Tumul Election 2025: ಕಾಂಗ್ರೆಸ್ ತೆಕ್ಕೆಗೆ ತುಮಕೂರು ಹಾಲು ಒಕ್ಕೂಟ; ಅಧ್ಯಕ್ಷರಾಗಿ ಪಾವಗಡ ಶಾಸಕ ವೆಂಕಟೇಶ್ ಆಯ್ಕೆ
Tumul Election 2025: ಪತ್ನಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಸಚಿವ ರಾಜಣ್ಣ ಅವರು ಪಾವಗಡ ಶಾಸಕ ವೆಂಕಟೇಶ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಿ ಮೇಲುಗೈ ಸಾಧಿಸಿದ್ದಾರೆ.
ತುಮಕೂರು: ತುಮಕೂರು ಹಾಲು ಒಕ್ಕೂಟದ (ತುಮುಲ್) ಅಧ್ಯಕ್ಷರಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಪಾವಗಡ ಶಾಸಕ ವೆಂಕಟೇಶ್ ಆಯ್ಕೆಯಾಗಿದ್ದು, ಕಾಂಗ್ರೆಸ್ ಭದ್ರಕೋಟೆ ಉಳಿಸಿಕೊಂಡಿದೆ. ಸರಕಾರದಿಂದ ನಿರ್ದೇಶಕರಾಗಿ ನಾಮ ನಿರ್ದೇಶನಗೊಂಡು, ಅಧ್ಯಕ್ಷ ಸ್ಥಾನದ ಗಿಟ್ಟಿಸಿಕೊಳ್ಳುವಲ್ಲಿ ಶಾಸಕ ಎಚ್.ವಿ.ವೆಂಕಟೇಶ್ ಯಶಸ್ವಿಯಾಗಿದ್ದಾರೆ. ಆದರೆ, ಅಧ್ಯಕ್ಷ ಪಟ್ಟದ ಮೇಲೆ ಕಣ್ಣಿಟ್ಟಿದ್ದ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪತ್ನಿ ಭಾರತಿದೇವಿಗೆ ನಿರಾಸೆಯಾಗಿದೆ.
ಪತ್ನಿಗೆ ಅಧ್ಯಕ್ಷ ಸ್ಥಾನ ಕೊಡಿಸಲು ಶಾಸಕ ಶ್ರೀನಿವಾಸ್ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಸಚಿವ ರಾಜಣ್ಣ ಅವರು ವೆಂಕಟೇಶ್ ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಿ ಮೇಲುಗೈ ಸಾಧಿಸಿದ್ದಾರೆ. ತುಮುಲ್ ವಿಚಾರದಲ್ಲಿ ಉಸ್ತುವಾರಿ ಸಚಿವ ಪರಮೇಶ್ವರ್ ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಚುನಾಯಿತ ನಿರ್ದೇಶಕರ ಬದಲು ನಾಮ ನಿರ್ದೇಶಿತ ನಿರ್ದೇಶಕರಿಗೆ ಅಧ್ಯಕ್ಷ ಪಟ್ಟ ಒಲಿದಿರುವುದಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಉಂಟಾಗಿದೆ.
ತುಮುಲ್ ಅಧ್ಯಕ್ಷ ವೆಂಕಟೇಶ್ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಶಾಸಕ ವೆಂಕಟೇಶ್‌ಗೆ ಅದೃಷ್ಟ ಖುಲಾಯಿಸಿದ್ದು, ಭಾರತಿದೇವಿಗೆ ಅಧ್ಯಕ್ಷ ಸ್ಥಾನ ಒಲಿದಿಲ್ಲವಾದರೂ ಕಾಂಗ್ರೆಸ್ ಪಾಳಯಕ್ಕೆ ತುಮಕೂರು ಹಾಲು ಒಕ್ಕೂಟ ಪಟ್ಟ ಲಭಿಸಿದೆ.
ಒಟ್ಟು 15 ಮತಗಳು
ತಾಲೂಕುವಾರು 10 ನಿರ್ದೇಶಕರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಸರಕಾರ ನಾಮನಿರ್ದೇಶನ (1 ಮಂದಿ), ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡ್ (1ಮಂದಿ), ಕೆಎಂಎಫ್ ಪ್ರತಿನಿಧಿ (1 ಮಂದಿ), ಪಶು ವೈದ್ಯಕೀಯ ಇಲಾಖೆ ಪ್ರತಿನಿಧಿ (1ಮಂದಿ), ಸಹಕಾರ ಸಂಘಗಳ ಸಂಯುಕ್ತ ನಿಬಂಧಕ(1 ಮಂದಿ) ಮತ ಸೇರಿ ಒಟ್ಟು 15 ಮತಗಳು ಅಧ್ಯಕ್ಷ ಚುನಾವಣೆಯಲ್ಲಿ ಚಲಾವಣೆಯಾಗಿವೆ.
ಒಕ್ಕಲಿಗರ ಪ್ರಾಬಲ್ಯ
ತುಮುಲ್ 10 ನಿರ್ದೇಶಕರಲ್ಲಿ ಭಾರತಿದೇವಿ, ನಂಜೇಗೌಡ, ನಾಗೇಶ್ ಬಾಬು, ಚಂದ್ರಶೇಖರ ರೆಡ್ಡಿ, ಕೃಷ್ಣ ಕುಮಾರ್, ಎಸ್.ಆರ್.ಗೌಡ, ಸಿದ್ದಗಂಗಯ್ಯ, ಮಹಾಲಿಂಗಯ್ಯ ಸೇರಿ 8 ಮಂದಿ ಒಕ್ಕಲಿಗ ಸಮುದಾಯ ಹಾಗೂ ತಿಪಟೂರು, ಚಿ.ನಾ.ಹಳ್ಳಿ ಕ್ಷೇತ್ರದಿಂದ 2 ಮಂದಿ ಲಿಂಗಾಯತ ಸಮುದಾಯದ ನಿರ್ದೇಶಕರು ಆಯ್ಕೆಯಾಗಿದ್ದಾರೆ. ಈ ಬಾರಿ ಏಕೈಕ ಮಹಿಳಾ ನಿರ್ದೇಶಕಿ ಭಾರತಿದೇವಿ.
ಈ ಸುದ್ದಿಯನ್ನೂ ಓದಿ | DK Shivakumar: ಬೆಳಗಾವಿ ಸಮಾವೇಶದಲ್ಲಿ ಹೃದಯಾಘಾತದಿಂದ ಕೆಂಚಪ್ಪ ಸಾವು: 5 ಲಕ್ಷ ರೂ.ಪರಿಹಾರ ಘೋಷಿಸಿದ ಡಿಕೆಶಿ
9 ಮತ ಪಡೆದ ಶಾಸಕ ವೆಂಕಟೇಶ್
9 ಮತ ಪಡೆದು ಶಾಸಕ ವೆಂಕಟೇಶ್ ತುಮುಲ್ ಅಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿರಾ ಕ್ಷೇತ್ರದ ಎಸ್.ಆರ್.ಗೌಡ 6 ಮತ ಪಡೆದು ಸೋಲುಂಡರು.
ತುಮಕೂರು ಹಾಲು ಒಕ್ಕೂಟಕ್ಕೆ ಆಯ್ಕೆಯಾಗಿರುವ ಎಲ್ಲಾ ನಿರ್ದೇಶಕರನ್ನು ಒಟ್ಟುಗೂಡಿಸಿಕೊಂಡು ರೈತರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು. ಪಕ್ಷಾತೀತವಾಗಿ ತುಮಲ್ ಅಭಿವೃದ್ಧಿಗೆ ಶ್ರಮಿಸುತ್ತೇವೆ.
| ವೆಂಕಟೇಶ್, ತುಮುಲ್ ಅಧ್ಯಕ್ಷ
(ವರದಿ: ರಂಗನಾಥ ಕೆ.ಹೊನ್ನಮರಡಿ)