಾಯಕತ್ವದಲ್ಲಿ ತಾವು ಬೆಳೆಯುವುದರೊಂದಿಗೆ ಇತರರಿಗೂ ಪ್ರೋತ್ಸಾಹ ನೀಡಿದ್ದರು" ಎಂದು ಹೆಗ್ಗಡೆ ಹೇಳಿದ್ದಾರೆ.

ನಿಟ್ಟೆ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ನ್ಯಾ. ಸಂತೋಷ್ ಹೆಗ್ಡೆ ಸೋದರ ವಿನಯ್ ಹೆಗ್ಡೆ ನಿಧನ

"ಅನೇಕ ಸಮಾರಂಭಗಳಲ್ಲಿ ನಾವು ಜತೆಯಾಗಿ ವೇದಿಕೆಯಲ್ಲಿ ಭಾಗವಹಿಸಿದ್ದೇವೆ. ನಮ್ಮ ಕ್ಷೇತ್ರದ ಅಪಾರ ಅಭಿಮಾನಿಯೂ, ಭಕ್ತರೂ ಆಗಿದ್ದ ಅವರು ಸ್ನೇಹಜೀವಿಯಾಗಿ, ಆದರ್ಶ ಸಮಾಜಸೇವಕರಾಗಿ ಚಿರಪರಿಚಿತರಾಗಿದ್ದರು. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ" ಎಂದು ಅವರು ಸಂತಾಪ ಸೂಚಿಸಿದ್ದಾರೆ.

ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರರಾಗಿದ್ದ ವಿನಯ ಹೆಗ್ಡೆ, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದರು. 1979ರಲ್ಲಿ ನಿಟ್ಟೆ ಎಜುಕೇಶನ್ ಟ್ರಸ್ಟ್ ಸ್ಥಾಪಿಸಿದರು. ಇಂದು ನಿಟ್ಟೆ ಶಿಕ್ಷಣ ಸಂಸ್ಥೆಗಳು ಮಂಗಳೂರು, ಬೆಂಗಳೂರು ಮತ್ತು ನಿಟ್ಟೆಯಲ್ಲಿ 40ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ಹೊಂದಿವೆ. ಇದರಲ್ಲಿ ವೈದ್ಯಕೀಯ, ಎಂಜಿನಿಯರಿಂಗ್, ದಂತವೈದ್ಯಕೀಯ, ಫಾರ್ಮಸಿ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜುಗಳು ಸೇರಿವೆ.

ಕರಾವಳಿ ಕರ್ನಾಟಕದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದೂರದೃಷ್ಟಿಯ ನಾಯಕರಾಗಿದ್ದ ಅವರು, ಲೆಮಿನಾ ಸಸ್ಪೆನ್ಷನ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಲೆಮಿನಾ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರೂ ಆಗಿದ್ದರು. ಇದು ಆಟೋಮೊಬೈಲ್ ಬಿಡಿಭಾಗಗಳ ತಯಾರಿಕೆಯಲ್ಲಿ ಪ್ರಮುಖ ಸಂಸ್ಥೆಯಾಗಿದೆ.