ಮಂಗಳೂರು: ಕೌಟುಂಬಿಕ ಕಲಹದಿಂದ ಮನನೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೊಬ್ಬರ ಮೇಲೆ ನೀರಿನಲ್ಲಿದ್ದ ಮೊಸಳೆ ದಾಳಿ ನಡೆಸಿದ್ದು, ಜೀವಭಯದಿಂದ ಆಕೆ ಕಿರುಚಾಡಿದ ಪರಿಣಾಮ ಸ್ಥಳೀಯರು ಹಾಗೂ ಪೊಲೀಸರು ಸಕಾಲದಲ್ಲಿ ರಕ್ಷಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ (Kukke)ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ (Kumaradhara River) ನಡೆದಿದೆ. ಮಹಿಳೆ ಉಡುಪಿ ಮೂಲದವರು ಎಂದು ತಿಳಿದು ಬಂದಿದೆ.
ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತಿದ್ದ ಮಹಿಳೆ ಬುಧವಾರ ತಡರಾತ್ರಿ ಕುಮಾರಧಾರಾ ಸೇತುವೆಯ ಮೇಲಿಂದ ನದಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಅವರು ನದಿಗೆ ಬೀಳುತ್ತಿದ್ದಂತೆ ನೀರಿನಲ್ಲಿದ್ದ ಮೊಸಳೆಯೊಂದು ಅವರ ಮೇಲೆ ಏಕಾಏಕಿ ದಾಳಿ ನಡೆಸಿ ಕಚ್ಚಿದೆ. ಸಾವು ನಿಶ್ಚಿತ ಎಂದು ನದಿಗೆ ಹಾರಿದ್ದ ಮಹಿಳೆ, ಮೊಸಳೆ ಕಚ್ಚುತ್ತಿದ್ದಂತೆ ಜೀವಭಯದಿಂದ ಜೋರಾಗಿ ಕಿರುಚಾಡಲು ಪ್ರಾರಂಭಿಸಿದ್ದಾರೆ. ನದಿಯ ತಟದಿಂದ ಕೇಳಿಬಂದ ಮಹಿಳೆಯ ಕಿರುಚಾಟವನ್ನು ಗಮನಿಸಿದ ಸಮೀಪದ ಲಾಡ್ಜ್ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣ ಟಾರ್ಚ್‌ಗಳೊಂದಿಗೆ ನದಿಯತ್ತ ಧಾವಿಸಿದ್ದಾರೆ. ತಕ್ಷಣವೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೂ ಮಾಹಿತಿ ನೀಡಿದ್ದಾರೆ.
ಮಾಹಿತಿ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಸುಬ್ರಹ್ಮಣ್ಯ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ನದಿಯತ್ತ ಧಾವಿಸಿ, ಮೊಸಳೆಯನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ನದಿಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ಸುರಕ್ಷಿತವಾಗಿ ದಡಕ್ಕೆ ತಂದಿದ್ದಾರೆ. ಮಹಿಳೆಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬಳಿಕ ಪೊಲೀಸರು ಮಹಿಳೆಯ ಕುಟುಂಬಸ್ಥರನ್ನು ಠಾಣೆಗೆ ಕರೆಸಿ, ಕೌನ್ಸಿಲಿಂಗ್ ನಡೆಸಿ ಅವರೊಂದಿಗೆ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಕುಟುಂಬಸ್ಥರ ಮನವಿಯ ಮೇರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ. ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳಿರುವುದು ಈ ಹಿಂದೆಯೂ ಹಲವು ಬಾರಿ ಸಾಬೀತಾಗಿದೆ. ನದಿಯ ತೀರದಲ್ಲಿ ಹಾಗೂ ಬಂಡೆಗಳ ಮೇಲೆ ಮೊಸಳೆಗಳು ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು ವರದಿಯಾಗುತ್ತಲೇ ಇರುತ್ತವೆ.