Karnatak University: ಕರ್ನಾಟಕ ವಿವಿ ಪಠ್ಯದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ; ಭುಗಿಲೆದ್ದ ವಿವಾದ
Karnatak University: ಧಾವಾಡದ ಕರ್ನಾಟಕ ವಿವಿ ಪಠ್ಯದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಲಾಗಿದ್ದು, ವಿವಾದ ಭುಗಿಲೆದ್ದಿದೆ. ಈ ಸಂಬಂಧ ಧಾರವಾಡದ ಹಿರಿಯ ನ್ಯಾಯವಾದಿ ಅರುಣ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಧಾರವಾಡ: ಕರ್ನಾಟಕ ವಿವಿ (Karnatak University) ಪಠ್ಯದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಿದೆ ಎಂದು ಆರೋಪಿಸಲಾಗಿದ್ದು, ವಿವಾದ ಭುಗಿಲೆದ್ದಿದೆ. ವಿವಿಯ ಪ್ರಸಾರಂಗ ಮುದ್ರಿಸಿರುವ, ಪದವಿ ಕನ್ನಡ ಪಠ್ಯ ಪುಸ್ತಕದಲ್ಲಿ ಎಡವಟ್ಟು ಕಂಡು ಬಂದಿದೆ. ಬೆಳಗು -1 ಕೃತಿಯಲ್ಲಿ ಈ ಪ್ರಮಾದ ನಡೆದಿದ್ದು, ಧಾರವಾಡದ ಹಿರಿಯ ನ್ಯಾಯವಾದಿ ಅರುಣ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ʼʼಬಿಎ, ಬಿ ಮ್ಯೂಸಿಕ್, ಬಿಎಫ್ಎ, ಬಿಎಸ್‌ಡಬ್ಲ್ಯು, ಬಿವಿಎ ಪದವಿಗಳ ಪ್ರಥಮ ಸೆಮಿಸ್ಟರ್‌ನ ಕನ್ನಡ ಪಠ್ಯ ಪುಸ್ತಕದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟಾಗಿದೆʼʼ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರ ಚಿಂತನೆಯ ಮಹತ್ವ ಹೇಳುವ ರಾಷ್ಟ್ರೀಯ ಶಿಕ್ಷಣ ನೀತಿ (NEP) ಪ್ರಕಾರ ಈ ಪುಸ್ತಕ ಮುದ್ರಣಗೊಂಡಿದೆ. ಅನೇಕ ವಿಷಯ ತಜ್ಞರು ಪರಿಷ್ಕರಿಸಿರುವ ಈ ಮಹತ್ವದ ಪಠ್ಯ ಪುಸ್ತಕವೇ ಇದೀಗ ವಿವಾದದ ಕೇಂದ್ರಬಿಂದುವಾಗಿದೆ.
ಪುಸ್ತಕದಲ್ಲಿ ಏನಿದೆ?
ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ಜತೆಗೆ ಪಠ್ಯ ಪುಸ್ತಕ ಕೋಮು ದ್ವೇಷ ಹುಟ್ಟಿಸುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಪುಸ್ತಕದ 4ನೇ ಅಧ್ಯಾಯದ 'ರಾಷ್ಟ್ರೀಯತೆಯ ಆಚರಣೆಯ ಸುತ್ತ' ಎಂಬ ಲೇಖನದಲ್ಲಿ ಎಡವಟ್ಟು ಕಂಡುಬಂದಿದೆ. 'ಭಾರತಾಂಬೆಯ ಕಲ್ಪನೆ' ಎಂಬ ಉಪ ಶೀರ್ಷಿಕೆಯಡಿ, ʼʼಭಾರತ ಮಾತೆಯ ಚಿತ್ರವು ಹಿಂದೂ ಮಾತೆಯ ಚಿತ್ರವಾಗಿದೆ. ಇದು ಒಂದು ವರ್ಗ ಸಮುದಾಯದ ಕಲ್ಪನೆ ಆಗಿದೆ. ಇದನ್ನು ಇತರರು ಒಪ್ಪುವಂತೆ ಒತ್ತಾಯಿಸಲಾಗುತ್ತಿದೆʼʼ ಎಂದು ಮುದ್ರಿಸಲಾಗಿದೆ.
ಮಾತ್ರವಲ್ಲ ʼʼಪ್ರತಿ ಸಭೆ, ಸಮಾರಂಭಗಳಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗಿದಾಗ ಉಳಿದವರೂ ಜೈ ಎನ್ನುತ್ತಾರೆ. ಈ ಜೈ ಎನ್ನುವ ಕಲ್ಪನೆ ಇನ್ನೊಬ್ಬರ ಸೋಲನ್ನು ನೆನಪಿಸುತ್ತದೆʼʼ ಎಂದು ಬರೆಯಲಾಗಿದೆ. ಎಡವಟ್ಟು ಸರಣಿ ಇಲ್ಲಿಗೇ ನಿಂತಿಲ್ಲ. ʼʼಭುವನೇಶ್ವರಿ ಕೂಡ ಕೋಮುವಾದಿ ಮಾತೆ ಎನ್ನಲಾಗಿದೆ. ಮುಸ್ಲಿಮರಿಗೆ ಮೆಕ್ಕಾ ಇರುವಂತೆ ಹಿಂದೂಗಳಿಗೂ ಒಂದು ಪವಿತ್ರ ಕ್ಷೇತ್ರ ಆಯೋಧ್ಯಾ ಇರಲಿ ಅಂತ ಕೆಲ ಪರಿವಾರದವರು ಒತ್ತಾಯಿಸುತ್ತಾ ಬಂದಿದ್ದಾರೆʼʼ ಎಂದೂ ಮುದ್ರಿಸಲಾಗಿದೆ.
ಇದರೊಂದಿಗೆ ಅಲ್ಲಲ್ಲಿ 'ಪರಿವಾರ' ಮತ್ತು 'ಸಂಘ ಪರಿವಾರ' ಎಂಬ ಶಬ್ದ ಬಳಕೆ ಮಾಡಲಾಗಿದೆ. ಆ ಮೂಲಕ ಪರೋಕ್ಷವಾಗಿ ಆರ್.ಎಸ್.ಎಸ್. ಅನ್ನು ಪಠ್ಯದಲ್ಲಿ ಎಳೆದು ತರಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜತೆಗೆ ಪುಸ್ತಕದಲ್ಲಿ ಎಡಪಂಥಿಯ ಸಿದ್ಧಾಂತವನ್ನು ಸೇರಿಸಲಾಗಿದೆ ಎಂದೂ ಅರುಣ ಜೋಶಿ ದೂರಿದ್ದಾರೆ.
ಈ ಸುದ್ದಿಯನ್ನೂ ಓದಿ: Tumul Election 2025: ಕಾಂಗ್ರೆಸ್ ತೆಕ್ಕೆಗೆ ತುಮಕೂರು ಹಾಲು ಒಕ್ಕೂಟ; ಅಧ್ಯಕ್ಷರಾಗಿ ಪಾವಗಡ ಶಾಸಕ ವೆಂಕಟೇಶ್ ಆಯ್ಕೆ
ಕೋರ್ಟ್ ಮೆಟ್ಟಿಲೇರಲು ಅರುಣ ಜೋಶಿ ನಿರ್ಧಾರ
ಈ ಪಠ್ಯ ಪುಸ್ತಕದ ವಿರುದ್ಧ ಧ್ವನಿ ಎತ್ತಿರುವ ಅರುಣ ಜೋಶಿ ಅವರು ಇದೀಗ ಕೋರ್ಟ್ ಮೆಟ್ಟಿಲೇರಲು ಸಿದ್ಧರಾಗಿದ್ದಾರೆ. ಈ ಸಂಬಂಧ ವಿವಿ ಕುಲಪತಿಗೆ ಎಚ್ಚರಿಕೆಯ ಪತ್ರ ನೀಡಿ, ಪಠ್ಯ ವಾಪಸ್ ಪಡೆಯಲು ಆಗ್ರಹಿಸಿದ್ದಾರೆ. ಇಲ್ಲದೇ ಹೋದಲ್ಲಿ ಕೋರ್ಟ್‌ನಲ್ಲಿ ದಾವೆ ಹೂಡುವ ಎಚ್ಚರಿಕೆ ನೀಡಿದ್ದಾರೆ.