ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishweshwar Bhat's Book Release: ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರು ನಡೆಸಿದ ಭೀಕರ ನರಮೇಧದ ಬಗ್ಗೆ ಕನ್ನಡಿಗರು ಓದಬೇಕು: ವಿಶ್ವೇಶ್ವರ ಭಟ್‌

Badukulidavaru Kandanthe Book: ಶ್ರೀ ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್‌ ಹಾಗೂ ವಿಶ್ವವಾಣಿ ಪುಸ್ತಕ ವತಿಯಿಂದ ಬೆಂಗಳೂರಿನ ಎಫ್‌ಕೆಸಿಸಿಐ ಸಭಾಂಗಣದಲ್ಲಿ ವಿಶ್ವವಾಣಿಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್‌ ಅವರ 103ನೇ ಕೃತಿ 'ಬದುಕುಳಿದವರು ಕಂಡಂತೆʼ ಕೃತಿಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ಇಸ್ರೇಲ್‌ನಲ್ಲಿ ನಡೆದ ನರಮೇಧದ ಬಗ್ಗೆ ಕನ್ನಡಿಗರು ಓದಬೇಕು: ವಿಶ್ವೇಶ್ವರ ಭಟ್‌

ಬೆಂಗಳೂರಿನಲ್ಲಿ ವಿಶ್ವೇಶ್ವರ ಭಟ್‌ ಅವರ 'ಬದುಕುಳಿದವರು ಕಂಡಂತೆʼ ಕೃತಿಯನ್ನು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರು ಪುಸ್ತಕ ಬಿಡುಗಡೆ ಮಾಡಿದರು. -

Prabhakara R
Prabhakara R Nov 16, 2025 4:20 PM

ಬೆಂಗಳೂರು, ನ.16: ನಾನು ಈ ಪುಸ್ತಕವನ್ನು ಅತ್ಯಂತ ಭಾರವಾದ ಹೃದಯದಿಂದ ಬರೆದಿದ್ದೇನೆ. ಬಹುಶಃ ಬೇರಾವ ಪುಸ್ತಕವೂ (Vishweshwar Bhat's Book Release) ಇಷ್ಟೊಂದು ಸಮಸ್ಯೆ ಆಗಿರಲಿಲ್ಲ. ನನ್ನ ಎಲ್ಲ ಕೃತಿಗಳಿಗಿಂತ ಇದು ವಿಭಿನ್ನ. ನಾನು ಸಾಮಾನ್ಯವಾಗಿ ಎರಡು- ಮೂರು ದಿನಗಳಲ್ಲಿ ಪ್ರೂಫ್‌ ರೀಡಿಂಗ್‌ ಮಾಡುತ್ತೇನೆ. ಆದರೆ ಈ ಪುಸ್ತಕವನ್ನು ಬರೆದ ಬಳಿಕ ಪ್ರೂಫ್‌ ರೀಡಿಂಗ್‌ ಮಾಡಲು 25 ದಿನಗಳೇ ಬೇಕಾಯಿತು. ಕೇವಲ ಪ್ರೂಫ್‌ ರೀಡರ್‌ ಆಗಿ ಬರೆದು-ಓದಲು ನನಗೆ ಸಾಧ್ಯವಾಗಲಿಲ್ಲ. ಇಸ್ರೇಲಿಗೆ ಹೋಗದಿದ್ದರೆ ಬಹುಶಃ ನಾನು ಇದನ್ನು ಬರೆಯುತ್ತಿರಲಿಲ್ಲ. ಎಷ್ಟೋ ಸಲ ಒಂದು ಅಧ್ಯಾಯ ಬರೆದ ಬಳಿಕ ಮತ್ತೊಂದನ್ನು ಬರೆಯಲು ಸಾಧ್ಯವಾಗದೆ ವಾರಗಟ್ಟಲೆ ಮುಚ್ಚಿಟ್ಟು ಮತ್ತೆ ಆರಂಭಿಸಿದ್ದೆ. ಈ ಪುಸ್ತಕವನ್ನು (Badukulidavaru Kandanthe Book) ಇಸ್ರೇಲಿಗರು ಓದುವುದಕ್ಕಿಂತ ಹೆಚ್ಚು ಕರ್ನಾಟಕದ ಜನತೆ, ಕನ್ನಡಿಗರು ಓದಬೇಕು ಎಂದು ವಿಶ್ವವಾಣಿಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರು ಹೇಳಿದರು.

ಶ್ರೀ ವಾಗ್ದೇವಿ ವಿದ್ಯಾವರ್ಧಕ ಟ್ರಸ್ಟ್‌ ಹಾಗೂ ವಿಶ್ವವಾಣಿ ಪುಸ್ತಕ ವತಿಯಿಂದ ಭಾನುವಾರ ಬೆಂಗಳೂರಿನಲ್ಲಿ ನಡೆದ ತಮ್ಮ 103ನೇ ಕೃತಿ 'ಬದುಕುಳಿದವರು ಕಂಡಂತೆʼ ಬಿಡುಗಡೆ ಸಮಾರಂಭದಲ್ಲಿ ವಿಶ್ವೇಶ್ವರ ಭಟ್‌ ಅವರು ಮಾತನಾಡಿದರು.

ಪುಸ್ತಕ ಬರೆಯುತ್ತಿದ್ದಾಗ ಇಸ್ರೇಲಿನಲ್ಲಿ ಭೀಕರ ನರಮೇಧಕ್ಕೆ ಬಲಿಯಾದವರ ಆಕ್ರಂದನ ನೆನಪಾಗಿ ಮುಂದೆ ಬರೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಇಸ್ರೇಲಿನಲ್ಲಿ ಶನಿವಾರ ಶಬ್ಬಾತ್‌ ಎಂಬ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಇಡೀ ದಿವಸ ದೇವರ ಧ್ಯಾನದಲ್ಲಿ ಇರುತ್ತಾರೆ. ದಿನವಿಡೀ ಉಪವಾಸ ನಡೆಸುತ್ತಾರೆ. 2023ರ ಅಕ್ಟೋಬರ್‌ 7ರಂದು ಶನಿವಾರ ಇಸ್ರೇಲಿನಲ್ಲಿ ಹಮಾಸ್‌ ಭಯೋತ್ಪಾದಕರು ದಾಳಿ ನಡೆಸಿದರು.

Vishweshwar Bhat's Book Release (1)

ಬೆಂಗಳೂರಿಗಿಂತ ಕಡಿಮೆ ಜನಸಂಖ್ಯೆ ಇರುವ ದೇಶ ಇಸ್ರೇಲ್!

ಇಸ್ರೇಲ್‌ ಸುಮಾರು 480 ಕಿಲೋಮೀಟರ್‌ ಉದ್ದದ, 80 ಕಿಲೋಮೀಟರ್‌ ಅಗಲವಿರುವ, ಬೆಂಗಳೂರು-ತುಮಕೂರು ಮತ್ತು ಸ್ವಲ್ಪ ಚಿತ್ರ ದುರ್ಗ ಸೇರಿಸಿದರೆ ಎಷ್ಟಾಗುವುದೇ ಅಷ್ಟು ಚಿಕ್ಕದಾದ ಪ್ರದೇಶ. ಉತ್ತರದಲ್ಲಿ ಲೆಬನಾನ್‌, ಪಕ್ಕದಲ್ಲಿ ಸಿರಿಯಾ ಇದೆ. ನಂತರ ಜೋರ್ಡಾನ್‌, ಸೌದಿ ಅರೇಬಿಯಾ, ಇರಾನ್‌, ಇರಾಕ್‌, ಯೆಮೆನ್‌, ದಕ್ಷಿಣದಲ್ಲಿ ಈಜಿಪ್ಟ್‌, ಪಶ್ಚಿಮದಲ್ಲಿ ಮೆಡಿಟರೇನಿಯನ್ ಸಮುದ್ರವಿದೆ. ಸುತ್ತುಮುತ್ತಲೂ ಅರಬ್‌ ದೇಶಗಳು. ಜಗತ್ತಿನ ಭೂಪಟದಲ್ಲಿ ಇಸ್ರೇಲ್‌ ಕಣ್ಣಿಗೇ ಕಾಣದಷ್ಟು ಚಿಕ್ಕದು. ಇಸ್ರೇಲ್‌ ಒಳಗಡೆಯೇ ಪ್ಯಾಲೆಸ್ತೀನ್‌ ಇದ್ದು, ಅಲ್ಲಿ ಗಾಜಾ ಎಂಬ ಅಗಲ ಕಿರಿದಾದ ಜಾಗವಿದೆ. ಇಸ್ರೇಲ್‌ನಲ್ಲಿ ಶೇಕಡಾ ಅರವತ್ತು ಪಾಲು ಮರುಭೂಮಿ ಇದ್ದು, 85 ಲಕ್ಷ ಜನಸಂಖ್ಯೆ ಇದೆ. ಬೆಂಗಳೂರಿನ ಅರ್ಧದಷ್ಟು ಜನಸಂಖ್ಯೆ ಇಲ್ಲಿದೆ. ಯೆಮೆನ್‌ನಿಂದ 2800 ಕಿಲೋಮೀಟರ್‌ ದೂರದಿಂದ ಹಾರಿಸಿದ ಕ್ಷಿಪಣಿ ಇಸ್ರೇಲ್‌ಗೆ ಬರುತ್ತೆ. ಗಾಜಾಪಟ್ಟಿಯಿಂದ ಕೆಲವೇ ಸೆಕೆಂಡ್‌ಗಳಲ್ಲಿ ಕ್ಷಿಪಣಿಗಳು ಬಂದು ಬೀಳುತ್ತವೆ. ಪ್ಯಾಲೆಸ್ತೀನ್‌ನ ರಮಲ್ಲಾದಿಂದಲೂ ಅಷ್ಟೇ. ಸೆಕೆಂಡ್‌ ಗಳಲ್ಲಿ ಕ್ಷಿಪಣಿಗಳು ಸಿಡಿದು ಇಸ್ರೇಲ್‌ ಮುಟ್ಟುತ್ತದೆ. ಅರಬ್‌ ರಾಷ್ಟ್ರಗಳು ಯೆಹೂದಿಗಳನ್ನು ಭೂಮಿಯಲ್ಲಿ ಇರಲೇಕೂಡದು ಎಂಬಂತೆ ದ್ವೇಷ ಸಾಧಿಸುತ್ತಾರೆ ಎಂದು ಹೇಳಿದರು.

ಪುಸ್ತಕದ ಬಗ್ಗೆ ವಿಶ್ವೇಶ್ವರ ಭಟ್‌ ಅವರ ಮಾತುಗಳು



ಕ್ರೈಸ್ತ, ಮುಸ್ಲಿಂ, ಯಹೂದ್ಯರ ಪವಿತ್ರ ಸ್ಥಳ ಜೆರುಸಲೇಂ

ಜೆರುಸಲೇಂ ಕ್ರೈಸ್ತ, ಮುಸ್ಲಿಂ, ಯಹೂದ್ಯರಿಗೆ ಪವಿತ್ರ ಸ್ಥಳ. ಏಕದೇವೋಪಾಸಕರ ಧಾರ್ಮಿಕ ಕೇಂದ್ರ. ಜೆರುಸಲೇಂ ಸಲುವಾಗಿ ಸಾವಿರಾರು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಗಾಜಾದ ಹಮಾಸ್‌ ಉಗ್ರರು, ಲೆಬೆನಾನ್‌ನ ಹಿಜ್ಬುಲ್ಲಾ ಭಯೋತ್ಪಾದಕರು, ಯೆಮೆನ್‌ನ ಹೌತಿಯ ಟೆರರಿಸ್ಟ್‌ಗಳು ಇಸ್ರೇಲ್‌ ಅನ್ನು ಮುಗಿಸಿಬಿಡಬೇಕು ಎಂದು ಸದಾ ಯತ್ನಿಸುತ್ತಾರೆ. ನಾವೆಲ್ಲರೂ ಭಯೋತ್ಪಾದನೆಯನ್ನು ಎದುರಿಸುತ್ತಿರುವ ಕಾಲಘಟ್ಟವಿದು. ಆದ್ದರಿಂದ ಎಲ್ಲರೂ ಈ ಪುಸ್ತಕವನ್ನು ಓದಬೇಕಾಗಿದೆ.

ಹಿಟ್ಲರ್‌ ಬಳಿಕ ನಡೆದ ಯಹೂದಿಗಳ ಎರಡನೇ ಭೀಕರ ನರಮೇಧ!

ಇಸ್ರೇಲಿಗರು ಎಷ್ಟು ಧೈರ್ಯಶಾಲಿಗಳೆಂದರೆ ಐರನ್ ಡೋಮ್‌ ಎಂಬ ವ್ಯವಸ್ಥೆ ಮಾಡಿದ್ದಾರೆ. ಶತ್ರು ದೇಶಗಳ ಕ್ಷಿಪಣಿಗಳು ಇಸ್ರೇಲ್‌ ನೆಲವನ್ನು ಮುಟ್ಟುವ ಮೊದಲೇ ಆಕಾಶದಲ್ಲಿಯೇ ಛಿದ್ರವಾಗುತ್ತದೆ. ದುರದೃಷ್ಟವಶಾತ್‌ 2023ರ ಅಕ್ಟೋಬರ್‌ 7ರಂದು ಶಬ್ಬಾತ್‌ ಪ್ರಯುಕ್ತ ಸೇನೆ ಕೂಡ ವಿರಾಮದಲ್ಲಿ ಇತ್ತು. ಇದೇ ಸಂದರ್ಭ ಸಾವಿರಾರು ಮಂದಿ ಹಮಾಸ್‌ ಭಯೋತ್ಪಾದಕರು ಪ್ಯಾರಾಚೂಟ್‌ ಬಳಸಿಕೊಂಡು ಇಸ್ರೇಲ್‌ನಲ್ಲಿ ಇಳಿದು ಭೀಕರ ನರಮೇಧ ನಡೆಸಿದರು. ಕಂಡಕಂಡವರಿಗೆ ಗುಂಡಿಕ್ಕಿದರು. ಗ್ರೆನೇಡ್‌ ಎಸೆದು ಮನೆಗಳನ್ನು ಸ್ಫೋಟಿಸಿದರು. ಜನರನ್ನು ಒಂದೇ ಕಡೆ ಸೇರಿಸಿ ಪೆಟ್ರೋಲ್‌ ಬಾಂಬ್‌ ಮೂಲಕ ಸ್ಫೋಟಿಸಿದರು. ಸಜೀವ ದಹನಕ್ಕೆ ಗುರಿಪಡಿಸಿದರು. ಮಹಿಳೆಯರ ಮಾನಭಂಗ ಮಾಡಿದರು. ಮಕ್ಕಳು, ವೃದ್ಧರು ಎಲ್ಲರನ್ನೂ ಕೊಂದು ಹಾಕಿದರು. ಎರಡನೇ ಜಾಗತಿಕ ಯುದ್ಧದ ಸಂದರ್ಭ ಹಿಟ್ಲರ್‌ ಲಕ್ಷಾಂತರ ಯಹೂದಿಗಳ ನರಮೇಧ ನಡೆಸಿದ್ದ. ಹಾಲೋಕಾಸ್ಟ್‌ ಎಂದು ಅದನ್ನು ಕರೆಯುತ್ತಾರೆ. ಇದಾದ ನಂತರ 2023ರ ಅಕ್ಟೋಬರ್‌ 7ರಂದು ನಡೆದಿರುವುದು ಎರಡನೇ ಭೀಕರ ನರಮೇಧವಾಗಿದೆ. ಇಲ್ಲೂ ಯಹೂದಿಯರನ್ನು ಕೊಲ್ಲಲಾಯಿತು. ಇಸ್ರೇಲಿನಲ್ಲಿ ನೋವಾ ಫೆಸ್ಟಿವಲ್‌ನಲ್ಲಿ 4-5 ಸಾವಿರ ಮಂದಿ ಯುವಕ-ಯುವತಿಯರು ಸಂಭ್ರಮದಿಂದ ಭಾಗವಹಿಸಿದ್ದರು. ಸಂಗೀತಗೋಷ್ಠಿ ಆರಂಭವಾಗಿ ಎರಡು-ಮೂರು ತಾಸುಗಳ ಬಳಿಕ ಹಮಾಸ್‌ ಉಗ್ರರು ಇಸ್ರೇಲ್‌ ದಾಳಿ ನಡೆಸುತ್ತಾರೆ. ಇಸ್ರೇಲ್-ಗಾಜಾ ಗಡಿಯಲ್ಲಿ ಸಣ್ಣ ಹುಳ ಕೂಡ ಹೋಗಲು ಸಾಧ್ಯವಿಲ್ಲ. ಇದು ಹಮಾಸ್‌ ಉಗ್ರರಿಗೆ ಗೊತ್ತಿತ್ತು. ಹೀಗಾಗಿ ಭಯೋತ್ಪಾದಕರು ಗಡಿಯಿಂದ ಒಂದು ಕಿಲೋಮೀಟರ್‌ ದೂರದಿಂದ ಪ್ಯಾರಾಚೂಟ್‌ನಲ್ಲಿ 3 ಸಾವಿರ ಉಗ್ರರು ಟೇಕಾಫ್‌ ಆಗಿ ನೋವಾ ಫೆಸ್ಟಿವಲ್‌ ನಡೆಯುತ್ತಿದ್ದ ಜಾಗದಲ್ಲಿ ಎಲ್ಲರ ಮೇಲೆ ನಿರಂತರ ಗುಂಡು ಹಾರಿಸುತ್ತಾರೆ. ಬೆಳಗ್ಗೆ ನಾಲ್ಕೂವರೆಗೆ ರಾಕೆಟ್‌ ದಾಳಿಯಾಗುತ್ತದೆ. ಕ್ಷಿಪಣಿಗಳು ಉಡಾವಣೆಯಾಗುತ್ತದೆ. ಆದರೆ ಆವತ್ತು ಐರನ್‌ ಡೋಮ್‌ಗಳು ಸಕ್ರಿಯವಾಗಿರಲಿಲ್ಲ. ಹಮಾಸ್‌ ಭಯೋತ್ಪಾದಕರು ಕಂಡಕಂಡವರ ಮೇಲೆ ಗುಂಡು ಸಿಡಿಸುತ್ತಾರೆ. ಜನರೆಲ್ಲ ದಿಕ್ಕಾಪಾಲಾಗಿ ಓಡುತ್ತಾರೆ. ಇಸ್ರೇಲಿನ ಸಮುದಾಯ ಅಥವಾ ಗೇಟೆಡ್‌ ಕಮ್ಯುನಿಟಿ ಕಿಬೂಟ್ಸ್‌ನಲ್ಲಿದ್ದ ಅಮಾಯಕ ಪ್ರಜೆಗಳನ್ನೂ ಸಾಯಿಸುತ್ತಾರೆ. ಹತ್ತು ತಾಸಿನಲ್ಲಿ ಸಾವಿರ ಇನ್ನೂರಕ್ಕೂ ಹೆಚ್ಚು ಮಂದಿ ಬರ್ಬರವಾಗಿ ಬಲಿಯಾದರು. ಇನ್ನೂರೈವತ್ತಕ್ಕೂ ಹೆಚ್ಚು ಮಂದಿಯನ್ನು ಹಮಾಸ್‌ ಉಗ್ರರು ಅಪಹರಿಸಿದರು ಎಂದು ತಿಳಿಸಿದರು.

Vishweshwar Bhat's Book Release (2)

ಕ್ರಿಯಾಶೀಲವಾಗಿದ್ದ ಭೂಮಿಯಲ್ಲಿ ಸ್ಮಶಾನ ಮೌನ

ಇಷ್ಟೂ ಸುದ್ದಿಯನ್ನು ಎರಡು ವರ್ಷಗಳ ಹಿಂದೆ ಓದಿದ್ದೆ. ಆದರೆ ಖುದ್ದಾಗಿ ಇಸ್ರೇಲ್‌ನಲ್ಲಿ ನೋವಾ ಫೆಸ್ಟಿವಲ್‌ ನಡೆದ ಸ್ಥಳಕ್ಕೆ, ಕಿಬೂಟ್ಸ್‌ ಸಮುದಾಯದ ಸ್ಥಳಕ್ಕೆ ಭೇಟಿ ನೀಡಿದ್ದೆ. ಇವತ್ತಿಗೂ ಅಲ್ಲಿ ಕುದಿ ಮೌನವಿದೆ. ರಾತ್ರಿ ಅಲ್ಲಿ ಹೋಗಲು ಸಾಧ್ಯವಾಗುವುದಿಲ್ಲ. ಬಹಳ ಕ್ರಿಯಾಶೀಲವಾದ ಭೂಮಿಯಲ್ಲಿ ಸ್ಮಶಾನ ಮೌನವಿದೆ. ಮನೆಗಳಲ್ಲಿ ರಕ್ತದ ಕಲೆ, ಸಾವಿರಾರು ಗುಂಡುಗಳು ಗೋಡೆಗಳು ಬಿದ್ದು ತೂತಾಗಿವೆ. ಇಪ್ಪತ್ತು ಇಪ್ಪತ್ತು ಜನರನ್ನು ಗುಡ್ಡೆ ಹಾಕಿ ಪೆಟ್ರೋಲ್‌ ಬಾಂಬ್‌ ಹಾಕಿ ಕೊಂದ ಜಾಗವನ್ನು ನೋಡಿರುವೆ. ಇದು ಗೋಳಿನ ಕಥೆ ಮಾತ್ರವಲ್ಲ. ಆ ದಿನ ಇಸ್ರೇಲ್‌ ಜನ ಸಾಮಾನ್ಯರು ಸ್ವತಃ ಅಸಾಧಾರಣ ಯೋಧರಾದರು. ಸಾಮಾನ್ಯವಾಗಿ ಅಲ್ಲಿ 18 ವರ್ಷ ಆದವರಿಗೆ ಸೇನಾ ತರಬೇತಿ ಕಡ್ಡಾಯ. ಶಬ್ಬಾತ್‌ ದಿನ ಎಲ್ಲರೂ ಧಾರ್ಮಿಕ ಕೆಲಸ ಇದ್ದುದರಿಂದ ಭದ್ರತಾ ಲೋಪವಾಗಿತ್ತು. ಇದರ ಗಂಭೀರ ಪರಿಣಾಮವನ್ನು ಇಸ್ರೇಲಿಗರು ಅನುಭವಿಸಿದರು. ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳೆಯರ ಮಾನ ಭಂಗವಾಗುತ್ತದೆ. ಒಬ್ಬ ತಂದೆ ತನ್ನ ಮಗಳನ್ನು ಉಗ್ರರು ಗಾಜಾಗೆ ಕರೆದೊಯ್ದರು ಎಂದು ಸುದ್ದಿ ಗೊತ್ತಾದಾಗ ವಿಲವಿಲ ಒದ್ದಾಡುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಉಗ್ರರು ಆತನ ಮಗಳನ್ನು ಕೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ. ಆಗ ತಂದೆ ಸಮಾಧಾನಪಟ್ಟು, ಅಬ್ಬ, ಮಗಖು ಬದುಕಿದಳು ಎನ್ನುತ್ತಾನೆ! ಏಕೆಂದರೆ ಮಗಳು ಸತ್ತರೆ ಅವಳನ್ನು ಹಮಾಸ್‌ ಉಗ್ರರು ಚಿತ್ರಹಿಂಸೆ ಕೊಟ್ಟು ಅತ್ಯಾಚಾರ ಮಾಡುವುದಿಲ್ಲವಲ್ಲ, ಆ ಕ್ರೌರ್ಯದಿಂದ ಮಗಳು ಪಾರಾದಳು ಎಂಬ ಸಮಾಧಾನ ಆ ತಂದೆಯದ್ದು. ಇಂಥ ಕ್ರೌರ್ಯವನ್ನು ಹಮಾಸ್‌ ಉಗ್ರರು ಮೆರೆಯುತ್ತಿದ್ದಾರೆ ಎಂದು ವಿಶ್ವೇಶ್ವರ ಭಟ್‌ ಅವರು ಹೇಳಿದರು.

ಇಸ್ರೇಲಿಗರ ಧೈರ್ಯ-ಸ್ಥೈರ್ಯ ಅಸಾಧಾರಣ

ನಾವು ನಮ್ಮ ಮನೆಗೆ ಒಂದು ಹುಚ್ಚು ನಾಯಿ ಬಂದರೆ ನಾವು ಪಾರಾಗುವುದು ಹೇಗೆ ಎಂದು ಯೋಚಿಸುತ್ತೇವೆ. ಆದರೆ ಆವತ್ತು ಮೂರೂವರೆ ಸಾವಿರ ಭಯೋತ್ಪಾದಕರು ದಾಳಿ ನಡೆಸಿದಾಗ ಇಸ್ರೇಲಿಗರು ಪರಸ್ಪರ ರಕ್ಷಣೆಗೆ ನಿಂತರು. ಎಲ್ಲಿಗೂ ಪಲಾಯನ ಮಾಡಲಿಲ್ಲ. ಧೈರ್ಯವಾಗಿ ಉಗ್ರರನ್ನು ಎದುರಿಸಿದರು. ಸಾವಿರಾರು ಇಸ್ರೇಲಿಗರ ಧೈರ್ಯ-ಸ್ಥೈರ್ಯ ಅಸಾಧಾರಣ ಎಂದು ವಿಶ್ವೇಶ್ವರ ಭಟ್‌ ಅವರು ವಿವರಿಸಿದರು.

ಈ ಎರಡು ವರ್ಷಗಳ ಕಾಲ ಎಷ್ಟೊಂದು ಯುದ್ಧ ನಡೆದರೂ, ಪ್ರಧಾನಿ ರಾಜೀನಾಮೆ ಕೊಡಬೇಕು ಎಂದು ಇಸ್ರೇಲಿನಲ್ಲಿ ಯಾರೂ ಹೇಳಲಿಲ್ಲ. ಇಸ್ರೇಲ್‌ನಲ್ಲೂ ಹಲವಾರು ಪಕ್ಷಗಳು ಇವೆ. ಅಲ್ಲಿ ಪ್ರತಿಪಕ್ಷ ನಾಯಕರು ಸೇನೆಯನ್ನು, ಸರಕಾರವನ್ನು ನಿಂದಿಸುವುದಿಲ್ಲ, ಆಂತರಿಕ ಭದ್ರತೆ ಆಯಿತು ಎಂದು ಹೇಳುವುದಿಲ್ಲ. ಪ್ಯಾಲೆಸ್ತೀನ್‌ ಪರವಾದ ದೊಡ್ಡ ಲಾಬಿ ನಡೆದರೂ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು, ನಮ್ಮನ್ನು ಕೆಣಕಿದವರನ್ನು ನಾವು ಬಿಡುವುದಿಲ್ಲ, ನಾವು ಶತ್ರುಗಳನ್ನು ಸಂಪೂರ್ಣ ಹುಟ್ಟಡಗಿಸುತ್ತೇವೆ ಎಂದು ಅಚಲವಾಗಿ ಹೇಳಿದರು. ಈಗ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿ ಕರೆತಂದಿದ್ದಾರೆ. 52 ಮುಸ್ಲಿಮ್‌ ದೇಶಗಳು ಇಸ್ರೇಲ್‌ ಕೃತ್ಯವನ್ನು ಖಂಡಿಸಿದರೂ, ಇಸ್ರೇಲ್‌ ಯಾರ ಮಾತಿಗೂ ಮಣಿಯಲಿಲ್ಲ. ಜತೆಗೆ ಗಟ್ಟಿಯಾಗಿ ನಿಂತದ್ದು ಭಾರತ ಮಾತ್ರ. ಈ ಪುಸ್ತಕವನ್ನು ಇಸ್ರೇಲಿಗರು ಅಲ್ಲ, ಭಾರತೀಯರು ಓದಬೇಕು. 36 ಮಂದಿ ತಮ್ಮ ದುಖಃವನ್ನು ಈ ಪುಸ್ತಕದಲ್ಲಿ ತೋಡಿಕೊಂಡಿದ್ದಾರೆ. ಈ ಪುಸ್ತಕವನ್ನು ದಮ್‌ ಇದ್ದವರು ಮಾತ್ರ ಓದಲು ಸಾಧ್ಯ. ಹೃದಯಸ್ಪರ್ಶಿ ಕ್ಷಣಗಳು ನಿಮ್ಮನ್ನು ಕಲಕುತ್ತದೆ. ನೀವು ಓದಿ ಸಾವರಿಸಿಕೊಂಡು ಓದಬೇಕಾಗುತ್ತದೆ. ಅಷ್ಟು ಮನಕಲಕುವ, ಪ್ರೇರಣೆ ಪಡೆಯುವ ಕಥೆ. ಕತ್ತಲಿನಲ್ಲಿ ಮಾನವೀಯತೆ ಬೆಳಗುವ ಕಥನವಿದು. ಈ ಪುಸ್ತಕದಷ್ಟು ಬೇರಾವ ಪುಸ್ತಕವೂ ನನ್ನನ್ನು ಇಷ್ಟು ತಟ್ಟಿಲ್ಲ. ಧೈರ್ಯವಾಗಿ ಈ ಪುಸ್ತಕವನ್ನು ಓದಿ. ಆ ದಿನ ಇಸ್ರೇಲಿನಲ್ಲಿ ಯಾವ ರೀತಿ ಘಟನೆ ಸಂಭವಿಸಿರಬಹುದು ಎಂಬುದು ಮನವರಿಕೆಯಾಗುತ್ತದೆ. ಇಸ್ರೇಲಿಗರು ಎರಡು ವರ್ಷಗಳ ಕಾಲ ಬ್ರಿಂಗ್‌ ದೆಮ್‌ ಹೋಮ್‌ ಎಂಬ ಅಭಿಯಾನ ನಡೆಸಿದ್ದರು. ಎರಡು ವರ್ಷ ಕಾಲ ಎಲ್ಲ ಇಸ್ರೇಲಿಗರು ಒತ್ತೆಯಾಳುಗಳ ಬಿಡುಗಡೆಗೆ ಪ್ರಾರ್ಥನೆ ಮಾಡಿದ್ದರು. ಅಂಗಿಯಲ್ಲಿ ಘೋಷಣೆ ಬರೆದಿದ್ದರು. ಅಂಥ ದೇಶಪ್ರೇಮ, ಮಾನವೀಯತೆ ಇದು. ಹಾಲೋಕಾಸ್ಟ್‌ ಅನ್ನು ನಾಚಿಸುವ ರೀತಿಯಲ್ಲಿ ಈ ನರಮೇಧ ಆಗಿತ್ತು. ಈ ಕೃತಿಯನ್ನು ದಯವಿಟ್ಟು ಓದಿ, ಹೆಚ್ಚೇನೂ ಹೇಳುವುದಿಲ್ಲ ಎಂದು ವಿಶ್ವೇಶ್ವರ ಭಟ್‌ ಅವರು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಅವರಿಗೆ ಬದುಕುಳಿದವರು ಕಂಡಂತೆ ಪುಸ್ತಕವನ್ನು ವಿಶ್ವೇಶ್ವರ ಭಟ್‌ ಅವರು ಅರ್ಪಣೆ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Shobha Malavalli: ವಿಶ್ವೇಶ್ವರ ಭಟ್ಟರಷ್ಟು ಬ್ರೇಕಿಂಗ್‌ ನ್ಯೂಸ್‌ ಇನ್ಯಾರೂ ನೀಡಿಲ್ಲ: ಶೋಭಾ ಮಳವಳ್ಳಿ

ಸಮಾರಂಭದಲ್ಲಿ ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರು ನಡೆಸಿದ ಭೀಕರ ನರಮೇಧದ ಏಳೂವರೆ ನಿಮಿಷಗಳ ವಿಡಿಯೊ ಪ್ರದರ್ಶಿಸಲಾಯಿತು. ಈ ಘೋರ ದೃಶ್ಯವನ್ನು ಕಂಡು ಇಡೀ ಸಭೆ ಅಕ್ಷರಶಃ ಸ್ತಬ್ಧವಾಯಿತು. ಎಲ್ಲರ ಕಣ್ಣಲ್ಲೂ ನೀರು. ದುಃಖ, ನೀರವ ಮೌನ ಆವರಿಸಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಸಂಸದ ತೇಜಸ್ವಿ ಸೂರ್ಯ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕಿ ಸುಷ್ಮಾ ಭಟ್, ಇಸ್ರೇಲ್ ಕಾನ್ಸುಲೇಟ್ ಜನರಲ್‌ನ ಡೆಪ್ಯುಟಿ ಕಾನ್ಸುಲ್ ಜನರಲ್ ಇನ್ಬಾಲ್ ಸ್ಟೋನ್ ಸೇರಿ ಪ್ರಮುಖರು ಹಾಗೂ ನೂರಾರು ಮಂದಿ ಉಪಸ್ಥಿತರಿದ್ದರು.