DK Shivakumar: ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆಯಾಚನೆ
RSS song: ನಾನು ಅಸೆಂಬ್ಲಿಯಲ್ಲಿ ಬಿಜೆಪಿಯವರು ಮಾತಾಡುತ್ತಿದ್ದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದೆ. ಅವರೆಲ್ಲರೂ ಅವರ ಪಕ್ಷವೇ, ವಿರೋಧ ಪಕ್ಷದ ಅರಿವು ನನಗಿದೆ ಎಂದು ನಾನು ಕಾಲೆಳೆದಿದ್ದೆ. ಇದು ಹೊಸದೇನು ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ವ್ಯವಸ್ಥೆ ಯಲ್ಲಿ ನನ್ನ ಆಚಾರ ವಿಚಾರ ಮಾತಾಡಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.


ಬೆಂಗಳೂರು : ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಗುರುವಾರ ಆರ್‌ಎಸ್‌ಎಸ್ (RSS) ಗೀತೆಯನ್ನು ಹಾಡಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ವಿಚಾರವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಕ್ಷಮೆ ಯಾಚಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಡಿಕೆಶಿ, ಆರ್‌ಎಸ್‌ಎಸ್ ಗೀತೆ ವಿಚಾರದಲ್ಲಿ ನನ್ನಿಂದ ಯಾರಿಗಾದ್ರೂ ನೋವಾಗಿದ್ದರೆ ಕ್ಷಮೆ ಕೇಳಲು ಸಿದ್ಧ. ಎಲ್ಲರ ಬಳಿಯೂ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಯಾರ ಮನಸ್ಸಿಗೂ ನೋಯಿಸಲು ನನಗೆ ಇಷ್ಟವಿಲ್ಲ. ನನ್ನ ಜೀವನ ನಿಮ್ಮ ಜೀವನದ ಮೆಟ್ಟಿಲುಗಳಾಗಬೇಕೆಂದುಕೊಂಡವನು ನಾನು. ಯಾರಿಗಾದ್ರೂ ಇದರಿಂದ ನೋವಾಗಿದ್ದರೆ ನಾನು ಕ್ಷಮಾಪಣೆ ಕೇಳಲು ಸಿದ್ದ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ನನ್ನ ಮಾತಿನ ಬಗ್ಗೆ ಯಾರು ಪ್ರಶ್ನೆ ಮಾಡಿದ್ದಾರೋ ಅವರೆಲ್ಲಾ ಮೂರ್ಖರು ಎಂದು ಮಾಜಿ ಸಚಿವ ಕೆಎನ್ ರಾಜಣ್ಣಗೆ ತಿರುಗೇಟು ಕೊಟ್ಟ ಡಿಸಿಎಂ ಡಿಕೆಶಿ, ಅವರು ಯಾರಿಗೆ ಅಡ್ವೈಸ್ ಮಾಡಬೇಕೋ ಅವರಿಗೆ ಮಾಡಲಿ. ನನಗೇನು ಹೇಳಬೇಕಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಡಿಕೆಶಿ ಏನ್ ಬೇಕಾದ್ರೂ ಮಾತಾಡಬಹುದು ಎಂದು ಕೆ ಎನ್ ರಾಜಣ್ಣ ಕಿಡಿಕಾರಿದ್ರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಅಸೆಂಬ್ಲಿಯಲ್ಲಿ ಬಿಜೆಪಿಯವರು ಮಾತಾಡುತ್ತಿದ್ದ ಸಂದರ್ಭದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದೆ. ಅವರೆಲ್ಲರೂ ಅವರ ಪಕ್ಷವೇ, ವಿರೋಧ ಪಕ್ಷದ ಅರಿವು ನನಗಿದೆ ಎಂದು ನಾನು ಕಾಲೆಳೆದಿದ್ದೆ. ಇದು ಹೊಸದೇನು ಅಲ್ಲ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂಸದೀಯ ವ್ಯವಸ್ಥೆ ಯಲ್ಲಿ ನನ್ನ ಆಚಾರ ವಿಚಾರ ಮಾತಾಡಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ.
1979ರಿಂದ ನಾನು ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡ್ತಾ ಗುರುತಿಸಿಕೊಂಡವನು. ನಾನು ಯಾರಿಂದಲೂ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಇರೋದು ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧ. ಅವರ ತ್ಯಾಗ, ಬಲಿದಾನ, ಆಶೀರ್ವಾದ, ಮಾರ್ಗದರ್ಶನ ಪಡೆದು ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ಡಿಕೆಶಿ ಗುಡುಗಿದರು.
ಕಳೆದ ಗುರುವಾರ ವಿಧಾನಸಭೆಯಲ್ಲಿ ನಿಂತು ಸದನವನ್ನು ಉದ್ದೇಶಿಸಿ ಮಾತನಾಡುತ್ತಾ ‘ನಮಸ್ತೆ ಸದಾ ವತ್ಸಲೇ ಮಾತೃಭೂಮಿ’ ಗೀತೆಯನ್ನು ಡಿಕೆಶಿ ಹೇಳಿದ್ದರು. ಈ ಘಟನೆಯ 73 ಸೆಕೆಂಡುಗಳ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದೇ ವಿಚಾರವಾಗಿ ನಿನ್ನೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ MLC ಬಿಕೆ ಹರಿಪ್ರಸಾದ್, ಡಿ.ಕೆ,ಶಿವಕುಮಾರ್ ಅವರು ಡಿಸಿಎಂ ಆಗಿ ಆರ್ ಎಸ್ ಎಸ್ ಗೀತೆ ಹಾಡಿದ್ದರೆ ತಪ್ಪಿಲ್ಲ. ಆದರೆ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿರುವುದರಿಂದ ಕಾಂಗ್ರೆಸ್ ಅಧ್ಯಕ್ಷನಾಗಿ ಸದನದಲ್ಲಿ ಆರ್ ಎಸ್ ಎಸ್ ಗೀತೆ ಹಾಡಿದ್ದು ತಪ್ಪು. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದಿದ್ದರು.
ಇದನ್ನೂ ಓದಿ: BK Hariprasad: ಕಾಂಗ್ರೆಸ್ ಅಧ್ಯಕ್ಷರಾಗಿ ಆರ್‌ಎಸ್‌ಎಸ್ ಗೀತೆ ಹಾಡಿದ್ದರೆ ಡಿಕೆಶಿ ಕ್ಷಮೆ ಕೇಳಲಿ: ಬಿಕೆ ಹರಿಪ್ರಸಾದ್