ಹಬ್ಬದ ಸೀಸನ್‌ನಲ್ಲಿ ಪ್ರಯಾಣಿಕರಿಗೆ ಶುಭ ಸುದ್ದಿ; ಹುಬ್ಬಳ್ಳಿ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆ ಮುಂದುವರಿಸಲು ರೈಲ್ವೆ ಇಲಾಖೆ ಅನುಮೋದನೆ
Hubli-Chikkamagaluru Express special train: ಹಬ್ಬದ ಅವಧಿಯಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ಹುಬ್ಬಳ್ಳಿ–ಚಿಕ್ಕಮಗಳೂರು–ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯನ್ನು ಮುಂದುವರಿಸಲು ರೈಲ್ವೆ ಇಲಾಖೆ ಅನುಮೋದನೆ ನೀಡಿದೆ. ಈ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ. -
ಹುಬ್ಬಳ್ಳಿ: ಹಬ್ಬದ ಸೀಸನ್‌ನಲ್ಲಿ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯಿಂದ ಶುಭ ಸುದ್ದಿ ಸಿಕ್ಕಿದೆ. ಹಬ್ಬದ ಅವಧಿಯಲ್ಲಿ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ಹುಬ್ಬಳ್ಳಿ–ಚಿಕ್ಕಮಗಳೂರು–ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು (ರೈಲು ಸಂಖ್ಯೆ 07341/07342) ಸೇವೆಯನ್ನು (Hubli-Chikkamagaluru Express special train) ಮುಂದುವರಿಸಲು ಭಾರತೀಯ ರೈಲ್ವೆಯು (Indian Railways) ಅನುಮೋದನೆ ನೀಡಿದೆ.
ಇದು ಎರಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ. ಈ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
Good news for the passengers travelling during the festive season.
— V. Somanna (@VSOMANNA_BJP) September 2, 2026
The Railway Board has approved the continuation of the Hubballi–Chikkamagaluru–Hubballi Express Special service (Train Nos. 07341/07342) to meet the additional passenger demand during the festive period.
This…
ಹುಬ್ಬಳ್ಳಿ–ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವಾ ಅವಧಿ ವಿಸ್ತರಣೆ
ಹುಬ್ಬಳ್ಳಿ: ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ಎಸ್ಎಸ್ಎಸ್ ಹುಬ್ಬಳ್ಳಿ–ರಾಮೇಶ್ವರಂ–ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದ್ದು, ಎರಡೂ ದಿಕ್ಕಿನಲ್ಲಿ ಒಟ್ಟು 9 ಹೆಚ್ಚುವರಿ ಟ್ರಿಪ್‌ಗಳು ಸಂಚರಿಸಲಿವೆ.
ರೈಲು ಸಂಖ್ಯೆ 07355 ಮತ್ತು 07356ಗಳಿಗೆ ನೀಡಲಾಗಿದ್ದ ವಿಶೇಷ ಸೇವಾ ಅವಧಿಯನ್ನು ವಿಸ್ತರಿಸಿರುವುದರಿಂದ ಹುಬ್ಬಳ್ಳಿ ಸೇರಿದಂತೆ ಮಾರ್ಗಮಧ್ಯೆ ಇರುವ ನಿಲ್ದಾಣಗಳ ಪ್ರಯಾಣಿಕರಿಗೆ ಮುಂದಿನ ಎರಡು ತಿಂಗಳಲ್ಲಿ ಹೆಚ್ಚುವರಿ ರೈಲು ಸಂಪರ್ಕ ದೊರೆಯಲಿದೆ.
07355ರ ಸೇವೆ ನವೆಂಬರ್ 29ರವರೆಗೆ: ರೈಲು ಸಂಖ್ಯೆ 07355 – SSS ಹುಬ್ಬಳ್ಳಿ–ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಈ ಹಿಂದೆ ಸೆಪ್ಟೆಂಬರ್ 27ರವರೆಗೆ ಮಾತ್ರ ಸಂಚರಿಸಲು ನಿಗದಿಯಾಗಿತ್ತು. ಇದೀಗ ಈ ಸೇವೆಯನ್ನು ಅಕ್ಟೋಬರ್ 4ರಿಂದ ನವೆಂಬರ್ 29ರವರೆಗೆ ವಿಸ್ತರಿಸಲಾಗಿದೆ. ಅಂದರೆ ವಿಶೇಷ ರೈಲು ಸೇವೆ ಇನ್ನೂ ಹಲವು ವಾರಗಳ ಕಾಲ ಮುಂದುವರಿಯಲಿದೆ.
ಅದೇ ರೀತಿ ರೈಲು ಸಂಖ್ಯೆ 07356 – ರಾಮೇಶ್ವರಂ–SSS ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಈ ಹಿಂದೆ ಸೆಪ್ಟೆಂಬರ್ 28ರವರೆಗೆ ನಿಗದಿಯಾಗಿತ್ತು. ಈ ಸೇವೆಯನ್ನು ಇದೀಗ ಅಕ್ಟೋಬರ್ 5ರಿಂದ ನವೆಂಬರ್ 30ವರೆಗೆ ವಿಸ್ತರಿಸಲಾಗಿದೆ.
ಹೆಚ್ಚುವರಿ ಟ್ರಿಪ್: ರೈಲ್ವೆ ಮಂಡಳಿಯ ಅನುಮೋದನೆ ಹಿನ್ನೆಲೆಯಲ್ಲಿ ಈ ಎರಡೂ ರೈಲುಗಳು ಹೆಚ್ಚುವರಿಯಾಗಿ ಒಟ್ಟು 9 ಟ್ರಿಪ್‌ಗಳನ್ನು ನಡೆಸಲಿವೆ. ಹಬ್ಬದ ಅವಧಿಯಲ್ಲಿ ರಾಮೇಶ್ವರಂ ಸೇರಿದಂತೆ ಪ್ರಮುಖ ಯಾತ್ರಾ ಹಾಗೂ ಪ್ರವಾಸಿ ತಾಣಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಸೇವೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇನ್ನು ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.