ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Raghava Sharma Nidle Column: ನಿತೀಶ್‌ ಅನುಪಸ್ಥಿತಿಯಲ್ಲಿ ಜೆಡಿಯು ಭವಿಷ್ಯ ಬಿಗಿಯಾಗಿರುವುದೇ ?

ಪ್ರಾದೇಶಿಕ ಪಕ್ಷಗಳನ್ನು ವ್ಯವಸ್ಥಿತವಾಗಿ ಕುಗ್ಗಿಸುವ ಬಿಜೆಪಿಯ ತಂತ್ರಗಾರಿಕೆಗಳನ್ನು ಬೇರೆ ರಾಜ್ಯಗಳಲ್ಲಿ ನೋಡಿರುವುದರಿಂದ ಜೆಡಿಯು ಭವಿಷ್ಯದ ಬಗ್ಗೆ ಚರ್ಚೆಗಳು ಶುರುವಾಗಿವೆ. “ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಸದಸ್ಯನಾಗಿದ್ದ ನಾನು ರಾಜ್ಯಸಭೆ ಸದಸ್ಯ ನಾಗಿಯೂ ಅನುಭವ ಪಡೆಯಬೇಕು ಎಂದು ಮತ್ತೆ ಸಂಸತ್ತಿಗೆ ತೆರಳುತ್ತಿದ್ದೇನೆ" ಎಂದು ನಿತೀಶ್ ಕುಮಾರ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ದಿನದಂದು ಟ್ವೀಟ್ ಮಾಡಿದ್ದರು.

ನಿತೀಶ್‌ ಅನುಪಸ್ಥಿತಿಯಲ್ಲಿ ಜೆಡಿಯು ಭವಿಷ್ಯ ಬಿಗಿಯಾಗಿರುವುದೇ ?

-

ಜ‌ನಪಥ

ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ, ಸಿಎಂ ಸ್ಥಾನದಲ್ಲಿ ನಿತೀಶ್ ಕುಮಾರ್ ಇದ್ದುದರಿಂದ ಆಡಳಿತ ಮತ್ತು ರಾಜಕೀಯ ನಿಯಂತ್ರಣದ ಕೀಲಿಕೈ ಅವರ ಕೈಯ ಇರುತ್ತಿತ್ತು. ಆದರೆ, ಇನ್ನು ಈ ಕೀಲಿಕೈ ದೆಹಲಿಗೆ ಶಿಫ್ಟ್‌ ಆಗುವುದರಿಂದ ಬಿಹಾರ ರಾಜಕೀಯವು ಹೊಸ ಬದಲಾವಣೆಗಳಿಗೆ ತೆರೆದು ಕೊಳ್ಳುವುದು ನಿಶ್ಚಿತ.

ಬಿಹಾರದಲ್ಲಿ ಸಿಎಂ ಕುರ್ಚಿ ಬಿಟ್ಟು ರಾಜ್ಯಸಭೆ ಸದಸ್ಯರಾಗಿ ದಿಲ್ಲಿಗೆ ಹಾರುವ ಸಿಎಂ ನಿತೀಶ್ ಕುಮಾರ್ ಅವರ ನಿರ್ಧಾರ ರಾಜ್ಯದ ಜನರಿಗೆ ಅನಿರೀಕ್ಷಿತ. 2025ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ 10ನೇ ಬಾರಿಗೆ ಮುಖ್ಯಮಂತ್ರಿ ಗದ್ದುಗೆ ಏರಿದ್ದ ನಿತೀಶ್ ಮತ್ತೊಂದು ಪೂರ್ಣಾವಧಿಗೆ ಸಿಎಂ ಆಗಿ ಉಳಿದುಕೊಳ್ಳುವುದು ಕಷ್ಟ ಎಂದು ಅನೇಕರು ಭಾವಿಸಿದ್ದರೂ, ನಾಲ್ಕೇ ತಿಂಗಳಲ್ಲಿ ಸಿಎಂ ಸ್ಥಾನ ತ್ಯಜಿಸುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.

ನಿತೀಶರ ನಿರ್ಧಾರ ಅವರ ಆಪ್ತ ವರ್ಗದಲ್ಲಿದ್ದವರನ್ನೂ ಚಿಂತೆಗೀಡು ಮಾಡಿದೆ. ರಾಜ್ಯ ರಾಜಕಾರಣದಿಂದ ದೂರ ಸರಿಯುವ ತೀರ್ಮಾನ ಸಹಜವಾಗಿಯೇ ನಿತೀಶ್ ಅಭಿಮಾನಿ ಗಳಲ್ಲಿ ಬೇಸರ ತರಿಸಿದೆ. ಪರಿಣಾಮವಾಗಿ, ಜೆಡಿಯು ಕಚೇರಿ ಎದುರು ಪ್ರತಿಭಟನೆಗಳೂ ನಡೆದಿವೆ.

ಪ್ರಾದೇಶಿಕ ಪಕ್ಷಗಳನ್ನು ವ್ಯವಸ್ಥಿತವಾಗಿ ಕುಗ್ಗಿಸುವ ಬಿಜೆಪಿಯ ತಂತ್ರಗಾರಿಕೆಗಳನ್ನು ಬೇರೆ ರಾಜ್ಯಗಳಲ್ಲಿ ನೋಡಿರುವುದರಿಂದ ಜೆಡಿಯು ಭವಿಷ್ಯದ ಬಗ್ಗೆ ಚರ್ಚೆಗಳು ಶುರುವಾಗಿವೆ. “ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಸದಸ್ಯನಾಗಿದ್ದ ನಾನು ರಾಜ್ಯಸಭೆ ಸದಸ್ಯ ನಾಗಿಯೂ ಅನುಭವ ಪಡೆಯಬೇಕು ಎಂದು ಮತ್ತೆ ಸಂಸತ್ತಿಗೆ ತೆರಳುತ್ತಿದ್ದೇನೆ" ಎಂದು ನಿತೀಶ್ ಕುಮಾರ್ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ದಿನದಂದು ಟ್ವೀಟ್ ಮಾಡಿದ್ದರು.

ಇದನ್ನು ಅವರೇ ಮಾಡಿದ್ದರೋ ಅಥವಾ ಬೇರೆಯವರು ಮಾಡಿಸಿದ್ದರೋ ಗೊತ್ತಿಲ್ಲ. ಆದರೆ, ರಾಜ್ಯಸಭೆ ಸೀಟಿಗಾಗಿ ಸಿಎಂ ಸ್ಥಾನವನ್ನು ಯಾರೂ ಬಿಟ್ಟುಕೊಡುವುದಿಲ್ಲ.

ಹೀಗಾಗಿ, ನಿತೀಶ್ ನಿರ್ಧಾರದ ಹಿಂದೆ ಬೇರೆಯದೇ ಕಾರಣವಿರುವುದು ಸ್ಪಷ್ಟ. ಹದಗೆಡು ತ್ತಿರುವ ಆರೋಗ್ಯವೇ ಈ ನಿರ್ಧಾರಕ್ಕೆ ಕಾರಣ. ಕಳೆದ ಅನೇಕ ವರ್ಷಗಳಿಂದ ನಿತೀಶ್ ಆಪ್ತವರ್ಗದಲ್ಲಿರುವವರೊಂದಿಗೆ ಮಾತನಾಡಿದಾಗ, ‘ಈಚೆಗೆ ಅವರ ನೆನಪಿನ ಶಕ್ತಿ ಕಡಿಮೆ ಯಾಗುತ್ತಿದೆ. ಯಾವುದೂ ನೆನಪಿನಲ್ಲಿ ಉಳಿಯುವುದಿಲ್ಲ. ವಯೋಸಹಜ ಸಮಸ್ಯೆಗಳು ಅವರನ್ನು ಬಾಧಿಸತೊಡಗಿವೆ’ ಎನ್ನುವುದನ್ನು ಒಪ್ಪಿಕೊಂಡರು. ಇದಲ್ಲದೆ, ವಿಪಕ್ಷಗಳು ಕೂಡ ಅವರ ಸ್ಮರಣ ಸಾಮರ್ಥ್ಯವನ್ನು ಮತ್ತೆ ಮತ್ತೆ ಪ್ರಶ್ನೆ ಮಾಡುತ್ತಿವೆ.

ಇದನ್ನೂ ಓದಿ: Raghava Sharma Nidle Column: ಹಾಗಾದರೆ ದಿಲ್ಲಿ ಅಬಕಾರಿ ನೀತಿ ಹಗರಣ ನಡೆದೇ ಇಲ್ಲವೇ ?

“ರಾಜ್ಯ ಕ್ಯಾಬಿನೆಟ್‌ನಲ್ಲಿರುವ ಎಲ್ಲಾ ಸಚಿವರ ಹೆಸರನ್ನು ಚೀಟಿ ನೋಡದೆ ನಿತೀಶರು ಹೇಳುತ್ತಾರಾ" ಎಂದು ಜನ ಸುರಾಜ್ ಪಕ್ಷದ ಪ್ರಶಾಂತ್ ಕಿಶೋರ್ ಸವಾಲು ಹಾಕಿದ್ದರು. ಈ ಎಲ್ಲಾ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ-ಜೆಡಿಯು ಪ್ರಮುಖ ನಾಯಕರು ಚರ್ಚೆ ಮಾಡಿ, ನಿತೀಶರನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ತೀರ್ಮಾನ ಮಾಡಿದ್ದಾರೆ.

ಹೀಗಾಗಿ, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟದ ಹಿರಿಯ ಪಕ್ಷವಾಗಿರುವ ಬಿಜೆಪಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಮೊದಲೇ ಸಿಎಂ ಸ್ಥಾನ ಒಲಿದು ಬರುತ್ತಿದೆ. 21 ವರ್ಷಗಳ ಕಾಲ 10 ಬಾರಿ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್, ವಿವಿಧ ಹಂತಗಳಲ್ಲಿ ಆರ್‌ಜೆಡಿ ಮತ್ತು ಬಿಜೆಪಿ ಎರಡೂ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡವರು.

ಹೋರಾಟಗಾರ ಜಯಪ್ರಕಾಶ ನಾರಾಯಣರ (ಜೆಪಿ) ಶಿಷ್ಯರಾಗಿದ್ದ ನಿತೀಶರು, ಲಾಲೂ ಪ್ರಸಾದ್ ಯಾದವ್, ರಾಬ್ರಿ ಯಾದವ್ ಕುಟುಂಬದ ರಾಷ್ಟ್ರೀಯ ಜನತಾದಳ ಸರಕಾರದ ದುರಾಡಳಿತದ ವಿರುದ್ಧ ಹೋರಾಟ ನಡೆಸಿ, 2005ರಲ್ಲಿ ಅತ್ಯಮೋಘ ಜನಾದೇಶದೊಂದಿಗೆ ಚುನಾವಣೆ ಗೆದ್ದು, ಅಭಿವೃದ್ಧಿ, ಸಣ್ಣ-ಸಣ್ಣ ಸಮುದಾಯ ಹಾಗೂ ಮಹಿಳಾ ಕೇಂದ್ರಿತ ಆಡಳಿತದ ಮೂಲಕ ಜನರ ಮನಸ್ಸಲ್ಲಿ ಶಾಶ್ವತ ಸ್ಥಾನವನ್ನು ಪಡೆದರು.

ರಾಜ್ಯದಲ್ಲಿ ಯಾದವ ಸಮುದಾಯದ ರಾಜಕೀಯ-ಸಾಮಾಜಿಕ ಅಟ್ಟಹಾಸ ಹಾಗೂ ಪ್ರಾಬಲ್ಯಕ್ಕೆ ಕಡಿವಾಣ ಹಾಕಿ, ಯಾದವೇತರ ಒಬಿಸಿ, ಇಬಿಸಿ ಹಾಗೂ ಮುಸ್ಲಿಂ ಸಮುದಾಯ ದವರನ್ನು ವಿಶ್ವಾಸಕ್ಕೆ ತೆಗೆದುಕೊಂಡದ್ದರಿಂದ 21 ವರ್ಷಗಳ ಕಾಲ ಮುಖ್ಯಮಂತ್ರಿ ಸ್ಥಾನ ಅವರದ್ದೇ ಆಗಿತ್ತು.

ರಾಜ್ಯದ ಅತಿಸಣ್ಣ ಕುರ್ಮಿ ಸಮುದಾಯದಿಂದ, ಎಲ್ಲಾ ಸಮುದಾಯಗಳ ನೆಚ್ಚಿನ ನಾಯಕರಾಗಿ ಬೆಳೆದ ನಿತೀಶ್, ಪಕ್ಷವನ್ನೂ ಮಜಬೂತಾಗಿ ಕಟ್ಟಿದರು. ಬಿಹಾರದಲ್ಲಿ ನಿತೀಶ್ ಎಂದರೆ ಜೆಡಿಯು, ಜೆಡಿಯು ಎಂದರೆ ನಿತೀಶ್ ಎಂಬ ಸ್ಥಿತಿ ಈಗಲೂ ಇದೆ. ಆದರೆ ಬಿಹಾರ ರಾಜಕೀಯದ ಮುಖ್ಯವೇದಿಕೆಯಿಂದ ನಿತೀಶ್ ಕುಮಾರ್ ನಿರ್ಗಮನ 1970ರ ದಶಕದ ಜಯಪ್ರಕಾಶ್ ನಾರಾಯಣ್ ಚಳವಳಿಯೊಂದಿಗೆ ಪ್ರಾರಂಭವಾದ ರಾಜಕೀಯ ಅಧ್ಯಾಯವೊಂದರ ಅಂತ್ಯ ಎನ್ನಬಹುದು.

nitish kumar

ಜೆಪಿ ಆಂದೋಲನದ ಪರಿಣಾಮ ರಾಜ್ಯದಲ್ಲಿ ರಾಮ್ ವಿಲಾಸ್ ಪಾಸ್ವಾನ್, ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಎಂಬ ನಾಯಕರು ಹುಟ್ಟಿದ್ದರು. ರಾಮ್ ವಿಲಾಸ್ ಪಾಸ್ವಾನ್ ಜಾಗದಲ್ಲಿ ಚಿರಾಗ್ ಪಾಸ್ವಾನ್, ಲಾಲೂ ಪ್ರಸಾದ್ ಯಾದವ್ ಸ್ಥಾನದಲ್ಲಿ ತೇಜಸ್ವಿ ಯಾದವ್ ಇದ್ದರೆ ಮತ್ತು ಈಗ ನಿತೀಶ್ ಜಾಗವನ್ನು ತುಂಬಲು ನಿಶಾಂತ್ ಕುಮಾರ್ ಆಗಮಿಸಿದ್ದಾರೆ.

ನಿತೀಶ್ ಕುಮಾರ್ ಅನುಪಸ್ಥಿತಿಯಲ್ಲಿ ಜೆಡಿಯು ಭವಿಷ್ಯ ಈಗಿನಷ್ಟೇ ಗಟ್ಟಿಯಾಗಿರುವುದೇ? ಪುತ್ರ ನಿಶಾಂತ್ ಕುಮಾರ್‌ಗೆ ತಂದೆಯಂತೆಯೇ ರಾಜ್ಯವ್ಯಾಪಿ ಇಮೇಜ್ ವೃದ್ಧಿಸಿಕೊಳ್ಳುವ ಸಾಮರ್ಥ್ಯ ಹಾಗೂ ಜನಬೆಂಬಲ ಸಿಗುವುದೇ? ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಆದರೆ, ಸಿಎಂ ಸ್ಥಾನ ಬಿಜೆಪಿ ಪಾಲಾಗುವುದರಿಂದ ಸರಕಾರದಲ್ಲಿ ಜೆಡಿಯು ನಾಯಕರ ಹಿಡಿತ ಮೊದಲಿನಷ್ಟು ಬಿಗಿಯಾಗಿರುವುದು ಅನುಮಾನ.

ಮುಸ್ಲಿಂ ಸಮುದಾಯದ ಬಹುಮಂದಿ ಲಾಲು ಪ್ರಸಾದ್ ಯಾದವರ ಆರ್‌ಜೆಡಿ ಜತೆ ಗುರುತಿಸಿಕೊಂಡರೂ, ನಿತೀಶ್ ಕುಮಾರ್ ಕಾರಣಕ್ಕಾಗಿ ಅನೇಕರು ಜೆಡಿಯು ಜತೆಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಲ ಮುಸ್ಲಿಮರು ನಿತೀಶರನ್ನೇ ಬೆಂಬಲಿಸಿದ್ದಾರೆ.

ರಾಜ್ಯದಲ್ಲಿ ಹಿಂದೂ-ಮುಸ್ಲಿಂ ಗಲಭೆಗಳಾಗದಂತೆ ನೋಡಿಕೊಂಡ ಹೆಗ್ಗಳಿಕೆ ನಿತೀಶರದ್ದು. 2015ರಿಂದ ಮೈತ್ರಿಕೂಟ ಸರಕಾರದಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿದ್ದರೂ, ಹಿಂದೂ-ಮುಸ್ಲಿಂ ಧ್ರುವೀಕರಣದ ರಾಜಕಾರಣ ನೆಲೆಯೂರಲು ನಿತೀಶ್ ನಾಯಕತ್ವ ಬಿಡಲಿಲ್ಲ.

ಮುಸ್ಲಿಮರ ಕಬರಿಸ್ತಾನದ ವಿಷಯದಲ್ಲಿ ಹಿಂದೂಗಳ ಜತೆ ಸಂಘರ್ಷ ಉಂಟಾಗು ತ್ತಿದ್ದುದನ್ನು ಶಾಶ್ವತವಾಗಿ ನಿಲ್ಲಿಸಿದ ಖ್ಯಾತಿಯೂ ಅವರಿಗೆ ಸಲ್ಲುತ್ತದೆ. ಕಬರಿಸ್ತಾನಗಳಿಗೆ ಕಂಪೌಂಡ್ ವಾಲ್‌ಗಳಿಲ್ಲದ ಕಾರಣ ಈ ಜಾಗದಲ್ಲಿ ಹಿಂದೂಗಳು ತಮ್ಮ ಹಸುಗಳನ್ನು ತಂದುಬಿಡುತ್ತಿದ್ದರು ಮತ್ತು ಕಬರಿಸ್ತಾನದ ಜಾಗಗಳ ಒತ್ತುವರಿಯಾಗುತ್ತಿದೆ ಎನ್ನುವುದು ಅಲ್ಲಿ ಎರಡೂ ಧರ್ಮಗಳ ನಡುವಿನ ಜಗಳಕ್ಕೆ ಕಾರಣವಾಗುತ್ತಿತ್ತು.

ಇದಕ್ಕೆ ಪರಿಹಾರ ರೂಪಿಸಿದ ನಿತೀಶರು, ಎನ್‌ಡಿಎ ಸರಕಾರವಿದ್ದಾಗಲೇ ಕಬರಿಸ್ತಾನಗಳಲ್ಲಿ ಸುಮಾರು 8-9 ಸಾವಿರ ಕಂಪೌಂಡ್ ವಾಲ್‌ಗಳನ್ನು ನಿರ್ಮಾಣ ಮಾಡಿಸಿ, ಮುಂದೆಂದೂ ಈ ವಿಷಯದಲ್ಲಿ ಎರಡೂ ಧರ್ಮೀಯರ ಮಧ್ಯೆ ಕಿತ್ತಾಟವಿರಬಾರದು ಎಂಬ ಸಂದೇಶ ರವಾನಿಸಿದ್ದರು.

ಮದರಸಾಗಳಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಕಾಯಂ ವೇತನ ಜಾರಿ, ಪಂಚಾಯತ್ ಚುನಾವಣೆಗಳಲ್ಲಿ ಮುಸ್ಲಿಂ ಧರ್ಮದಲ್ಲಿರುವ ಇಬಿಸಿಗಳಿಗೆ (ಅತಿ ಹಿಂದುಳಿದ ವರ್ಗ) ಮೀಸಲಾತಿ ಜಾರಿ ಮಾಡಿದ್ದು ಇದೇ ನಿತೀಶ್ ಕುಮಾರ್.

‘ರಾಜಕೀಯ ಕಾರಣಗಳಿಗಾಗಿ ಲಾಲೂ ಪ್ರಸಾದ್ ಯಾದವರನ್ನು ಬೆಂಬಲಿಸಿದರೂ, ನಮ್ಮವರ ಹಿತ ಕಾಪಾಡಿದ್ದು ನಿತೀಶ್’ ಎಂದು ಬಿಹಾರ ಮುಸ್ಲಿಮರು ಒಪ್ಪಿಕೊಳ್ಳುತ್ತಾರೆ. ಅದೇ ಕಾರಣಕ್ಕಾಗಿ, ನಿತೀಶರ ನಿರ್ಧಾರವು ಅವರ ಪಕ್ಷವನ್ನು ಬೆಂಬಲಿಸುತ್ತಿದ್ದ ಮುಸ್ಲಿಮರಲ್ಲೂ ಬೇಸರ ಉಂಟುಮಾಡಿದೆ. ಹಾಗಾದರೆ, ನಿತೀಶರಿಲ್ಲದ ಜೆಡಿಯುವನ್ನು ಅವರು ಒಪ್ಪಿಕೊಳ್ಳುತ್ತಾರಾ? ಅನಾರೋಗ್ಯದ ಕಾರಣದಿಂದ ನಿತೀಶ್ ದಿಲ್ಲಿಗೆ ಮುಖ ಮಾಡಿರುವುದರಿಂದ ನಿರ್ಮಾಣವಾಗಿರುವ ರಾಜಕೀಯ ನಿರ್ವಾತ ಸ್ಥಿತಿ ತುಂಬಲು ಮತ್ತು ನಿತೀಶರಷ್ಟೇ ಎಲ್ಲರನ್ನೊಳಗೊಳ್ಳುವ ನಾಯಕನನ್ನು ನೀಡಲು ಬಿಜೆಪಿಗೆ ಸಾಧ್ಯವಿದೆಯೇ ಎನ್ನುವುದೂ ಸದ್ಯಕ್ಕೆ ಉತ್ತರವಿಲ್ಲದ ಪ್ರಶ್ನೆ.

ಜೆಡಿಯುನಲ್ಲಿ ಕೂಡ ನಿತೀಶ್ ರೀತಿಯ ವರ್ಚಸ್ವಿ ನಾಯಕರಿಲ್ಲ. 21 ವರ್ಷಗಳ ಕಾಲ ಅವರು ಮಗ ನಿಶಾಂತ್ ಕುಮಾರ್‌ನನ್ನು ರಾಜಕಾರಣದ ಹತ್ತಿರ ಸುಳಿಯಲೂ ಬಿಡಲಿಲ್ಲ. ಬಿಹಾರ ಚುನಾವಣೆಗೆ ನಿಶಾಂತ್‌ಗೆ ಟಿಕೆಟ್ ನೀಡಬೇಕು ಎಂದು ಬಿಹಾರದ ನಲಂದಾ ಜಿಲ್ಲೆಯ (ನಿತೀಶ್ ತವರು ಜಿಲ್ಲೆ) ಜೆಡಿಯು ಕಾರ್ಯಕರ್ತರು ಪಟನಾಗೆ ಬಂದು ಮನವಿ ನೀಡಿದ್ದಾಗ ಅವರನ್ನು “ಫಾಲ್ತು ಬಾತ್ ಮತ್ ಕರೋ. ಆಪ್ ಸಬ್ ಯಹಾ ಸೇ ನಿಕ್ಲೋ" ಎಂದು ಬೈದು ಕಳುಹಿಸಿದ್ದರು ನಿತೀಶ್ ಕುಮಾರ್.

ಬಿಹಾರ ಚುನಾವಣೆ ವರದಿಗೆಂದು ನಾನು ನಲಂದಾ ಜಿಲ್ಲೆಯಲ್ಲಿದ್ದಾಗ ಅಲ್ಲಿನ ಕಾರ್ಯಕರ್ತರೇ ಈ ಮಾತುಗಳನ್ನು ನನ್ನ ಬಳಿ ಹೇಳಿದ್ದರು. ಇಂತಿಪ್ಪ ನಿತೀಶ್ ಕುಮಾರ್ ದೆಹಲಿಗೆ ಹೋಗುವ ನಿರ್ಧಾರ ಮಾಡುತ್ತಿದ್ದಂತೆಯೇ ಪುತ್ರ ನಿಶಾಂತ್, ಸೋಮವಾರಂದು ಪಕ್ಷದ ಅಧಿಕೃತ ಸದಸ್ಯತ್ವ ಪಡೆದುಕೊಂಡ ಬೆಳವಣಿಗೆಯಾಗಿದೆ.

ಪುತ್ರನ ಆಗಮನವನ್ನು ನಿತೀಶ್ ರಾಜಕೀಯ ಒಡನಾಡಿಗಳೆಲ್ಲರೂ ಸ್ವಾಗತಿಸಿದ್ದಾರೆ ಮತ್ತು ನಿಶಾಂತ್ ರಾಜ್ಯದ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಬಹುಶಃ ಸಾಮಾಜಿಕ ಸಮೀಕರಣ ಕಾಯ್ದುಕೊಳ್ಳಲು ಹಾಗೂ ಜೆಡಿಯುವನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ ಎಂಬ ಸಂದೇಶ ರವಾನೆ ಮಾಡಲು ನಿಶಾಂತ್‌ರನ್ನು ಡಿಸಿಎಂ ಮಾಡಲು ಬಿಜೆಪಿ ಒಪ್ಪಲೂಬಹುದು.

ಹಾಗಂತ, ಆರ್‌ಜೆಡಿಯ ತೇಜಸ್ವಿ ಯಾದವ್ ಅಥವಾ ಎಲ್ʼಜೆಪಿಯ ಚಿರಾಗ್ ಪಾಸ್ವಾನ್ ಅವರಂಥ ‘ಪೊಲಿಟಿಕಲ್ ಸ್ಮಾರ್ಟ್ ನೆಸ್’ ನಿಶಾಂತ್‌ರಲ್ಲಿ ಇನ್ನೂ ಕಂಡಿಲ್ಲ. ನಿತೀಶ್ ನಿರ್ಗಮನ ಆರ್‌ಜೆಡಿಯ ರಾಜಕೀಯ ಪುನರುಜ್ಜೀವನಕ್ಕೂ ಅವಕಾಶ ಸೃಷ್ಟಿಸುವುದನ್ನು ಅಲ್ಲಗಳೆಯಲಾಗದು.

‘ನಿತೀಶ್-ಕೇಂದ್ರಿತ’ ರಾಜಕೀಯದಿಂದಾಗಿ ಅವರೊಂದಿಗಿದ್ದ ಸಮಾಜವಾದಿ ಮತ್ತು ಜಾತ್ಯ ತೀತ ಹಿನ್ನೆಲೆಯ ಅನೇಕ ನಾಯಕರು ಮತ್ತವರ ಬೆಂಬಲಿಗರು ನಿಧಾನವಾಗಿ ಆರ್‌ಜೆಡಿ ಕಡೆ ಮುಖಮಾಡಬಹುದು. ಸದ್ಯ ಬಿಹಾರ ಎನ್‌ಡಿಎಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದು, ಮೈತ್ರಿಕೂಟವು ಶೇ. 47ರಷ್ಟು ಮತಪಾಲನ್ನು ಹೊಂದಿದೆ. ಆರ್‌ಜೆಡಿ ಶೇ.38ರಷ್ಟು ಪಾಲನ್ನು ಹೊಂದಿದೆ.

ಶೇ.47ರ ಪಾಲಿನಲ್ಲಿ ಜೆಡಿಯು ಹೊಂದಿರುವ ಸುಮಾರು ಶೇ.12ರಷ್ಟು ಮತಗಳಲ್ಲಿ ಅರ್ಧದಷ್ಟು ಮತಗಳನ್ನು ಆರ್‌ಜೆಡಿ ಸೆಳೆದುಕೊಂಡರೆ ಭವಿಷ್ಯದ ರಾಜಕೀಯ ಚಿತ್ರಣ ಬದಲಾಗಬಹುದು. 2023ರ ಬಿಹಾರ ಜಾತಿ ಸಮೀಕ್ಷೆ ಪ್ರಕಾರ ರಾಜ್ಯದ ಜನಸಂಖ್ಯೆಯಲ್ಲಿ ಸರಿಸುಮಾರು ಶೇ.63ರಷ್ಟು ಜನರು ಇಬಿಸಿ ಮತ್ತು ಒಬಿಸಿಗೆ ಸೇರಿದ್ದಾರೆ.

ಇವರಲ್ಲಿ ಶೇ.36ರಷ್ಟು ಇಬಿಸಿ ಮತ್ತು ಶೇ.27ರಷ್ಟು ಒಬಿಸಿಗಳಿದ್ದಾರೆ. ಆರ್‌ಜೆಡಿ ಬೆಂಬಲಿ ಸುವ ಯಾದವರು ಶೇ.14-15ರಷ್ಟಿದ್ದಾರೆ. ನಿತೀಶರ ಗೈರಿನಲ್ಲಿ ಜೆಡಿಯು ಸಂಘಟನಾತ್ಮಕ ವಾಗಿ ದುರ್ಬಲಗೊಂಡರೆ ಹಿಂದುಳಿದ ಜಾತಿಗಳನ್ನು ತನ್ನೆಡೆಗೆ ಸೆಳೆದುಕೊಳ್ಳಲು ಆರ್‌ಜೆಡಿ ಮುಂದಾಗಬಹುದು. ಉತ್ತರ ಪ್ರದೇಶದಲ್ಲಿ ಮಾಯಾವತಿ ಅವರ ಬಹುಜನ ಸಮಾಜವಾದಿ ಪಕ್ಷದ ಕುಸಿತ ಸಮಾಜವಾದಿ ಪಕ್ಷಕ್ಕೆ (ಎಸ್ಪಿ) ಲಾಭ ತಂದುಕೊಟ್ಟಿ‌ದ್ದನ್ನು ಇಲ್ಲಿ ನೆನಪಿಸಿ ಕೊಳ್ಳಬಹುದು.

ಯಾದವೇತರ ಒಬಿಸಿ ಮತ್ತು ದಲಿತ ಮತದಾರರನ್ನು ಆಕರ್ಷಿಸಿದ ಸಮಾಜವಾದಿ ಪಾರ್ಟಿ, 2024ರ ಲೋಕಸಭೆ ಚುನಾವಣೆಯಲ್ಲಿ 37 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 33 ಸೀಟುಗಳಿಗೆ ಇಳಿದಿದ್ದರಿಂದ ಕೇಂದ್ರದಲ್ಲಿ ಜೆಡಿಯು ಮತ್ತು ಆಂಧ್ರಪ್ರದೇಶದ ಟಿಡಿಪಿಯನ್ನು ನೆಚ್ಚಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಯಿತು.

ಮುಖ್ಯಮಂತ್ರಿಯಾಗಿದ್ದ 21 ವರ್ಷಗಳಲ್ಲಿ 6 ವರ್ಷ ಆರ್ʼಜೆಡಿ ಜತೆ ಮೈತ್ರಿ ಸರಕಾರ ಮುನ್ನಡೆಸಿದ್ದ ನಿತೀಶ್ ಕುಮಾರ್ʼಗೆ, ಲಾಲು ಸಖ್ಯ ಎಂದಿಗೂ ಹಿತಕರ ಎನಿಸಿರಲಿಲ್ಲ. ಹೀಗಾಗಿಯೇ, ಎರಡೆರಡು ಬಾರಿ ಸಂಬಂಧ ಕಡಿದುಕೊಂಡು, ಆರ್‌ಜೆಡಿಗಿಂತ ಬಿಜೆಪಿಯೇ ಎಷ್ಟೋ ವಾಸಿ ಎಂದು ಮರುಮೈತ್ರಿ ಮಾಡಿಕೊಂಡಿದ್ದರು. ರಾಜಕೀಯ ಅನಿವಾರ್ಯತೆಗಳು ಲಾಲು ಅವರ ಕೈಜೋಡಿಸುವಂತೆ ಮಾಡಿದ್ದರೂ, ಅವರ ಮನಸ್ಸುಗಳು ಎಂದಿಗೂ ಕೂಡಿರಲಿಲ್ಲ. ಎನ್ʼಡಿಎ ಮೈತ್ರಿಕೂಟದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ, ಸಿಎಂ ಸ್ಥಾನದಲ್ಲಿ ನಿತೀಶ್ ಇದ್ದುದರಿಂದ ಆಡಳಿತ ಮತ್ತು ರಾಜಕೀಯ ನಿಯಂತ್ರಣದ ಕೀಲಿಕೈ ಅವರ ಕೈಯ ಇರುತ್ತಿತ್ತು. ಆದರೆ, ಮುಂದಿನ ದಿನಗಳಿಂದ ಈ ಕೀಲಿಕೈ ದೆಹಲಿ ಬಿಜೆಪಿ ಕೇಂದ್ರ ಕಚೇರಿಗೆ ಶಿಫ್ಟ್ ಆಗಲಿದೆ.

ದಿಲ್ಲಿ ನಿಯಂತ್ರಿತ ಆಡಳಿತದಲ್ಲಿ ಬಿಹಾರ ಬಿಜೆಪಿಯ ಮುಖ್ಯಮಂತ್ರಿಯು ರಾಜ್ಯವನ್ನು ಯಾವ ಹಾದಿಯಲ್ಲಿ ಕೊಂಡೊಯ್ಯಲಿದ್ದಾರೆ ಎನ್ನುವುದು ಬಿಜೆಪಿ-ಜೆಡಿಯು ಎರಡೂ ಪಕ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ.