Sameer M D: ಸೌಜನ್ಯ ಪ್ರಕರಣ; ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ
Sameer M D: ನ್ಯಾಯಾಲಯವು ಯೂಟ್ಯೂಬರ್‌ಗೆ ನೋಟೀಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಅಲ್ಲದೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೊ ತಕ್ಷಣ ಡಿಲೀಟ್ ಮಾಡಲು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಅವರು ಆದೇಶ ನೀಡಿದ್ದಾರೆ.


ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Soujanya murder case) ಸಂಬಂಧ ಕೋರ್ಟ್ ಆದೇಶ ಉಲ್ಲಂಘಿಸಿ ಎರಡನೇ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ ಹಿನ್ನೆಲೆಯಲ್ಲಿ ʼದೂತʼ ಹೆಸರಿನ ಯೂಟ್ಯೂಬರ್ ಸಮೀರ್ ಎಂ.ಡಿ. (Sameer M D) ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಪ್ರಕರಣ ಸಂಬಂಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆಯನ್ನು ಧರ್ಮಸ್ಥಳ ಡಿ.ಹರ್ಷೇಂದ್ರ ಕುಮಾರ್ ಮತ್ತು ನಿಶ್ಚಲ್ ಡಿ. ಹೂಡಿದ್ದಾರೆ.
ನ್ಯಾಯಾಲಯವು ಯೂಟ್ಯೂಬರ್‌ಗೆ ನೋಟೀಸ್ ಜಾರಿ ಮಾಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆಯನ್ನು ನೀಡಿದೆ. ಮುಖ್ಯವಾಗಿ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಹರಿಬಿಟ್ಟಿದ್ದ ವಿಡಿಯೊ ತಕ್ಷಣ ಡಿಲೀಟ್ ಮಾಡಲು ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಧೀಶ ಎಸ್. ನಟರಾಜ್ ಅವರು ಆದೇಶ ನೀಡಿದ್ದಾರೆ.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕ್ಷೇತ್ರದ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ಈ ಹಿಂದೆ ಮಾಡಿರುವ ವಿಡಿಯೊ ತೆಗೆದುಹಾಕುವಂತೆ ಮತ್ತು ಈ ಕುರಿತು ವಿಡಿಯೊ ಮಾಡದಂತೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ, ನ್ಯಾಯಾಲಯದ ತಡೆಯಾಜ್ಞೆ ಅದೇಶವನ್ನು ಉಲ್ಲಂಘಿಸಿ, ಎರಡನೆ ವಿಡಿಯೋ ಬಿಟ್ಟಿರುವ ಹಿನ್ನೆಲೆ ಸಮೀರ್ ಎಂ.ಡಿ. ಮೇಲೆ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Uma Mahesh Vaidya Column: ಸೌಜನ್ಯ ಪ್ರಕರಣವನ್ನು ಜೀವಂತರಾಗಿಸಿರುವ ಕಸರತ್ತು !
ಎರಡು ತಿಂಗಳ ಹಿಂದೆ ಯೂಟ್ಯೂಬರ್ ಸಮೀರ್ ಎಂಡಿ, ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಕೇಸ್‌ನ ಬಗ್ಗೆ ವಿಡಿಯೊ ಮಾಡಿ ಯೂಟ್ಯೂಬ್‌ನಲ್ಲಿ ಹಾಕಿದ್ದರು. ಈ ವಿಡಿಯೊಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ವಿಡಿಯೊವನ್ನು ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದರು. ಸಾಕಷ್ಟು ಪರ ವಿರೋಧವು ವಿಡಿಯೊಗೆ ವ್ಯಕ್ತವಾಗಿತ್ತು. ನಂತರ ಯೂಟ್ಯೂಬರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಜತೆಗೆ ಹಲವರು ಕರೆ ಮಾಡಿ ಬೆದರಿಕೆಯನ್ನು ಹಾಕಿದ್ದರು.
ಸಮೀರ್ ಮಾಡಿದ್ದ ವಿಡಿಯೊದಲ್ಲಿ ಎಐ ತಂತ್ರಜ್ಞಾನ ಬಳಸಿಕೊಂಡು ಸೌಜನ್ಯ ಕೊಲೆ ನಡೆದ ದಿನ ಆ ನಂತರ ತನಿಖೆಯ ಬಗ್ಗೆ ತೋರಿಸಲಾಗಿತ್ತು. ಆ ಘಟನೆಗೆ ಆ ಊರಿಗೆ ಗೌಡರೇ ಕಾರಣ ಎಂದು ಉಲ್ಲೇಖ ಮಾಡಲಾಗಿತ್ತು. ಇದು ನೇರವಾಗಿ ಧರ್ಮಸ್ಥಳ ಧರ್ಮಾಧಿಕಾರಿಗಳ ಕುಟುಂಬದ ಹೆಸರನ್ನು ಉಲ್ಲೇಖ ಮಾಡದಿದ್ದರೂ ಅವರನ್ನೇ ಗುರಿಯಾಗಿಸಿಕೊಂಡು ಮಾಡಿದ ವಿಡಿಯೊ ಎಂಬುದು ವೀಕ್ಷಕರಿಗೆ ಮನದಟ್ಟಾಗುವಂತಿತ್ತು. ಜತೆಗೆ ಧರ್ಮಸ್ಥಳ, ಅದರ ಆಡಳಿತ ಸಂಸ್ಥೆಗಳ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಲಾಗಿತ್ತು. ಹೀಗಾಗಿ ಯೂಟ್ಯೂಬರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.