Priyank Kharge: ತಾನು ನೋಂದಾಯಿತ ಸಂಸ್ಥೆಯಲ್ಲ ಎಂದು ಆರೆಸ್ಸಸ್ ಹೇಳಿದೆ: ದಾಖಲೆ ಬಿಡುಗಡೆ ಮಾಡಿದ ಪ್ರಿಯಾಂಕ್ ಖರ್ಗೆ
RSS: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಟೀಕೆ ಟಿಪ್ಪಣಿಗಳು ಮುಂದುವರಿದಿವೆ. ತಾನು ನೋಂದಣಿ ಮಾಡಿಕೊಂಡ ಸಂಸ್ಥೆಯಲ್ಲ ಎಂದಿರುವ ಆರೆಸ್ಸೆಸ್ನ ಹೇಳಿಕೆಯನ್ನು ಖರ್ಗೆಯವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ʼಆರ್ಎಸ್ಎಸ್ ಅನ್ನು ನೋಂದಾಯಿಸದಿದ್ದರೆ ಮತ್ತು ಹೊಣೆಗಾರಿಕೆ ಹೊಂದಿಲ್ಲದ್ದಾಗಿದ್ದರೆ, ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುತ್ತಾ ಪರಿಶೋಧನೆ ಹಾಗೂ ತೆರಿಗೆಗಳನ್ನು ವಂಚಿಸುತ್ತಿಲ್ಲವೇ? ಇದು ಅವರನ್ನು ಹೇಗೆ ದೇಶ ಭಕ್ತರನ್ನಾಗಿಸುತ್ತದೆ?ʼ ಎಂದು ಕೇಳಿದ್ದಾರೆ. ಈ ನಡುವೆ, ಯಾದಗಿರಿ ಜಿಲ್ಲೆಯ ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಪಥಸಂಚಲನಕ್ಕೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ.
-
ಹರೀಶ್ ಕೇರ
Nov 3, 2025 8:09 PM
ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ (minister priyank kharge) ಹಾಗೂ ಆರ್ ಎಸ್ ಎಸ್ (RSS row) ನಡುವಿನ ಸಂಘರ್ಷ ಮುಂದುವರಿದಿದೆ. ಈ ನಡುವೆ ಸಂಘದ ವಿರುದ್ಧ ಪ್ರಿಯಾಂಕ್ ವಾಗ್ದಾಳಿ ಮುಂದುವರಿಸಿದ್ದು, ಆರ್ ಎಸ್ ಎಸ್ ನೋಂದಾಯಿತ ಸಂಸ್ಥೆಯಲ್ಲ ಎಂದು ಅಧಿಕೃತವಾಗಿ ತಿಳಿಸಿದೆ ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾಗಿ ಪೋಸ್ಟ್ ಹಾಕಿರುವ ಅವರು, “ತನ್ನದು ನೋಂದಾಯಿತ ಸಂಸ್ಥೆಯಲ್ಲ ಎಂದು ಆರ್‌ಎಸ್‌ಎಸ್ ಲಿಖಿತ ರೂಪದಲ್ಲಿ ಅಧಿಕೃತವಾಗಿ ತಿಳಿಸಿದೆ” ಎಂದು ಆರೋಪ ಮಾಡಿದ್ದಾರೆ. ಅಲ್ಲದೆ, ಆರ್ ಎಸ್ ಎಸ್ ನೀಡಿರುವ ದಾಖಲೆಯನ್ನು ಅವರು ಬಿಡುಗಡೆ ಮಾಡಿದ್ದಾರೆ.
ಅದು ನಿಜವಾಗಿಯೂ ನಿಸ್ವಾರ್ಥವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದರೆ, ಪಾರದರ್ಶಕವಾಗಿ ಮತ್ತು ಕಾನೂನುಬದ್ಧವಾಗಿ ಕೆಲಸ ಮಾಡುವ ಲಕ್ಷಾಂತರ ಎನ್‌ಜಿಒಗಳಂತೆ ಏಕೆ ನೋಂದಾಯಿಸಬಾರದು? ಅವರ ದೇಣಿಗೆಗಳು ಎಲ್ಲಿಂದ ಬರುತ್ತವೆ ಮತ್ತು ದಾನಿಗಳು ಯಾರು? ಎಂದು ಪ್ರಶ್ನಿಸಿದ್ದಾರೆ.
ನೋಂದಾಯಿಸದ ಸಂಸ್ಥೆಯೊಂದರ ಮುಖ್ಯಸ್ಥರು ಪ್ರಧಾನಿ ಮತ್ತು ಗೃಹ ಸಚಿವರಿಗೆ ಸಮಾನವಾಗಿ ಅಡ್ವಾನ್ಸಡ್ ಸೆಕ್ಯುರಿಟಿ ಲಿಯಾಸನ್ ಪ್ರೋಟೋಕಾಲ್ ಅನ್ನು ಏಕೆ ಪಡೆಯುತ್ತಾರೆ? ತೆರಿಗೆ ಪಾವತಿದಾರರ ಹಣವನ್ನು ಆರ್‌ಎಸ್‌ಎಸ್ ಮುಖ್ಯಸ್ಥರ ಮೇಲೆ ಏಕೆ ಖರ್ಚು ಮಾಡಲಾಗುತ್ತಿದೆ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೂರ್ಣ ಸಮಯದ ಪ್ರಚಾರಕರಿಗೆ ಯಾರು ಹಣ ಪಾವತಿಸುತ್ತಾರೆ ಮತ್ತು ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳು ಹಾಗೂ "ಸಾಮಾಜಿಕ" ಅಭಿಯಾನಗಳಿಗೆ ಯಾರು ಹಣಕಾಸು ಒದಗಿಸುತ್ತಾರೆ? ಎಂದು ಹಣಕಾಸಿನ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: RSS Patha Sanchalana: ಗುರುಮಠಕಲ್‌ನಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ದಾರಿ ಕ್ಲಿಯರ್, ಡಿಸಿ ಅನುಮತಿ
ಆರ್‌ಎಸ್‌ಎಸ್ ಅನ್ನು ನೋಂದಾಯಿಸದಿದ್ದರೆ ಮತ್ತು ಹೊಣೆಗಾರಿಕೆ ಹೊಂದಿಲ್ಲದ್ದಾಗಿದ್ದರೆ, ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಹೇಳಿಕೊಳ್ಳುತ್ತಾ ಪರಿಶೋಧನೆ ಹಾಗೂ ತೆರಿಗೆಗಳನ್ನು ವಂಚಿಸುತ್ತಿಲ್ಲವೇ? ಇದು ಅವರನ್ನು ಹೇಗೆ ದೇಶ ಭಕ್ತರನ್ನಾಗಿಸುತ್ತದೆ? ಎಂದು ಕೇಳಿದ್ದಾರೆ.
ಕೆಂಭಾವಿಯಲ್ಲಿ ಪಥಸಂಚಲನಕ್ಕೆ ಗ್ರೀನ್ ಸಿಗ್ನಲ್
ಈ ನಡುವೆ, ಯಾದಗಿರಿ (Yadgiri) ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಮಂಗಳವಾರ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಪಥಸಂಚಲನಕ್ಕೆ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ. ಸ್ಥಳೀಯ ಶಾಂತಿ ಸಭೆಯ ವರದಿಯನ್ನು ಪರಿಶೀಲಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ಸಹಿ ಹಾಕಿದ್ದಾರೆ. ಆದರೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.
ಆರ್ಎಸ್ಎಸ್ ಪಥಸಂಚಲನ ಮಂಗಳವಾರ ಬೆಳಿಗ್ಗೆ 9:30ಕ್ಕೆ ಕೆಂಭಾವಿ ಪುರಸಭೆ ಮುಂಭಾಗದಿಂದ ಆರಂಭವಾಗಿ, ಪಟ್ಟಣದ ಮುಖ್ಯ ಬೀಡಿಗಳಾದ ರೈಲ್ವೇ ಸ್ಟೇಷನ್ ರಸ್ತೆ, ಮಾರುಕಟ್ಟೆ ಬೀಡಿ ಮತ್ತು ಗ್ರಾಮ ಪಂಚಾಯಿತಿ ಬಳಿಯವರೆಗೆ ಸಂಚರಿಸುತ್ತದೆ. ಸುಮಾರು 500 ಸ್ವಯಂಸೇವಕರು ಭಾಗವಹಿಸಲಿದ್ದಾರೆ ಎಂದು ಆರ್‌ಎಸ್‌ಎಸ್ ಮೂಲಗಳು ತಿಳಿಸಿವೆ. ಇದು ಆರ್‌ಎಸ್‌ಎಸ್‌ನ ಶತಮಾನೋತ್ಸವ ಸಮಾರಂಭದ ಭಾಗವಾಗಿದ್ದು, ರಾಜ್ಯದಾದ್ಯಂತ ಇಂತಹ ಕಾರ್ಯಕ್ರಮಗಳು ನಡೆಯುತ್ತಿವೆ. ಆದರೂ ಹಿಂದಿನ ಘಟನೆಗಳಲ್ಲಿ ಇಂತಹ ಮಾರ್ಚ್‌ಗಳು ವಿವಾದಕ್ಕೆ ಕಾರಣವಾಗಿವೆ, ಆದ್ದರಿಂದ ಜಿಲ್ಲಾಡಳಿತವು ಎಚ್ಚರಿಕೆಯಿಂದ ನಿರ್ಧರಿಸಿದೆ.
ಇದನ್ನೂ ಓದಿ: Karnataka CM Race: ರಾಜ್ಯದ ಮುಂದಿನ ಸಿಎಂ ಮಲ್ಲಿಕಾರ್ಜುನ ಖರ್ಗೆ; ಯತ್ನಾಳ್ ಸ್ಫೋಟಕ ಹೇಳಿಕೆ
ಪಥಸಂಚಲನದಲ್ಲಿ ಯಾವುದೇ ಸಾರ್ವಜನಿಕ ಆಸ್ತಿಗೆ ಹಾನಿ ಉಂಟಾದರೆ, ಸಂಘಟನೆಯ ಮುಖಂಡರು ಸಂಪೂರ್ಣ ಖರ್ಚು ಭರಿಸಬೇಕು. ಪೊಲೀಸ್ ಇಲಾಖೆ ನಿಗದಿಪಡಿಸಿದ ಮಾರ್ಗದಲ್ಲಿಯೇ ಸಂಚಲನ ನಡೆಸಬೇಕು. ಸಂಘಟನೆಯವರು ಪೊಲೀಸ್ ಭದ್ರತೆಯನ್ನು ಸ್ವೀಕರಿಸಬೇಕು. ಯಾವುದೇ ಜಾತಿ, ಧರ್ಮ ಅಥವಾ ಸಮುದಾಯಕ್ಕೆ ನೋವುಂಟು ಮಾಡುವ ಘೋಷಣೆಗಳು ಅಥವಾ ಕೂಗುಗಳು ಇರಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದರೆ, ಸಂಘಟನೆಯ ಮುಖಂಡರೇ ಸಂಪೂರ್ಣ ಜವಾಬ್ದಾರರಾಗುತ್ತಾರೆ. ಪಥಸಂಚಲನದ ಸಂದರ್ಭದಲ್ಲಿ ಯಾವುದೇ ಹಿಂಸಾಚಾರ ಸಂಭವಿಸಿದರೆ, ಸಂಘಟನೆಯೇ ಹೊಣೆ ಹೊರಬೇಕು. ಯಾವುದೇ ಮಾರಕಾಸ್ತ್ರಗಳು ಅಥವಾ ಆಯುಧಗಳನ್ನು ಹೊತ್ತು ಹೋಗುವುದು ನಿಷೇಧ. ಈ ಷರತ್ತುಗಳು ರಾಜ್ಯ ಸರ್ಕಾರದ ಮಾರ್ಗಸೂಚಿಗಳಂತೆ ರೂಪಿಸಲ್ಪಟ್ಟಿವೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ.