RSS Row: ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ: ಬಿಜೆಪಿ ನಾಯಕರಿಗೆ ಆರೆಸ್ಸೆಸ್ ಬೈಠಕ್
RSS: ಆರ್‌ಎಸ್ಎಸ್ ಬಗ್ಗೆ ಕಾಂಗ್ರೆಸ್ನವರು ಕೆಟ್ಟ ಅಭಿಪ್ರಾಯ ಸೃಷ್ಟಿಸುತ್ತಿದ್ದಾರೆ. ಸಂಘಕ್ಕೆ 100 ವರ್ಷದ ಇತಿಹಾಸ ಇದ್ದು ಇಂಥ ಎಷ್ಟೋ ಕಠಿಣ ಸಂದರ್ಭಗಳನ್ನು ಸಂಘ ಎದುರಿಸಿ ಮೆಟ್ಟಿ ನಿಂತಿದೆ. 3 ಸಲ ಸಂಘವನ್ನು ನಿಷೇಧ ಮಾಡುವ ಅವರ ಪ್ರಯತ್ನಗಳೇ ವಿಫಲವಾಗಿದೆ. ಈಗ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಂಘದ ವಿಚಾರ ಕೆದಕಿದ್ದಾರೆ. ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ. ಈಗಿನ ಸವಾಲಿನ ಪರಿಸ್ಥಿತಿಯನ್ನೂ ಸಂಘ ಯಶಸ್ವಿಯಾಗಿ ಎದುರಿಸುತ್ತದೆ ಎಂದು ತಿಳಿಸಿದ್ದಾರೆ. ಆರ್ಎಸ್ಎಸ್ ವಿರುದ್ಧದ ಷಡ್ಯಂತ್ರ ಎದುರಿಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಸೂಚನೆ ನೀಡಲಾಗಿದೆ.
-
ಹರೀಶ್ ಕೇರ
Nov 3, 2025 8:58 PM
ಬೆಂಗಳೂರು: ಆರೆಸ್ಸೆಸ್ (RSS) ಅನ್ನು ವಿರೋಧಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ (Congress) ಸಚಿವರ ಹೇಳಿಕೆಗಳಿಗೆ ಪ್ರತ್ಯುತ್ತರಿಸುವ ಭರದಲ್ಲಿ ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಬಿಜೆಪಿ ನಾಯಕರಿಗೆ ಸೂಚಿಸಿದೆ. ರಾಜ್ಯದಲ್ಲಿ ಆರೆಸ್ಸೆಸ್ ಪಥ ಸಂಚಲನದ ಹಿನ್ನೆಲೆಯಲ್ಲಿ ಎದ್ದಿರುವ ವಿವಾದ (RSS Row), ಪಥ ಸಂಚಲನಕ್ಕೆ ಅನುಮತಿ ನೀಡದಿರುವುದು ಹಾಗೂ ಕಾನೂನು ಸಮರದ ಹಿನ್ನೆಲೆಯಲ್ಲಿ ಇಂದು ಬಿಜೆಪಿ (BJP) ನಾಯಕರ ಜೊತೆ ಆರ್‌ಎಸ್‌ಎಸ್ ಮಹತ್ವದ ಬೈಠಕ್ ನಡೆಸಿತು.
ಆರ್‌ಎಸ್‌ಎಸ್ ಮುಖಂಡರಾದ ತಿಪ್ಪೇಸ್ವಾಮಿ, ರಘುನಂದನ್, ವಾದಿರಾಜ್ ಬಿಜೆಪಿ ನಾಯಕರಾದ ಆರ್.ಅಶೋಕ್, ವಿಜಯೇಂದ್ರ, ಸಿ.ಟಿ ರವಿ, ಛಲವಾದಿ ನಾರಾಯಣಸ್ವಾಮಿ, ಅಶ್ವಥ್ ನಾರಾಯಣ, ಸಂಸದರಾದ ಬೊಮ್ಮಾಯಿ, ಬ್ರಿಜೇಶ್ ಚೌಟ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಜನಾರ್ದನ ರೆಡ್ಡಿ ಸೇರಿ ಹಲವು ಶಾಸಕರು, ಮುಖಂಡರು ಬೈಠಕ್‌ನಲ್ಲಿ ಭಾಗಿಯಾಗಿದರು.
ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಂಡು ಮಹತ್ವದ ಕಿವಿಮಾತು ಹೇಳಲಾಗಿದೆ. ಕಿವಿಮಾತು ಜೊತೆಗೆ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಸೂಚನೆ ನೀಡಿದ್ದಾರೆ. ರಾಜ್ಯ ಸರಕಾರದ ವೈಫಲ್ಯಗಳನ್ನು ಕೇಂದ್ರೀಕರಿಸಿ ಸಾರ್ವಜನಿಕ ಹೋರಾಟ ರೂಪಿಸಿ ಎಂದು ತಿಳಿಸಲಾಗಿದೆ. ಆರೆಸ್ಸೆಸ್ ಅನ್ನು ವಹಿಸಿಕೊಂಡು ಉದ್ವೇಗದ ಹೇಳಿಕೆಗಳನ್ನು ನೀಡದಿರಿ. ಸಂಘದ ಸುರಕ್ಷತೆಯನ್ನು ಸಂಘವೇ ನೋಡಿಕೊಳ್ಳುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: Priyank Kharge: ತಾನು ನೋಂದಾಯಿತ ಸಂಸ್ಥೆಯಲ್ಲ ಎಂದು ಆರೆಸ್ಸಸ್ ಹೇಳಿದೆ: ದಾಖಲೆ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
ಆರ್‌ಎಸ್‌ಎಸ್ ಬಗ್ಗೆ ಕಾಂಗ್ರೆಸ್ನವರು ಕೆಟ್ಟ ಅಭಿಪ್ರಾಯ ಸೃಷ್ಟಿಸುತ್ತಿದ್ದಾರೆ. ಸಂಘಕ್ಕೆ 100 ವರ್ಷದ ಇತಿಹಾಸ ಇದ್ದು ಇಂಥ ಎಷ್ಟೋ ಕಠಿಣ ಸಂದರ್ಭಗಳನ್ನು ಸಂಘ ಎದುರಿಸಿ ಮೆಟ್ಟಿ ನಿಂತಿದೆ. 3 ಸಲ ಸಂಘವನ್ನು ನಿಷೇಧ ಮಾಡುವ ಅವರ ಪ್ರಯತ್ನಗಳೇ ವಿಫಲವಾಗಿದೆ. ಈಗ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಂಘದ ವಿಚಾರ ಕೆದಕಿದ್ದಾರೆ. ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ. ಈಗಿನ ಸವಾಲಿನ ಪರಿಸ್ಥಿತಿಯನ್ನೂ ಸಂಘ ಯಶಸ್ವಿಯಾಗಿ ಎದುರಿಸುತ್ತದೆ ಎಂದು ತಿಳಿಸಿದ್ದಾರೆ.
ಆರ್ಎಸ್ಎಸ್ ವಿರುದ್ಧದ ಷಡ್ಯಂತ್ರ ಎದುರಿಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು. ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಬಯಲಿಗೆಳೆದು ಕಾಂಗ್ರೆಸ್ ನಾಯಕರ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು. ಕಾಂಗ್ರೆಸ್ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸುವುದು ಬೈಠಕ್‌ನ ನಿರ್ಣಯಗಳಾಗಿವೆ.
ಪ್ರಿಯಾಂಕ್ ಖರ್ಗೆ ಮತ್ತೆ ಟೀಕೆ
ಈ ನಡುವೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆ ಟಿಪ್ಪಣಿಗಳು ಮುಂದುವರಿದಿವೆ. ತಾನು ನೋಂದಣಿ ಮಾಡಿಕೊಂಡ ಸಂಸ್ಥೆಯಲ್ಲ ಎಂದಿರುವ ಆರೆಸ್ಸೆಸ್ನ ಹೇಳಿಕೆಯನ್ನು ಖರ್ಗೆಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ʼಆರ್ಎಸ್ಎಸ್ ಅನ್ನು ನೋಂದಾಯಿಸದಿದ್ದರೆ ಮತ್ತು ಹೊಣೆಗಾರಿಕೆ ಹೊಂದಿಲ್ಲದ್ದಾಗಿದ್ದರೆ, ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುತ್ತಾ ಪರಿಶೋಧನೆ ಹಾಗೂ ತೆರಿಗೆಗಳನ್ನು ವಂಚಿಸುತ್ತಿಲ್ಲವೇ? ಇದು ಅವರನ್ನು ಹೇಗೆ ದೇಶ ಭಕ್ತರನ್ನಾಗಿಸುತ್ತದೆ?ʼ ಎಂದು ಕೇಳಿದ್ದಾರೆ.
ಇದನ್ನೂ ಓದಿ: RSS: ʼಯಶಸ್ವಿನಿʼಗೆ ಆರ್‌ಎಸ್‌ಎಸ್ ಸದಸ್ಯನ ನೇಮಕ ಹಿಂತೆಗೆದುಕೊಂಡ ರಾಜ್ಯ ಸರಕಾರ
ಅದು ನಿಜವಾಗಿಯೂ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರೆ, ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್‌ಜಿಒಗಳಂತೆ ಏಕೆ ನೋಂದಾಯಿಸಬಾರದು? ಅವರ ದೇಣಿಗೆಗಳು ಎಲ್ಲಿಂದ ಬರುತ್ತವೆ ಮತ್ತು ದಾನಿಗಳು ಯಾರು? ನೋಂದಾಯಿಸದ ಸಂಸ್ಥೆಯೊಂದರ ಮುಖ್ಯಸ್ಥರು ಪ್ರಧಾನಿ ಮತ್ತು ಗೃಹ ಸಚಿವರಿಗೆ ಸಮಾನವಾಗಿ ಅಡ್ವಾನ್ಸಡ್ ಸೆಕ್ಯುರಿಟಿ ಲಿಯಾಸನ್ ಪ್ರೋಟೋಕಾಲ್ ಅನ್ನು ಏಕೆ ಪಡೆಯುತ್ತಾರೆ? ತೆರಿಗೆ ಪಾವತಿದಾರರ ಹಣವನ್ನು ಆರ್‌ಎಸ್‌ಎಸ್ ಮುಖ್ಯಸ್ಥರ ಮೇಲೆ ಏಕೆ ಖರ್ಚು ಮಾಡಲಾಗುತ್ತಿದೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೆಂಭಾವಿಯಲ್ಲಿ ಪಥ ಸಂಚಲನಕ್ಕೆ ಅನುಮತಿ
ಇದೇ ಸಂದರ್ಭದಲ್ಲಿ, ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಪಥಸಂಚಲನಕ್ಕೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ. ಸ್ಥಳೀಯ ಶಾಂತಿ ಸಭೆಯ ವರದಿಯನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಸಹಿ ಹಾಕಿದ್ದಾರೆ. ಆದರೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.
ಆರ್ಎಸ್ಎಸ್ ಪಥಸಂಚಲನ ಮಂಗಳವಾರ ಬೆಳಿಗ್ಗೆ 9:30ಕ್ಕೆ ಕೆಂಭಾವಿ ಪುರಸಭೆ ಮುಂಭಾಗದಿಂದ ಆರಂಭವಾಗಿ, ಪಟ್ಟಣದ ಮುಖ್ಯ ಬೀಡಿಗಳಾದ ರೈಲ್ವೇ ಸ್ಟೇಷನ್ ರಸ್ತೆ, ಮಾರುಕಟ್ಟೆ ಬೀಡಿ ಮತ್ತು ಗ್ರಾಮ ಪಂಚಾಯಿತಿ ಬಳಿಯವರೆಗೆ ಸಂಚರಿಸುತ್ತದೆ. ಸುಮಾರು 500 ಸ್ವಯಂಸೇವಕರು ಭಾಗವಹಿಸಲಿದ್ದಾರೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ. ಇದು ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಮಾರಂಭದ ಭಾಗವಾಗಿದ್ದು, ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೂ ಹಿಂದಿನ ಘಟನೆಗಳಲ್ಲಿ ಇಂತಹ ಮಾರ್ಚ್‌ಗಳು ವಿವಾದಕ್ಕೆ ಕಾರಣವಾಗಿವೆ, ಆದ್ದರಿಂದ ಜಿಲ್ಲಾಡಳಿತವು ಎಚ್ಚರಿಕೆಯಿಂದ ನಿರ್ಧರಿಸಿದೆ.