ಧಮರ್ಸ್ಥಳ, ನ.19: ನಮ್ಮ ಭಾಷೆಯನ್ನು ನಾವು ಪೊರೆಯದೇ, ಬೆಳೆಸದೇ ಸಾಹಿತ್ಯವನ್ನು ಸೃಷ್ಟಿ ಮಾಡಲು ಸಾಧ್ಯವಿಲ್ಲ. ಹಾಗೆಯೇ ಇರುವಂತಹ ಸಾಹಿತ್ಯವನ್ನೂ ಕಳೆದುಕೊಳ್ಳುತ್ತೇವೆ. ಹೀಗಾಗಿ ಕನ್ನಡದ ಬಗ್ಗೆ ತಾತ್ಸಾರ, ಉದಾಸೀನ ಇಟ್ಟುಕೊಳ್ಳಬಾರದು. ಕನ್ನಡ ಎಲ್ಲ ರೀತಿಯಲ್ಲೂ ಸಮೃದ್ಧವಾಗಿರುವ ಭಾಷೆ, ಈ ಭಾಷೆಯನ್ನು ನಾವು ಎಲ್ಲಿಯವರೆಗೂ ತಲೆಮೇಲೆ ಇಟ್ಟುಕೊಂಡು ಮೆರೆಸುತ್ತೇವೋ ಅಲ್ಲಿಯವರೆಗೆ ಕನ್ನಡತನ ಇದ್ದೇ ಇರುತ್ತದೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ (Vishweshwar Bhat) ಅವರು ತಿಳಿಸಿದರು.
ಧರ್ಮಸ್ಥಳದಲ್ಲಿ ಆಯೋಜಿಸಿದ್ದ ಲಕ್ಷ ದೀಪೋತ್ಸವದಲ್ಲಿ ಮಾತನಾಡಿದ ಅವರು, ಈಗ ನಮ್ಮ ಮಾತುಗಳಲ್ಲಿ ಹೆಚ್ಚು ಇಂಗ್ಲಿಷ್ ಪದಗಳನ್ನು ಬಳಸುತ್ತಿದ್ದೇವೆ. ಇದನ್ನು ಬೆಂಗಳೂರು ಕನ್ನಡ ಅಥವಾ ಎಫ್‌ಎಂ ಕನ್ನಡ ಎಂದು ಕರೆಯುತ್ತೇವೆ. ಮನೆಗಳಲ್ಲೂ ಕೂಡ ಇಂಗ್ಲಿಷ್ ಪದಗಳನ್ನೇ ಹೆಚ್ಚಾಗಿ ಬಳಸುತ್ತೇವೆ. ಕನ್ನಡದಲ್ಲಿ ಅದ್ಭುತವಾದ ಒಂದು ಶಬ್ದವಿದೆ. ಅದು ʼಆತ್ಮವಿಶ್ವಾಸʼ ಎಂಬ ಪದ. ನಮ್ಮ ಜೀವನದಲ್ಲಿ ಆತ್ಮಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಆತ್ಮಕ್ಕೆ ವಿಶ್ವಾಸ, ಬಲ ಕೊಡುವುದು ಈ ಪದದ ಅರ್ಥ. ಆದರೆ, ಇದಕ್ಕೆ ನಾವು ಇಂಗ್ಲಿಷ್‌ನಲ್ಲಿ ಕಾನ್ಫಿಡೆನ್ಸ್ ಎಂದು ಬಳಸುತ್ತೇವೆ. ಈ ಪದದಲ್ಲಿ ʼಆತ್ಮʼ ಎಂಬ ಪದ ಇಲ್ಲ. ಹೀಗೆ ನೂರಾರು ಉದಾಹರಣೆ ಕೊಡಬಹುದು. ಹೀಗಾಗಿ ಜಗತ್ತಿನಲ್ಲಿ ಅತ್ಯಂತ ಪರಿಪೂರ್ಣವಾದ ಭಾಷೆಗಳಲ್ಲಿ ಕನ್ನಡವೂ ಒಂದಾಗಿದೆ ಎಂದು ಹೇಳಿದರು.
2 ಸಾವಿರ ವರ್ಷಗಳಿಗೂ ಹೆಚ್ಚು ಇತಿಹಾಸವಿರುವ, ವೈಶಿಷ್ಟ್ಯಪೂರ್ಣ ಭಾಷೆ ಕನ್ನಡವಾಗಿದೆ. ಅಂತಹ ಒಂದು ಭಾಷೆಯನ್ನು ನಾವು ಸ್ವಲ್ಪ ವಿರೂಪಗೊಳಿಸುತ್ತೇವೆ ಎಂದು ಅನಿಸುತ್ತದೆ. ಜಗತ್ತಿನ ಅತ್ಯಂತ ಸುಂದರ ಲಿಪಿಗಳಲ್ಲಿ ಕನ್ನಡಕ್ಕೆ ಮೂರನೇ ಸ್ಥಾನ ಸಿಗುತ್ತದೆ. ಜಗತ್ತಿನಲ್ಲಿ ಹೆಚ್ಚು ಜನ ಮಾತನಾಡುವ ಇಂಗ್ಲಿಷ್‌ಗೆ ಸ್ವಂತ ಲಿಪಿ ಇಲ್ಲ, ಹೀಗಾಗಿ ರೋಮನ್ (ಲ್ಯಾಟಿನ್) ಲಿಪಿಯನ್ನು ಬಳಸುತ್ತಾರೆ. ಇನ್ನು ಭಾರತದಲ್ಲಿ ಹೆಚ್ಚಾಗಿ ಬಳಸುವ ಹಿಂದಿಯನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ಆದರೆ, ಕನ್ನಡಕ್ಕೆ ಅದರದೇ ಆದ ಸುಂದರವಾದ ಲಿಪಿ ಇದೆ. ನೀವು ಇಂಗ್ಲಿಷ್‌ನಲ್ಲಿ ಯಾವುದೇ ಪದ ಹೇಳಿ, ಅದಕ್ಕೆ ನಾನು ಕನ್ನಡದಲ್ಲಿ ಸಮನಾದ ಪದವನ್ನು ಹೇಳುವೆ. ಯಾಕೆಂದರೆ ಕನ್ನಡ ಅಷ್ಟು ಸಮೃದ್ಧವಾಗಿದೆ, ಶ್ರೀಮಂತವಾಗಿದೆ ಎಂದು ತಿಳಿಸಿದರು.
ವಿಶ್ವೇಶ್ವರ ಭಟ್ ಅವರ ಭಾಷಣದ ವಿಡಿಯೋ
ಇಂಗ್ಲೆಂಡ್‌ನಲ್ಲಿ ಓದಿ, ಥೇಮ್ಸ್ ನದಿ ನೀರು ಕುಡಿದು ಕನ್ನಡವನ್ನು ನಿರರ್ಗಳವಾಗಿ ಮಾತಾಡ್ತೇನೆ
ನಾನು ಇಂಗ್ಲೆಂಡಿನಲ್ಲಿ ಓದಿದವನು, ಥೇಮ್ಸ್ ನದಿ ನೀರು ಕುಡಿದವನು. ಆದರೆ, ಕನ್ನಡ ನಿರರ್ಗಳವಾಗಿ ಬರುತ್ತದೆ. ಕನ್ನಡ ಮೊದಲ ಭಾಷೆಯಾಗಿ ಬರುತ್ತದೆ. ನಾವು ಕನ್ನಡವನ್ನು ಪ್ರೀತಿಸುವುದು ಎಂದರೆ ನಮ್ಮ ತಾಯಿಯನ್ನು ಪ್ರೀತಿಸುವುದು. ಆದರೆ, ಇವತ್ತು ನಮ್ಮ ನಾಲಿಗೆ ಮೇಲೆ ಅನೇಕ ಇಂಗ್ಲಿಷ್ ಪದಗಳು ಬಂದು ಕುಳಿತಿವೆ, ಯಾಕೆ? ನಾನು ಖಂಡಿತವಾಗಿ ಇಂಗ್ಲಿಷ್ ವಿರೋಧಿಯಲ್ಲ. ಇದೇ ಭಾಷಣವನ್ನು ನಾನು ಇಂಗ್ಲಿಷ್‌ನಲ್ಲೂ ಮಾಡಬಲ್ಲೆ, ಹಾಗೆಯೇ, ಒಂದೇ ಒಂದು ಇಂಗ್ಲಿಷ್ ಪದ ಬಳಸದೆ ಕನ್ನಡದಲ್ಲೂ ಮಾತನಾಡಬಲ್ಲೆ ಎಂದು ಹೇಳಿದರು.
ನಮಗೆ ಎದುರಿಗೆ ಇರುವ ವ್ಯಕ್ತಿ ಕನ್ನಡಿಗ ಎಂದು ಗೊತ್ತಿದ್ದರೂ ಆದರೂ ನಾವು ಇಂಗ್ಲಿಷ್‌ನಲ್ಲಿ ಮಾತನಾಡುತ್ತೇವೆ. ಆದರೆ, ಇಬ್ಬರು ತಮಿಳರು ಅಥವಾ ಬೆಂಗಾಲಿಗಳು ಸೇರಿದರೆ ಅವರು ಅವರ ಮಾತೃಭಾಷೆಯಲ್ಲೇ ಮಾತನಾಡುತ್ತಾರೆ. ಆದರೆ, ಬೆಂಗಳೂರಿನಲ್ಲಿ ಇಬ್ಬರು ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದಾರೆ ಎಂದರೆ ಅವರು ಕನ್ನಡಿಗರೇ ಆಗಿರುತ್ತಾರೆ. ಹಾಗಂತ ನಮ್ಮ ಕನ್ನಡಿಗರ ಇಂಗ್ಲಿಷ್ ಸರಿಯಾಗಿದೆಯಾ ಎಂದರೆ ಅದೂ ಇಲ್ಲ. ಷೇಕ್ಸ್‌ಪಿಯರ್ ಇಂಗ್ಲಿಷ್ ಅಂತೂ ಬರುವುದೇ ಇಲ್ಲ. ಹೀಗಾಗಿ ಕನ್ನಡವನ್ನು ನಾವೇ ಬಳಸಬೇಕು, ಬೆಳೆಸಬೇಕು ಸಲಹೆ ನೀಡಿದರು.
ಚೀನಾ, ಜಪಾನ್, ಫ್ರಾನ್ಸ್, ರಷ್ಯಾದಲ್ಲಿ ಯಾರೂ ಇಂಗ್ಲಿಷ್‌ನಲ್ಲಿ ಮಾತನಾಡಲ್ಲ. ಅವರು ಅವರ ಮಾತೃಭಾಷೆಯಲ್ಲೇ ಮಾತನಾಡುತ್ತರೆ. ಆದರೆ, ನಮ್ಮ ವಿಧಾನಸಭೆಯಲ್ಲಿ ನಡೆಯುವ ಕಲಾಪದಲ್ಲಿ 224 ಶಾಸಕರಲ್ಲಿ ಎಸ್‌ಎಸ್‌ಎಲ್‌ಸಿ ಓದಿದವರು, ಡಿಗ್ರಿ ಫೇಲ್ ಆದವರೂ ಬಹಳ ಜನ ಸಿಗುತ್ತಾರೆ. ನಮ್ಮ ರಾಜ್ಯ ಸಂಪುಟದಲ್ಲಿ ಕನ್ನಡದಲ್ಲೇ ಪರಿಪೂರ್ಣವಾಗಿ ಕನ್ನಡದಲ್ಲೇ ಮಾತನಾಡಬೇಕಾದ ಸ್ಥಿತಿ ಇದೆ, ಯಾರಿಗೂ ಪರಿಪೂರ್ಣವಾಗಿ ಇಂಗ್ಲಿಷ್ ಬರಲ್ಲ. ಹತ್ತು ವಾಕ್ಯಗಳನ್ನು ಇಂಗ್ಲಿಷ್‌ನಲ್ಲಿ ಬರೆದರೆ ಅವರ ಕಾಲುಮುಟ್ಟಿ ನಮಸ್ಕರಿಸುವೆ. ಆದರೂ ಕೂಡ ಎಲ್ಲರೂ ಕೂಡ ಇಂಗ್ಲಿಷ್‌ನಲ್ಲೇ ಮಾತನಾಡುತ್ತಾರೆ. ಯಾರಿಗೋಸ್ಕರ ಇದು ಅಗತ್ಯ. ನಮ್ಮ ಭಾಷೆ ದೊಡ್ಡ ಅಪಾಯದಲ್ಲಿದ್ದು, ಇದರ ಬಗ್ಗೆ ನಮಗೆಲ್ಲರಿಗೂ ಆತಂಕವಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕನ್ನಡ ಮತ್ತು ಸಂಸ್ಕೃತ ಇಲಾಖೆ ಇದೆ. ಹಂಪಿ ಕನ್ನಡ ವಿಶ್ವವಿದ್ಯಾಲಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಹತ್ತಾರು ವಿವಿಗಳು, ಪ್ರಾಧಿಕಾರಗಳು ಇವೆ. ಹೀಗೆ ಕನ್ನಡಕ್ಕೆ ಸಂಬಂಧಿಸಿದ ಮೂವತ್ತರಿಂದ ಮೂವತ್ತೈದು ಸಂಸ್ಥೆಗಳು ಇವೆ. ಆದರೂ ನಮ್ಮ ಕನ್ನಡ ಇವತ್ತು ಅಪಾಯದಲ್ಲಿದೆ ಎಂದು ಹೇಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾತೃಭಾಷೆ ಪ್ರೀತಿಗೆ ತುಳು, ಹೀಬ್ರೂ ಭಾಷಿಕರು ಮಾದರಿ
ಎರಡು ಭಾಷೆಗಳ ಜನ ಬಹಳ ಪ್ರಖರವಾಗಿ ತಮ್ಮ ಭಾಷೆಯನ್ನು ಉಳಿಸಿಕೊಂಡಿರುವುದರ ಬಗ್ಗೆ ಹೆಮ್ಮೆ ಇದೆ. ಇದರಲ್ಲಿ ಮೊದಲನೇಯವರು ದಕ್ಷಿಣ ಕನ್ನಡದ ತುಳು ಭಾಷಿಕರು. ಎರಡನೇಯದು ಇಸ್ರೇಲ್‌ನ ಹೀಬ್ರೂ ಭಾಷೆ. ನಾವೆಲ್ಲರೂ ತುಳು ಮಾತನಾಡಬೇಕು ಎಂದು ಚಳವಳಿ ಆಗಿರುವುದನ್ನು ನಾನೆಲ್ಲೂ ನೋಡಿಲ್ಲ. ಅವರು ಎಲ್ಲೇ ಇದ್ದರೂ ಅಭಿಮಾನದಿಂದ ತಮ್ಮ ಭಾಷೆ ಬಳಸುತ್ತಾರೆ.
ಈ ಸುದ್ದಿಯನ್ನೂ ಓದಿ | Vishweshwar Bhat's Book Release: ಇಸ್ರೇಲ್‌ನಲ್ಲಿ ಹಮಾಸ್ ಉಗ್ರರು ನಡೆಸಿದ ಭೀಕರ ನರಮೇಧದ ಬಗ್ಗೆ ಕನ್ನಡಿಗರು ಓದಬೇಕು: ವಿಶ್ವೇಶ್ವರ ಭಟ್
ಹಾಗೆಯೇ ರೋಮನ್ನರು, ಆಟೋಮನ್ ಟರ್ಕರ ಸಾಮ್ರಾಜ್ಯದಲ್ಲಿ ಹೀಬ್ರೂ ಭಾಷೆ ಮಾತನಾಡಬಾರದು ಎಂದು 800 ವರ್ಷ ನಿಷೇಧ ಇತ್ತು. ಹೀಬ್ರೂ ಭಾಷೆಯ ಎಲ್ಲಾ ಗ್ರಂಥಗಳನ್ನು ಸುಟ್ಟು ಹಾಕಿ, ಆ ಭಾಷೆ ಮಾತನಾಡಿದರೆ ನಾಲಿಗೆ ಕತ್ತರಿಸುತ್ತೇವೆ ಎಂದು ಎಚ್ಚರಿಕೆ ನೀಡಿ ನಿಷೇಧಿಸಿದ್ದರು. ಆದರೆ, ಇಸ್ರೇಲ್ ಸ್ವಾತಂತ್ರ್ಯ ಪಡೆದ ನಂತರ ಹೀಬ್ರೂ ಭಾಷೆ ಆ ದೇಶದ ಪ್ರಥಮ ಭಾಷೆಯಾಗಿದೆ. ಅಲ್ಲಿ ಯಾರೇ ಪತ್ರಿಕೆ ಆವೃತ್ತಿ ತೆರೆಯಲು, ಜಾಹೀರಾತು ನೀಡಲು ಹೀಬ್ರೂ ಭಾಷೆಯಲ್ಲೇ ನೀಡಬೇಕು. ಇದು ಅಲ್ಲಿನ ಜನ ತಮ್ಮ ಭಾಷೆಯನ್ನು ಪ್ರೀತಿಸುವ ರೀತಿ. ಒಂದು ಭಾಷೆಯನ್ನು ಬೆಳೆಸುವ, ಸಾಹಿತ್ಯವನ್ನು ಪೊರೆಯುವ ರೀತಿ ಎಂದು ತಿಳಿಸಿದರು.