ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: ಧರ್ಮಸ್ಥಳ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪ; ಎಸ್‌ಐಟಿಯಿಂದ ತಿಮರೋಡಿ ಮನೆಗೆ ದಾಳಿ

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡವು ಸಾಕ್ಷಿದಾರ ಮಾಸ್ಕ್‌ಮ್ಯಾನ್‌ ಚಿನ್ನಯ್ಯನನ್ನು ಬಂಧಿಸಿದೆ. ಧರ್ಮಸ್ಥಳದಲ್ಲಿಯೇ ಎಸ್‌ಐಟಿ ಮುಖ್ಯಸ್ಥರ ಸಮ್ಮುಖದಲ್ಲಿ ಬಂಧನ ನಡೆದಿದೆ. ಕಳೆದ ಒಂದು ತಿಂಗಳಿಂದ ಸಾಕ್ಷಿದಾರನು ತೋರಿಸಿದ ಸ್ಥಳಗಳಲ್ಲಿ ಹುಡುಕಾಟ ನಡೆಸಲಾಗಿತ್ತು. ಶನಿವಾರ ಆತನನ್ನು ಬಂಧಿಸಿ, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಮಧ್ಯೆ ಧರ್ಮಸ್ಥಳ ದೂರುದಾರ ಚಿನ್ನಯ್ಯನಿಗೆ ಆಶ್ರಯ ನೀಡಿದ ಆರೋಪದ ಮೇಲೆ ಎಸ್‌ಐಟಿಯಿಂದ ತಿಮರೋಡಿಯ ಮನೆಗೆ ದಾಳಿ ನಡೆದಿದೆ

ತಿಮರೋಡಿ ಮಹೇಶ್‌ ಶೆಟ್ಟಿ ಮನೆಯ ಮೇಲೆ ಎಸ್ಐಟಿ ದಾಳಿ

ಮಹೇಶ್ ಶೆಟ್ಟಿ ತಿಮರೋಡಿ

Profile Sushmitha Jain Aug 26, 2025 12:27 PM

ಮಂಗಳೂರು: ಧರ್ಮಸ್ಥಳದಲ್ಲಿ (Dharmasthala) ನೂರಾರು ಕೊಲೆಗಳು ನಡೆದಿವೆ ಎಂದು ಆರೋಪಿಸಿ ಸುದ್ದಿಯಾಗಿದ್ದ ಮಹೇಶ್ ಶೆಟ್ಟಿ ತಿಮರೋಡಿಯ (Mahesh Shetty Timarodi) ಮನೆಯ ಮೇಲೆ ವಿಶೇಷ ತನಿಖಾ ದಳ (Special Investigation Team) ಮಂಗಳವಾರ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ‘ಮಾಸ್ಕ್‌ಮ್ಯಾನ್’ ಎಂದು ಕರೆಯಲ್ಪಡುವ ಚಿನ್ನಯ್ಯನ ಹೇಳಿಕೆಯ ಆಧಾರದ ಮೇಲೆ ಕೋರ್ಟ್‌ನಿಂದ ಸರ್ಚ್ ವಾರಂಟ್ ಪಡೆದು, ತಿಮರೋಡಿಯ ಉಜಿರೆಯಲ್ಲಿರುವ ನಿವಾಸಕ್ಕೆ ಎಸ್‌ಐಟಿ ತೆರಳಿದೆ.

ಚಿನ್ನಯ್ಯ, ಎಸ್‌ಐಟಿ ವಿಚಾರಣೆಯಲ್ಲಿ, ಧರ್ಮಸ್ಥಳದಲ್ಲಿ 1995-2014ರ ನಡುವೆ ಶವಗಳನ್ನು ಹೂತಿದ್ದೇನೆ ಎಂದು ಆರೋಪಿಸಿದ್ದ. ಆದರೆ, ಆತ ತೋರಿಸಿದ ಜಾಗಗಳಲ್ಲಿ ಉತ್ಖನನ ನಡೆಸಿದರೂ ಅದಕ್ಕೆ ಪೂರಕ ಸಾಕ್ಷಿಗಳು ಸಿಕ್ಕಿರಲಿಲ್ಲ. ಇನ್ನು ದೂರುದಾರ ತಾನು ತಿಮರೋಡಿಯ ಮನೆಯಲ್ಲಿ ತಂಗಿದ್ದೆ, ಅಲ್ಲಿ ಒಂದು ಕೊಠಡಿಯನ್ನು ನೀಡಲಾಗಿತ್ತು ಎಂದು ಹೇಳಿದ್ದಾನೆ. ತನ್ನ ಬಟ್ಟೆ, ಬ್ಯಾಗ್‌ಗಳನ್ನು ಆ ಕೊಠಡಿಯಲ್ಲಿ ಇಟ್ಟಿದ್ದು, ಮೊಬೈಲ್ ಬಳಸಿರಲಿಲ್ಲ, ತನ್ನ ಫೋನ್ ತಿಮರೋಡಿಯವರ ಬಳಿಯಿತ್ತು ಎಂದು ಒಪ್ಪಿಕೊಂಡಿದ್ದಾನೆ.

ಈ ಹೇಳಿಕೆಯ ಆಧಾರದ ಮೇಲೆ, ಎಸ್‌ಐಟಿ ತಿಮರೋಡಿಯ ಮನೆಯಲ್ಲಿ ಚಿನ್ನಯ್ಯ ತಂಗಿದ್ದ ಕೊಠಡಿಯ ಮಹಜರು ಮಾಡಲು ಮತ್ತು ಆತನ ಮೊಬೈಲ್ ವಶಪಡಿಸಿಕೊಳ್ಳಲು ದಾಳಿ ನಡೆಸಿತು. ಚಿನ್ನಯ್ಯನ ಪ್ರಕಾರ, ಧರ್ಮಸ್ಥಳದ ಉತ್ಖನನ ಸಂದರ್ಭದಲ್ಲಿ ಆರೋಪಿತರ ಗುಂಪಿನ ಸದಸ್ಯರು ತಿಮರೋಡಿಯ ಮನೆಯಲ್ಲೇ ತಂಗಿದ್ದರು, ಎಲ್ಲ ಯೋಜನೆಗಳು ಅಲ್ಲಿಂದಲೇ ರೂಪುಗೊಂಡಿದ್ದವು ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನು ಓದಿ: Dharmasthala Case: ಎಸ್‌ಐಟಿ ಮುಂದೆ ವಿಚಾರಣೆಗೆ ಸುಜಾತ ಭಟ್‌ ಹಾಜರು

ಕಳೆದ ವಾರ ಉತ್ಖನನವನ್ನು ಸ್ಥಗಿತಗೊಳಿಸಿದ ಎಸ್‌ಐಟಿ, ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿತು. ಡಿಜಿಪಿ ಪ್ರಣಬ್ ಮೊಹಾಂತಿ ನೇತೃತ್ವದ ತಂಡವು ಆತನಿಂದ ಹೆಚ್ಚಿನ ಮಾಹಿತಿಯನ್ನು ಪಡೆದಿದೆ. ಚಿನ್ನಯ್ಯ ಉಲ್ಲೇಖಿಸಿದ ವ್ಯಕ್ತಿಗಳಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಯೂಟ್ಯೂಬರ್ ಸಮೀರ್ ಎಂಡಿ, ಮತ್ತು ಸುಜಾತಾ ಭಟ್ ಸೇರಿದಂತೆ ಇತರರಿಗೆ ಎಸ್‌ಐಟಿ ನೋಟಿಸ್ ಜಾರಿಗೊಳಿಸುವ ಯೋಜನೆಯಲ್ಲಿದೆ.

ತಿಮರೋಡಿ ಅವರನ್ನು ಆಗಸ್ಟ್ 21 ರಂದು ಉಡುಪಿ ಪೊಲೀಸರು ಬಿಜೆಪಿಯ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ಬಂಧಿಸಿದ್ದರು, ಆದರೆ ಜಾಮೀನು ಪಡೆದು ಬಿಡುಗಡೆಯಾಗಿದ್ದಾರೆ. ಎಸ್‌ಐಟಿಯ ತನಿಖೆ ಷಡ್ಯಂತ್ರದ ಕೋನವನ್ನು ಕೇಂದ್ರೀಕರಿಸಿದ್ದು, ಆರೋಪಿತರ ವಿರುದ್ಧ ತನಿಖೆ ಚುರುಕುಗೊಳಿಸಿದೆ.