ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೇಡ್ತಿ-ವರದಾ ನದಿ ಜೋಡಣೆಗಾಗಿ ಪಕ್ಷಾತೀತವಾಗಿ ಹೋರಾಡೋಣ: ಬೊಮ್ಮಾಯಿ ಕರೆ

Bedti-Varada river linking project : ನಿಸರ್ಗವು ಮುಕ್ತವಾಗಿ ಎಲ್ಲವನ್ನು ಕೊಡುತ್ತದೆ. ಅದನ್ನು ಹಂಚಿಕೊಳ್ಳಲು ನಾವು ಪ್ರಯತ್ನ ಮಾಡುತ್ತೇವೆ. ಬೇಡ್ತಿ-ವರದಾ ಧರ್ಮಾ ನದಿ ಜೋಡಣೆ ನಮ್ಮ ರಾಜ್ಯದಲ್ಲಿಯೇ ನದಿ ಜೋಡಣೆ ಮಾಡುವ ಯೋಜನೆ. ಇದು ಅಂತಾರಾಜ್ಯ ನದಿ ಸಮಸ್ಯೆಯಾಗುವುದಿಲ್ಲೆ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೇಡ್ತಿ-ವರದಾ ನದಿ ಜೋಡಣೆಗಾಗಿ ಪಕ್ಷಾತೀತವಾಗಿ ಹೋರಾಡೋಣ: ಬೊಮ್ಮಾಯಿ

ಸಂಸದ ಬಸವರಾಜ ಬೊಮ್ಮಾಯಿ. -

Prabhakara R
Prabhakara R Jan 26, 2026 8:35 PM

ಹಾವೇರಿ: ಬೇಡ್ತಿ-ವರದಾ ನದಿ ಜೋಡಣೆ ಯೋಜನೆ (Bedti-Varada river linking project) ನಮ್ಮ ಬದುಕಿನ ಪ್ರಶ್ನೆ, ಭವಿಷ್ಯದ ಪ್ರಶ್ನೆ. ಇದು ನಮ್ಮ ಬದುಕಿಗಾಗಿ ನಡೆಯುತ್ತಿರುವ ಹೋರಾಟ, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಈ ಯೋಜನೆಗಾಗಿ ಪಕ್ಷಾತೀತವಾಗಿ ಹೋರಾಡೋಣ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ಹಾವೇರಿಯ ಹುಕ್ಕೇರಿಮಠದ ಆವರಣದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಹಾವೇರಿ ಜಿಲ್ಲೆಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೇಡ್ತಿ - ವರದಾ ನದಿ ಜೋಡಣೆ ಕುರಿತಾದ ಜಿಲ್ಲೆಯ ಎಲ್ಲ ಮಠಾಧೀಶರು ಹಾಗೂ ಸರ್ವ ರಾಜಕೀಯ ಪಕ್ಷದ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನೀರು ಯಾರಿಗೆ ಸೇರಿದ್ದು, ಸರ್ಕಾರಕ್ಕೆ ಸೇರಿದ್ದಾ?, ವ್ಯಕ್ತಿಗೆ ಸೇರಿದ್ದಾ?, ಸಮುದಾಯಕ್ಕೆ ಸೇರಿದ್ದಾ?, ಈ ವಿಚಾರ ನಮ್ಮ ಜಿಲ್ಲೇಗೆ ಮಾತ್ರ ಸಂಬಂಧಿಸಿಲ್ಲ. ಇದು ಇಡಿ ಜಗತ್ತಿಗೆ ಸೇರಿದೆ. ನಮ್ಮ ನೀರಿನ ಹಕ್ಕು ಎನ್ನುತ್ತೇವೆ. ನಿಸರ್ಗವು ಮುಕ್ತವಾಗಿ ಎಲ್ಲವನ್ನು ಕೊಡುತ್ತದೆ. ಅದನ್ನು ಹಂಚಿಕೊಳ್ಳಲು ನಾವು ಪ್ರಯತ್ನ ಮಾಡುತ್ತೇವೆ.

ಜಗತ್ತಿನಲ್ಲಿ ಶಕ್ತಿಗಾಗಿ ಯುದ್ದ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನೀರಿಗಾಗಿ ಯುದ್ಧ ನಡೆಯುತ್ತದೆ. ಅದರ ಮಹತ್ವ ನಾವು ಅರಿತುಕೊಳ್ಳಬೇಕು. ಕೇವಲ ಮೂವತ್ತೈದು ವರ್ಷದ ಹಿಂದೆ ಭಾರತ ಗ್ರೀನ್ ಜೋನ್‌ನಲ್ಲಿತ್ತು ಈಗ ರೆಡ್ ಜೋನ್‌ಗೆ ಬಂದಿದೆ. ಅಂದರೆ ನೀರಿನ ಸಮಸ್ಯೆ ಇದೆ. ಹೀಗಾಗಿ ಈ ಸಮಸ್ಯೆಗೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು ಪರಿಹಾರ ರೂಪ ನೀಡಿದರು. ನದಿ ಜೋಡಣೆ ಬಗ್ಗೆ ದೊಡ್ಡ ಪ್ರಮಾಣದ ಚರ್ಚೆ ಆರಂಭವಾಯಿತು. ಹಿಮಾಲಯದ ಗಂಗಾ, ಯಮುನಾ, ಸರಸ್ವತಿ ನದಿಗಳು, ದಕ್ಷಿಣದಲ್ಲಿ ಗೋದಾವರಿ, ಕೃಷ್ಣಾ, ಕಾವೇರಿ ನದಿಗಳ ಜೊಡಣೆ ಮಾಡುವ ಕಲ್ಪನೆ ನೀಡಿದರು ಎಂದು ತಿಳಿಸಿದರು.

ನದಿ ಜೋಡಣೆ ನಾವು ಅಂದುಕೊಂಡತೆ ಆಗುವುದಿಲ್ಲ. ದಕ್ಷಿಣ ಭಾರತದಲ್ಲಿ ಮಹಾನದಿ ಗೋದಾವರಿ, ಕೃಷ್ಣಾ, ಕಾವೇರಿ ನದಿಗಳ ಜೋಡಣೆ ಮಾಡುವ ಮೂಲಕ ಸುಮಾರು 500-1000 ಟಿಎಂಸಿ ನೀರು ಬರಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕದ ಪಾಲು ಎಷ್ಟು ಅಂತ ನೋಡಿದಾಗ ಸುಮಾರು 44 ಟಿಎಂಸಿ ನೀರು ಬರುತ್ತದೆ ಎನ್ನುವ ಬೇಡಿಕೆ ಇದೆ. ನಾಲ್ಕೂ ನದಿ ಜೋಡಣೆಯಲ್ಲಿ ನಮ್ಮ ಪಾಲು ಬರುತ್ತದೆ ಎಂದು ಹೇಳಿದರು.

ಇದು ಅಂತಾರಾಜ್ಯ ಸಮಸ್ಯೆಯಲ್ಲ

ಬೇಡ್ತಿ-ವರದಾ-ಧರ್ಮಾ ನದಿ ಜೋಡಣೆ ನಮ್ಮ ರಾಜ್ಯದಲ್ಲಿಯೇ ನದಿ ಜೋಡಣೆ ಮಾಡುವ ಯೋಜನೆ. ಇದು ಅಂತಾರಾಜ್ಯ ನದಿ ಸಮಸ್ಯೆಯಾಗುವುದಿಲ್ಲ. ಆಂಧ್ರದ ಪಾಲು, ಆಂಧ್ರಕ್ಕೆ ನಮ್ಮ ಪಾಲು ನಮಗೆ ಅಂತ ಕೊಟ್ಡಿದ್ದಾರೆ. ಕಾವೇರಿ ನಮ್ಮ ರಾಜ್ಯದಲ್ಲಿ ಹುಟ್ಟಿದೆ. ಸ್ವಾತಂತ್ರ್ಯ ಪೂರ್ವದಿಂದ ನದಿ ವಿವಾದ ಇದೆ. 2012 ರಲ್ಲಿ ತೀರ್ಪು ಬಂದು 2014 ರಲ್ಲಿ ನೊಟಿಫಿಕೇಷನ್ ಆಗಿದೆ. ತಮಿಳುನಾಡಿಗೆ 230 ಟಿಎಂಸಿ ನೀರು ಕೊಟ್ಟಿದ್ದೇವೆ. ನದಿ ನಮ್ಮೂರಲ್ಲಿ ಹುಟ್ಟಿದೆ ನಾವು ಕೊಡುವುದಿಲ್ಲ ಅಂತ ಹೇಳಲು ಆಗುವುದಿಲ್ಲ. ನದಿ ಹರಿಯುತ್ತದೆ. ನಿಸರ್ಗ ತನ್ನದೇ ಆದ ರೀತಿಯಲ್ಲಿ ಸಮತೋಲನ ಕಾಯ್ದುಕೊಳ್ಳುತ್ತದೆ. ಆ ನದಿಯ ನೀರು ಅವರು ಇಟ್ಟಕೊಳ್ಳಲು ಸಾಧ್ಯನಾ ಪೂರ್ಣ ಬಳಕೆ ಮಾಡಲು ಸಾಧ್ಯನಾ? ನದಿ ತುಂಬಿ ಹರಿಯುವಾಗ ಒಂದು ಕೊಡಪಾನ ನೀರು ತೆಗೆದುಕೊಂಡರೆ ಏನೂ ಆಗುವುದಿಲ್ಲ ಎಂದರು.

ನಾವು ಕೇಳಿದ್ದು ಬದುಕಲು. ಎರಡೂ ಕಡೆಯಿಂದ ನೀರು ತೆಗೆದಾಗ ಡ್ಯಾಮ್ ಬದಲು ಬ್ಯಾರೆಜ್ ಕಟ್ಟುತ್ತೇವೆ. ನದಿ ಪಾತ್ರದ ಹೊರಗಡೆಯಿಂದ ನದಿ ನೀರನ್ನು ಲಿಫ್ಟ್‌ ಮಾಡುವ ವ್ಯವಸ್ಥೆ ಮಾಡುತ್ತೇವೆ. ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಎಲ್ಲೋ ಐದು- ಹತ್ತು ಎಕರೆ ವ್ಯತ್ಯಾಸವಾದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಅವಕಾಶ ಇದೆ. ಡಿಪಿಆರ್‌ನಲ್ಲಿ ಏನು ಆಗುತ್ತದೆ ಅನ್ನುವುದನ್ನು ತಜ್ಞರು ತೀರ್ಮಾನ ಮಾಡುತ್ತಾರೆ. ಅದಕ್ಕೆ ಪರಿಹಾರ ಮಾಡುವ ಕೆಲಸ ಮಾಡುತ್ತಾರೆ‌. ಆದರೆ ನದಿ ಪಾತ್ರದ ಜನರ ಜೀವವನ್ನು ನಾವು ಮರೆಯಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಕೃಷ್ಣಾ, ತುಂಗಾ ಮೇಲ್ದಂಡೆ ಯೋಜನೆ ಆಗುತ್ತಿರಲಿಲ್ಲ. ಬ್ಯಾಡಗಿ, ಹಾನಗಲ್, ಶಿಗ್ಗಾವಿ ಸವಣೂರುಲ್ಲಿ ಏತ ನಿರಾವರಿ ವರದಾ ನದಿಯಿಂದ ಮಾಡಿದ್ದೇವೆ. ನಿಮ್ಮೂರಿನ ಮುಂದಿನ ಭವಿಷ್ಯ ತೀರ್ಮಾನ ಮಾಡುವುದು ಬೇಡ್ತಿ-ವರದಾ ನದಿ ಜೋಡಣೆಯಿಂದ ಎಂದು ಹೇಳಿದರು.

ಕೇಂದ್ರ ಒಪ್ಪಿದೆ

ಯೋಜನೆಗೆ ಈಗಾಗಲೇ ಕೇಂದ್ರ ಸರ್ಕಾರ ಒಪ್ಪಿದೆ. ಈಗ ಡಿಪಿಆರ್ ಮಾಡಲು ಎಂಒಯು ಸೈನ್ ಆಗಿದೆ. ಅವರು ವಿರೋಧ ಮಾಡುತ್ತಾರೆಂದು ನಾವು ವಿರೋಧ ಮಾಡುತ್ತಿಲ್ಲ. ಇದು ನಮ್ಮ ಬದುಕಿನ ಪ್ರಶ್ನೆ, ಭವಿಷ್ಯದ ಪ್ರಶ್ನೆ. ಅದಕ್ಕಾಗಿ ನಮ್ಮ ಹೋರಾಟ ನಮ್ಮ ಬದುಕಿಗಾಗಿ ಹೋರಾಟ. ಸುಮಾರು ಇಪ್ಪತೈದು ವರ್ಷದಿಂದ ಪ್ರಯತ್ನ ನಡೆಯುತ್ತಿದೆ. ಅವರ ವಿರುದ್ಧ ಅಲ್ಲ.

ಡಿಪಿಆರ್ ಆಗುವುದರೊಳಗೆ ಎಷ್ಟು ಜನರ ಜಾಗೃತಿ ಮಾಡಲು ಸಾಧ್ಯವಿದೆಯೋ ಅಷ್ಟು ಜಾಗೃತಿ ಮಾಡಬೇಕು. ಎಚ್ಚರಿಕೆ ವಹಿಸಿ ನಮ್ಮ ಜಿಲ್ಲೆಗೆ ಎಷ್ಟು ನೀರು ಬರಬೇಕು ಎನ್ನುವುದನ್ನು ಪಡೆಯಬೇಕು, ಆಗ ಮಾತ್ರ ನಮಗೆ ಶಾಶ್ವತ ನ್ಯಾಯ ಸಿಗುತ್ತದೆ. ನಮ್ಮ ಜನರು ರೈತರಿಗಾಗಿ ಈ ಹೋರಾಟ, ಅದಕ್ಕಾಗಿ ನಾವೆಲ್ಲ ಒಂದಾಗಿದ್ದೇವೆ. ಅದಕ್ಕಾಗಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುತ್ತಿದೆ. ನಮ್ಮ ಸಂಕಲ್ಪಕ್ಕೆ ಶಕ್ತಿ ಬಂದಿದೆ. ಈ ಸಂಕಲ್ಪ ಸದುಪಯೋಗ ಮಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.

ರಾಜ್ಯ ಸರ್ಕಾರಕ್ಕೆ ಡಿಪಿಆರ್‌ನಲ್ಲಿ ಹಾವೇರಿ ಜಿಲ್ಲೆಗೆ ಎಷ್ಟು ನೀರು ಬರುತ್ತದೆ, ಅದನ್ನು ಸಂಗ್ರಹದ ವ್ಯವಸ್ಥೆ ಮಾಡಬೇಕು. ಇನ್ನೊಂದು ಕೇಂದ್ರ ಸರ್ಕಾರ ಈ ಡಿಪಿಆರ್ ಅನ್ನು ನಿಗದಿತ ಸಮಯದಲ್ಲಿ ಮಾಡಿ ಮುಂದಿನ ಹೆಜ್ಜೆ ಇಡುವಂತೆ ಶಾಸಕರು, ಸಂಸದರು ಎಲ್ಲರೂ ಸೇರಿ ಮಾಡೋಣ. ಇದು ಸುದೀರ್ಘ ಹೋರಾಟ, ಬೇಸರ ಮಾಡಿಕೊಂಡರೆ ಕೆಲಸ ಆಗುವುದಿಲ್ಲ. ಇದರಲ್ಲಿ ರಾಜಕಾರಣ ಇಲ್ಲ. ಎಲ್ಲರೂ ಸೇರಿ ಪ್ರಯತ್ನ ಮಾಡೋಣ. ನಾವೂ ಕೂಡ ತಜ್ಞರನ್ನು ನೇಮಿಸೋಣ ಸುದೀರ್ಘ ಹೋರಾಟಕ್ಕೆ ಸಿದ್ಧತೆ ಮಾಡೋಣ ಎಂದು ಕರೆ ನೀಡಿದರು.

ಪ್ರಯತ್ನ ಮಾಡುವ ಸಂದರ್ಭದಲ್ಲಿ ಹೆಚ್ಚು ಕಡಿಮೆಯಾದರೆ ಸಮಸ್ಯೆಯಾಗುತ್ತದೆ. ಆ ಭಾಗದ ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡೋಣ, ನಮ್ಮ ತೀರ್ಮಾನ ತರ್ಕಬದ್ಧವಾಗಿರಬೇಕು. ನಾವು ತರ್ಕಬದ್ಧವಾಗಿ ಮಾಡಿದರೆ ಜಯ ಸಿಗುತ್ತದೆ. ಇದು ಜನ ಶಕ್ತಿಯ ಮೊದಲ ಹೆಜ್ಜೆ, ಬರುವ ದಿನಗಳಲ್ಲಿ ಜನ ಜಾಗೃತಿ ಮಾಡಬೇಕು. ಇಡೀ ಯೋಜನೆ ಬಗ್ಗೆ ಪವರ್ ಪಾಯಿಂಟ್ ಪ್ರಸೆಂಟೇಷನ್ ಮಾಡಿ ತಿಳಿಸಿದರೆ ಎಲ್ಲರಿಗೂ ಮಾಹಿತಿ ಸಿಗುತ್ತದೆ ಎಂದರು.

ಕರ್ನಾಟಕದಲ್ಲಿ ಹೂಡಿಕೆಗೆ ಉತ್ತಮ ಅವಕಾಶ; ಸಿಎಂ ಸಿದ್ದರಾಮಯ್ಯ

ಸುದೀರ್ಘ ಹೋರಾಟ

ನಾವು ಮಾಡುತ್ತಿರುವ ಹೋರಾಟದ ಶಕ್ತಿ ನಮ್ಮ ರೈತರು. ರೈತ ಸಂಘದವರು ಬಹಳ ಶ್ರಮ ವಹಿಸುತ್ತಿದ್ದಾರೆ, ಅವರಿಗೆ ಧನ್ಯವಾದಗಳು. ನದಿ ಪಾತ್ರದ ಜನರಷ್ಟೇ ಅಲ್ಲ ನಗರ ಪ್ರದೇಶ ಹಾನಗಲ್, ಶಿಗ್ಗಾವಿ, ಸವಣೂರು, ರಾಣೆಬೆನ್ನೂರು, ಗದಗ ಜಿಲ್ಲೆಗೂ ಇದರಿಂದ ಅನುಕೂಲ ಆಗುತ್ತದೆ. ಅವರ ಸಹಕಾರ ಪಡೆದು, ಇದು ಸುಲಭ ಅಲ್ಲ ಅಂತ ಗೊತ್ತಿದ್ದರೂ ಎಲ್ಲೊ ಒಂದು ಕಡೆ ಆಶಾಭಾವನೆ ಇದೆ. ಯೋಜನೆ ಮುಕ್ತಾಯ ಆಗಬೇಕಾದರೆ ಸಾಕಷ್ಟು ವರ್ಷ ಹಿಡಿಯುತ್ತದೆ‌. ಹೋರಾಟ ಮಾಡುವ ಮಾಡುವ ಶಕ್ತಿ ನಮ್ಮಲ್ಲಿದೆ. ಮುಂದೆ ಗುರಿ ಇದೆ, ಹಿಂದೆ ಗುರು ಇದ್ದಾರೆ. ಈ ಯೋಜನೆಯ ಯಶಸ್ಸಿಗೆ ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಪ್ರಯತ್ನ ಮಾಡೋಣ, ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ಹಲವಾರು ಸ್ವಾಮೀಜಿಗಳು, ಶಾಸಕರು ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.