ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

108 ambulance service: ಇನ್ನುಮುಂದೆ ರಾಜ್ಯ ಸರ್ಕಾರದಿಂದಲೇ 108 ಆಂಬ್ಯುಲೆನ್ಸ್‌ ನಿರ್ವಹಣೆ; ಸರ್ಕಾರ ಆದೇಶ

Health department: ರಾಜ್ಯ ಸರ್ಕಾರದ ಈ ಕ್ರಮದಿಂದಾಗಿ 108 ಆರೋಗ್ಯ ಕವಚ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗುವ ಭರವಸೆ ಮೂಡಿದ್ದು, ಸರ್ಕಾರದ ಬೊಕ್ಕಸಕ್ಕೆ ಸುಮಾರು 250 ಕೋಟಿ ರೂ. ಉಳಿಸುತ್ತದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಹೇಳಿದ್ದಾರೆ.

ಇನ್ನುಮುಂದೆ ರಾಜ್ಯ ಸರ್ಕಾರದಿಂದಲೇ 108 ಆಂಬ್ಯುಲೆನ್ಸ್‌ ನಿರ್ವಹಣೆ

Profile Prabhakara R Jun 14, 2025 2:02 PM

ಬೆಂಗಳೂರು: ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಸೇವೆಯನ್ನು (108 ambulance service) ಖಾಸಗಿ ಹಿಡಿತದಿಂದ ಮುಕ್ತಗೊಳಿಸಿ ಆರೋಗ್ಯ ಇಲಾಖೆಯಿಂದಲೇ ನಿರ್ವಹಣೆ ಮಾಡುವ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಆಂಬ್ಯುಲೆನ್ಸ್‌ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ. ಅದರಂತೆ ಖಾಸಗಿ ಪಾಲುದಾರರಾದ ಜಿವಿಕೆ-ಇಎಂಆರ್‌ಐ ಸಂಸ್ಥೆಯಿಂದ ನಿರ್ವಹಣೆ ಹಿಂಪಡೆದಿದ್ದು, 108 ಆಂಬ್ಯುಲೆನ್ಸ್‌ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸಲಾಗಿದೆ.

ಈ ಕೇಂದ್ರದ ನಿರ್ವಹಣೆಗೆ ಕೇಂದ್ರದ 112 ಎನ್‌ಜಿ-ಇಆರ್‌ಎಸ್‌ಎಸ್‌ ತಂತ್ರಾಂಶ ಬಳಸಿಕೊಳ್ಳಲು ತೀರ್ಮಾನಿಸಿದ್ದು, ಒಟ್ಟಾರೆ ಆರೋಗ್ಯ ಇಲಾಖೆಯಡಿ ಕಮಾಂಡ್‌ ಮತ್ತು ಕಂಟ್ರೋಲ್‌ ಅನ್ನು ಐದು ವರ್ಷಗಳ ಅವಧಿಗೆ ಸ್ಥಾಪಿಸಲು ಕೆಟಿಟಿಪಿ ಕಾಯ್ದೆ ಕಲಂ 4(ಜಿ) ಅಡಿ ವಿನಾಯ್ತಿಗೆ ಪ್ರತ್ಯೇಕವಾಗಿ ಪ್ರಸ್ತಾವನೆ ಸಲ್ಲಿಸಲು ಆದೇಶ ಮಾಡಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಸರ್ಕಾರದ ಕ್ರಮದಿಂದ 108 ಆರೋಗ್ಯ ಕವಚ ಸೇವೆಯಲ್ಲಿ ಸಾಕಷ್ಟು ಸುಧಾರಣೆಯಾಗುವ ವಿಶ್ವಾಸವಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 250 ಕೋಟಿಯಷ್ಟು ಉಳಿತಾಯವಾಗಲಿದೆ. 108 ಅಧೀನದಲ್ಲಿರುವ ಒಟ್ಟು 715 ಆಂಬ್ಯುಲೆನ್ಸ್‌ ನಿರ್ವಹಣೆಗಾಗಿ ರಾಜ್ಯಮಟ್ಟದಲ್ಲಿ ಕಮಾಂಡ್ ಕಂಟ್ರೋಲ್ ಸೆಂಟರ್ ತೆರೆಯಲಾಗುವುದು. ಆರಂಭದಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ನಿರ್ವಹಣೆ ಪ್ರಾರಂಭಿಸಲಾಗುತ್ತಿದೆ. ನಂತರದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಿರ್ವಹಣೆ ಕಾರ್ಯ ಆರಂಭವಾಗಲಿದೆ. ಅಲ್ಲದೆ, 108 ಹೊರತಾಗಿ ರಾಜ್ಯದಲ್ಲಿರುವ 1000ಕ್ಕೂ ಹೆಚ್ಚು ರಾಜ್ಯ ಆ್ಯಂಬುಲೆನ್ಸ್‌ಗಳನ್ನು ಕೂಡಾ 108 ಕಮಾಂಡ್ ಸೆಂಟರ್ ಅಧೀನಕ್ಕೆ ತರಲು ಯೋಜನೆ ರೂಪಿಸಲಾಗಿದೆ ಎಂದಿದ್ದಾರೆ.

ರಾಜ್ಯಮಟ್ಟದಲ್ಲಿ ಸರ್ಕಾರಿ ಸ್ವಾಮ್ಯದ ಕಮಾಂಡ್‌ ಮತ್ತು ಕಂಟ್ರೋಲ್‌ ಕೇಂದ್ರ ಹಾಗೂ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಕಂಟ್ರೋಲ್‌ ಸೆಂಟರ್‌ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಇದನ್ನು ಕರ್ನಾಟಕ ಸ್ಟೇಟ್ ಡೇಟಾ ಸೆಂಟರ್ ಮತ್ತು ಕರ್ನಾಟಕ ಸ್ಟೇಟ್‌ವೈಡ್‌ ಏರಿಯಾ ನೆಟ್‌ವರ್ಕ್ ಬಳಸಿಕೊಂಡು ಅನುಷ್ಠಾನಗೊಳಿಸಬೇಕು. ಜಿಲ್ಲಾ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ಗಳು ಮತ್ತು ಆಂಬ್ಯುಲೆನ್ಸ್‌ ದೈನಂದಿನ ನಿರ್ವಹಣೆ ಮೇಲ್ವಿಚಾರಣೆ ಮತ್ತು ಪರಿವೀಕ್ಷಣೆ ಜವಾಬ್ದಾರಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ವಹಿಸಬೇಕು. ಆಂಬ್ಯುಲೆನ್ಸ್‌ ಚಾಲಕರು, ಶುಶ್ರೂಷಕ ಸಿಬ್ಬಂದಿಯನ್ನು ಜಿಲ್ಲಾ ಮಟ್ಟದಲ್ಲೇ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸುವಂತೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | Mango Price Drop: ಮಾವು ಬೆಲೆ ಕುಸಿತ; ರೈತರ ನೆರವಿಗೆ ಧಾವಿಸಲು ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ

ಎಲ್ಲ ಜಿಲ್ಲೆಗಳಲ್ಲಿ 'ಗೃಹ ಆರೋಗ್ಯ' ಯೋಜನೆ ಅನುಷ್ಠಾನ

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 'ಗೃಹ ಆರೋಗ್ಯ' ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಔಷಧಿ, ಉಪಕರಣಗಳಿಗಾಗಿ 185 ಕೋಟಿ ಅನುದಾನ ಬಳಕೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಕೋಲಾರ ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾದ ಬೆನ್ನಲ್ಲೇ, ರಾಜ್ಯಾದ್ಯಂತ ಯೋಜನೆ ಜಾರಿಯಾಗುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಜಿಲ್ಲೆಗಳಲ್ಲಿ ತಪಾಸಣಾ ಕಾರ್ಯ ಆರಂಭವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಆಶಾ ಕಾರ್ಯಕರ್ತೆಯರು ಮನೆ, ಮನೆಗೆ ತೆರಳಿ ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ 30 ವರ್ಷ ಮೇಲ್ಪಟ್ಟವರು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ ತಪಾಸಣೆಗೆ ಒಳಪಡಲು ನೆರವಾಗಲಿದ್ದಾರೆ. ರಕ್ತದೊತ್ತಡ, ಡಯಾಬಿಟಿಸ್, ಕ್ಯಾನ್ಸರ್ ಸೇರಿದಂತೆ 14 ಅಸಾಂಕ್ರಾಮಿಕ ರೋಗಗಳ ತಪಾಸಣೆಯನ್ನು ಸಮುದಾಯ ಆರೋಗ್ಯ ಅಧಿಕಾರಿಗಳು ನಡೆಸಲಿದ್ದಾರೆ.

ರೋಗಗಳಿಗೆ ತುತ್ತಾದವರಿಗೆ, ಅವರ ಬಳಿಗೆ ಉಚಿತವಾಗಿ ಔಷಧಗಳನ್ನು ಒದಗಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಯಲ್ಲಿ ಒಂದು ದೂರದೃಷ್ಟಿಯ ಯೋಜನೆಯಾಗಿರುವ 'ಗೃಹ ಆರೋಗ್ಯ' , ಮುಂಬರುವ ವರ್ಷಗಳಲ್ಲಿ ಹಲವರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.