Sirsi News: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸದಿದ್ದರೆ ಉಗ್ರ ಹೋರಾಟ; ಶಾಸಕ ಭೀಮಣ್ಣ ನಾಯ್ಕಗೆ ಅನಂತ ಮೂರ್ತಿ ಹೆಗಡೆ ಎಚ್ಚರಿಕೆ
Sirsi News: ಶಾಸಕರಿಗೆ ಆಸ್ಪತ್ರೆ ಬಗ್ಗೆ ಕಳಕಳಿಯಿದ್ದರೆ ಸಾರ್ವಜನಿಕ ಸಭೆ ಕರೆಯಲಿ. ಈ ವಿಚಾರದಲ್ಲಿ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ, ಬಡವರ ಆಸ್ಪತ್ರೆ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಅನಂತ ಮೂರ್ತಿ ಹೆಗಡೆ ತಿಳಿಸಿದ್ದಾರೆ.
ಶಿರಸಿ: ಬಡವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ನಿಮಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಅವರ ಪರವಾಗಿ ನಿಲ್ಲಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು (super-speciality hospital) ಮೊದಲು ನಿರ್ಮಿಸಿ. ಸುಳ್ಳು ಹೇಳುವುದನ್ನು, ಸುಳ್ಳು ಭರವಸೆಗಳನ್ನು ನೀಡುವುದು ನಿಲ್ಲಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಸಾಮಾಜಿಕ ಹೋರಾಟಗಾರ ಅನಂತ ಮೂರ್ತಿ ಹೆಗಡೆ ಹರಿಹಾಯ್ದರು.
ನಗರದಲ್ಲಿ (Sirsi News) ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 224 ಜನ ಶಾಸಕರಲ್ಲಿ ʼಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿʼ ಅಂತ ಒಂದು ಪ್ರಶಸ್ತಿ ಇದ್ದರೆ, ಅದನ್ನು ಶಿರಸಿಯ ಶಾಸಕರಾದ ಭೀಮಣ್ಣ ನಾಯ್ಕರವರಿಗೆ ಕೊಡಬೇಕು. ಇದನ್ನ ನಾನು ಹೇಳುತ್ತಿಲ್ಲ ದಾಖಲೆಗಳೇ ಹೇಳುತ್ತಿವೆ ಎಂದು ಕಿಡಿಕಾರಿದರು.
ಶಿರಸಿಯ ಪಂಡಿತ್ ಸಾರ್ವಜನಿಕ ಆಸ್ಪತ್ರೆ ವಿಷಯಕ್ಕೆ ಸಂಬಂಧಿಸಿ ಎಲ್ಲ ದಾಖಲಾತಿಗಳನ್ನು ಆರ್‌ಟಿಐ ಮೂಲಕ ತೆಗೆದುಕೊಳ್ಳಲಾಗಿದೆ. ಎಂಆರ್‌ಐ ಮತ್ತು ಸಿ.ಟಿ. ಸ್ಕ್ಯಾನ್ ಮಷಿನ್, ಟ್ರಾಮಾ ಸೆಂಟರ್, ಹಾರ್ಟ್ ಅಪರೇಷನ್ ಮಾಡುವ ಸಾಮಗ್ರಿಗಳನ್ನು ಒಳಗೊಂಡು, ವೈದ್ಯಕೀಯ ಉಪಕರಣಗಳನ್ನು ಯಾವ ರೀತಿ ಈ ಕಾಂಗ್ರೆಸ್ ಸರಕಾರ ಮತ್ತು ಶಾಸಕರು ಮಾಯ ಮಾಡಿದ್ದಾರೆ. ಇನ್ನು ಮುಂದೆ ಸಹಿ ಸಂಗ್ರಹ ಮಾಡುವ ಕಾರ್ಯವನ್ನೂ ಮಾಡುತ್ತೇವೆಂದು ತಿಳಿಸಿದರು.
ಇದೆಲ್ಲದರ ಕುರಿತು ನಾವು ಎರಡು ಬಾರಿ ಪತ್ರಿಕಾಗೋಷ್ಠಿ ಮಾಡಿದ್ದೇವೆ, ಉತ್ತರ ಇಲ್ಲ. ನೀವು ಪತ್ರಿಕೆಗೆ ಹೇಳಿದ್ದಿರಿ, 18.5 ಕೋಟಿ ಉಪಕರಣಕ್ಕೆ ಬಂದಿದೆ ಎಂದಿದ್ದೀರಿ. ಎಲ್ಲಿ ಬಂದಿದೆ ಬರೀ ಸುಳ್ಳು. ಇನ್ನೂ ಸಾಮಗ್ರಿಗಾಗಿ ಟೆಂಡರ್ ಕರೆಯಲಿಲ್ಲ ಎನ್ನುವುದೂ ಕೂಡ ಮಾಹಿತಿ ಹಕ್ಕು ಇಲಾಖೆಯಡಿ ದಾಖಲೆ ಸಿಕ್ಕಿದೆ. 80% ಕೆಲಸ ಮುಗಿದು ಐದು ತಿಂಗಳಾದರೂ ಸಹ ಇದುವರೆಗೆ ಟೆಂಡರ್ ಕರೆಯದಿರುವುದಕ್ಕೆ ಕಾರಣ ತಿಳಿಸಬೇಕು. ಯಾವುದೇ ವೈದ್ಯರ ನೇಮಕಾತಿ ಆಗಿಲ್ಲ. ಈ ಹಿಂದೆ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಧ್ವನಿ ಎತ್ತುತ್ತಿದ್ದ ಕಾಂಗ್ರೆಸ್ ಸರಕಾರ, ಈಗ ಸರಕಾರದಲ್ಲಿ ಮಂಜೂರಾದ ಬಡವರ ಆಸ್ಪತ್ರೆಯನ್ನು ಕೆಡಿಸಲು ಪ್ರಯತ್ನಿಸುತ್ತಿರುವುದು ಕ್ಷೇತ್ರದ ಜನತೆಗೆ ಮಾಡುವ ಬಹುದೊಡ್ಡ ಅಪರಾಧ. ಬಡವರಿಗಾಗಿ ಉಚಿತವಾಗಿ ಸಿಗಬಹುದಾಗಿದ್ದ ಹಾರ್ಟ್ ಆಪರೇಷನ್, ಎಂಆರ್‌ಐ, ಸಿಟಿ ಸ್ಕ್ಯಾನಿಂಗ್ ಮತ್ತಿತರ ವೈದ್ಯಕೀಯ ಉಪಕರಣವನ್ನು ತಿಂದು ಹಾಕಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ನಾವು ಹದಿನೈದು ದಿವಸದ ಹಿಂದೆಯೇ ಉಪವಾಸ ಘೋಷಣೆ ಮಾಡಿದ್ದರೂ, ನಮಗೆ ಒಂದು ಮಾತನ್ನೂ ತಿಳಿಸದೇ ಬಹುದಿನಗಳವರೆಗೆ ವಿದೇಶ ಪ್ರಯಾಣ ಬೆಳೆಸಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ. ಕನಿಷ್ಠ ಸೌಜನ್ಯಕ್ಕಾದರೂ ತಿಳಿಸಬಹುದಿತ್ತು ಅಥವಾ ಸಂದೇಶವನ್ನಾದರೂ ನೀಡಬಹುದಿತ್ತು. ಇದಾವುದೂ ಮಾಡದೇ, ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿದ್ದು ಪ್ರಜಾಪ್ರಭುತ್ತ ಮತ್ತು ಕ್ಷೇತ್ರದ ಬಡಜನತೆಗೆ ಮಾಡಿರುವ ದ್ರೋಹವಾಗಿದೆ. ನಮ್ಮ ಉಪವಾಸದ ಹೋರಾಟಕ್ಕೆ ಸಾವಿರಾರು ಜನ ಬೆಂಬಲ ನೀಡಿ, ನೂರಾರು ಜನ ನಮ್ಮ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಜನ ಎಲ್ಲದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.
ಈ ರೀತಿ ದುರಾವರ್ತನೆ ಯಾವ ಶಾಸಕ, ಜನಪ್ರತಿನಿಧಿಗಳಿಗೂ ಶೋಭೆಯಲ್ಲ. ಕಳೆದ ಅಗಸ್ಟ್‌ನಲ್ಲೇ ಶಿರಸಿ ಬಸ್‌ಸ್ಟಾಂಡ್ ಉದ್ಘಾಟನೆ ನಡೆಸಲಾಗುತ್ತದೆ ಎಂದಿದ್ದಿರಿ. ಇದರಿಂದಾಗುತ್ತಿರುವ ಜನರಿಗೆ ಸಮಸ್ಯೆಗಳ ಅರಿವಿದೆಯೇ ಎಂದು ಶಾಸಕರನ್ನು ಪ್ರಶ್ನಿಸಿದರು.
ಬಡವರ ಇಂದಿರಾ ಕ್ಯಾಂಟೀನ್, ಕುಡುಕರ ಅಡ್ಡೆಯಾಗಿದೆ. ಅದರ ಬಗ್ಗೆಯಂತೂ ಕಿಂಚಿತ್ತೂ ಕಾಳಜಿಯಿಲ್ಲ. ಹಿಂದಿನ ಸರಕಾರ ತಂದ ಯೋಜನೆಗಳನ್ನು ಉದ್ಘಾಟನೆ ಮಾಡುತ್ತಾ, ತಾನೇ ತಂದಿದ್ದು ಎಂದು ಹೇಳುವುದರ ಹೊರತಾಗಿ, ಯಾವುದೇ ಅಭಿವೃದ್ಧಿಯ ಕೆಲಸಗಳಾಗುತ್ತಿಲ್ಲ ಎಂಬುದು ಕಣ್ಣಿಗೆ ಕಾಣುವ ಸತ್ಯವಾಗಿದೆ. ಈಗಲಾದರೂ ಮುಖ್ಯಮಂತ್ರಿ ಮತ್ತು ಆರೋಗ್ಯ ಮಂತ್ರಿ ಬಳಿಗೆ ಹೋಗಿ ದಾಖಲೆಗಳನ್ನು ನೀಡಿ, ಹಿಂದಿನ ಸರಕಾರದಲ್ಲಿ ಯಾವ ರೀತಿಯಲ್ಲಿ ಆಸ್ಪತ್ರೆ ಮಾಡಬೇಕಾಗಿತ್ತೋ ಅದೇರೀತಿ ಮಾಡುವ, ಎಲ್ಲಸಾಮಗ್ರಿ ತರುವ ಖಾತ್ರಿ ಪಡಿಸಿ. ಆ ಮೂಲಕ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು.
ನಿಮ್ಮ ಮೇಲಿನ ಗೌರವ ಮತ್ತು ವಿಶ್ವಾಸದ ಕಾರಣಕ್ಕೆ ಫೆ.15 ರ ವರೆಗೆ ನಾವೆಲ್ಲರೂ ಕಾಯುತ್ತೇವೆ. ಆಗಲೂ ಸಹ ತಾವು ಇದೇ ಈ ರೀತಿಯ ಮೌನ ವಹಿಸಿದರೆ, ನಾವು ಜನರ ಬಳಿಗೆ ಹೋಗಿ, ಶಾಸಕರ ನಡೆಯನ್ನು, ಅವರ ಮೌನ ಅಭಿವೃದ್ಧಿ ವಿಚಾರವನ್ನು ತಿಳಿಸುವುದು ಅನಿವಾರ್ಯವಾಗಿರುತ್ತದೆ. ಈ ವಿಚಾರವಾಗಿ ದೊಡ್ಡ ಮಟ್ಟದ ಯಾವುದೇ ಹೋರಾಟಕ್ಕೂ ನಾವು ಸಿದ್ಧರಿರುತ್ತೇವೆ ಮತ್ತು ಫೆ.15 ರ ನಂತರ ನಮ್ಮ ಮುಂದಿನ ಹೋರಾಟದ ಕುರಿತು ತೀರ್ಮಾನವನ್ನು ತಿಳಿಸುತ್ತೇವೆ. ಬೀದಿ ಬೀದಿಯಲ್ಲಿ ಆಸ್ಪತ್ರೆ ಉಳಿಸಿ ಅಭಿಯಾನ ಪ್ರಾರಂಭಿಸುವುದು ಅನಿವಾರ್ಯವಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | Ranjith H Ashwath Column: ಬಿಜೆಪಿಗರ ದಿಲ್ಲಿ ದಂಡಯಾತ್ರೆಯ ಫಲವೇನು ?
ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಶಾಸಕರು ಆಸ್ಪತ್ರೆ ಬಗ್ಗೆ ಕಳಕಳಿಯಿದ್ದರೆ ಸಾರ್ವಜನಿಕ ಸಭೆ ಕರೆಯಲಿ. ಈ ವಿಚಾರದಲ್ಲಿ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ, ಬಡವರ ಆಸ್ಪತ್ರೆ ಹೋರಾಟಕ್ಕೆ ನಾವು ಯಾವ ಮಟ್ಟಕ್ಕೆ ಇಳಿಯಲೂ ಸಿದ್ಧರಿದ್ದೇವೆ ಎಂದರು.