Chennamma Deve Gowda: ಚೆನ್ನಮ್ಮ ಉತ್ತರ ಕ್ರಿಯಾದಿ ಕಾರ್ಯ; ಸಮಾಧಿಗೆ ದೇವೇಗೌಡರ ಕುಟುಂಬದಿಂದ ಪೂಜೆ, ಹಲವು ಗಣ್ಯರು ಸೇರಿ ಸಾವಿರಾರು ಮಂದಿ ಭಾಗಿ
ಹಾಸನ ಜಿಲ್ಲೆ ಹೊಳೆನರಸೀಪುರದ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ 11ನೇ ದಿನದ ಉತ್ತರ ಕ್ರಿಯಾದಿ ಕಾರ್ಯ ಗುರುವಾರ ನೆರವೇರಿದೆ. ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಸೇರಿ ಸಾವಿರಾರು ಮಂದಿ ಭಾಗಿಯಾಗಿದ್ದರು.
ಹೊಳೆನರಸೀಪುರದ ಮಾವಿನಕೆರೆಯಲ್ಲಿ ಚೆನ್ನಮ್ಮ ಅವರ ಸಮಾಧಿ ಬಳಿ ಉತ್ತರ ಕ್ರಿಯಾದಿ ಕಾರ್ಯ ನಡೆಯಿತು. -
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯ ಮಾವಿನಕೆರೆ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಸಮಾಧಿ ಆಗಿರುವ ಚೆನ್ನಮ್ಮ ಅವರ ಉತ್ತರ ಕ್ರಿಯೆಯ ವಿಧಿವಿಧಾನಗಳು ಗುರುವಾರ ನೆರವೇರಿದವು.
ಚೆನ್ನಮ್ಮ ಅವರ ಸಮಾಧಿಗೆ ಅವರ ನೆಚ್ಚಿನ ಮೈಸೂರು ಮಲ್ಲಿಗೆ ಹೂಗಳನ್ನು ಅರ್ಪಿಸಿದ ಎಚ್.ಡಿ. ದೇವೇಗೌಡರು, ಪೂಜೆ–ಪುನಸ್ಕಾರದಲ್ಲಿ ಕುಟುಂಬ ಸದಸ್ಯರೊಂದಿಗೆ ಭಾಗವಹಿಸಿದರು. ಈ ವೇಳೆ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ರೇವಣ್ಣ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಚೆನ್ನಮ್ಮ ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮದಲ್ಲಿ ವಿಶ್ವವಾಣಿ ಪತ್ರಿಕೆ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಭಾಗವಹಿಸಿ, ಸಮಾಧಿಗೆ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಎಚ್.ಡಿ. ರೇವಣ್ಣ, ಸಂಸದರಾದ ಡಾ. ಮಂಜುನಾಥ್, ಬಾಲಕೃಷ್ಣೇಗೌಡ, ಭವಾನಿ ರೇವಣ್ಣ ಹಾಗೂ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬದ ಸದಸ್ಯರನ್ನು ವಿಶ್ವೇಶ್ವರ ಭಟ್ ಅವರು ಭೇಟಿಯಾಗಿ, ಸಂತಾಪ ಸಲ್ಲಿಸಿದರು.
ಚೆನ್ನಮ್ಮ ಅವರ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಸಾವಿರಾರು ಸಂಖ್ಯೆಯಲ್ಲಿ ನೆಂಟರು, ಬಂಧುಗಳು, ಜೆಡಿಎಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸರತಿ ಸಾಲಿನಲ್ಲಿ ಬಂದು ಸಮಾಧಿ ದರ್ಶನ ಪಡೆದರು.