ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊತ್ತಿ ಉರಿದ ಖಾಸಗಿ ಬಸ್, 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

ರಾಜ್ಯದಲ್ಲಿ ಮತ್ತೊಂದು ಖಾಸಗಿ ಬಸ್‌ ದುರಂತಕ್ಕೀಡಾಗಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟೈರ್ ಸ್ಫೋಟಗೊಂಡು ಅದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಸಂಗ್ರಹ ಚಿತ್ರ

ಹಾಸನ: ರಾಜ್ಯದಲ್ಲಿ ಮತ್ತೊಂದು ಖಾಸಗಿ ಬಸ್‌ ದುರಂತಕ್ಕೀಡಾಗಿದ್ದು, ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಟೈರ್ ಸ್ಫೋಟಗೊಂಡು (Fire Accident) ಅದಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಘಟನೆ ನಡೆದಾಗ ಬಸ್‌ನಲ್ಲಿ 36 ಪ್ರಯಾಣಿಕರಿದ್ದರು. ಟೈರ್ ಸ್ಫೋಟಗೊಳ್ಳುತ್ತಿದ್ದಂತೆಯೇ ಚಾಲಕ ತಕ್ಷಣವೇ ಜಾಗರೂಕತೆಯಿಂದ ಬಸ್ ನಿಲ್ಲಿಸಿ ಎಲ್ಲರನ್ನೂ ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಭರತ್ ಕಂಪನಿಗೆ ಸೇರಿದ ಖಾಸಗಿ ಸ್ಲೀಪರ್ ಕೋಚ್ ಬಸ್ ರಾತ್ರಿ ವೇಳೆ ಮಂಗಳೂರಿನಿಂದ ಬೆಂಗಳೂರಿನತ್ತ ಬರುತ್ತಿತ್ತು. ಹಾಸನ ಶಾಂತಿಗ್ರಾಮದ ಬಳಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ, ಬಸ್‌ನ ಹಿಂಬದಿಯ ಟೈರ್ ಭಾಗದಲ್ಲಿ ಅಚಾನಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಬಸ್ ಚಲಿಸುತ್ತಿರುವಾಗಲೇ ಟೈರ್ ಭಾಗದಿಂದ ಅಸಹಜವಾದ ಶಬ್ದ ಮತ್ತು ದಟ್ಟವಾದ ಹೊಗೆ ಬರುತ್ತಿರುವುದನ್ನು ಚಾಲಕ ಗಮನಿಸಿದ್ದಾನೆ. ತಕ್ಷಣವೇ ಚಾಲಕ ಬಸ್‌ ನಿಲ್ಲಿಸಿ ಪ್ರಯಾಣಿಕರನ್ನು ಎಬ್ಬಿಸಿದ್ದಾನೆ.

ಬೆಂಕಿಯ ತೀವ್ರತೆ ಹೆಚ್ಚಾಗಿದ್ದರಿಂದ ಪ್ರಯಾಣಿಕರ ಲಗೇಜ್‌ಗಳು, ಮೊಬೈಲ್‌ಗಳು ಹಾಗೂ ಬೆಲೆಬಾಳುವ ವಸ್ತುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಧಾವಿಸಿದ್ದು, ಕಾರ್ಯಾಚರಣೆ ನಡೆಸಿದ್ದಾರೆ. ಘಟನೆ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಿಲ್ಲಿಸಿದ್ದ ಚಂದ್ರಲೇಔಟ್ ಬಿಎಂಟಿಸಿ ಡಿಪೋ ಸಮೀಪದಲ್ಲಿ ನಿಂತಿದ್ದ ಹೊಸ ಖಾಸಗಿ ಬಸ್‌ವೊಂದು ಹಠಾತ್ ಹೊತ್ತಿ ಉರಿದಿದೆ. ಈ ಘಟನೆ ಇಂದು 10.20ರ ಸುಮಾರಿಗೆ ನಡೆದಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಬೆಂಕಿಯಿಂದ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಹಠಾತ್ ಬೆಂಕಿ ಕಾಣಿಸಿಕೊಂಡು ಧಗಧಗನೆ ಉರಿದಿದೆ. ಇನ್ನೂ ಬಸ್ ಹೊಸದಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಏಕೆ ಹಾಗೆ ಹೊತ್ತಿಕೊಂಡಿತು ಎಂಬುದಕ್ಕೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. ಶಾರ್ಟ್ ಸರ್ಕ್ಯೂಟ್, ಎಂಜಿನ್ ಸಮಸ್ಯೆ, ಇಂಧನ ಸೋರಿಕೆ ಅಥವಾ ಇನ್ನಾವುದೋ ತಾಂತ್ರಿಕ ದೋಷ ಕಾರಣವಾಗಿರಬಹುದು ಎಂದು ಪ್ರಾಥಮಿಕ ಊಹೆಗಳಿವೆ. ಬೆಂಕಿ ತೀವ್ರವಾಗಿ ಹರಡಿದ್ದರಿಂದ ಬಸ್ ಸಂಪೂರ್ಣ ಭಸ್ಮವಾಗಿದೆ.

Vishakha Bhat Heggar

View all posts by this author