ಬೆಂಗಳೂರು: ವಾಟ್ಸ್ಯಾಪ್ ಮೂಲಕ ಹೊಸ ಬಗೆಯ ವಂಚನೆಯೊಂದು (WhatsApp RTO challan scam) ಇದೀಗ ಜೋರಾಗಿ ನಡೆಯುತ್ತಿದ್ದು, ಕೋಟ್ಯಂತರ ರೂಪಾಯಿಗಳನ್ನು ನಾಗರಿಕರಿಗೆ ವಂಚಿಸಲಾಗಿದೆ. ಈ ವಂಚನೆಗೆ ನಕಲಿ ಆರ್‌ಟಿಒ ಚಲನ್‌ಗಳನ್ನು ಬಳಸಲಾಗುತ್ತಿದೆ. ಹಲವಾರು ಜನರು ಅಪರಿಚಿತ ಸಂಖ್ಯೆಗಳಿಂದ ನಕಲಿ RTO ಚಲನ್ ಸಂದೇಶಗಳನ್ನು ಸ್ವೀಕರಿಸುತ್ತಿದ್ದು, ಅವರ ವಾಹನದ ನಂಬರ್‌ಗೆ ಇದನ್ನು ನೀಡಲಾಗುತ್ತಿದೆ. ನಾಗರಿಕರು ಈ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ.
ಈ ನಕಲಿ ಚಲನ್‌ಗಳು ನಿಮ್ಮ ವಾಟ್ಸ್ಯಾಪ್‌ಗೆ ಬರುತ್ತಿದ್ದು, ನಿಮ್ಮ ವಾಹನದ ನಂಬರ್ ಮೇಲೆ ಟ್ರಾಫಿಕ್ ಪೊಲೀಸ್ ದಂಡವನ್ನು ವಿಧಿಸಲಾಗಿದೆ ಎಂದು ಸೂಚಿಸುತ್ತದೆ. ನಿಮ್ಮಿಂದ ಅವರ ಖಾತೆಗಳಿಗೆ ಹಣ ಕಟ್ಟಿಸಿಕೊಳ್ಳುತ್ತಾರೆ. ಈ ಸಂದೇಶ ಅಧಿಕೃತ ಇಲಾಖಾ ಆದೇಶ ಎಂಬಂತೆಯೇ ಕಾಣುತ್ತದೆ. ಅಟ್ಯಾಚ್‌ಮೆಂಟ್ ಫೈಲನ್ನು ಸಹ ಇದು ಹೊಂದಿರುತ್ತದೆ. ಆದರೆ ಮೋಸ ಹೋದ ಬಳಿಕವೇ ಗೊತ್ತಾಗುತ್ತದೆ.
ಸೈಬರ್ ಸೆಕ್ಯುರಿಟಿ ಟಿಪ್‌ಸ್ಟರ್ ಅಭಿಷೇಕ್ ಯಾದವ್ (@yabhishekhd) ಪ್ರಕಾರ, ನಿಮಗೆ ಬರುವ ಈ ಫೈಲ್ ಅನ್ನು ತೆರೆದ ಕೂಡಲೇ ನಿಮ್ಮ ಫೋನ್‌ಗೆ ಮಾಲ್‌ವೇರ್ ಅಪಾಯ ಸಂಭವಿಸಬಹುದು. ಈ ಸಂದೇಶ ಸಾಮಾನ್ಯವಾಗಿ RTO E Challan.apk ಅಥವಾ Mparivahan.apk ಹೆಸರಿನ ಫೈಲ್ ಅನ್ನು ಹೊಂದಿರುತ್ತದೆ. ನೀವು ಅದನ್ನು ತೆರೆದ ನಂತರ, ಒಳಗೆ ಅಡಗಿರುವ ಮಾಲ್‌ವೇರ್ ಹ್ಯಾಕರ್‌ಗಳಿಗೆ ನಿಮ್ಮ ಸಾಧನಕ್ಕೆ ರಿಮೋಟ್ ಪ್ರವೇಶವನ್ನು ನೀಡುತ್ತದೆ. ಇದರಿಂದ ಸೈಬರ್ ಅಪರಾಧಿಗಳಿಗೆ ನಿಮ್ಮ ವೈಯಕ್ತಿಕ ಡೇಟಾ, ಬ್ಯಾಂಕ್ ವಿವರಗಳಿಗೆ ಪ್ರವೇಶ ಸಿಗುತ್ತದೆ. ಅವನ್ನು ಅವರು ಕದಿಯಬಹುದು. ನಿಮ್ಮ ಇತರ WhatsApp ಸಂಪರ್ಕಗಳಿಗೆ ಇದೇ ವಂಚನೆ ಸಂದೇಶವನ್ನು ಕಳುಹಿಸಲು ನಿಮ್ಮ ಸಂಖ್ಯೆಯನ್ನು ಸಹ ಬಳಸಬಹುದು.
ಇದನ್ನೂ ಓದಿ: Crime News: ಸೇನಾಧಿಕಾರಿಯಂತೆ ನಟಿಸಿ ವಂಚನೆ; ಮಾದಕ ದ್ರವ್ಯ ಸೇವಿಸಿ ವೈದ್ಯೆಯನ್ನು ಅತ್ಯಾಚಾರ!
ಕೆಲವು ಸಂದರ್ಭಗಳಲ್ಲಿ ಮಾಲ್‌ವೇರ್ ಮೂಲಕ ತಮ್ಮ ಸಾಧನದಲ್ಲಿರುವ WhatsApp ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಬಳಕೆದಾರರು ವರದಿ ಮಾಡಿದ್ದಾರೆ. ಈ ವಂಚನೆಯು ವಿಶೇಷವಾಗಿ ಅಪಾಯಕಾರಿ. ಏಕೆಂದರೆ ಅದು ಅಧಿಕೃತವಾಗಿ ಕಾಣುತ್ತದೆ. ಅನೇಕ ಜನರು ಚಲನ್ ನಿಜವೆಂದು ಭಾವಿಸುತ್ತಾರೆ ಮತ್ತು ಎರಡು ಬಾರಿ ಯೋಚಿಸದೆ ಕ್ಲಿಕ್ ಮಾಡುತ್ತಾರೆ.
ತಜ್ಞರು ಎಚ್ಚರಿಸುವಂತೆ, APK ಫೈಲ್ ಹೊಂದಿರುವ ಯಾವುದೇ ಸಂದೇಶವನ್ನು - ವಿಶೇಷವಾಗಿ ಅಪರಿಚಿತ ಸಂಖ್ಯೆಯಿಂದ ಬಂದದ್ದನ್ನು- ಅನುಮಾನಾಸ್ಪದವೆಂದು ಪರಿಗಣಿಸಬೇಕು. APK ಫೈಲ್‌ಗಳು Android ಇನ್‌ಸ್ಟಾಲ್ ಪ್ಯಾಕೇಜ್‌ಗಳಾಗಿವೆ. ಅವುಗಳನ್ನು ಅಧಿಕೃತ ಅಪ್ಲಿಕೇಶನ್ ಸ್ಟೋರ್‌ಗಳಿಂದ ಪಡೆಯದೆ ಬೇರೆ ಮೂಲದಿಂದ ಬಂದಿದ್ದನ್ನು ಇನ್‌ಸ್ಟಾಲ್ ಮಾಡುವುದರಿಂದ ನಿಮ್ಮ ಫೋನ್ ಸ್ಪೈವೇರ್, ರಾನ್ಸಮ್‌ವೇರ್ ಅಥವಾ ಡೇಟಾ ಕಳ್ಳತನದಂತಹ ಗಂಭೀರ ಅಪಾಯಗಳಿಗೆ ತುತ್ತಾಗಬಹುದು.
ಸುರಕ್ಷಿತವಾಗಿರಲು ನೆನಪಿಡಬೇಕಾದ ಸಂಗತಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಥವಾ mParivahan ಅಪ್ಲಿಕೇಶನ್ ಎಂದಿಗೂ WhatsApp ಅಥವಾ SMS ಲಿಂಕ್‌ಗಳ ಮೂಲಕ ಚಲನ್ ಎಚ್ಚರಿಕೆಗಳನ್ನು ಕಳುಹಿಸುವುದಿಲ್ಲ ಎಂಬುದನ್ನು ಬಳಕೆದಾರರು ನೆನಪಿನಲ್ಲಿಡಬೇಕು. ನಿಮ್ಮಲ್ಲಿ ಟ್ರಾಫಿಕ್ ಚಲನ್ ಬಾಕಿ ಇದೆಯೇ ಎಂದು ಪರಿಶೀಲಿಸಲು ಏಕೈಕ ಕಾನೂನುಬದ್ಧ ಮಾರ್ಗವೆಂದರೆ ಅಧಿಕೃತ ಪರಿವಾಹನ್ ವೆಬ್‌ಸೈಟ್ ಅಥವಾ ನಿಮ್ಮ ರಾಜ್ಯದ RTO ಪೋರ್ಟಲ್.
ಸೈಬರ್‌ಸೆಕ್ಯುರಿಟಿ ತಜ್ಞರು ಈ ವಂಚನೆಯ ಬಗ್ಗೆ ಜಾಗೃತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಅನೇಕರು ಅರಿಯದೆ ಸಂದೇಶವನ್ನು ಫಾರ್ವರ್ಡ್ ಮಾಡುತ್ತಾರೆ. ಇದು ಮೋಸ ವೇಗವಾಗಿ ಹರಡಲು ಸಹಾಯ ಮಾಡುತ್ತದೆ. ನೀವು ಅಂತಹ ಸಂದೇಶವನ್ನು ಸ್ವೀಕರಿಸಿದರೆ, ಫೈಲ್ ಅನ್ನು ತೆರೆಯಬೇಡಿ. ಕಳುಹಿಸಿದವರಿಗೆ ತಕ್ಷಣವೇ ಈ ಬಗ್ಗೆ ಎಚ್ಚರಿಸಿ ಅಥವಾ ನಿರ್ಬಂಧಿಸಿ.
ಸಂದೇಶ ಕಳುಹಿಸುವ ವಾಟ್ಸ್ಯಾಪ್‌ನಂಥ ವೇದಿಕೆಗಳಲ್ಲಿನ ವಂಚನೆಗಳು ಹೆಚ್ಚು ಹೆಚ್ಚು ಅತ್ಯಾಧುನಿಕವಾಗುತ್ತಿವೆ. ಅಧಿಕೃತವಾಗಿ ಕಾಣುವ ಪ್ರತೀ ಸಂದೇಶವೂ ನಿಜವಲ್ಲ ಎಂಬುದನ್ನು ನೆನಪಿಡಿ. ನಿಮ್ಮ ಡೇಟಾವನ್ನು ಸುರಕ್ಷಿತವಾಗಿರಿಸುವುದು, ಸೈಬರ್ ದಾಳಿಗೆ ಬಲಿಯಾಗದಿರುವುದು- ಇದಕ್ಕೆ ನೀವು ಮಾಡಬೇಕಾದ್ದೆಂದರೆ ಒಂದು ಕ್ಷಣ ಎಚ್ಚರಿಕೆ ವಹಿಸುವುದು.