FASTag New Rules: ಇಂದಿನಿಂದ ಫಾಸ್ಟ್‌ಟ್ಯಾಗ್ ಹೊಸ ರೂಲ್ಸ್; ಏನೇನು ಬದಲಾವಣೆ?
ವಾಹನವು ಟೋಲ್ ದಾಟುವ ಮೊದಲು 60 ನಿಮಿಷಗಳಿಗಿಂತ ಹೆಚ್ಚು ಕಾಲ ಮತ್ತು ಟೋಲ್ ದಾಟಿದ ನಂತರ 10 ನಿಮಿಷಗಳ ಕಾಲ ಫಾಸ್ಟ್‌ಟ್ಯಾಗ್ ನಿಷ್ಕ್ರಿಯವಾಗಿದ್ದರೆ, ವಹಿವಾಟನ್ನು ತಿರಸ್ಕರಿಸಲಾಗುತ್ತದೆ. ಇದು ದೋಷ ಕೋಡ್ 176 ಅಡಿಯಲ್ಲಿ ಬರಲಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು: ಫಾಸ್ಟ್‌ಟ್ಯಾಗ್‌ನ ಹೊಸ ನಿಯಮಾವಳಿಗಳು (FASTag New Rules) ಇಂದಿನಿಂದ (ಫೆ. 17) ಜಾರಿಗೆ ಬಂದಿವೆ. ಇದರ ಅಡಿಯಲ್ಲಿ, ಕಡಿಮೆ ಬ್ಯಾಲೆನ್ಸ್, ಪಾವತಿ ವಿಳಂಬ ಅಥವಾ ಫಾಸ್ಟ್‌ಟ್ಯಾಗ್ ಅನ್ನು ಕಪ್ಪುಪಟ್ಟಿಗೆ (black list) ಸೇರಿಸಿದರೆ ಹೆಚ್ಚುವರಿ ದಂಡವನ್ನು ವಿಧಿಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ನಲ್ಲಿನ ಸಮಸ್ಯೆಗಳಿಂದಾಗಿ ಟೋಲ್ ಪ್ಲಾಜಾಗಳಲ್ಲಿ (toll plaza) ವಾಹನಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.
ಸರ್ಕಾರ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ವಾಹನವು ಟೋಲ್ ದಾಟುವ ಮೊದಲು 60 ನಿಮಿಷಗಳಿಗಿಂತ ಹೆಚ್ಚು ಕಾಲ ಮತ್ತು ಟೋಲ್ ದಾಟಿದ ನಂತರ 10 ನಿಮಿಷಗಳ ಕಾಲ ಫಾಸ್ಟ್‌ಟ್ಯಾಗ್ ನಿಷ್ಕ್ರಿಯವಾಗಿದ್ದರೆ, ವಹಿವಾಟನ್ನು ತಿರಸ್ಕರಿಸಲಾಗುತ್ತದೆ. ಇದು ದೋಷ ಕೋಡ್ 176 ಅಡಿಯಲ್ಲಿ ಬರಲಿದೆ.
ಹೊಸ ನಿಯಮ ಏನು?
ಫಾಸ್ಟ್ಟ್ಯಾಗ್ನಲ್ಲಿ ಹಣ ಇರಬೇಕು, ಇಲ್ಲದಿದ್ದರೆ ಟೋಲ್ ಪ್ರವೇಶಕ್ಕೆ ಒಂದು ಗಂಟೆ ಮೊದಲು ಹಣ ಜಮೆ ಮಾಡಿರಬೇಕು. ಟೋಲ್ ಹತ್ತಿರ ಬಂದಮೇಲೆ ರಿಚಾರ್ಜ್ ಮಾಡೋಣ ಅಂದರೆ ಸಮಸ್ಯೆ ಆಗಲಿದೆ.
ಟೋಲ್ ದಾಟುವ 60 ನಿಮಿಷ ಮೊದಲು ಹಾಗೂ ದಾಟಿದ 10 ನಿಮಿಷಗಳ ಕಾಲ ಫಾಸ್ಟ್‌ಟ್ಯಾಗ್ ಆಕ್ಟೀವ್ ಇರಬೇಕು. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ದರೆ, ಟೋಲ್ ಸಿಸ್ಟಮ್ನಲ್ಲಿ ಎರರ್ ಕೋಡ್ 176 ಎಂದು ತೋರಿಸಲಾಗುತ್ತದೆ. ಈ ವೇಳೆ ಪ್ರಯಾಣಿಕರು ದುಪ್ಪಟ್ಟು ಹಣ ಪಾವತಿ ಮಾಡಬೇಕಾಗುತ್ತದೆ.
ಕೆವೈಸಿ ಮಾಡಿಲ್ಲ ಎಂದಾದರೆ ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ಕಪ್ಟುಪಟ್ಟಿಗೆ ಸೇರಿಸಲಾಗುತ್ತದೆ. ಅಂತಹ ಟ್ಯಾಗ್ನೊಂದಿಗೆ ಬರುವ ವಾಹನಕ್ಕೆ ದುಪ್ಪಟ್ಟು ಸುಂಕ ವಿಧಿಸಲಾಗುತ್ತದೆ.
ಒಂದು ವೇಳೆ ವಾಹನ ಟೋಲ್ ಗೇಟ್ ದಾಟಿದ 15 ನಿಮಿಷಗಳ ನಂತರ ಫಾಸ್ಟ್‌ಟ್ಯಾಗ್ ಖಾತೆಯಿಂದ ಹಣ ಕಡಿತವಾದರೆ ಅದಕ್ಕೆ ವಾಹನ ಸವಾರರು ಹೆಚ್ಚಿನ ಶುಲ್ಕವನ್ನು ವಿಧಿಸಬೇಕಾಗುತ್ತದೆ.
ಟೋಲ್ಗೇಟ್ನಲ್ಲಿ ಹಣ ಕಡಿತ ವಿಳಂಬವಾದರೆ ಅದಕ್ಕೆ ಟೋಲ್ ಆಪರೇಟರ್ ಅನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ. ತಪ್ಪು ಶುಲ್ಕ ಮತ್ತು ಹೆಚ್ಚುವರಿ ಹಣ ಕಡಿತಕ್ಕೆ ಸಂಬಂಧಿಸಿ ಬಳಕೆದಾರರು 15 ದಿನಗಳ ಬಳಿಕವಷ್ಟೇ ದೂರು ಸಲ್ಲಿಸಬಹುದು.
ಹೊಸ ನಿಯಮಗಳ ಉದ್ದೇಶ
ಈ ಬದಲಾವಣೆಯು ಟೋಲ್ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಟೋಲ್ ಪ್ಲಾಜಾಗಳಲ್ಲಿನ ಜಗಳಗಳನ್ನು ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ. ಟೋಲ್ ಸಂಗ್ರಹವನ್ನು ಹೆಚ್ಚು ಪಾರದರ್ಶಕ ಮತ್ತು ಸುಗಮವಾಗಿಸುವುದು ಈ ಹೊಸ ವ್ಯವಸ್ಥೆಯ ಉದ್ದೇಶ. ಇದರಿಂದ ಟೋಲ್ ಪ್ಲಾಜಾದಲ್ಲಿ ಸಂಚಾರ ದಟ್ಟಣೆಯನ್ನು ತಡೆಗಟ್ಟಬಹುದು ಮತ್ತು ಪ್ರಯಾಣವನ್ನು ಸುಗಮಗೊಳಿಸಬಹುದು. ಈ ಬದಲಾವಣೆಗಳ ಬಗ್ಗೆ ತಿಳಿದಿಲ್ಲದ ಬಳಕೆದಾರರು ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಬಹುದು. ಆದ್ದರಿಂದ, ಎಲ್ಲಾ ವಾಹನ ಮಾಲೀಕರು ತಮ್ಮ ಫಾಸ್ಟ್‌ಟ್ಯಾಗ್ ಅನ್ನು ಸರಿಯಾಗಿ ನಿರ್ವಹಿಸುವುದು ಮುಖ್ಯ.
ಮುನ್ನೆಚ್ಚರಿಕೆ ಮುಖ್ಯ
ದೀರ್ಘ ಪ್ರಯಾಣವನ್ನು ಕೈಗೊಳ್ಳುವ ಮೊದಲು ನಿಮ್ಮ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಅನ್ನು ಕಾಯ್ದುಕೊಳ್ಳಿ.
ಕಪ್ಪುಪಟ್ಟಿಗೆ ಸೇರುವುದನ್ನು ತಪ್ಪಿಸಲು ಕಾಲಕಾಲಕ್ಕೆ KYC ವಿವರಗಳನ್ನು ನವೀಕರಿಸಿ.
ಟೋಲ್ ಪ್ಲಾಜಾ ತಲುಪುವ ಮೊದಲು ನಿಮ್ಮ ಫಾಸ್ಟ್‌ಟ್ಯಾಗ್‌ನ ಸ್ಥಿತಿಯನ್ನು ಪರಿಶೀಲಿಸಿ.
ಬಳಕೆದಾರರು ತಮ್ಮ ಮಾಹಿತಿಯನ್ನು ನವೀಕರಿಸುತ್ತಿದ್ದರೆ ಮತ್ತು ತಮ್ಮ FASTag ಅನ್ನು ಸಕ್ರಿಯವಾಗಿ ನಿರ್ವಹಿಸಿದರೆ, ಬದಲಾದ ನಿಯಮಗಳನ್ನು ಸುಲಭವಾಗಿ ಪಾಲಿಸಬಹುದು ಮತ್ತು ಯಾವುದೇ ವಿಳಂಬ ಅಥವಾ ಅನಗತ್ಯ ದಂಡಗಳನ್ನು ತಪ್ಪಿಸಬಹುದು.
ಇದನ್ನೂ ಓದಿ: Toll Pass: 3 ಸಾವಿರ ರೂ ಪಾವತಿಸಿದರೆ ವರ್ಷಪೂರ್ತಿ ಟೋಲ್ ಫ್ರೀ ಪ್ರಯಾಣ- ಕೇಂದ್ರದಿಂದ ಬಂಪರ್ ಆಫರ್