Bribery Case: ಲಂಚ ಪ್ರಕರಣ; ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನಿಗೆ ಕ್ಲೀನ್ ಚಿಟ್
ಬಿಡಬ್ಲ್ಯುಎಸ್‌ಎಸ್‌ಬಿಯಲ್ಲಿ ಹಣಕಾಸು ಸಲಹೆಗಾರರಾಗಿದ್ದ ಪ್ರಶಾಂತ್ ಮಾಡಾಳ್, ಕೆಎಸ್‌ಡಿಎಲ್‌ಗೆ ಸುಗಂಧ ದ್ರವ್ಯ ಸಾಮಗ್ರಿ ಪೂರೈಸುವವರಿಂದ 40 ಲಕ್ಷ ರೂ. ಲಂಚ ಪಡೆದಿದ್ದಾರೆಂಬ ಆರೋಪವಿತ್ತು. ಆದರೆ, ಪ್ರಶಾಂತ್ ಮಾಡಾಳ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿದೆ.


ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ನಿಯಮಿತ (ಕೆಎಸ್‌ಡಿಎಲ್) ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ (Bribery Case) ಆರೋಪದಲ್ಲಿ ಸಿಲುಕಿದ್ದ ನಿಗಮದ ಮಾಜಿ ಅಧ್ಯಕ್ಷ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಪ್ರಶಾಂತ್ ಮಾಡಾಳ್ (Prashanth Madal) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ.
ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ)ಯಲ್ಲಿ ಹಣಕಾಸು ಸಲಹೆಗಾರರಾಗಿದ್ದ ಪ್ರಶಾಂತ್ ಮಾಡಾಳ್, ಕೆಎಸ್‌ಡಿಎಲ್‌ಗೆ ಸುಗಂಧ ದ್ರವ್ಯ ಸಾಮಗ್ರಿ ಪೂರೈಸುವವರಿಂದ 40 ಲಕ್ಷ ರೂ. ಲಂಚ ಪಡೆದಿದ್ದಾರೆಂಬ ಆರೋಪವಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಶಾಂತ್ ಅವರು ಲಂಚದ ಹಣವನ್ನು ಸ್ವೀಕರಿಸಿದ್ದಾರೆ ಎಂಬ ವಾದವನ್ನು ಒಪ್ಪಬಹುದಾದರೂ, ಹಣಕ್ಕಾಗಿ ಬೇಡಿಕೆ ಇಟ್ಟಿರುವ ಬಗ್ಗೆ ಯಾವುದೇ ಸಾಕ್ಷ್ಯ ಇಲ್ಲ. ಕೇವಲ ಹಣ ವಶಪಡಿಸಿಕೊಂಡಿರುವ ಆಧಾರದಲ್ಲಿಯೇ ಲಂಚದ ಆರೋಪ ಹೊರಿಸುವುದು ಸರಿಯಲ್ಲ. ಅರ್ಜಿದಾರರ ವಿರುದ್ಧ ಆರೋಪ ಹೊರಿಸಲು ಯಾವುದೇ ಆಧಾರವಿಲ್ಲ ಎಂದು ಅಭಿಪ್ರಾಯಪಟ್ಟು ಆರೋಪ ಮುಕ್ತಗೊಳಿಸಿದೆ.
2023ರ ಮಾ.2ರಂದು ಕ್ರೆಸೆಂಟ್ ರಸ್ತೆಯ ಯೂನಿಸ್ ಕ್ವೇರ್ ಬಿಲ್ಡರ್ಸ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡು 40 ಲಕ್ಷ ರೂ. ವಶಪಡಿಸಿಕೊಂಡಿದ್ದರು. ದೂರುದಾರ ಶ್ರೇಯಸ್ ಕಶ್ಯಪ್, ಕೆಎಸ್‌ಡಿಎಲ್‌ಗೆ ಸುಗಂಧ ದ್ರವ್ಯ ಸಾಮಗ್ರಿಗಳನ್ನು ಪೂರೈಸಲು ಟೆಂಡರ್ ಹಂಚಿಕೆ, ಖರೀದಿ ಆದೇಶಕ್ಕಾಗಿ ಲಂಚ ಸ್ವೀಕರಿಸಿದ್ದರು ಎಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡು ಹಣ ವಶಕ್ಕೆ ಪಡೆದುಕೊಂಡಿದ್ದರು. ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಪ್ರಶಾಂತ್ ಮಾಡಾಳ್ ಇದೀಗ ದೋಷಮುಕ್ತರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ | Congress Protest: ಬಿಜೆಪಿ ಜನಾಕ್ರೋಶ ಯಾತ್ರೆ ವಿರುದ್ಧ ಪ್ರತಿಭಟನೆ; ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ
ಯತ್ನಾಳ್ ಹತ್ಯೆಗೆ ಸಂಚು; ಆಡಿಯೋ ಬೆನ್ನಲ್ಲೇ ಮತ್ತೊಂದು ಸ್ಫೋಟಕ ವಿಡಿಯೋ ವೈರಲ್!

ವಿಜಯಪುರ: ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹತ್ಯೆಗೆ ಸಂಚು ರೂಪಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಸಂಬಧಿಸಿ ಆಡಿಯೋವೊಂದು ಇತ್ತೀಚೆಗೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಸ್ಫೋಟಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್‌ಲೋಡ್ ಆಗಿದ್ದು, ಯತ್ನಾಳ್ ವಿರುದ್ಧ ಬೃಹತ್ ಹೋರಾಟಕ್ಕೆ ಪ್ಲ್ಯಾನ್ ಮಾಡಿರುವ ಬಗ್ಗೆ ವಿಡಿಯೊದಲ್ಲಿ ಯುವಕನೊಬ್ಬ ಮಾತನಾಡಿದ್ದಾನೆ.
ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತ ವಿಡಿಯೋ ಮಾಡಿದ್ದು, ಬಿಜಾಪುರ ಫೌಂಡೇಶನ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದಾನೆ. "ಗುಸ್ತಾಕಿ ನಬಿ ಕಾ ಏಕ್ ಹೀ ಸಜಾ ಸರ್ ತನ್ ಸೆ ಜುದಾ" ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು ಎಂದು ವಿಡಿಯೋದಲ್ಲಿ ಹೇಳಲಾಗಿದೆ. ವಿಜಯಪುರ ನಗರದ ಸೊಹೇಲ್ ಜರ್ತಾರ್ ಎಂಬಾತನಿಂದ ವಿಡಿಯೋ ಮಾಡಲಾಗಿದ್ದು, ಬಿಜಾಪುರ ಪೌಂಡೇಶನ್ ಹೆಸರಿನ ಇನ್‌ಸ್ಟಾಗ್ರಾಮ್ ನಲ್ಲಿ ಖಾತೆಯಲ್ಲಿ ಅದನ್ನು ಅಪ್ಲೋಡ್ ಮಾಡಿದ್ದಾನೆ.
ನಮ್ಮ ಪ್ರವಾದಿಯನ್ನು ಟೀಕಿಸಿರುವುದನ್ನು ನಾವು ಸಹಿಸಿಕೊಳ್ಳಬಾರದು. ಎಲ್ಲ ಮುಸ್ಲಿಮರು ಒಗ್ಗಟ್ಟಾಗಬೇಕು. ಧರ್ಮಕ್ಕಾಗಿ ಎಲ್ಲರೂ ಒಂದಾಗಬೇಕು. ನಮ್ಮ ಹೋರಾಟ ಯತ್ನಾಳ್ ಎನ್ನುವ ಹುಳದ ವಿರುದ್ಧ ಎಂದು ಕಿಡಿಕಾರಿದ್ದಾನೆ. ಪ್ರವಾದಿಗಾಗಿ ನಮ್ಮ ಪ್ರಾಣ ಬಲಿಗಾಗಿ ಸಿದ್ಧರಿದ್ದೇವೆ. ವಿಡಿಯೋ ಕೊನೆಗೆ ಪ್ರವಾದಿ ವಿರುದ್ಧ ಮಾತನಾಡುವವನಿಗೆ ಒಂದೇ ಶಿಕ್ಷೆ, ತಲೆ ಕತ್ತರಿಸಬೇಕು ಎಂದು ಹೇಳಿದ್ದಾನೆ. ಸದ್ಯ ಯತ್ನಾಳ್ ಹತ್ಯೆಯ ಸಂಚಿನ ಕುರಿತು ಆಡಿಯೋ ಮತ್ತು ವಿಡಿಯೋ ವೈರಲ್ ಆಗಿದ್ದರಿಂದ ವಿಜಯಪುರ ಜನತೆ ಆತಂಕಕ್ಕೀಡಾಗಿದ್ದಾರೆ.
ಇನ್ನು ಮಾಧ್ಯಮಗಳಲ್ಲಿ ವಿಡಿಯೊ ಬಗ್ಗೆ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಇನ್‌ಸ್ಟಾಗ್ರಾಮ್ ಖಾತೆಯಿಂದ ವಿಡಿಯೊವನ್ನು ಸೊಹೇಲ್ ಡಿಲೀಟ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ಶಾಸಕನ ಹತ್ಯೆಗೆ ಸಂಚು ರೂಪಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಆಡಿಯೋದಲ್ಲೇನಿತ್ತು?
ಶಾಸಕ ಯತ್ನಾಳ್ ಹತ್ಯೆಗೆ ಸಂಚು ನಡೆಸಿರುವುದಕ್ಕೆ ಸಂಬಂಧಿಸಿ ಇತ್ತೀಚೆಗೆ ಆಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ “ಈ ಬಾರಿ ಯತ್ನಾಳ್ಗೆ ಫೈನಲ್ ಡೇ, ಆತ ಅರೆಸ್ಟ್ ಆಗಬೇಕು ಅಥವಾ ಆತನ ತಲೆಯನ್ನು ಕತ್ತರಿಸಬೇಕು ಎಂದು ಯುವಕನೊಬ್ಬ ಹೇಳಿದ್ದ. ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಗ್ಗಟ್ಟಾಗಿ ಎಂದು ಆಡಿಯೋದಲ್ಲಿ ಯುವಕ ಕರೆ ನೀಡಿದ್ದ.
ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಅವರು ಮಹಮ್ಮದ್ ಪೈಗಂಬರರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಸಂಬಂಧ ಗೋಲ್ಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಈ ಹಿನ್ನೆಲೆ ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಟ್ಟಾಗಿ ಎಂದು ಕರೆ ನೀಡಿದ್ದ ಸ್ಫೋಟಕ ಆಡಿಯೋ ವೈರಲ್ ಆಗಿತ್ತು.
ಮುಸ್ಲಿಂ ಯುವಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಜೀವ ಬೆದರಿಕೆ ಹಾಕಿದ್ದ. ವಿಜಯಪುರದಲ್ಲಿ ನಡೆದ NMC ಸಭೆಯಲ್ಲಿ ಮುಸ್ಲಿಂ ಮುಖಂಡರು, ಉಲ್ಮಾಗಳು ಸೇರಿ ಸಭೆ ಮಾಡಲಾಗಿದೆ. ಪೈಗಂಬರ್ ವಿರುದ್ಧ ಮಾತನಾಡಿದ ಯತ್ನಳ್ ಮನೆಗೆ ರ್ಯಾಲಿ ಮಾಡಬೇಕು. ಅದಕ್ಕಾಗಿ ಜನರನ್ನು ಸೇರಿಸಬೇಕು. ಅಂಬೆಡ್ಕರ್ ಸರ್ಕಲ್ನಿಂದ ಹೊರಡುವ ರ‍್ಯಾಲಿ, ಅಲ್ಲಿಂದ ಯತ್ನಾಳ್ ಮನೆ ಕಡೆಗೆ ನುಗ್ಗಬೇಕು. ಈ ರ‍್ಯಾಲಿಗೆ ಬರುವವರು ನಿಮ್ಮ ಗೆಳೆಯರನ್ನು ಕರೆದುಕೊಂಡು ಬನ್ನಿ ಎಂದು ಕರೆ ನೀಡಲಾಗಿತ್ತು. ಅಷ್ಟೇ ಅಲ್ಲದೆ ಏ.15 ರಂದು ವಿಜಯಪುರ ಬಂದ್ ಮಾಡಲು ನಿರ್ಧಾರ ಆಗಿದೆ. ಅದೇ ಯತ್ನಾಳ್ ಅವರ ಕೊನೆ ದಿನ ಆಗಲಿದೆ. ಈ ಬಾರಿ ನಾವೆಲ್ಲಾ ನಿರ್ಧಾರ ಮಾಡಿದ್ದಾಗಿದೆ ಎಂದು ಯುವಕ ಹೇಳಿದ್ದ.