ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

DK Shivakumar: ಡಿಕೆ ಶಿವಕುಮಾರ್‌ ಬೆಂಬಲಿಗ ಬಣದ 40 ಶಾಸಕರಿಂದ ಔತಣಕೂಟ

ಮಾಗಡಿ ಶಾಸಕ ಎಚ್​ಸಿ ಬಾಲಕೃಷ್ಣ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ನಡೆದ ಔತಣಕೂಟದಲ್ಲಿ ಡಿಕೆಶಿ ಬೆಂಬಲಿಗರೆಂದು ಗುರುತಿಸಲ್ಪಟ್ಟ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದಾರೆ. ಈ ಮೂಲಕ ತಮ್ಮ ಒಗ್ಗಟ್ಟನ್ನು ತೋರಿಸುವ ಪ್ರಯತ್ನ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಡಿಕೆ ಶಿವಕುಮಾರ್‌ ಬೆಂಬಲಿಗ ಬಣದ 40 ಶಾಸಕರಿಂದ ಔತಣಕೂಟ

ಡಿಕೆ ಶಿವಕುಮಾರ್‌ ಮತ್ತಿತರ ಶಾಸಕರು -

ಹರೀಶ್‌ ಕೇರ
ಹರೀಶ್‌ ಕೇರ Feb 27, 2026 7:27 AM

ಬೆಂಗಳೂರು, ಫೆ.27: ಕರ್ನಾಟಕ ಕಾಂಗ್ರೆಸ್‌ನಲ್ಲಿ (Congress) ಆಗಾಗ ತೀವ್ರಗೊಂಡು ಮತ್ತೆ ತಣ್ಣಗಾಗುತ್ತಿದ್ದ ನಾಯಕತ್ವ ಬದಲಾವಣೆ ಗೊಂದಲ ಇದೀಗ ಮತ್ತೆ ಮುನ್ನೆಲೆಗೆ ಬರುತ್ತಿದೆಯಾ ಎಂಬ ಅನುಮಾನ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬಣಗಳ ನಡುವಿನ ಶೀತಲ ಸಮರಕ್ಕೆ ಹೊಸ ತಿರುವು ಸಿಕ್ಕಿದ್ದು, ಡಿಕೆಶಿ ಬೆಂಬಲಿಗ ಶಾಸಕರು ಶಕ್ತಿಪ್ರದರ್ಶನ ನಡೆಸಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಮಾಗಡಿ ಶಾಸಕ ಎಚ್​ಸಿ ಬಾಲಕೃಷ್ಣ ಹುಟ್ಟುಹಬ್ಬದ ನೆಪದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ನಡೆದ ಔತಣಕೂಟದಲ್ಲಿ ಡಿಕೆಶಿ ಬೆಂಬಲಿಗರೆಂದು ಗುರುತಿಸಲ್ಪಟ್ಟ 40ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದಾರೆ. ಈ ಮೂಲಕ ತಮ್ಮ ಒಗ್ಗಟ್ಟನ್ನು ತೋರಿಸುವ ಪ್ರಯತ್ನ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಭೆಯಲ್ಲಿ ಸಚಿವರಾದ ಡಿ ಸುಧಾಕರ್, ಮಂಕಾಳ ವೈದ್ಯ, ಸಿಪಿ ಯೋಗೇಶ್ವರ್, ಟಿಬಿ ಜಯಚಂದ್ರ, ಎನ್‌ಎ ಹ್ಯಾರಿಸ್, ಗಣೇಶ್ ಹುಕ್ಕೇರಿ, ಕುಣಿಗಲ್ ರಂಗನಾಥ್, ಪ್ರಕಾಶ್ ಕೋಳಿವಾಡ ಸೇರಿದಂತೆ ಹಲವರು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಶಾಸಕರು ಒಟ್ಟಾಗಿ ಕುಳಿತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚನ್ನಪಟ್ಟಣ ಶಾಸಕ ಸಿಪಿ ಯೋಗೇಶ್ವರ್ ಮಾತನಾಡಿ, ‘ಸುಮಾರು 35ರಿಂದ 40 ಜನ ಶಾಸಕರು ಸೇರಿದ್ದೇವೆ’ ಎಂದು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿಗಳೇ ನಿಮ್ಮ 3ನೇ ಮಗನ ಬೈಕಿಗೆ ಇನ್ಶೂರೆನ್ಸ್ ಇಲ್ಲ, ತಲೆಗೆ ಹೆಲ್ಮೆಟ್ ಕೂಡ ಇಲ್ಲ: ನಲಪಾಡ್‌ ಎಡವಟ್ಟು, ಡಿಕೆಶಿಗೆ ಜೆಡಿಎಸ್‌ ತರಾಟೆ

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಚ್‌.ಸಿ. ಬಾಲಕೃಷ್ಣ, ‘ನಾಯಕತ್ವ ಬದಲಾವಣೆ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ಕೈಗೊಳ್ಳಬೇಕು. ಸಿಎಂ ಬದಲಾಯಿಸುತ್ತಾರೋ, ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸುತ್ತಾರೋ ಅದು ವರಿಷ್ಠರ ನಿರ್ಧಾರ. ಆದರೆ, ಈ ಗೊಂದಲಕ್ಕೆ ತೆರೆ ಎಳೆಯಬೇಕು. ಹೀಗೆ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಸರ್ಕಾರ ರಚಿಸುವುದು ಕಷ್ಟವಾಗಬಹುದು’ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ಯಾವ ಬಣದ ಸಭೆಯೂ ಅಲ್ಲ. ನನ್ನ ಹುಟ್ಟುಹಬ್ಬದ ನಿಮಿತ್ತ ಎಲ್ಲರನ್ನು ಊಟಕ್ಕೆ ಆಹ್ವಾನಿಸಿದ್ದೆ. ನಾವು ಎಲ್ಲರೂ ಕಾಂಗ್ರೆಸ್ ಶಾಸಕರೇ ಹೊರತು ಯಾರಾದರೂ ಪರ–ವಿರೋಧ ಎನ್ನುವ ಪ್ರಶ್ನೆಯೇ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಮಾತನಾಡಿ, ಸುಳ್ಳು ಹೇಳಲು ಕಾರಣವಿಲ್ಲ. ಸುಮಾರು 40 ಜನ ಶಾಸಕರು ಸೇರಿದ್ದೇವೆ. ನಾಯಕತ್ವ ಬದಲಾವಣೆ ಕುರಿತ ಚರ್ಚೆಯಾಗಿದೆ. ಅಧಿಕಾರ ಹಂಚಿಕೆ ಹಾಗೂ ಗೊಂದಲಗಳಿಗೆ ಹೈಕಮಾಂಡ್ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇದು ಕೇವಲ ಭೋಜನ ಕೂಟ

ಖಾಸಗಿ ಹೋಟೆಲ್ ಬಳಿ ಪ್ರತಿಕ್ರಿಯಿಸಿದ ಶಾಸಕ ರವಿ ಗಣಿಗ, ಇದು ಯಾವುದೇ ಅಧಿಕೃತ ಸಭೆಯಲ್ಲ. ಬಾಲಕೃಷ್ಣ ಅವರ ಹುಟ್ಟುಹಬ್ಬದ ಊಟ ಮಾತ್ರ. ನಾವು ಎಲ್ಲರೂ ಸ್ನೇಹಪೂರ್ವಕವಾಗಿ ಸೇರಿದ್ದೇವೆ ಎಂದು ಹೇಳಿದ್ದಾರೆ.

ಮತದಾರ ಪಟ್ಟಿಯಲ್ಲಿ ಅಕ್ರಮ ಎಸಗಿರುವ ಬಿಎಒಗಳ ಅಮಾನತುಗೊಳಿಸಿ: ಚುನಾವಣಾ ಆಯೋಗಕ್ಕೆ ಡಿಕೆಶಿ ಮನವಿ ಪತ್ರ

ಇತ್ತೀಚೆಗೆ ಸಿದ್ದರಾಮಯ್ಯ ಬಣದ ನಾಯಕರು ಪ್ರತ್ಯೇಕವಾಗಿ ಸಭೆ, ಔತಣಕೂಟಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ, ಡಿಕೆಶಿ ಬಣವೂ ತಮ್ಮ ಒಗ್ಗಟ್ಟು ಪ್ರದರ್ಶಿಸಿರುವುದು ವಿಶೇಷವಾಗಿದೆ. ಶಾಸಕರ ಫೋಟೋಗಳನ್ನು ಉದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.