ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಾಯಿಯ ಪುಣ್ಯ ಜನರ ರೂಪದಲ್ಲಿ ಕಂಡೆ; ಚೆನ್ನಮ್ಮ ದರ್ಶನಕ್ಕೆ ಬಂದ ಜನಸಾಗರ ಕಂಡು ಗದ್ಗದಿತರಾದ ಕುಮಾರಸ್ವಾಮಿ

HD Kumaraswamy: ನಮ್ಮ ತಾಯಿ ಸಂಪಾದನೆ ಮಾಡಿರುವ ಪುಣ್ಯವನ್ನು ಇಂದು ಜನರ ರೂಪದಲ್ಲಿ ಕಂಡೆ. ಇವತ್ತು ಹರಿದು ಬಂದಿರುವ ಜನಸ್ತೋಮವನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ಇಲ್ಲಿಗೆ ಬಂದು ಅಮ್ಮನ ಆತ್ಮಕ್ಕೆ ಶಾಂತಿ ಕೋರಿದ ಪ್ರತಿಯೊಬ್ಬರನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನ, ಜು.30: ತಮ್ಮ ತಾಯಿಯ ಹನ್ನೊಂದನೇ ದಿನದ ಉತ್ತರ ಕ್ರಿಯಾ ವಿಧಿವಿಧಾನದ ಸಂದರ್ಭದಲ್ಲಿ ನಾಡಿನ ಮೂಲೆ ಮೂಲೆಗಳಿಂದ ಹರದನಹಳ್ಳಿಗೆ ಬಂದು ಅಮ್ಮನ ಆತ್ಮಕ್ಕೆ ಚಿರಶಾಂತಿ ಕೋರಿದ ಎಲ್ಲರಿಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಉತ್ತರ ಕ್ರಿಯಾ ಕಾರ್ಯಕ್ರಮದ ಎಲಾ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ತಮ್ಮ ತಾಯಿಯವರ ಪುಣ್ಯ ಸಮಾಧಿಯನ್ನು ದರ್ಶಿಸಿದ ಜನಸಾಗರವನ್ನು ಕಂಡು ತೀವ್ರ ಗದ್ಗದಿತರಾದರು.

ನಮ್ಮ ತಾಯಿ ಸಂಪಾದನೆ ಮಾಡಿರುವ ಪುಣ್ಯವನ್ನು ಇಂದು ಜನರ ರೂಪದಲ್ಲಿ ಕಂಡೆ ಎಂದು ಕಣ್ಣಾಲಿಗಳನ್ನು ತುಂಬಿಕೊಂಡ ಎಚ್‌.ಡಿ. ಕುಮಾರಸ್ವಾಮಿ ಅವರು; ಇವತ್ತು ಹರಿದು ಬಂದಿರುವ ಜನಸ್ತೋಮವನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ಇಲ್ಲಿಗೆ ಬಂದು ಅಮ್ಮನ ಆತ್ಮಕ್ಕೆ ಶಾಂತಿ ಕೋರಿದ ಪ್ರತಿಯೊಬ್ಬರನ್ನು ನಾನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದು ಹೇಳಿದರು.

ಆಗಾಗ ಮಳೆ ಬರುತ್ತಿತ್ತು. ಆದರೂ ಅಮ್ಮನನ್ನು ನೋಡಲು ಬಂದವರು ಹಿಂದೆ ಸರಿಯಲಿಲ್ಲ. ಅತ್ಯಂತ ಸಂಯಮ, ಶಾಂತಿಯಿಂದ ನನ್ನ ತಾಯಿ ಸಮಾಧಿ ದರ್ಶನ ಮಾಡಿಕೊಂಡು ನಮನ ಅರ್ಪಿಸಿದರು. ಪ್ರಾರಂಭದಿಂದಲೂ ಸಹಕಾರ ನೀಡಿದ ಪೊಲೀಸ್ ಇಲಾಖೆ, ಮಾಧ್ಯಮ ಮಿತ್ರರು, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಚಿವರು ಹೇಳಿದರು.

ಸುಮಾರು ಹದಿನೈದಕ್ಕೂ ಹೆಚ್ಚು ಕೌಂಟರ್‌ಗಳಲ್ಲಿ ಪ್ರಸಾದ ವಿನಿಯೋಗಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿಯೂ ಸಣ್ಣಪುಟ್ಟ ಸಮಸ್ಯೆ ಆಗದಂತೆ ಶಾಂತವಾಗಿ ಬಂದರೆಲ್ಲರೂ ಪ್ರಸಾದ ಸ್ವೀಕರಿಸಿದರು. ಉತ್ತರ ಕರ್ನಾಟಕ, ಕರಾವಳಿ, ಕಿತ್ತೂರು ಕರ್ನಾಟಕ ಹಾಗೂ ಹಳೇ ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಿಂದ ಜನರು ಬಂದು ಅಮ್ಮನಿಗೆ ಗೌರವ ಸಮರ್ಪಣೆ ಮಾಡಿದರು. ಇದು ನಮ್ಮ ಭಾಗ್ಯವೆಂದೇ ನಂಬಿದ್ದೇವೆ ಎಂದು ತಿಳಿಸಿದರು.

ಅಮ್ಮನ ಪುಣ್ಯ ಸಮಾಧಿಯ ಜಾಗ ಜನತೆಗೆ ಮೀಸಲು

ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ನಮ್ಮ ತಂದೆ ತಾಯಿಯ ಆರಾಧ್ಯದೈವ. ನಮ್ಮ ತಂದೆಯವರ ರಾಜಕೀಯ ಬೆಳವಣಿಗೆಯಲ್ಲಿ ಶ್ರೀ ರಂಗನಾಥ ಸ್ವಾಮಿ ಹಾಗೂ ಹರದನಹಳ್ಳಿಯ ಶ್ರೀ ದೇವೇಶ್ವರ ಸ್ವಾಮಿಯ ಕರುಣೆ ಇದೆ ಎಂದು ಅವರು ಬಲವಾಗಿ ನಂಬಿದ್ದಾರೆ. ಹೀಗಾಗಿ ನಮ್ಮ ತಾಯಿ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಶಾಶ್ವತ ಚಿರನಿದ್ರೆಗೆ ಹೋಗುವಂತೆ ಆಗಿದ್ದು ದೈವದ ಅನುಗ್ರಹವೇ ಕಾರಣ ಎಂದು ನಂಬಿದ್ದೇನೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಮ್ಮ ತಾಯಿ ಸಾಮಾನ್ಯ ಮಹಿಳೆಯಂತೆ ಜೀವಿಸಿದರು. ನಮ್ಮ ತಂದೆಯವರು ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗಿದ್ದಾಗಲೂ ಅವರು ಹಾಗೆಯೇ ಇದ್ದರು. ರಾಜಕಾರಣದಿಂದ ದೂರವಿದ್ದು ಮನೆಗೆ ಶಕ್ತಿಯಾಗಿದ್ದರು. ಹರದನಹಳ್ಳಿ ಮತ್ತು ಹೊಳೆನರಸೀಪುರದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾಗಲೂ ನಮಗೆ ಗಂಜಿ ಕೊಟ್ಟು ಮನೆಗೆ ಬಂದವರಿಗೆ ಅನ್ನ ನೀಡುತ್ತಿದ್ದರು. ಅಂಥ ತಾಯಿಯ ಮಗನಾಗಿ ಹುಟ್ಟಿದ್ದು ನನ್ನ ಸುಕೃತವೇ ಆಗಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಭಾವೋದ್ವೇಗಕ್ಕೆ ಒಳಗಾದರು.

Chennamma Deve Gowda: ಚೆನ್ನಮ್ಮ ಉತ್ತರ ಕ್ರಿಯಾದಿ ಕಾರ್ಯ; ಸಮಾಧಿಗೆ ದೇವೇಗೌಡರ ಕುಟುಂಬದಿಂದ ಪೂಜೆ, ಹಲವು ಗಣ್ಯರು ಸೇರಿ ಸಾವಿರಾರು ಮಂದಿ ಭಾಗಿ

ಅಮ್ಮನ ಸಮಾಧಿ ಸ್ಥಳದಲ್ಲಿ ನಾನಾ ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. ಅನಾಥ ಮಕ್ಕಳಿಗೆ ಆಶ್ರಯ ಕಲ್ಪಿಸಲಾಗುವುದು, ವೃದ್ಧರಿಗೆ ವೃದ್ಧಾಶ್ರಮ ನಿರ್ಮಿಸುವ ಉದ್ದೇಶವಿದೆ. ಗೋಶಾಲೆ ಸ್ಥಾಪನೆ ಮಾಡಲಾಗುವುದು. ಹಾಗೆಯೇ ಶ್ರೀ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಸಂಸ್ಕೃತ ಪಾಠಶಾಲೆ ಸ್ಥಾಪನೆ ಮಾಡಲಾಗುವುದು. ಇಲ್ಲಿರುವ ಭೂಮಿಯಲ್ಲಿ ಒಂದು ಅಂಗುಲವನ್ನು ಕೂಡ ನಮ್ಮ ಸ್ವಂತಕ್ಕೆ ಬಳಕೆ ಮಾಡುವುದಿಲ್ಲ ಎಂದು ಸಚಿವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಈ ಜಾಗವು ಸಮಾಜ ಸೇವೆ ಹಾಗೂ ಜನಸೇವೆಯ ಸಂಕಲ್ಪಕ್ಕೆ ಮೀಸಲಾಗಿ ಅಭಿವೃದ್ಧಿ ಹೊಂದಲಿದೆ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.