ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vande Bharat: ತೊಗರಿನಾಡಿಗೆ ಜೀವನಾಡಿಯಾದ ವಂದೇ ಭಾರತ್

ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರವಾದ ಕಲಬುರಗಿ ಮತ್ತು ರಾಜ್ಯದ ರಾಜಧಾನಿ ಬೆಂಗಳೂರು ನಡುವಿನ ಕೊಂಡಿಯಾಗಿರುವ ‘ಕಲಬುರಗಿ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ತನ್ನ ಯಶಸ್ವಿ ಸೇವೆಯ ಎರಡು ವರ್ಷಗಳನ್ನು ಪೂರೈಸಿದೆ. ಅತ್ಯಾಧುನಿಕ ತಂತ್ರಜ್ಞಾನ, ವಿಮಾನದಂತಹ ಸೌಲಭ್ಯ ಮತ್ತು ಕರಾರುವಕ್ಕಾದ ಸಮಯ ಪಾಲನೆಯಿಂದಾಗಿ ಈ ರೈಲು ಕಲ್ಯಾಣ ಕರ್ನಾಟಕ ಭಾಗದ ಜನರ ನೆಚ್ಚಿನ ಸಾರಿಗೆಯಾಗಿ ಹೊರಹೊಮ್ಮಿದೆ.

ತೊಗರಿನಾಡಿಗೆ ಜೀವನಾಡಿಯಾದ ವಂದೇ ಭಾರತ್

-

Ashok Nayak
Ashok Nayak Mar 13, 2026 7:08 AM

ದೇವೇಂದ್ರ ಜಾಡಿ ಕಲಬುರಗಿ

ಹೈಸ್ಪೀಡ್ ರೈಲಿಗೆ ಎರಡು ವರ್ಷ, 5.7 ಲಕ್ಷ ಪ್ರಯಾಣಿಕರ ಪಯಣ, ಕಲಬುರಗಿ ಜನತೆ ಸಂತಸ

ಕಲ್ಯಾಣ ಕರ್ನಾಟಕದ ಶಕ್ತಿ ಕೇಂದ್ರವಾದ ಕಲಬುರಗಿ ಮತ್ತು ರಾಜ್ಯದ ರಾಜಧಾನಿ ಬೆಂಗಳೂರು ನಡುವಿನ ಕೊಂಡಿಯಾಗಿರುವ ‘ಕಲಬುರಗಿ- ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲು ತನ್ನ ಯಶಸ್ವಿ ಸೇವೆಯ ಎರಡು ವರ್ಷಗಳನ್ನು ಪೂರೈಸಿದೆ. ಅತ್ಯಾಧುನಿಕ ತಂತ್ರಜ್ಞಾನ, ವಿಮಾನದಂತಹ ಸೌಲಭ್ಯ ಮತ್ತು ಕರಾರುವಕ್ಕಾದ ಸಮಯ ಪಾಲನೆ ಯಿಂದಾಗಿ ಈ ರೈಲು ಕಲ್ಯಾಣ ಕರ್ನಾಟಕ ಭಾಗದ ಜನರ ನೆಚ್ಚಿನ ಸಾರಿಗೆಯಾಗಿ ಹೊರ ಹೊಮ್ಮಿದೆ.

ಪ್ರಧಾನಿ ನರೇಂದ್ರ ಮೋದಿ 2024ರ ಮಾರ್ಚ್‌ 12ರಂದು ಈ ರೈಲಿಗೆ ಚಾಲನೆ ನೀಡಿದ್ದರು. ದೇಶದ 42ನೇ ವಂದೇ ಭಾರತ್ ರೈಲು ಎಂಬ ಹೆಗ್ಗಳಿಕೆಯೊಂದಿಗೆ ಆರಂಭವಾದ ಈ ಸೇವೆ, ಇಂದು ಎರಡು ವರ್ಷಗಳ ಸಂಭ್ರಮದಲ್ಲಿದೆ. ಕೇವಲ ಎರಡು ವರ್ಷಗಳ ಅವಧಿಯಲ್ಲಿ ಈ ರೈಲು ಸಾಧಿಸಿರುವ ಅಂಕಿ-ಅಂಶಗಳು ಸಾರಿಗೆ ಲೋಕ ದಲ್ಲಿ ಹೊಸ ದಾಖಲೆ ಬರೆದಿವೆ. ಫೆಬ್ರವರಿ 28, 2026ರ ವರೆಗಿನ ಮಾಹಿತಿ ಪ್ರಕಾರ, ಒಟ್ಟು 5,72,566 ಪ್ರಯಾಣಿಕರು ಈ ರೈಲಿನಲ್ಲಿ ಸಂಚರಿಸಿದ್ದಾರೆ.

ಖಜಾನೆ ತುಂಬಿಸಿದ ‘ಬಿಳಿ ಕುದುರೆ’: ಈ ರೈಲು ಕೇವಲ ಪ್ರಯಾಣಿಕರ ಪ್ರೀತಿಯನ್ನು ಮಾತ್ರವಲ್ಲದೆ, ರೈಲ್ವೆ ಇಲಾಖೆಗೆ ಭರ್ಜರಿ ಆದಾಯವನ್ನೂ ತಂದುಕೊಟ್ಟಿದೆ. ಕಳೆದ ಎರಡು ವರ್ಷಗಳಲ್ಲಿ ಈ ಮಾರ್ಗದಿಂದ ಒಟ್ಟು 67.89 ಕೋಟಿ ರು. ಆದಾಯ ಸಂಗ್ರಹವಾಗಿದೆ. 2026ರ ಸಾಲಿನಲ್ಲಿ ಈ ರೈಲಿನ ಆಸನ ಭರ್ತಿ ಪ್ರಮಾಣ ಶೇ.103.52ರಷ್ಟಿದೆ. ಅಂದರೆ, ಲಭ್ಯ ವಿರುವ ಆಸನಗಳಿಗಿಂತ ಹೆಚ್ಚಿನ ಬೇಡಿಕೆ ಪ್ರತಿ ನಿತ್ಯ ಕಂಡುಬರುತ್ತಿದೆ. ಇದು ಈ ರೈಲಿಗಿರುವ ಬೇಡಿಕೆ ಮತ್ತು ಅನಿವಾರ್ಯತೆಯನ್ನು ಸಾರುತ್ತದೆ.

ಇದನ್ನೂ ಓದಿ: Vande Bharat Express: ರಾಜ್ಯದ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಪರಿಷ್ಕರಣೆ; ಮಾ.15ರಿಂದ ಜಾರಿ

ಸಮಯದ ಉಳಿತಾಯ: ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ತಲುಪಲು ಎಕ್ಸ್ ಪ್ರೆಸ್ ರೈಲುಗಳಲ್ಲಿ 9 ರಿಂದ 10 ಗಂಟೆ ಬೇಕಾಗುತ್ತಿತ್ತು. ವಂದೇ ಭಾರತ್ ರೈಲು ಈ ದೂರವನ್ನು ಕೇವಲ 8 ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತಿದೆ. ಬೆಳಗ್ಗೆ ಕಲಬುರಗಿಯಿಂದ ಹೊರಟು ಸಂಜೆ ವೇಳೆಗೆ ಬೆಂಗಳೂರು ತಲುಪಿ, ಅಲ್ಲಿನ ಕೆಲಸ ಮುಗಿಸಿ ವಾಪಸ್ ಬರಲು ಇದು ಸಹಕಾರಿಯಾಗಿದೆ. ಜಿಪಿಎಸ್ ಆಧಾರಿತ ಮಾಹಿತಿ ಸಿಸಿಟಿವಿ ಕ್ಯಾಮೆರಾ ಮತ್ತು ಸ್ವಾದಿಷ್ಟ ಆಹಾರ ಪ್ರಯಾಣಿಕರನ್ನು ಸೆಳೆಯುತ್ತಿದೆ.

Screenshot_4 R

ಕಲ್ಯಾಣ ಕರ್ನಾಟಕಕ್ಕೆ ಹೊಸ ಭರವಸೆ: ಈ ರೈಲು ಮಂತ್ರಾಲಯಕ್ಕೆ ಹೋಗುವ ಭಕ್ತರಿಗೆ, ಬೆಂಗಳೂರಿಗೆ ಬರುವ ಐಟಿ ಉದ್ಯೋಗಿಗಳಿಗೆ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಈ ರೈಲಿಗೆ ಹೆಚ್ಚುವರಿ ಬೋಗಿಗಳ ಸೇರ್ಪಡೆಗೂ ಸಾರ್ವಜನಿಕ ವಲಯದಿಂದ ಬೇಡಿಕೆ ಕೇಳಿ ಬಂದಿದೆ.

ಬೇಕಿದೆ ವಂದೇ ಭಾರತ್ ಸ್ಲೀಪರ್ ಕೋಚ್

ಕಲಬುರಗಿ-ಬೆಂಗಳೂರು ನಡುವಿನ ವಂದೇ ಭಾರತ್ ಯಶಸ್ಸಿನ ಬೆನ್ನಲ್ಲೇ, ಈಗ ’ಸ್ಲೀಪರ್ ಕೋಚ್’ ಆರಂಭಿಸಲು ಒತ್ತಾಯ ಕೇಳಿ ಬರುತ್ತಿದೆ. ಪ್ರಸ್ತುತ ಇರುವ ಚೇರ್ ಕಾರ್ ಹಗಲು ಪ್ರಯಾಣಕ್ಕೆ ಸೀಮಿತವಾಗಿದ್ದು, ರಾತ್ರಿ ಸಂಚಾರಕ್ಕೆ ಸ್ಲೀಪರ್ ಆವೃತ್ತಿ ಅತ್ಯಗತ್ಯವಾಗಿದೆ. ಇದು ಜಾರಿಯಾದರೆ ಕಲಬುರಗಿಯಿಂದ ಬೆಂಗಳೂರಿಗೆ ಕೇವಲ 7-8 ಗಂಟೆಗಳಲ್ಲಿ ಅತ್ಯಂತ ಆರಾಮದಾಯಕವಾಗಿ ತಲುಪಬಹುದು. ವಿಮಾನದಂತಹ ಸೌಲಭ್ಯವಿರುವ ಈ ಸ್ಲೀಪರ್ ರೈಲು ಈ ಭಾಗದ ಉದ್ಯೋಗಿಗಳು ಮತ್ತು ರೋಗಿಗಳಿಗೆ ವರದಾನವಾಗಲಿದೆ.

image

ಕಲಬುರಗಿ ವಂದೇ ಭಾರತ್ ಎಕ್ಸ್ ಪ್ರೆಸ್ ಎರಡು ವರ್ಷ ಯಶಸ್ವಿಯಾಗಿ ಪೂರೈಸಿರುವುದು ಹೆಮ್ಮೆಯ ವಿಷಯ. ಶೇ.103ರಷ್ಟು ಪ್ರಯಾಣಿಕರ ದಟ್ಟಣೆಯೊಂದಿಗೆ 5.72 ಲಕ್ಷ ಜನರಿಗೆ ಈ ರೈಲು ವೇಗದ ಸೇವೆ ನೀಡಿದೆ. ಪ್ರಧಾನಿ ಮೋದಿಯವರ ಸಂಪರ್ಕ ಕ್ರಾಂತಿಯ ಕನಸು ಈ ಮೂಲಕ ಸಾಕಾರಗೊಂಡಿದ್ದು, ಪ್ರಯಾಣಿಕರು ಈ ಸೇವೆಯನ್ನು ಇನ್ನಷ್ಟು ಸದುಪಯೋಗ ಪಡಿಸಿಕೊಳ್ಳಬೇಕು.

-ಡಾ. ಉಮೇಶ್ ಜಾಧವ್, ಮಾಜಿ ಲೋಕಸಭಾ ಸದಸ್ಯ
image

ಕಲಬುರಗಿ- ಬೆಂಗಳೂರು ವಂದೇ ಭಾರತ್ ಎಕ್ಸ್ʼಪ್ರೆಸ್‌ನ ಅಭೂತಪೂರ್ವ ಯಶಸ್ಸಿಗೆ ಪ್ರಯಾಣಿಕರ ಅದ್ಭುತ ಸ್ಪಂದನೆಯೇ ಕಾರಣ. ಈ ಮೊದಲು 10-12 ಗಂಟೆ ಹಿಡಿಯುತ್ತಿದ್ದ ಪ್ರಯಾಣದ ಅವಧಿಯನ್ನು ಈ ರೈಲು ಕೇವಲ 8 ಗಂಟೆಗೆ ಇಳಿಸಿದೆ. ಪ್ರಸ್ತುತ ಎರಡೂ ದಿಕ್ಕು ಗಳಲ್ಲಿ ಶೇ.103ಕ್ಕೂ ಅಧಿಕ ಆಸನ ಭರ್ತಿಯೊಂದಿಗೆ ಸಂಚರಿಸುತ್ತಿರುವುದು ಈ ರೈಲಿನ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದು ಪ್ರಯಾಣಿಕರಿಗೆ ಅತ್ಯಂತ ವೇಗದ ಮತ್ತು ವಿಶ್ವದರ್ಜೆ ಯ ಪ್ರಯಾಣದ ಅನುಭವ ನೀಡುತ್ತಿದೆ.

-ವಿಕ್ರಮ್ ಎಸ್. ಸಾರ್ವಜನಿಕ ಸಂಪರ್ಕ ಅಧಿಕಾರಿ, ಸೋಲಾಪುರ ವಿಭಾಗ.