Sakleshpur News: ಐದು ತಲೆಮಾರುಗಳಿಂದ ಕುವೆಂಪು ಅವರ ಜಾತ್ಯತೀತ ಮೌಲ್ಯಗಳು ಸಮಾಜವನ್ನು ತಿದ್ದುತ್ತಲೇ ಇದೆ: ಕೆ.ವಿ.ಪ್ರಭಾಕರ್
Sakleshpur News: ನಿರಂಕುಶಮತಿಗಳಾಗಿ ಎಂದು ಕರೆ ಕೊಡುವ ಮೂಲಕ ಐದು ತಲೆಮಾರುಗಳಿಂದ ಸ್ವತಂತ್ರ ಆಲೋಚನೆ ರೂಪಿಸಲು, ಆ ಮೂಲಕ ಐದು ತಲೆಮಾರುಗಳಿಂದ ಜಾತ್ಯತೀತ ಸಮುದಾಯವನ್ನು ರೂಪಿಸುತ್ತಲೇ ಇರುವ ಕುವೆಂಪು ಅವರು ಇವತ್ತಿಗೂ, ಎಂದೆಂದಿಗೂ ಪ್ರಸ್ತುತರಾಗಿದ್ದಾರೆ. ಹೀಗಾಗಿ ಕುವೆಂಪು ಪ್ರಜ್ಞೆ ಕನ್ನಡ ನೆಲದಲ್ಲಿ ನಿರಂತರವಾಗಿ ಬೆಳೆಯುತ್ತಲೇ ಇದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ತಿಳಿಸಿದ್ದಾರೆ.


ಸಕಲೇಶಪುರ: ಐದು ತಲೆಮಾರುಗಳಿಂದ ಕುವೆಂಪು (Kuvempu) ಅವರ ಜಾತ್ಯತೀತ ಮೌಲ್ಯಗಳು ಸಮಾಜವನ್ನು ತಿದ್ದುತ್ತಲೇ, ಪ್ರಭಾವಿಸುತ್ತಲೇ ಇವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ತಿಳಿಸಿದರು. ಸಕಲೇಶಪುರದಲ್ಲಿ (Sakleshpur News) ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ಆಯೋಜಿಸಿದ್ದ 125ನೇ ಶತೋತ್ತರ ಹುಣ್ಣಿಮೆ ಬೆಳದಿಂಗಳೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥಾನ ಕೊಡ ಮಾಡುವ ಕುವೆಂಪು ಪ್ರಶಸ್ತಿಯನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದ ಶ್ರೀಗಳಿಂದ ಸ್ವೀಕರಿಸಿ ಅವರು ಮಾತನಾಡಿದರು.
ವಿಶ್ವಮಾನವ ಸಂದೇಶ ಮತ್ತು ಜಾತ್ಯತೀತ ಮೌಲ್ಯಗಳಿಂದ ಐದು ತಲೆಮಾರುಗಳನ್ನು ಪ್ರಭಾವಿಸಿದ ರಾಷ್ಟ್ರಕವಿ ಕುವೆಂಪು ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ನನಗೆ ಬಹಳ ದೊಡ್ಡ ಹೆಮ್ಮೆಯ ಸಂಗತಿ. ಅದರಲ್ಲೂ ಆದಿಚುಂಚನಗಿರಿ ಮಹಾಸಂಸ್ಥಾನದ ಜ್ಞಾನಯೋಗಿ ನಿರ್ಮಲಾನಂದ ಶ್ರೀಗಳ ಕೈಗಳಿಂದ ಈ ಪ್ರಶಸ್ತಿ ಸ್ವೀಕರಿಸುವ ಧನ್ಯತೆ ಇಂದು ನನ್ನದಾಗಿದೆ ಎಂದು ತಿಳಿಸಿದರು.
ಕುವೆಂಪು ಅವರು ಕೇವಲ ಶ್ರೇಷ್ಠ ಸಾಹಿತಿ ಮಾತ್ರವಲ್ಲ, ನೂರಾರು ಮಂದಿ ಶ್ರೇಷ್ಠ ಸಾಹಿತಿಗಳನ್ನು ರೂಪಿಸಿದವರು. ಕುವೆಂಪು ಅವರು ಕೇವಲ ವೈಚಾರಿಕ ಕ್ರಾಂತಿಗೆ ಕರೆ ನೀಡಲಿಲ್ಲ, ಬದಲಿಗೆ ನೂರಾರು ವಿಚಾರವಾದಿಗಳನ್ನು ಸೃಷ್ಟಿಸಿದವರು ಎಂದು ಅವರು ಹೇಳಿದರು.ವಿಶ್ವವಿದ್ಯಾಲಯಗಳು ಹೇಗಿರಬೇಕು, ಜ್ಞಾನ ಪ್ರಸಾರ ಹೇಗಿರಬೇಕು ಎನ್ನುವ ಮಾದರಿಯನ್ನು ನಾಡಿಗೆ ಹಾಕಿಕೊಟ್ಟವರಲ್ಲಿ ಕುವೆಂಪು ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸಮುದಾಯ ವಿಮರ್ಷೆ ಮೂಲಕ ಮಡಿವಂತ ಸಮಾಜವನ್ನು ತಿದ್ದಿದವರು ಕುವೆಂಪು ಎಂದು ಅವರು ಬಣ್ಣಿಸಿದರು.
ನಿರಂಕುಶಮತಿಗಳಾಗಿ ಎಂದು ಕರೆ ಕೊಡುವ ಮೂಲಕ ಐದು ತಲೆಮಾರುಗಳಿಂದ ಸ್ವತಂತ್ರ ಆಲೋಚನೆ ರೂಪಿಸಲು, ಆ ಮೂಲಕ ಐದು ತಲೆಮಾರುಗಳಿಂದ ಜಾತ್ಯತೀತ ಸಮುದಾಯವನ್ನು ರೂಪಿಸುತ್ತಲೇ ಇರುವ ಕುವೆಂಪು ಅವರು ಇವತ್ತಿಗೂ, ಎಂದೆಂದಿಗೂ ಪ್ರಸ್ತುತರಾಗಿದ್ದಾರೆ. ಹೀಗಾಗಿ ಕುವೆಂಪು ಪ್ರಜ್ಞೆ ಕನ್ನಡ ನೆಲದಲ್ಲಿ ನಿರಂತರವಾಗಿ ಬೆಳೆಯುತ್ತಲೇ ಇದೆ ಎಂದರು.
ಈ ಸುದ್ದಿಯನ್ನೂ ಓದಿ | Karnataka Weather: ಕಲಬುರಗಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಉಷ್ಣಾಂಶ ದಾಖಲು!
ಮಹಾಸಂಸ್ಥಾನದ ಹಾಸನ ಶಾಖಾಮಠದ ಶಂಭುನಾಥ ಶ್ರೀಗಳು, ಹಾಸನ ಪತ್ರಕರ್ತರ ಸಂಘದ ಅಧ್ಯಕ್ಷ ಮದನ್ ಗೌಡ, ತೆಂಗಿನ ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ನಟರಾಜ್, ಬಾಲ ಭವನ ಅಧ್ಯಕ್ಷ ಬಿ.ಆರ್.ನಾಯ್ಡು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.