Heart Attack: ಶಾಲೆಗಳಲ್ಲಿ ವಿದ್ಯಾರ್ಥಿಗಳ ಹೃದಯ ತಪಾಸಣೆಗೆ ಕ್ರಮ: ಸಚಿವ ಕೆ.ಎನ್. ರಾಜಣ್ಣ
Hassan News: ಹಾಸನ ಜಿಲ್ಲೆಯಂತೆ ಬೇರೆ ಜಿಲ್ಲೆಗಳಲ್ಲೂ ಹೃದಯಾಘಾತವಾಗುತ್ತಿದೆ. ಸತ್ಯ ತಿಳಿದು ವರದಿ ಮಾಡಿದರೆ ನನ್ನ ಅಭ್ಯಂತರವಿಲ್ಲ. ಆದರೆ ಸುಳ್ಳು ಮಾಹಿತಿ ಹರಡುವುದು ಸರಿಯಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಲ್ಲಿ ಹೃದಯ ತಪಾಸಣೆ ನಡೆಸಲಾಗುತ್ತದೆ ಎಂದು ಸಹಕಾರ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.


ಹಾಸನ: ಕೋವಿಡ್ ವ್ಯಾಕ್ಸಿನ್‌ಗೂ, ಹೃದಯಾಘಾತಕ್ಕೂ (Heart Attack) ಸಂಬಂಧ ಇಲ್ಲ ಎಂದು ಕಂಡುಬರುತ್ತಿದೆ. ಕೇಂದ್ರ ಸರ್ಕಾರ ನೀಡಿರುವ ಹೇಳಿಕೆಗಳು ರಾಜ್ಯಸರ್ಕಾರ ರಚಿಸಿದ ಸಮಿತಿಯ ಅಭಿಪ್ರಾಯಗಳನ್ನು ನೋಡಿದರೆ ಲಸಿಕೆಗೂ, ಹೃದಯಾಘಾತಕ್ಕೂ ಸಂಬಂಧ ಇದ್ದಂತಿಲ್ಲ, ಆದರೆ ನಿಖರ ಕಾರಣಗಳನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಲ್ಲಿ ಹೃದಯ ತಪಾಸಣೆ ನಡೆಸಲಾಗುತ್ತದೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದಲ್ಲಿ ಹೃದಯಾಘಾತದ ಹೆಸರಿನಲ್ಲಿ ಭಯ ಸೃಷ್ಟಿಸಲಾಗುತ್ತಿದೆ. ಟ್ರ್ಯಾಕ್ಟರ್‌ನಿಂದ ಬಿದ್ದು ಮೃತಪಟ್ಟಿದ್ದರೂ ಅದನ್ನು ಹೃದಯಾಘಾತ ಎಂದು ಬೆದರಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇಂತಹ ಅಸತ್ಯಗಳು ಜನರನ್ನು ಭಯ ಬೀಳಿಸುತ್ತಿವೆ. ಜಿಲ್ಲೆಯಲ್ಲಿ 22 ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಲ್ಲಿ 4 ಜನರ ಶವಗಳನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗಿದೆ. ಅದರ ವರದಿ ಕೂಡ ಬಂದಿದೆ. ಅವರಿಗೆ ಹೃದಯಾಘಾತವಾಗಿರುವುದು ಖಚಿತವಾಗಿದೆ. ಉಳಿದ ಸಾವುಗಳು ಹೃದಯಾಘಾತದಿಂದಲೇ ಆಗಿದೆ ಎಂಬುದು ನಮ್ಮ ಊಹೆ. ಆದರೆ ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದರು.
ಮೊದಲು ಆಸ್ಪತ್ರೆಗಳಿಗೆ ಜನರೇ ಹೋಗುತ್ತಿರಲಿಲ್ಲ. ಈಗ ರಾತ್ರಿ 10 ಗಂಟೆಯಾದರೂ ಜನ ತುಂಬಿ ತುಳುಕುತ್ತಿರುತ್ತಾರೆ. ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲೂ ಹೃದಯ ತಪಾಸಣೆ ವ್ಯವಸ್ಥೆ ಮಾಡಲಾಗುವುದು. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಹೋಗುವವರನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಮುಂಜಾಗ್ರತಾ ಕ್ರಮವಾಗಿ ಶಾಲಾ-ಕಾಲೇಜುಗಳಲ್ಲಿ ಹೃದಯ ತಪಾಸಣೆ ನಡೆಸಲಾಗುತ್ತದೆ. ಈಗ ಸಾವುಗಳಾಗಿರುವ ಪೈಕಿ 3 ಜನ ಮಾತ್ರ 50 ವರ್ಷ ಮೇಲ್ಪಟ್ಟವರಿದ್ದಾರೆ. ಉಳಿದವರು 40 ವರ್ಷ ಒಳಗಿನವರಿದ್ದಾರೆ. ಹೀಗಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾರ್ವತ್ರಿಕ ತಪಾಸಣೆ ನಡೆಸಲು ಚಿಂತನೆ ನಡೆದಿದೆ ಎಂದರು.
ಹಾಸನ ಜಿಲ್ಲೆಯಂತೆ ಬೇರೆ ಜಿಲ್ಲೆಗಳಲ್ಲೂ ಹೃದಯಾಘಾತವಾಗುತ್ತಿದೆ. ಸತ್ಯ ತಿಳಿದು ವರದಿ ಮಾಡಿದರೆ ನನ್ನ ಅಭ್ಯಂತರವಿಲ್ಲ. ಆದರೆ ಸುಳ್ಳು ಮಾಹಿತಿ ಹರಡುವುದು ಸರಿಯಲ್ಲ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ | Heart Attack: ಹಾಸನಕ್ಕೆ ಮತ್ತೊಂದು ಶಾಕ್; ಹೃದಯಾಘಾತಕ್ಕೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬಲಿ
ಡಾ.ಸಿ.ಎನ್.ಮಂಜುನಾಥ್ ಹಾಗೂ ಪ್ರಸ್ತುತ ಜಯದೇವ ಸಂಸ್ಥೆಯ ನಿರ್ದೇಶಕರ ಅಭಿಪ್ರಾಯಗಳನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಪೂರಕವಾಗಿ ಸ್ಥಳೀಯವಾಗಿ ಅಧ್ಯಯನವಾಗುತ್ತದೆ. ವರದಿ ಬಂದ ನಂತರ ನೈಜ ಕಾರಣವನ್ನು ಜನರಿಗೆ ತಿಳಿಸಲು ಸಾಧ್ಯವಾಗುತ್ತದೆ. ಅದಕ್ಕೂ ಮುನ್ನ ಕೋವಿಡ್ ಲಸಿಕೆಯಿಂದ ಹೃದಯಾಘಾತವಾಗುತ್ತಿದೆ ಎಂಬುದೂ ಸೇರಿದಂತೆ ನಾನಾ ರೀತಿಯ ವದಂತಿಗಳನ್ನು ಹರಡುತ್ತಿರುವುದು ಸರಿಯಲ್ಲ ಎಂದರು.