ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಅಕ್ವಾನ್' (Akvan) ಚಂಡಮಾರುತದ ಪ್ರಭಾವ ಪೂರ್ವ ಕರಾವಳಿಯತ್ತ ಕೇಂದ್ರೀಕೃತವಾಗಿರುವುದರಿಂದ, ಕರ್ನಾಟಕದಾದ್ಯಂತ ಮುಂದಿನ (Karnataka Weather) ಮೂರು ದಿನಗಳ ಕಾಲ ಒಣಹವೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ನವೆಂಬರ್ 20ರ ವರೆಗೆ ರಾಜ್ಯದ ಯಾವುದೇ ಭಾಗಕ್ಕೂ ಮಳೆಯ ಎಚ್ಚರಿಕೆ ನೀಡಲಾಗಿಲ್ಲ.
ಕರಾವಳಿ ಕರ್ನಾಟಕ
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಶುಭ್ರ ಆಕಾಶ ಹಾಗೂ ಒಣ ಹವಾಮಾನ ಇರಲಿದೆ. ಹಗಲಿನಲ್ಲಿ ಬಿಸಿಲಿನ ತಾಪಮಾನ ಕೊಂಚ ಹೆಚ್ಚಾಗಿರಲಿದ್ದು, ಮಂಗಳೂರು, ಕಾರವಾರ ಮತ್ತು ಹೊನ್ನಾವರ ಭಾಗಗಳಲ್ಲಿ ಗರಿಷ್ಠ ತಾಪಮಾನ 31°C ರಿಂದ 33.5°C ವರೆಗೆ ದಾಖಲಾಗುವ ನಿರೀಕ್ಷೆಯಿದೆ. ನವೆಂಬರ್ 21 ರಿಂದ 23ರ ನಡುವೆ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಸಂಪೂರ್ಣ ಒಣಹವೆ ಮುಂದುವರಿಯಲಿದೆ. ಮುಂಜಾನೆಯ ವೇಳೆ ತಂಪಾದ ಗಾಳಿ ಮತ್ತು ಚಳಿಯ ವಾತಾವರಣ ಕಂಡುಬರಲಿದ್ದು, ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕಡಿಮೆಯಿರುವ ಸಾಧ್ಯತೆಯಿದೆ. ಬೆಳಗಾವಿ ಮತ್ತು ಗದಗ ಭಾಗಗಳಲ್ಲಿ ಕನಿಷ್ಠ ತಾಪಮಾನ 18°C ರಿಂದ 20°C ಆಸುಪಾಸಿನಲ್ಲಿದ್ದರೆ, ಕಲಬುರಗಿಯಲ್ಲಿ 24°C ವರೆಗೆ ದಾಖಲಾಗಿದೆ.
Health Tips: ಚಳಿ ಚಳಿ ತಾಳೆನು ಈ ಚಳಿಯ...ಚಳಿಯಿಂದ ನಿಮ್ಮ ಅರೋಗ್ಯವನ್ನು ಹೀಗೆ ಕಾಪಾಡಿಕೊಳ್ಳಿ
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಒಣಹವೆ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಭಾಗಶಃ ಮೋಡಕವಿದ ವಾತಾವರಣವಿದ್ದು, ಗರಿಷ್ಠ ತಾಪಮಾನ 28°C ಮತ್ತು ಕನಿಷ್ಠ ತಾಪಮಾನ 16°C ದಾಖಲಾಗಲಿದೆ.