ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala: ನ್ಯಾಯಾಂಗ ನಿಯಮ ಉಲ್ಲಂಘನೆ ಮಾಡುತ್ತಿರುವುದೇಕೇ? ಯುಟ್ಯೂಬ್‌ ವಾಹಿನಿಗೆ ಕರ್ನಾಟಕ ಹೈಕೋರ್ಟ್‌ ತರಾಟೆ

ಧರ್ಮಸ್ಥಳದಲ್ಲಿನ ಅಸಹಜ ಸಾವುಗಳ ಕುರಿತಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದನ್ನು ಪ್ರಶ್ನಿಸಿ 'ಕುಡ್ಲ ರ‍್ಯಾಂಪೇಜ್' ಯುಟ್ಯೂಬ್‌ ಚಾನೆಲ್‌ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಡೆಸಿದೆ. ಚಾನೆಲ್ ವಿರುದ್ಧ ಅಸಮಾಧಾನ ಹೊರಹಾಕಿರುವ ನ್ಯಾಯಾಲಯವು ಹೊರಡಿಸಿದ ನಿರ್ಬಂಧಕಾಜ್ಞೆಯ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವುದರ ಕುರಿತು ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಾಂಗ ಆದೇಶ ಮೀರಿದ ಯುಟ್ಯೂಬರ್‌ಗೆ ಕೋರ್ಟ್ ಎಚ್ಚರಿಕೆ

ಹೈಕೋರ್ಟ್

Profile Sushmitha Jain Jul 30, 2025 6:35 PM

ಬೆಂಗಳೂರು: ಧರ್ಮಸ್ಥಳ (Dharmasthala)ದಲ್ಲಿನ ಅಸಹಜ ಸಾವುಗಳ ಕುರಿತಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದನ್ನು ಪ್ರಶ್ನಿಸಿ 'ಕುಡ್ಲ ರ‍್ಯಾಂಪೇಜ್' ಯುಟ್ಯೂಬ್‌ ಚಾನೆಲ್‌ (YouTube Channel) ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನ ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದ್ದು, ನ್ಯಾಯಾಲಯವು ಹೊರಡಿಸಿದ ನಿರ್ಬಂಧಕಾಜ್ಞೆಯ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುವುದರ ಕುರಿತು ಅರ್ಜಿದಾರರನ್ನು ತರಾಟೆ ತೆಗೆದುಕೊಂಡಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪಕ್ಕೆ ಸಂಬಂಧಿಸಿದಂತೆ ಯುಟ್ಯೂಬ್ ಚಾನೆಲ್‌ಗೆ ವಿಚಾರಣಾ ನ್ಯಾಯಾಲಯದಿಂದ ವಿಧಿಸಲಾದ ಪ್ರತಿಬಂಧಕ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ (Writ Petition) ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸಿದ್ದು, “ನ್ಯಾಯಾಲಯದ ಆದೇಶಗಳನ್ನು ಪದೇ ಪದೆ ಉಲ್ಲಂಘಿಸಿ, ಹೊಸ ಚಾನೆಲ್‌ಗಳನ್ನು ಆರಂಭಿಸುತ್ತಿರುವುದೇಕೆ?” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅರ್ಜಿದಾರ ಯುಟ್ಯೂಬರ್‌ನನ್ನು ಪ್ರಶ್ನಿಸಿದೆ.

ಮಂಗಳೂರಿನ ಕೋಡಿಬೈಲ್‌ನ ‘ಕುಡ್ಲ ರ‍್ಯಾಂಪೇಜ್’ ಯುಟ್ಯೂಬ್ ಚಾನಲ್‌ನ ಮುಖ್ಯ ಸಂಪಾದಕ ಅಜಯ್ ಬಿನ್ ರಾಮಕೃಷ್ಣ ಪೂಜಾರಿ (32) ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು, “ಆದೇಶ ಉಲ್ಲಂಘಿಸಿದವರ ಅರ್ಜಿಯನ್ನು ಪರಿಗಣಿಸಬೇಕೆಂದು ನೀವು ಹೇಗೆ ನಿರೀಕ್ಷಿಸುತ್ತೀರಿ?” ಎಂದು ಪ್ರಶ್ನಿಸಿ, ನ್ಯಾಯಾಂಗ ವ್ಯವಸ್ಥೆಗೆ ಅಗೌರವ ಮಾಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದೆ.

ಈ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ವಿರುದ್ಧ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೂ ಕುಡ್ಲ ರ‍್ಯಾಂಪೇಜ್ ಪರ ಸುಪ್ರೀಂ ಕೋರ್ಟ್ ವಕೀಲ ಎ.ವೇಲನ್, “ಹರ್ಷೇಂದ್ರ ಕುಮಾರ್ ಅನೇಕ ಪ್ರತಿಬಂಧಕ ಆದೇಶಗಳನ್ನು ಪಡೆದಿದ್ದಾರೆ. ವಿಚಾರಣಾ ನ್ಯಾಯಾಲಯವು ಮಾನಹಾನಿಯ ಅಂಶಗಳನ್ನು ಪರಿಶೀಲಿಸದೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದೆ. ಇದರಿಂದ ತನಿಖಾ ಪತ್ರಿಕೋದ್ಯಮಕ್ಕೆ ಧಕ್ಕೆಯಾಗುತ್ತದೆ. ರಾಜ್ಯ ಸರ್ಕಾರವು ಮಾಧ್ಯಮ ವರದಿಗಳ ಆಧಾರದಲ್ಲಿ ಎಸ್‌ಐಟಿ ರಚಿಸಿದೆ” ಎಂದು ವಾದಿಸಿದರು.

ಈ ಸುದ್ದಿಯನ್ನು ಓದಿ: Dharmasthala: ಧರ್ಮಸ್ಥಳ ಕೇಸ್‌; ಮೂರನೇ ಪಾಯಿಂಟ್‌ನಲ್ಲೂ ಕಳೇಬರ ಸಿಗಲೇ ಇಲ್ಲ!

ಇದಕ್ಕೆ ಪ್ರತಿವಾದಿಯಾದ ಹರ್ಷೇಂದ್ರ ಕುಮಾರ್ ಪರ ಹಿರಿಯ ವಕೀಲ ಉದಯ್ ಹೊಳ್ಳ, “ಸುಪ್ರೀಂ ಕೋರ್ಟ್ ತೀರ್ಪುಗಳ ಆಧಾರದಲ್ಲೇ ವಿಚಾರಣಾ ನ್ಯಾಯಾಲಯವು ಏಕಪಕ್ಷೀಯ ಆದೇಶ ನೀಡಿದೆ. ಸಂವಿಧಾನದ 21ನೇ ವಿಧಿಯಡಿ ವ್ಯಕ್ತಿಯ ಘನತೆಯ ಹಕ್ಕು ಮುಖ್ಯವಾಗಿದೆ. ಮಾನಹಾನಿಯು ಸಾವಿಗಿಂತ ಕನಿಷ್ಠವೆಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ” ಎಂದು ತಿಳಿಸಿದರು.

ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ, “ಆಗಸ್ಟ್ 1ಕ್ಕೆ ಆದೇಶ ಪ್ರಕಟಿಸಲು ಪ್ರಯತ್ನಿಸಲಾಗುವುದು” ಎಂದು ಮೌಖಿಕವಾಗಿ ತಿಳಿಸಿದರು. ಈ ಪ್ರಕರಣವು ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿರುವ ಆರೋಪದ ತನಿಖೆಯ ಜತೆಗೆ ಮಾಧ್ಯಮ ಸ್ವಾತಂತ್ರ್ಯ ಮತ್ತು ಮಾನಹಾನಿಯ ಕಾನೂನು ವಿಷಯಗಳ ಬಗ್ಗೆ ಗಂಭೀರ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ. ಎಸ್‌ಐಟಿ ತನಿಖೆಯ ಫಲಿತಾಂಶ ಮತ್ತು ನ್ಯಾಯಾಲಯದ ತೀರ್ಪು ಈ ವಿವಾದಕ್ಕೆ ಮುಕ್ತಿ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.