Rain Damage: ಅತಿವೃಷ್ಟಿಯಿಂದ ತತ್ತರಿಸಿದ್ದ ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್; ಬೆಂಬಲ ಬೆಲೆಯಲ್ಲಿ 5 ಧಾನ್ಯಗಳ ಖರೀದಿಗೆ ಅಸ್ತು
Price Support Scheme: ಪ್ರಸಕ್ತ ಮುಂಗಾರಿನಲ್ಲಿ ಕರ್ನಾಟಕದ ಬೆಳೆಗಾರರು ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರಿಂದ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಗೆ ನೆರವಾಗುವಂತೆ ಕೋರಿ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ರಾಜ್ಯದ ರೈತರ ಸಮಸ್ಯೆಗೆ ಕೇಂದ್ರ ಸ್ಪಂದಿಸಿದೆ.

-

ನವದೆಹಲಿ: ಅತಿವೃಷ್ಟಿಯಿಂದಾಗಿ (Rain Damage) ತತ್ತರಿಸಿದ್ದ ಕರ್ನಾಟಕದ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ, ಇದೀಗ ನವರಾತ್ರಿ ಕೊಡುಗೆಯಾಗಿ ಬೆಂಬಲ ಬೆಲೆಯಲ್ಲಿ (Price Support Scheme) ಐದು ಧಾನ್ಯಗಳ ಖರೀದಿಗೆ ಅನುಮತಿ ನೀಡಿದೆ. 2025-26ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ(ಶೇಂಗಾ), ಸೋಯಾಬಿನ್ ಮತ್ತು ಸೂರ್ಯಕಾಂತಿ ಧಾನ್ಯಗಳನ್ನು ಕೇಂದ್ರದ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ಕೇಂದ್ರ ಕೃಷಿ ಸಚಿವರು, ಆಹಾರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಖುದ್ದು ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಮುಂಗಾರಿನಲ್ಲಿ ಕರ್ನಾಟಕದ ಬೆಳೆಗಾರರು ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೆಸರು, ಉದ್ದು, ಶೇಂಗಾ, ಸೋಯಾಬಿನ್ ಹಾಗೂ ಸೂರ್ಯಕಾಂತಿ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಗೆ ನೆರವಾಗುವಂತೆ ಕೋರಿ ಸಚಿವ ಪ್ರಲ್ಹಾದ್ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದಿದ್ದರು.
ಸಚಿವ ಪ್ರಲ್ಹಾದ್ ಜೋಶಿ ಅವರ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ ಅವರು, ತಕ್ಷಣವೇ ಕರ್ನಾಟಕದ ರೈತರ ನೆರವಿಗೆ ಮುಂದಾಗುವಂತೆ ತಿಳಿಸಿದ್ದರು. ಅಂತೆಯೇ ಕೇಂದ್ರ ಕೃಷಿ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಅವರು ತಮ್ಮ ಮನವಿಗೆ ತ್ವರಿತ ಸ್ಪಂದನೆ ನೀಡಿ, ರಾಜ್ಯದ ರೈತರ ನೆರವಿಗೆ ಧಾವಿಸಿದ್ದಾರೆ. ಈ ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಸಹ ನೀಡಿದ್ದಾರೆ.
ಯಾವುದೆಷ್ಟು ಖರೀದಿ?
ಕೇಂದ್ರ ಸರ್ಕಾರ, ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನಲ್ಲಿ ಕರ್ನಾಟಕದಿಂದ 38000 ಮೆಟ್ರಿಕ್ ಟನ್ ಹೆಸರು ಕಾಳು, 60,810 ಮೆಟ್ರಿಕ್ ಟನ್ (MT) ಉದ್ದು, 15,650 MT ಸೂರ್ಯಕಾಂತಿ, 61,148 MT ಕಡಲೆಬೀಜ ಮತ್ತು 1,15,000 MT ಸೋಯಾಬಿನ್ ಖರೀದಿಗೆ ಅನುಮತಿ ನೀಡಿದೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಜಿಲ್ಲಾವಾರು ಖರೀದಿ ಕೇಂದ್ರಕ್ಕೆ ಜೋಶಿ ಒತ್ತಾಯ
ಕೇಂದ್ರ ಸರ್ಕಾರ, ಕರ್ನಾಟಕದ ರೈತರಿಗೆ ಕಲ್ಪಿಸಿರುವ ಈ ಬೆಂಬಲ ಬೆಲೆ ಯೋಜನೆ ನೆರವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಒದಗಿಸಬೇಕು. ಈ ಕೂಡಲೇ ರಾಜ್ಯಾದ್ಯಂತ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ತೆರೆದು ಧಾನ್ಯಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ.
ಇದೇ ವೇಳೆ ಕರ್ನಾಟಕದ ರೈತರ ಸಂಕಷ್ಟ ಅರಿತು ಈ ಮೂಲಕ ನೆರವಿಗೆ ಧಾವಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್ ಅವರಿಗೆ ಸಚಿವ ಪ್ರಲ್ಹಾದ್ ಜೋಶಿ ರಾಜ್ಯದ ರೈತರ ಪರವಾಗಿ ಧನ್ಯವಾದ ಸಹ ಅರ್ಪಿಸಿದ್ದಾರೆ.