ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CPI PV Salimath: ಕಾರು ಅಪಘಾತದಲ್ಲಿ ಸಜೀವ ದಹನಗೊಂಡ ಸಿಪಿಐ ಸಾಲಿಮಠ: ಕಾರು ಅಪಘಾತ ಸಂಭವಿಸಿದ್ದು ಹೇಗೆ?

ಸಿಪಿಐ ಪಿವಿ ಸಾಲಿಮಠ ಹುಬ್ಬಳ್ಳಿಯಿಂದ ಗದಗಿಗೆ ಹೋಗುವಾಗ ಡಿವೈಡರ್​ಗೆ ಮೊದಲು ಕಾರು ಡಿಕ್ಕಿಯಾಗಿ, ಪಕ್ಕದಲ್ಲಿದ್ದ ರಸ್ತೆಗೆ ಜಂಪ್ ಆಗಿದೆ. ತಾವು ಹೋಗುತ್ತಿದ್ದ ಮಾರ್ಗದ ಎದುರು ಬದಿಯ ರಸ್ತೆಯನ್ನು ಇಳಿದು ಮತ್ತೆ ಮೇಲಕ್ಕೆ ಬಂದು ನಂತರ ಮತ್ತೆ ರಸ್ತೆ ಪಕ್ಕದಲ್ಲಿ ಹೋಗಿ ನಿಂತಿದೆ. ಈ ಸಮಯದಲ್ಲಿ ಪೆಟ್ರೋಲ್ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸಜೀವವಾಗಿ ದಹನವಾಗಿದ್ದಾರೆ. ಕಾರಿನಿಂದ ಹೊರಗಡೆ ಬರುವುದಕ್ಕಾಗದೆ ಒಳಗಡೆಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಸಿಪಿಐ ಪಿವಿ ಸಾಲಿಮಠ ಸಜೀವ ದಹನಗೊಂಡ ಕಾರು ಅಪಘಾತ ಸಂಭವಿಸಿದ್ದು ಹೇಗೆ?

ಮೃತರಾದ ಸಿಪಿಐ ಪಿವಿ ಸಾಲಿಮಠ -

ಹರೀಶ್‌ ಕೇರ
ಹರೀಶ್‌ ಕೇರ Dec 7, 2025 10:10 AM

ಹುಬ್ಬಳ್ಳಿ, ಡಿ. 07: ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದು ಮೆಚ್ಚುಗೆ ಪಡೆದಿದ್ದ ಸಿಪಿಐ ಪಿ.ವಿ ಸಾಲಿಮಠ (CPI PV Salimath) ಮೊನ್ನೆ ನಡೆದ ಭೀಕರ ಕಾರು ಅಪಘಾತದಲ್ಲಿ (Car Accident) ಸಜೀವ ದಹನಗೊಂಡಿದ್ದರು. ಕರ್ತವ್ಯ ಮುಗಿಸಿಕೊಂಡು ಪತ್ನಿ ಮತ್ತು ಮಕ್ಕಳನ್ನು ನೋಡಲು ಹೊರಟಿದ್ದ ಅವರನ್ನು ರಸ್ತೆಯಲ್ಲಿ ಜವರಾಯ ಬಲಿ ಪಡೆದುಕೊಂಡಿದ್ದ. ರಾತ್ರಿ 7.30ರ ಸುಮಾರಿನಲ್ಲಿ ನಡೆದ ಈ ಭೀಕರ ಅಪಘಾತಕ್ಕೆ ರಸ್ತೆ ಡಿವೈಡರ್‌ ಕಾರಣ ಎಂದು ಗೊತ್ತಾಗಿದೆ. ಸಾಲಿಮಠ ತಮ್ಮ ಸ್ವಂತ ಐ20 ಕಾರಿನಲ್ಲಿ ಒಬ್ಬರೇ ಇದ್ದು, ಅದನ್ನು ಡ್ರೈವ್‌ ಮಾಡುತ್ತಿದ್ದರು.

ತಮ್ಮ ನಡೆ ನುಡಿಯಿಂದ ಇಲಾಖೆ ಮತ್ತು ಕೆಲಸ ಮಾಡಿದ ಸ್ಥಳದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದ ಸಾಲಿಮಠ (44) ಅವರು ಮೊನ್ನೆ ನಡೆದ ಕಾರು ಅಪಘಾತದಲ್ಲಿ ಸಜೀವವಾಗಿ ದಹನವಾಗಿದ್ದು, ಗುರುತು ಸಿಗಲಾದಷ್ಟು ಸುಟ್ಟು ಕರಕಲಾಗಿದ್ದರು. ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಕಾರು ಅಪಘಾತ ಸಂಭವಿಸಿತ್ತು. ಹಾವೇರಿಯಲ್ಲಿ ಲೋಕಾಯುಕ್ತ ಸಿಪಿಐ ಆಗಿ ಕಳೆದ ಮೂರು ತಿಂಗಳಿಂದ ಕೆಲಸ ನಿರ್ವಹಿಸುತ್ತಿದ್ದ ಸಾಲಿಮಠ, ಮೊನ್ನೆ ಬೆಳಗಾವಿಯಲ್ಲಿ ಕೋರ್ಟ್ ಎವಿಡೆನ್ಸ್‌ಗೆ ಹೋಗಿದ್ದರು. ಕೆಲಸ ಮುಗಿಸಿಕೊಂಡು, ಗದಗಿನಲ್ಲಿರುವ ಪತ್ನಿ ಮತ್ತು ಮಕ್ಕಳನ್ನು ನೋಡಿಕೊಂಡು ಬೆಳಗಾವಿಗೆ ಹೋಗ್ತೇನೆ ಅಂತ ಹೇಳಿ ತಮ್ಮ ಸ್ವಂತ ಐ20 ಕಾರ್​ನಲ್ಲಿ ಹೋಗಿದ್ದರು. ಇನ್ನು ಅರ್ಧಗಂಟೆ ಪ್ರಯಾಣ ಮಾಡಿದ್ದರೆ ಗದಗ ತಲುಪುತ್ತಿದ್ದರು. ಆದರೆ ರಾತ್ರಿ 7-30 ಸಮಯದಲ್ಲಿ ನಡೆದ ಅಪಘಾತದಲ್ಲಿ ಬಾರದ ಲೋಕಕ್ಕೆ ಹೋಗಿದ್ದಾರೆ.

ಪ್ರಾಮಾಣಿಕ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಬದುಕಿನ ಹೃದಯಸ್ಪರ್ಶಿ ಕತೆ

ಅಪಘಾತ ನಡೆದಿದ್ದು ಹೇಗೆ?

ಹುಬ್ಬಳ್ಳಿಯಿಂದ ಗದಗಿಗೆ ಹೋಗುವಾಗ ಡಿವೈಡರ್​ಗೆ ಮೊದಲು ಕಾರು ಡಿಕ್ಕಿಯಾಗಿ, ಪಕ್ಕದಲ್ಲಿದ್ದ ರಸ್ತೆಗೆ ಜಂಪ್ ಆಗಿದೆ. ತಾವು ಹೋಗುತ್ತಿದ್ದ ಮಾರ್ಗದ ಎದುರು ಬದಿಯ ರಸ್ತೆಯನ್ನು ಇಳಿದು ಮತ್ತೆ ಮೇಲಕ್ಕೆ ಬಂದು ನಂತರ ಮತ್ತೆ ರಸ್ತೆ ಪಕ್ಕದಲ್ಲಿ ಹೋಗಿ ನಿಂತಿದೆ. ಈ ಸಮಯದಲ್ಲಿ ಪೆಟ್ರೋಲ್ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿಯಿಂದಾಗಿ ಸಜೀವವಾಗಿ ದಹನವಾಗಿದ್ದಾರೆ. ಕಾರಿನಿಂದ ಹೊರಗಡೆ ಬರುವುದಕ್ಕಾಗದೆ ಒಳಗಡೆಯೇ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.

ಪಿವಿ ಸಾಲಿಮಠ 2003ರಲ್ಲಿ ಪಿಎಸ್​ಐ ಆಗಿ ಪೊಲೀಸ್ ಇಲಾಖೆಗೆ ಸೇರಿದ್ದರು. ಮೂಲತಃ ಬೆಳಗಾವಿ ಜಿಲ್ಲೆಯ ಮುರಗೋಡ್ ನಿವಾಸಿಯಾಗಿದ್ದವರು. ಆದರೆ ಅವರು ಹೆಚ್ಚು ಕೆಲಸ ನಿರ್ವಹಿಸಿದ್ದು ಕಲಬುರಗಿ ಜಿಲ್ಲೆಯಲ್ಲಿ. ಕಲಬುರಗಿ ಜಿಲ್ಲೆಯಲ್ಲಿ ಅಫಜಲಪುರ, ಸೇಡಂ ಇನ್ಸಪೆಕ್ಟರ್ ಆಗಿ, ನಂತರ ಗದಗ ಶಹರ ಠಾಣೆ ಇನ್ಸಪೆಕ್ಟರ್ ಆಗಿದ್ದರು. ಬೈಲಹೊಂಗಲ ಇನ್ಸಪೆಕ್ಟರ್ ಆಗಿದ್ದ ಅವರಿಗೆ ಮೂರು ತಿಂಗಳ ಹಿಂದಷ್ಟೇ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. ತಾವು ಕೆಲಸ ನಿರ್ವಹಿಸಿದ ಸ್ಥಳದಲ್ಲಿ ತಮ್ಮ ಕೆಲಸ ಮತ್ತು ಗುಣಗಳಿಂದ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು.

ಡಿವೈಡರ್​ಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು; ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ ದಹನ

ಪತ್ನಿ ಮತ್ತು ಎರಡು ಮಕ್ಕಳು ಗದಗನಲ್ಲಿಯೇ ವಾಸವಾಗಿದ್ದರಿಂದ ಆಗಾಗ ಗದಗಿಗೆ ಹೋಗಿ ಬರ್ತಿದ್ದ ಸಾಲಿಮಠ, ನಿನ್ನೆ ಪತ್ನಿ ಮತ್ತು ಮಕ್ಕಳನ್ನು ನೋಡಲಿಕ್ಕೆ ಹೋಗುವಾಗಲೇ ಬಾರದ ಲೋಕಕ್ಕೆ ಹೋಗಿದ್ದಾರೆ. ಸಾಲಿಮಠ ಸಾವಿನ ಸುದ್ದಿ ಕೇಳಿ, ಅನೇಕ ಕಡೆಗಳಿಂದ ಅವರ ಅಭಿಮಾನಿಗಳು, ಸಹಪಾಠಿ ಸಿಬ್ಬಂದಿಗಳು ಆಗಮಿಸಿದ್ದರು. ಹುಬ್ಬಳ್ಳಿ ಕಿಮ್ಸ್​ನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕಿಮ್ಸ್​ನಲ್ಲಿಯೇ ಪೊಲೀಸ್ ಸಿಬ್ಬಂದಿ ಮತ್ತು ಕುಟುಂಬದವರು ಪ್ರಾರ್ಥಿವ ಶರೀರಿಕ್ಕೆ ಅಂತಿನ ನಮನ ಸಲ್ಲಿಸಿದರು. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಧಾರವಾಡ ಎಸ್ಪಿ ಗುಂಜನ್ ಆರ್ಯ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಹುಬ್ಬಳ್ಳಿಯಿಂದ ಆಂಬುಲೆನ್ಸ್​​ನಲ್ಲಿ ಪ್ರಾರ್ಥಿವ ಶರೀರವನ್ನು ತೆಗೆದುಕೊಂಡು ಧಾರವಾಡ ಮಾರ್ಗವಾಗಿ ಅವರ ಸ್ವಗ್ರಾಮ ಮುರಗೋಡ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ಮಾರ್ಗಮಧ್ಯದಲ್ಲಿ ಅನೇಕ ಠಾಣೆಗಳಲ್ಲಿ ಪೊಲೀಸ್ ಸಿಬ್ಬಂದಿ ಪಾರ್ಥಿವ ಶರೀರದ ದರ್ಶನ ಪಡೆದರು. ಹುಟ್ಟೂರಲ್ಲಿ ಅಂತ್ಯಕ್ರಿಯೆ ನಡೆದಿದೆ. ಸದ್ಯ ಪಿ.ವಿ ಸಾಲಿಮಠ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.