Hampi Utsav 2025: ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಹಂಪಿ ಇತಿಹಾಸದ ಬಗ್ಗೆ ಕಾರ್ಯಾಗಾರ ಆಯೋಜಿಸಿ: ಶಾಸಕ ಗವಿಯಪ್ಪ ಕರೆ
ಹಂಪಿ ಉತ್ಸವ 2025ರ ಅಂಗವಾಗಿ ಹಂಪಿಯ ಲೋಟಸ್ ಮಹಲ್ ಹತ್ತಿರವಿರುವ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆದ ʼ2 ದಿನಗಳ ವಿಜಯನಗರ ಅಧ್ಯಯನ ಕುರಿತು ವಿಚಾರ ಸಂಕಿರಣಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಚಾಲನೆ ನೀಡಿದರು.


ಹಂಪಿ: ಹಂಪಿ ಉತ್ಸವ 2025ರ ಅಂಗವಾಗಿ (Hampi Utsav 2025) ಹಂಪಿಯ ಲೋಟಸ್ ಮಹಲ್ ಹತ್ತಿರವಿರುವ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ನಿರ್ದೇಶಕರ ಕಚೇರಿ ಆವರಣದಲ್ಲಿ ನಡೆದ ಎರಡು ದಿನಗಳ ವಿಜಯನಗರ ಅಧ್ಯಯನ ಕುರಿತು 27ನೇ ವಿಚಾರ ಸಂಕಿರಣವನ್ನು ಶಾಸಕ ಎಚ್. ಆರ್. ಗವಿಯಪ್ಪ (HR Gaviyappa) ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿರುವ 120 ಶಾಲೆಯ ಕನ್ನಡ ಶಾಲೆಯ ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ಹಂಪಿ ಇತಿಹಾಸದ ಬಗ್ಗೆ ವಿಶೇಷ ಮಾಹಿತಿ ನೀಡಲು ಕಾರ್ಯಾಗಾರ ಆಯೋಜಿಸುವ ಸಲಹೆ ನೀಡಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ಪರಮಶಿವಮೂರ್ತಿ, ಸಾಹಿತಿಗಳು, ಅಧ್ಯಯನಕಾರರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿ | Karnataka Govt: ರಾಜ್ಯದಲ್ಲಿ ತಯಾರಾಗುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡ ಲೇಬಲ್ ಕಡ್ಡಾಯ; ಸರ್ಕಾರದಿಂದ ಆದೇಶ
ಹಂಪಿ ಬೈ ಸ್ಕೈ ಗೆ ಚಾಲನೆ
ಹಂಪಿ ಉತ್ಸವ 2025ರ ಅಂಗವಾಗಿ ಕಮಲಾಪುರದಲ್ಲಿ ʼಹಂಪಿ ಬೈ ಸ್ಕೈʼ -ಆಗಸದಲ್ಲಿ ಹಂಪಿ ವೀಕ್ಷಣೆ ಯೋಜನೆಗೆ ಶಾಸಕ ಎಚ್. ಆರ್. ಗವಿಯಪ್ಪ ಚಾಲನೆ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿಯ ಪರಿಸರದಲ್ಲಿ ಸುತ್ತಾಡುವ ಮೂಲಕ ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುವ ಕಾರ್ಯಕ್ರಮ ಇದಾಗಿದೆ ತಿಳಿಸಿದರು.
ಕೃಷಿ ವಸ್ತು ಪ್ರದರ್ಶನಕ್ಕೆ ಚಾಲನೆ
ಹಂಪಿ ಉತ್ಸವದ ಅಂಗವಾಗಿ ಕೃಷಿ ಇಲಾಖೆಯಿಂದ ಹಂಪಿ ಮಾತಂಗ ಪರ್ವತ ಮೈದಾನದಲ್ಲಿ ಆಯೋಜಿಸಲಾಗಿರುವ ಕೃಷಿ ವಸ್ತು ಪ್ರದರ್ಶನ ಆಕರ್ಷಣೆಯ ಕೇಂದ್ರವಾಗಿದೆ. ಸಿರಿಧಾನ್ಯಗಳ ಮಹತ್ವ ಸಾರುವ ನಿಟ್ಟಿನಲ್ಲಿ ಸಿರಿಧಾನ್ಯಗಳಿಂದ ರಚಿಸಿದ ರಂಗೋಲಿ, ಹಳ್ಳಿಮನೆ, ದೇಶಿ ಬೀಜತಳಿಗಳ ಪ್ರದರ್ಶನ ಏರ್ಪಡಿಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹಂಪಿ ಉತ್ಸವ 2025ರ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಿಗೆ, ಪ್ರದರ್ಶನ ಮಳಿಗೆಗಳಿಗೆ ಹಾಗೂ ಕ್ರೀಡೆಗಳಿಗೆ ಚಾಲನೆ ನೀಡಿದರು. ಶಾಸಕ ಗವಿಯಪ್ಪ, ಜಿಲ್ಲಾಧಿಕಾರಿ ದಿವಾಕರ್ ಉಪಸ್ಥಿತರಿದ್ದರು.
ಮೂಢ ನಂಬಿಕೆ ತುಳಿಯುವ ಶಕ್ತಿ ಕನ್ನಡ ಕಾವ್ಯಕ್ಕಿದೆ: ಕುಂ.ವೀರಭದ್ರಪ್ಪ
ʼʼಮೂಢ ನಂಬಿಕೆಗಳನ್ನು ತುಳಿಯುವ ಶಕ್ತಿ ನಮ್ಮ ಕನ್ನಡ ಕಾವ್ಯಕ್ಕಿದೆʼʼ ಎಂದು ಸಾಹಿತಿ ಕುಂ. ವೀರಭದ್ರಪ್ಪ ತಿಳಿಸಿದರು. ಹಂಪಿ ಉತ್ಸವ-2025ರ ಅಂಗವಾಗಿ ಶುಕ್ರವಾರ ಶ್ರೀ ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಕಾವ್ಯದ ತೊಟ್ಟಿಲು ಗ್ರಾಮೀಣ ಮಹಿಳೆಯಾಗಿದ್ದು, ಅವರನ್ನು ಗೌರವಿಸುವ ಕೆಲಸ ನಾವು ಮಾಡಬೇಕಿದೆ ಎಂದು ಹೇಳಿದರು. ʼʼಮಹಿಳಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಎಲ್ಲ ಮೂಢ ನಂಬಿಕೆಗಳನ್ನು ತುಳಿಯುವ ಶಕ್ತಿ ನಮ್ಮ ಕನ್ನಡ ಕಾವ್ಯಕ್ಕಿದೆ. ಕಲ್ಲು ಕೊಟ್ಟವರಿಗೂ ಎಲ್ಲ ಭಾಗ್ಯವು ಬರಲಿ ಎಂದು ಹಾರೈಸಿದವರು ಕನ್ನಡದ ಮಹಿಳೆಯರು. ಇದು ನಮ್ಮ ನಾಡಿನ ಹೆಣ್ಣು ಮಕ್ಕಳ ಉದಾತ್ತ ಚಿಂತನೆಗೆ ಉದಾಹರಣೆ. ವರ್ತಮಾನದ ಕಾವ್ಯ ಹಾಗೂ ಚಿಂತನೆಗಳಲ್ಲಿ ಕಡು ಬಡುತನದ ಯಾರು ಬರೆಯುತ್ತಿಲ್ಲ. ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದೆ. ಭಾಷೆ ಜೀವಂತವಾಗಿ ಇರಬೇಕಾದರೆ ಮಕ್ಕಳಿಗೆ ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಮಾತನಾಡುವ ವಾತಾವರಣ ಶಾಲೆಗಳಲ್ಲಿ ಕಲ್ಪಿಸಬೇಕಿದೆʼʼ ಎಂದರು.
ʼʼಹೆಣ್ಣು ಇಲ್ಲದ ಕುಟುಂಬ ಅಪರಿಪೂರ್ಣ. ಹೆಣ್ಣುಗಿಂತ ದೊಡ್ಡದು ಯಾವುದು ಇಲ್ಲ. ಕುಟುಂಬದಲ್ಲಿ ಹೆಣ್ಣೇ ಕಣ್ಣು. ಹೆಣ್ಣುಮಕ್ಕಳು ಇದ್ದರೆ ತಂದೆ- ತಾಯಿಗಳನ್ನು ಅನಾಥಾಶ್ರಮಕ್ಕೆ ಸೇರಿಸುವುದಿಲ್ಲ. ಹೆಣ್ಣಿನದು ತಾಯಿ ಹೃದಯ ಸ್ವಾತಂತ್ರ್ಯ ಪೂರ್ವದಲ್ಲಿ ಒಲ್ಲದ ಗಂಡನ ಜೊತೆಗೆ ಜೀವನ ಮಾಡಿದ ಮಹಿಳೆ, ಗಂಡ ಕೆಟ್ಟವನಾಗಿರಲಿ, ಕುಡುಕನಾಗಿರಲಿ ಎಲ್ಲವನ್ನೂ ಸಹಿಸಿಕೊಂಡು ಅವನ ಜೊತೆ ಕುಟುಂಬ ಮುನ್ನಡೆಸಿಕೊಂಡು ಹೋದಳು. ತಾಳ್ಮೆಯ ಸಹನೆ ನಮ್ಮ ಹೆಣ್ಣುಮಕ್ಕಳ ಗುಣವಾಗಿದೆ. ಈ ಮಹಿಳಾ ಕವಿಗೋಷ್ಠಿಯಲ್ಲಿ 42 ಕವಿಯಿತ್ರಿಯರ ಕವನಗಳನ್ನು ಕೇಳುತ್ತಿರುವುದು ನನಗೆ ತುಂಭಾ ಸಂತೋಷವಾಗುತ್ತಿದೆʼʼ ಎಂದು ತಿಳಿಸಿದರು.
ʼʼನನ್ನ ಸಾಹಿತ್ಯ ಚಿಂತನೆ ಹಾಗೂ ಭಾಷೆಯ ಸೃಷ್ಟಿಗೆ ಬಳ್ಳಾರಿ ನೆಲ ಕಾರಣ. ನನ್ನ ಕಥೆ ಕಾದಂಬರಿಗಳಲ್ಲಿ ಮಹಿಳಾ ಧ್ವನಿಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸಿದ್ದೆನೆ. ಕವಿಗೆ ಸ್ತ್ರೀತನ ಇಲ್ಲದಿದ್ದರೆ ಒಳ್ಳೆಯ ಲೇಖಕನಾಗಲು ಸಾಧ್ಯವಿಲ್ಲʼʼ ಎಂದರು.
ಈ ಸುದ್ದಿಯನ್ನೂ ಓದಿ: Tumkur (Sira) News: ವಿಜ್ಞಾನ ಪ್ರದರ್ಶನವು ಶೈಕ್ಷಣಿಕ ಮತ್ತು ಮನರಂಜನಾ ಕಾರ್ಯಕ್ರಮ
ಉತ್ತಮ ವೇದಿಕೆ
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ʼʼಹಂಪಿ ಉತ್ಸವದಲ್ಲಿ ಹಿಂದಿನ ವರ್ಷದಿಂದ ಕವಿಗೋಷ್ಠಿಯನ್ನು ಪ್ರಾರಂಭಿಸಿದ್ದೆವೆ. ಮಹಿಳಾ ಕವಿಗೋಷ್ಠಿಯಲ್ಲಿ ಅವರ ಚಿಂತನೆಗಳು ಹೊರ ಬರಬೇಕು. ಮಹಿಳೆಯರು ತಮ್ಮ ವಿಚಾರ ವಿನಿಮಯಗಳನ್ನು ಹೊರ ಹಾಕಲು ಇದೊಂದು ಉತ್ತಮ ವೇದಿಕೆ. ತಮ್ಮ ಈ ಕಾರ್ಯಕ್ರಮ ಯಶಸ್ವಿಯಾಗಲಿʼʼ ಎಂದು ಹಾರೈಸಿದರು.
ವಿಮರ್ಶಕರಾದ ಡಾ. ಸೋಮಕ್ಕ ಎಂ. ಮಾತನಾಡಿ, ʼʼಶತ- ಶತಮಾನಗಳಿಂದ ಮಹಿಳೆಯರು ಅವಕಾಶ ವಂಚಿತರಾಗಿದ್ದರು. ಬುದ್ದ. ಬಸವ. ಅಂಬೇಡ್ಕರ್ ಚಿಂತನೆಗಳಿಂದ ಮಹಿಳೆಯರ ಪರವಾದ ನೀತಿ ನಿಯಮಗಳು ಇಂದು ಜಾರಿಯಾಗಿವೆ. ಅವರಿಗೆ ತಮ್ಮ ಎಲ್ಲಾ ವಿಚಾರ ವಿನಿಮಯ ಅಭಿವ್ಯಕ್ತಪಡಿಸುವ ಅವಕಾಶ ಸಿಕ್ಕಿದೆ. ಶಿವರಾತ್ರಿ ದಿನ ಜನರು ಸಾಲು - ಸಾಲಾಗಿ ದೇವಾಲಯಗಳ ಮುಂದೆ ಕ್ಯೂ ನಿಂತಿದ್ದರು. ಆದರೆ ದೇವಾಲಯದ ಮುಂದೆ ನಿಲ್ಲುವ ಕ್ಯೂಗಿಂತ ಗ್ರಂಥಾಲಯದ ಮುಂದೆ ನಿಂತರೆ ನಮ್ಮ ಬದುಕು ಅರ್ಥಪೂರ್ಣವಾಗುತ್ತʼʼದೆ ಎಂದರು.
ಅಂಕಣ ಬರಹಗಾರರಾದ ಶ್ರೀ ದೇವಿ ಕೆರೆಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾದ ಅಖಂಡ ಬಳ್ಳಾರಿ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ, ಹೊಸಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷ ಡಾ. ಗುಂಡಿ ಮಾರುತಿ, ಸಾಹಿತಿ ಡಾ. ದಯಾನಂದ ಕಿನ್ನಾಳ, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕ ವೆಂಕಟೇಶ್ ರಾಮಚಂದ್ರಪ್ಪ, ಪ್ರಾಚಾರ್ಯರಾದ ನಾಗರಾಜ್ ಹವಾಲ್ದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ವೇತಾ, ಸಿಂಧು, ಸುಭದ್ರಾ ಮತ್ತಿತರರು ಉಪಸ್ಥಿತರಿದ್ದರು.