ನಾಪತ್ತೆಯಾಗಿದ್ದ ಗದಗ KRIDL ಎಇಇ ಪರ್ವೇಜ್ 40 ದಿನಗಳ ಬಳಿಕ ಮುಂಬೈನಲ್ಲಿ ಪತ್ತೆ
ಗುತ್ತಿಗೆದಾರರ ಕಿರುಕುಳದಿಂದ ನೊಂದಿದ್ದಾಗಿ ಪತ್ರ ಬರೆದು ನಾಪತ್ತೆಯಾಗಿದ್ದ ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಪರ್ವೇಜ್ ಧಾರವಾಡ ಅವರು ಸುಮಾರು 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆಯಾಗಿದ್ದಾರೆ.
ಸಂಗ್ರಹ ಚಿತ್ರ -
ಗದಗ: ಗುತ್ತಿಗೆದಾರರ ಕಿರುಕುಳದಿಂದ ನೊಂದಿದ್ದಾಗಿ ಪತ್ರ ಬರೆದು ನಾಪತ್ತೆಯಾಗಿದ್ದ ಗದಗದ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಪರ್ವೇಜ್ ಧಾರವಾಡ ಅವರು ಸುಮಾರು 40 ದಿನಗಳ ಬಳಿಕ ಮಹಾರಾಷ್ಟ್ರದ ಮುಂಬೈನಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ. ಸೆಪ್ಟೆಂಬರ್ 13ರಂದು ಗದಗದಿಂದ ಬೆಂಗಳೂರಿಗೆ ತೆರಳಿದ್ದ ಪರ್ವೇಜ್ ಬಳಿಕ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದರು.
ಪರ್ವೇಜ್ ನಾಪತ್ತೆಯಾಗುವ ಮುನ್ನ ಅನುದಾನ ಬಿಡುಗಡೆಯಾಗದಿರುವುದರಿಂದ ಎದುರಾಗಿದ್ದ ಒತ್ತಡದ ಕುರಿತು ಡೆತ್‌ನೋಟ್ ಬರೆದಿಟ್ಟಿದ್ದರು ಈ ಹಿನ್ನೆಲೆಯಲ್ಲಿ ಅವರ ನಾಪತ್ತೆ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅವರು ತೆರಳಿರಬಹುದಾದ ಮಾರ್ಗಗಳು ಹಾಗೂ ವಿವಿಧ ಸ್ಥಳಗಳಲ್ಲಿನ ಸುಳಿವುಗಳನ್ನು ಆಧರಿಸಿ ತನಿಖೆ ಮುಂದುವರೆಸಿದ್ದರು. ಅಧಿಕಾರಿಯ ಪತ್ತೆಗಾಗಿ ಗದಗ ಪೊಲೀಸರು ಐದು ವಿಶೇಷ ತಂಡಗಳನ್ನು ರಚಿಸಿ ನಿರಂತರ ಶೋಧ ಕಾರ್ಯ ಕೈಗೊಂಡಿದ್ದರು.
ಪೊಲೀಸರು ಬೆಂಗಳೂರು, ಮಧ್ಯಪ್ರದೇಶದ ಭೋಪಾಲ್, ಮಹಾರಾಷ್ಟ್ರದ ಮೀರಜ್ ಸೇರಿದಂತೆ ಹಲವು ನಗರಗಳಲ್ಲಿ ಹುಡುಕಾಟ ನಡೆಸಿದ್ದರು. ರೈಲು ನಿಲ್ದಾಣಗಳ ಸಿಸಿಟಿವಿ ದೃಶ್ಯಗಳು, ಮೊಬೈಲ್ ಸಂಬಂಧಿತ ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದರು.ಪೊಲೀಸರು ತಮ್ಮ ಲೊಕೇಶನ್ ಪತ್ತೆಹಚ್ಚಬಾರದು ಎಂಬ ಉದ್ದೇಶದಿಂದ ಅಧಿಕಾರಿ ಪರ್ವೇಜ್ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದರು. ಯಾವುದೇ ಎಟಿಎಂ ಅಥವಾ ಡಿಜಿಟಲ್ ಪಾವತಿಗಳನ್ನು ಬಳಸದೆ ನಗದು ಹಣದಲ್ಲೇ ಬದುಕು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಇದೀಗ ಮುಂಬೈನಲ್ಲಿ ಅವರು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮುಂಬೈನಲ್ಲಿ ಪತ್ತೆಯಾಗಿರುವ ಪರ್ವೇಜ್ ಅವರನ್ನು ಗದಗಕ್ಕೆ ಕರೆತರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದ್ದು, ಶುಕ್ರವಾರ ಗದಗಕ್ಕೆ ಕರೆತರುವ ಸಾಧ್ಯತೆಯಿದೆ.