ಹಾಸನ: ವರ್ಷಕ್ಕೊಮ್ಮೆ ಮಾತ್ರ ಭಕ್ತರಿಗೆ ದರ್ಶನ ಭಾಗ್ಯ ನೀಡುವ ಐತಿಹಾಸಿಕ ಹಾಸನಾಂಬೆ ಮಹಾದರ್ಶನೋತ್ಸವ (Hasanamba Jatra Mahotsava 2026) ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವವು ಈ ಬಾರಿ ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಅತ್ಯಂತ ವಿಜೃಂಭಣೆಯಿಂದ ನೆರವೇರಲಿದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಹಿಮ್ಸ್) ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮದಲ್ಲಿ ದರ್ಶನೋತ್ಸವದ ಅಧಿಕೃತ ಪೋಸ್ಟರ್ ಹಾಗೂ ವಿಶೇಷ ವೆಬ್‌ಸೈಟ್ ಅನ್ನು ಸಚಿವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಸಾರ್ವಜನಿಕರಿಗೆ ತಾಯಿ ಹಾಸನಾಂಬೆಯ ದರ್ಶನಕ್ಕೆ ಅವಕಾಶವಿರುತ್ತದೆ. ದೂರದ ಊರುಗಳಿಂದ ಬರುವ ಸಾಮಾನ್ಯ ಭಕ್ತರಿಗೆ ಸುಲಭ, ತ್ವರಿತ ಹಾಗೂ ಶಿಸ್ತುಬದ್ಧ ದರ್ಶನ ಕಲ್ಪಿಸುವುದೇ ಜಿಲ್ಲಾಡಳಿತದ ಮೊದಲ ಆದ್ಯತೆಯಾಗಿದೆ. ಈ ಬಾರಿಯೂ ಅನಗತ್ಯ ವಿಐಪಿ ಪಾಸ್ ವ್ಯವಸ್ಥೆಗೆ ಕಡಿವಾಣ ಹಾಕಲಾಗಿದ್ದು, ಪಾಸ್‌ಗಳ ಸಂಖ್ಯೆ ಅತ್ಯಂತ ಸೀಮಿತವಾಗಿರಲಿದೆ. ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು, ನೆರಳು, ಶೌಚಾಲಯ ಹಾಗೂ ಬ್ಯಾರಿಕೇಡ್ ವ್ಯವಸ್ಥೆಗಳನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಅಕ್ಟೋಬರ್ 29, ಗುರುವಾರ ಮಧ್ಯಾಹ್ನ 12 ಗಂಟೆಗೆ ಹಾಸನಾಂಬ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದೆ. ಆದರೆ ಅಂದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ ಸತತ 12 ದಿನಗಳ ಕಾಲ ಭಕ್ತರಿಗೆ ಹಾಸನಾಂಬೆ ದೇವಿಯ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 11: ಧಾರ್ಮಿಕ ವಿಧಿವಿಧಾನಗಳೊಂದಿಗೆ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತದೆ.
ದೇಗುಲದ ಇತಿಹಾಸ
ಶ್ರೀ ಸಿದ್ದೇಶ್ವರ ಮತ್ತು ಶ್ರೀ ಹಾಸನಾಂಬ ದೇವಿಯ ದೇಗುಲವು ಸುಮಾರು 12ನೇ ಶತಮಾನದಲ್ಲಿ ಪಾಳೆಗಾರ ಕೃಷ್ಣಪ್ಪ ನಾಯಕ ಹಾಗೂ ಸಂಜೀವ ನಾಯಕ ಅವರ ಕಾಲದಲ್ಲಿ ಸ್ಥಾಪಿತವಾಗಿದೆ ಎಂದು ಈ ಸ್ಥಳದಲ್ಲಿ ದೊರೆತ ಶಿಲಾಶಾಸನಗಳಿಂದ ತಿಳಿದು ಬರುತ್ತದೆ. ಶ್ರೀ ಹಾಸನಾಂಬ ದೇವಿಯು ಶಕ್ತಿ ಸ್ವರೂಪಿಣಿಯಾಗಿದ್ದು ಸ್ಥಳ ಪುರಾಣದ ಪ್ರಕಾರ ಸಪ್ತ ಮಾತೃಕೆಯರು ವಾರಣಾಸಿಯಿಂದ ವಾಯು ವಿಹಾರಕ್ಕಾಗಿ ಹಾಸನಕ್ಕೆ ಬಂದರು, ಅವರಲ್ಲಿ ವೈಷ್ಣವಿ, ಮಹೇಶ್ವರಿ, ಕೌಮಾರಿ ದೇವತೆಯರು ದೇವಸ್ಥಾನದ ಸುತ್ತಲಿನ ಹುತ್ತದಲ್ಲಿ ನೆಲೆಸಿದ್ದಾರೆಂಬುದು ಸ್ಥಳೀಯ ಜನರ ನಂಬಿಕೆಯಾಗಿದೆ. ಹಾಗೆಯೇ ಕೆಂಚಮ್ಮ, ಬ್ರಾಹ್ಮಿಯಂತ ಸಪ್ತ ಮಾತೃಕೆಯರು ಆಲೂರು ಹಾಗೂ ಹಾಸನದ ವಿವಿಧ ಸ್ಥಳಗಳಲ್ಲಿ ನೆಲೆಸಿದ್ದಾರೆಂದು ಪುರಾಣ ಹೇಳುತ್ತದೆ.
ಪೌರಾಣಿಕ ಕಥೆಯನುಸಾರ ಶ್ರೀ ಹಾಸನಾಂಬ ದೇವಿಯ ಸ್ವರೂಪವು, ಭಕ್ತಿಯ ಪಾವಿತ್ರ್ಯತೆ ಹಾಗೂ ಮೈತ್ರಿಯ ಸಂಕೇತವಾಗಿದೆ. ಈ ಪ್ರಾಂತದಲ್ಲಿ ಅಂದು ಅಂಧಕಾಸುರ ಎಂಬ ರಾಕ್ಷಸ ಜನ ಸಾಮಾನ್ಯರಿಗೆ ಉಪಟಳ ನೀಡುತ್ತಿದ್ದನು. ಅವನನ್ನು ನಿಗ್ರಹಿಸಲು ಶಕ್ತಿ ಸ್ವರೂಪಿಣಿಯಾಗಿ ಬಂದ ಶ್ರೀ ಹಾಸನಾಂಬ ದೇಪರಾಕ್ರಮ ಮೆರೆದು ಈ ಪ್ರಾಂತ್ಯದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದರು ಎನ್ನುತ್ತದೆ. ಈ ದೇಗುಲದ ಕೆತ್ತನೆ, ದ್ರಾವಿಡ ಶೈಲಿಯ ರಾಜಗೋಪುರ ಇರುವುದನ್ನು ಕಾಣಬಹುದು.
ಇನ್ನು ಈ ಹಿಂದೆ ಹಾಸನಕ್ಕೆ ಸಿಂಹಾಸನಪುರಿ ಎಂಬ ಹೆಸರಿತ್ತು. ಅದು ಕಾಲಾನಂತರದಲ್ಲಿ ಹಾಸನ ಎಂದಾಗಿದೆ. ಹಿಂದೆ ಸುಮಾರು 12 ಶತಮಾನದಲ್ಲಿ ಹೊಯ್ಸಳರ ಕಾಲದಲ್ಲಿ ಒಂದು ವಿಗ್ರಹ ಸಿಕ್ಕಿತು. ಅದರ ಮುಖ ಮಂದಸ್ಮಿತವನ್ನು ಹೊಂದಿದ್ದರಿಂದ ಹಸನ ಅಂದರೆ ಹಾಸನ ಎಂಬ ಹೆಸರು ಬಂದಿತು ಎಂತಲೂ ಹೇಳುತ್ತಾರೆ.
Roopa Gururaj Column: ತನ್ನ ಭಕ್ತಿಯಿಂದ ಮಹಾಶಿವನ ಸಾಮೀಪ್ಯ ಪಡೆದುಕೊಂಡ ನಂದಿ
ಈ ದೇವಾಲಯದ ಪ್ರಾಂಗಣದಲ್ಲಿ ಮುಖ್ಯವಾಗಿ ಮೂರು ದೇಗುಲಗಳಿವೆ. ಅವುಗಳೆಂದರೆ ದರ್ಬಾರ್ ಗಣಪತಿ ದೇವಾಲಯ, ಹಾಸನಾಂಬ ದೇವಾಲಯ ಹಾಗೂ ಸಿದ್ಧೇಶ್ವರ ದೇವಾಲಯ. ಇಲ್ಲಿ ಇನ್ನೊಂದು ಮುಖ್ಯವಾದ ಸ್ಥಳವೆಂದರೆ ಕಳ್ಳಪ್ಪನ ಗುಡಿ. ಇಲ್ಲಿ 3 ವಿಗ್ರಹಗಳಿದ್ದು ಅವುಗಳು ದೇವಾಲಯವನ್ನು ಕಳ್ಳತನ ಮಾಡಲು ಬಂದು ದೇವಿಯ ಅವಕೃಪೆಗೆ ಒಳಗಾದ ಕಳ್ಳರದ್ದು ಎಂದು ಹೇಳುತ್ತಾರೆ. ಹಾಸನಾಂಬ ದೇಗುಲವನ್ನು ವರ್ಷದಲ್ಲಿ ದೀಪಾವಳಿಯ ಸಂದರ್ಭದಲ್ಲಿ ಕೆಲವೇ ದಿನಗಳ ಕಾಲ ಮಾತ್ರ ದೇವಾಲಯವನ್ನು ತೆರೆಯಲಾಗುತ್ತದೆ.